ಮಕ್ಕಳ ಒತ್ತಡವನ್ನು ನಿವಾರಿಸುವ ಉಸಿರಾಟದ ವ್ಯಾಯಮಗಳು- ಭಾಗ 1
ಮಕ್ಕಳಿಗೆ ಅದೆಂತಹ ಒತ್ತಡ ಕಣ್ರಿ? ಎನ್ನುವವರು ಅದೆಷ್ಟು ಜನರಿಲ್ಲ. ಹೌದು ಸ್ವಾಮಿ ಅವರಿಗೂ ಒತ್ತಡಗಳು ಇರುತ್ತವೆ. ಆರ್ಥಿಕ ಸಮಸ್ಯೆ, ಬಾಸ್ ನೀಡಿರುವ ಕೆಲಸಗಳು, ಮನೆಯ ದೈನಂದಿನ ಅಗತ್ಯಗಳನ್ನು ಪೂರೈಸುವ ತಾಪತ್ರಯ ಇವುಗಳು ಅವರಿಗೆ ಇಲ್ಲವಾದರೂ, ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಹೋಮ್ ವರ್ಕ್ ಮಾಡಬೇಕು, ಕ್ಲಾಸ್ ಟೀಚರ್ ನೀಡಿದ ವರ್ಕ್ ಆದಷ್ಟು ಬೇಗ ಮುಗಿಸಬೇಕು.
ನಾಳೆ ಅದ್ಯಾವುದೋ ಸಬ್ಜೆಕ್ಟ್ ಕ್ಲಾಸ್ ಟೆಸ್ಟ್, ನಾಡಿದ್ದು ಇನ್ನೊಂದು, ಆಮೇಲೆ ಮತ್ತೊಂದು, ಮುಗಿಯುವಷ್ಟರಲ್ಲಿ ಪರೀಕ್ಷೆ...! ನಮ್ಮಮ್ಮ ಇಷ್ಟು ಮಾರ್ಕ್ಸ್ ತಗೋಬೇಕು ಎಂದು ಹೇಳಿದ್ದಾರೆ, ಆಟವಾಡಬೇಕು, ಓಹ್ ನಮಗಿಂತ ಅವರಿಗೆ ಹೆಚ್ಚಿನ ಒತ್ತಡ ಇರುತ್ತೆ ಕಣ್ರಿ. ಅದಕ್ಕಾಗಿ ಅವರಿಗೆ ಕೆಲವೊಂದು ವಿಶ್ರಾಂತಿ ನೀಡುವ ಉಸಿರಾಟದ ವ್ಯಾಯಾಮಗಳನ್ನು ಹೇಳಿಕೊಡಬೇಕಾದುದು ಪೋಷಕರಾಗಿ ನಮ್ಮ ಕರ್ತವ್ಯವಾಗಿರುತ್ತದೆ.
ಇದು ಅವರ ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಅವರಿಗೆ ಲವಲವಿಕೆಯನ್ನು ನೀಡುತ್ತದೆ. ಜೊತೆಗೆ ಉದ್ವೇಗ, ಆತಂಕ ಮತ್ತು ಚಿಂತೆಗಳಿಂದ ಅವರನ್ನು ದೂರ ಮಾಡುತ್ತದೆ. ಅಲ್ಲದೆ ಇವರ ಏಕಾಗ್ರತೆ ಮತ್ತು ಸ್ಮರಣೆ ಶಕ್ತಿಯನ್ನು ಹೆಚ್ಚಿಸುತ್ತದೆ. ಬನ್ನಿ ಇದಕ್ಕಾಗಿ ನಿಮ್ಮ ಮಕ್ಕಳಿಗಾಗಿ ಕೆಲವೊಂದು ಉಸಿರಾಟದ ವ್ಯಾಯಾಮ ತಿಳಿಸಿಕೊಡುತ್ತೇವೆ. ಇದು ನಿಮ್ಮ ಮಕ್ಕಳಿಗೆ ಪರೀಕ್ಷೆಗಳಲ್ಲಿ ಸರಿಯಾಗಿ ಬರೆಯಲು ಸಹಾಯ ಮಾಡುತ್ತದೆ. ಬುಸ್ ಬುಸ್ ಉಸಿರಾಟ..!
ದೀರ್ಘವಾಗಿ ಮೂಗಿನ ಮೂಲಕ ಉಸಿರನ್ನು ಎಳೆದುಕೊಳ್ಳಿ. ಅದನ್ನು ಬಾಯಿಯ ಮೂಲಕ ಬುಸ್ ಬುಸ್ ಅನ್ನುವ ರೀತಿ ಹೊರಗೆ ಬಿಡಿ. ಉಸಿರು ಬಿಡುವ ಸಮಯವು ಉಸಿರೆಳುದುಕೊಳ್ಳುವುದಕ್ಕಿಂತ ದೀರ್ಘವಾಗಿರಬೇಕು. ದೀರ್ಘ ಉಸಿರಾಟವು ನಿಮ್ಮ ಮಗುವಿನ ಮನಸ್ಸನ್ನು ಶಾಂತ ಮಾಡುತ್ತದೆ. ಇದು ಮಗುವಿನ ಆತಂಕ ಮತ್ತು ಒತ್ತಡಗಳನ್ನು ನಿವಾರಿಸುತ್ತದೆ.
ಮುಂದುವರೆಯುತ್ತದೆ…