ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಉಪಯುಕ್ತ ಡಯಟ್ ಮಾಹಿತಿ

Update: 2016-09-01 17:50 GMT

ತೂಕ ಕಳೆದುಕೊಳ್ಳಬೇಕೆಂದಿದ್ದರೆ ಮತ್ತು ನಿಭಾಯಿಸಬೇಕೆಂದಿದ್ದಲ್ಲಿ ಸರಿಯಾದ ಆಹಾರ ಸೇವಿಸುವುದೇ ಗುರಿಯಾಗಿರಬೇಕು. ಕೆಲವೊಮ್ಮೆ ನಾವು ಕೆಲವು ಆಹಾರವನ್ನು ನಮಗೆ ಹಾನಿಕರ ಎಂದುಕೊಂಡು ತಿನ್ನುವುದು ಬಿಡುತ್ತೇವೆ. ಆದರೆ ಎಲ್ಲಾ ರೀತಿಯ ಆಹಾರ ಸೇವಿಸುವ ಅಗತ್ಯವಿದೆ. ವೈದ್ಯರು ಹೇಳದ ಹೊರತು ಯಾವುದೇ ಆಹಾರ ತ್ಯಜಿಸಬೇಡಿ.

ಸರಿಯಾಗಿ ಕೂತು ಆಹಾರ ಸೇವಿಸಿ

ನಿಮ್ಮ ಊಟದ ಕೋಣೆಯಲ್ಲಿ ಟಿವಿ ಇಲ್ಲದಿರುವುದನ್ನು ಖಚಿತಪಡಿಸಿ. ಏಕೆಂದರೆ ಆಹಾರದ ಕಡೆಗೆ ಗಮನ ಕೊಡದೆ ತಿನ್ನುವುದರಿಂದ ಸುಲಭವಾಗಿ ತೂಕ ಹೆಚ್ಚಾಗಲಿದೆ. ಮೇಜಿನ ಮೇಲೆ ಸರಿಯಾಗಿ ಕುಳಿತು ತಿನ್ನುವುದು ಮತ್ತು ನಿಧಾನವಾಗಿ ತಿನ್ನುವುದು, ಕುಟುಂಬದ ಜೊತೆಗೆ ಮಾತನಾಡುತ್ತಾ ತಿನ್ನುವುದರಿಂದ ಗಮನ ಕೊಟ್ಟು ಆರೋಗ್ಯಕರ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಇತರ ಕೆಲಸದಲ್ಲಿ ತೊಡಗಿಕೊಂಡು ಒಟ್ಟಾರೆ ಆಹಾರ ಬಾಯಿಗೆ ಇಳಿಸುವುದರಿಂದ ಸಾಕಷ್ಟು ಆಹಾರ ಹೊಟ್ಟೆಗೆ ಹೋಗಿಲ್ಲ ಎಂದು ಅನಿಸಿ ಅತಿಯಾಗಿ ಭೋಜನ ಮಾಡುವ ಸಾಧ್ಯತೆಯಿದೆ.

ಪ್ರತೀ ಬೆಳಗ್ಗೆ ಒಂದು ಮೊಟ್ಟೆ ತಿನ್ನಿ

ನಿಮ್ಮ ತೂಕ ನಿಯಂತ್ರಿಸಬೇಕೆಂದಿದ್ದರೆ ಬೆಳಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸುವುದು ಬುದ್ಧಿವಂತ ಕೆಲಸವಾಗಿರುತ್ತದೆ. ಕೃತಕವಾಗಿ ರುಚಿ ತಂದ, ಸಂಸ್ಕರಿತ ಮತ್ತು ಮೊದಲೇ ಸಿಹಿ ಮಾಡಿರುವ ಧಾನ್ಯಗಳ ಉಪಾಹಾರಗಳು ನಿಮಗೆ ಬಯಸದೆ ಇರುವ ಕಿಲೋಗಳನ್ನು ಕೊಡಬಹುದು. ಮೊಟ್ಟೆಗಳು ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ದೇಹಕ್ಕೆ ಕೊಟ್ಟು ದೀರ್ಘ ಸಮಯ ಹೊಟ್ಟೆ ತುಂಬಿರುವಂತೆ ಮಾಡುತ್ತವೆ.

ವಾರಕ್ಕೆ ಎರಡು ಬಾರಿ ಮೀನು ತಿನ್ನಿ

ಎಣ್ಣೆಯಂಶವಿರುವ ಮೀನು ಸೇವಿಸುವುದು ಉತ್ತಮ. ಇದರಿಂದ ಪೌಷ್ಠಿಕಾಂಶ ಮತ್ತು ಒಮೆಗಾ 3ಎಸ್ ಸಿಗುತ್ತದೆ. ನಿಮ್ಮ ಹೃದಯ, ಚರ್ಮಕ್ಕೂ ಒಳಿತಾಗಲಿದ್ದು, ತೂಕವೂ ಕಡಿಮೆಯಾಗಲಿದೆ.

ಕೆಲವೊಮ್ಮೆ ಮಾಂಸವೂ ಸೇವಿಸಿ

ದಿನ ಬಿಟ್ಟು ದಿನ ಮಾಂಸ ಸೇವನೆ ಅನಗತ್ಯ. ಆದರೆ ಆಗಾಗ ಸೇವಿಸುವುದು ಸಾಕಷ್ಟು ಆರೋಗ್ಯಕರ. ಪೌಷ್ಠಿಕಾಂಶಗಳು ಮಾಂಸದಲ್ಲಿ ಹೆಚ್ಚಾಗಿರುತ್ತವೆ. ದೀರ್ಘಕಾಲ ಹೊಟ್ಟೆ ತುಂಬಿರುವಂತೆ ಮಾಡುತ್ತದೆ.

ಇಡೀ ದಿನ ತಿನ್ನುತ್ತಿರುವುದು ಸರಿಯಲ್ಲ

ಊಟದ ಮಧ್ಯೆ ಸಿಕ್ಕಿದ್ದೆಲ್ಲ ತಿನ್ನಬಾರದು. ಹಾಗೆ ಮಾಡುವುದರಿಂದ ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿಯನ್ನು ದೇಹಕ್ಕೆ ತುಂಬುತ್ತೀರಿ. ಮುಖ್ಯ ಸಮಯದ ಊಟವನ್ನೇ ಸಮತೋಲಿತ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ತರಕಾರಿಗಳ ಮೂಲಕ ಸೇವಿಸಿ.

ನೀರು ಕುಡಿಯಿರಿ

ದುಬಾರಿ ಹಣ್ಣಿನ ರಸ, ಫಿಝೀ ಪಾನೀಯ ಮತ್ತು ಸ್ಮೂತಿಗಳನ್ನು ಹೊರಗಿನಿಂದ ಸೇವಿಸುವುದು ಸರಿಯಲ್ಲ. ಇಂತಹ ಸಕ್ಕರೆ ತುಂಬಿದ ಪಾನೀಯಗಳೇ ಹೊಟ್ಟೆಯ ಕೊಬ್ಬನ್ನು ಹೆಚ್ಚಾಗಿಸುತ್ತವೆ. ಬಾಯಾರಿಕೆಯಾದಾಗ ನೀರು ಕುಡಿಯಿರಿ. ಆಂಟಿ ಆಕ್ಸಿಡಂಟ್ ಹೆಚ್ಚಾಗಿರುವ ಗ್ರೀನ್ ಟೀ ಕುಡಿಯಬಹುದು. ಇಡೀದಿನ ಹೈಡ್ರೇಟೆಡ್ ಆಗಿರುವುದು ಪರಿಪೂರ್ಣ ಆರೋಗ್ಯವನ್ನು ಕೊಡಲಿದೆ.

ಲೇಬಲ್ ಓದಿ

ಆಹಾರದ ಮೇಲಿರುವ ಲೇಬಲ್‌ಗಳು ದಾರಿ ತಪ್ಪಿಸುವ ಸಾಧ್ಯತೆಯಿದೆ. ಕಡಿಮೆ ಕೊಬ್ಬು ಅಥವಾ ಹಗುರ ಎನ್ನುವ ವಸ್ತುಗಳಿಗೆ ರುಚಿ ಬರಲು ಸಕ್ಕರೆ ತುಂಬಲಾಗಿರುತ್ತದೆ. ಡಯಟ್ ಎನ್ನುವ ಶಬ್ದ ಕೇಳಿ ಹೆಚ್ಚು ತಿಂದು ತೂಕ ಏರಿಸಿಕೊಳ್ಳುವವರೇ ಹೆಚ್ಚು.

ಯಾವಾಗಲೂ ತುಪ್ಪ ಬೇಡ ಎನ್ನಬೇಡಿ

ಹಾಲು ಸೇವಿಸುವುದಿಲ್ಲವೆ? ಹಾಲಿನಲ್ಲಿರುವ ಕೆನೆಯಲ್ಲಿ ವಿಟಮಿನ್‌ಗಳಿರುತ್ತವೆ. ಅದು ಆರೋಗ್ಯಕ್ಕೆ ಉತ್ತಮ. ಸಹಜವಾದ ಬೆಣ್ಣೆಗಿಂತ ಮನುಷ್ಯ ಮಾಡಿರುವ ಬೆಣ್ಣೆ ಉತ್ತಮವೆನ್ನುವ ಭಾವನೆಯೂ ತಪ್ಪು.

ಮನೆಯಲ್ಲೇ ತಯಾರಾದ ಆಹಾರ

ಸಿದ್ಧ ಪ್ಯಾಕೇಜ್ಡ್, ಸಂಸ್ಕರಿತ ಆಹಾರದಲ್ಲಿ ರಾಸಾಯನಿಕಗಳಿದ್ದು, ದೀರ್ಘಕಾಲದಲ್ಲಿ ಹಾನಿಕರ. ಮನೆಯಲ್ಲೇ ತಯಾರಾದ ಆಹಾರಗಳು ಅಗ್ಗವಾಗಿದ್ದು ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿರುತ್ತವೆ. ಹೊರಗೆ ತಿನ್ನುವ ವ್ಯಕ್ತಿಗಳು ಬೇಗನೇ ತೂಕ ಬೆಳೆಸಿಕೊಂಡು ಆರೋಗ್ಯ ಸಮಸ್ಯೆಗಳನ್ನೂ ತಂದುಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News