ಡೆಂಗ್: ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ?

Update: 2016-09-18 11:19 GMT

ಬೆಂಗಳೂರು,ಸೆ.18: ನಗರಗಳಲ್ಲಿ ಈಗ ಡೆಂಗ್ ನ ಡಂಗುರ. ಬಾಲಿವುಡ್ ತಾರೆ ವಿದ್ಯಾಬಾಲನ್ ಅವರಿಂದ ಹಿಡಿದು ಹಲವು ಮಂದಿ ಡೆಂಗ್ ಮಾರಿಗೆ ತುತ್ತಾಗಿದ್ದಾರೆ. ಇದರಿಂದ ಹೇಗೆ ತಪ್ಪಿಸಿಕೊಳ್ಳಬಹುದು ಎನ್ನುವುದಕ್ಕೆ ಖ್ಯಾತ ವೈದ್ಯ ಡಾ.ಮೇಘಶ್ಯಾಮ ಜೆ.ಕೋಟಿ ನೀಡಿರುವ ಸಲಹೆಗಳು ಇಲ್ಲಿವೆ ನೋಡಿ.

ಪತ್ತೆ ಹೇಗೆ?

ಡೆಂಗ್ ಇತರ ವೈರಲ್ ಜ್ವರಗಳಂತೆಯೇ ಒಂದು ಜ್ವರ. ತೀವ್ರ ಜ್ವರದ ಕಾರಣದಿಂದ ಸಾಮಾನ್ಯ ಆಂಟಿಬಯೋಟಿಕ್ ಔಷಧಗಳಿಗೂ ಇದು ಜಗ್ಗುವುದಿಲ್ಲ. ಮೂರನೇ ದಿನವೂ ಜ್ವರ ಕಡಿಮೆಯಾಗದಿದ್ದರೆ ವೈದ್ಯರು ಡೆಂಗೆ ತಪಾಸಣೆಗೆ ಸೂಚಿಸುತ್ತಾರೆ. ಒಂದು ಅಂಶ ಧನಾತ್ಮಕವಾಗಿ ಬಂದರೂ ರೋಗಿ ಡೆಂಗ್ ನಿಂದ ಬಳಲುತ್ತಿರುವುದು ಸ್ಪಷ್ಟವಾಗುತ್ತದೆ.

ಇದರಿಂದ ಸುಧಾರಿಸಿಕೊಳ್ಳುವ ಅವಧಿಯಲ್ಲಿ ಇತರ ವೈರಲ್ ಜ್ವರಗಳಂತೆ ರೋಗಿಗೆ ಬೆಂಬಲ ಆರೈಕೆ ಅತ್ಯಗತ್ಯ. ರೋಗಿ ಸಾಕಷ್ಟು ನೀರು, ಆಹಾರ ಸೇವಿಸುವಂತೆ ನೋಡಿಕೊಳ್ಳಬೇಕು. ಜ್ವರ ನಿಯಂತ್ರಣಕ್ಕೆ ಬಂದ ಬಳಿಕ ರಕ್ತದ ಪ್ಲೇಟ್‌ಲೆಟ್ ಸಂಖ್ಯೆಯನ್ನು ನಿಗಾ ವಹಿಸಿ ನೋಡುತ್ತಿರಬೇಕು. ಜ್ವರ ಬಂದ ಏಳನೇ ದಿನದ ಬಳಿಕ ಪ್ಲೇಟ್‌ಲೆಟ್ ಸಂಖ್ಯೆ ಕುಸಿಯುತ್ತಾ ಹೋಗುತ್ತದೆ. ಆದರೆ ಹಿರಿಯ ನಾಗರಿಕರು ಹಾಗೂ ಮಕ್ಕಳಲ್ಲಿ ಇದು ಬದಲಾಗಬಹುದು.

ಸುರಕ್ಷಿತವಾಗಿರಿ

ಡೆಂಗ್ ಗೆ ಕಾರಣವಾಗುವ ವೈರಸ್ ಈಡಿಸ್ ಈಜಿಪ್ತಿಎಂಬ ಸೊಳ್ಳೆಯ ಮೂಲಕ ಹರಡುತ್ತದೆ. ಇದು ಹಗಲಿನ ಅವಧಿಯಲ್ಲಿ ಕಡಿಯುವ ಸೊಳ್ಳೆ. ಮೊಣಕಾಲಿನಿಂದ ಕೆಳಭಾಗಕ್ಕೆ ಕಡಿಯುತ್ತದೆ. ಆದ್ದರಿಂದ ಹೊರಗೆ ಪೊದೆ ಹಾಗೂ ಮರಗಳು ಇರುವ ಪ್ರದೇಶಕ್ಕೆ ಹೋಗುವುದಾದರೆ, ಇಡೀ ದೇಹವನ್ನು ಮುಚ್ಚುವಷ್ಟು ಬಟ್ಟೆ ಧರಿಸುವುದು ಸೂಕ್ತ. ಉದ್ಯಾನವನಗಳಿಗೆ ವಾಯುವಿಹಾರಕ್ಕೆ ತೆರಳುವ ವೃದ್ಧರು ಹಾಗೂ ಮಕ್ಕಳಿಗೆ ಇದು ಕಡ್ಡಾಯ. ಮನೆಗಳ ಒಳಗೂ ಸೊಳ್ಳೆ ನುಸುಳುವುದನ್ನು ತಡೆಯಲು ಕಿಟಕಿಗೆ ಮೆಶ್ ಬಳಸಿ. ಆರಂಭಿಕ ಹಂತದಲ್ಲೇ ಗುಣಲಕ್ಷಣ ತಿಳಿದುಕೊಳ್ಳಬಹುದು. ಗಂಟಲು ಸೋಂಕಿನಿಂದ ಹಿಡಿದು, ವೈರಲ್ ಜಠರ ಸೋಂಕು ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಅಲ್ಪಸ್ವಲ್ಪ ಜ್ವರ ಇದ್ದರೂ, ನಾಲ್ಕರಿಂದ ಐದು ದಿನಗಳ ವರೆಗೆ ಇದ್ದರೆ ಡೆಂಗ್ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ.

ಪಪ್ಪಾಯಿ ಎಲೆಯ ರಸ ಅಥವಾ ಕಿವಿಹಣ್ಣು ಪ್ಲೇಟ್‌ಲೆಟ್ ಹೆಚ್ಚಿಸಲು ಅನುಕೂಲವಾಗುತ್ತದೆ ಎಂದು ಕೆಲ ವೈದ್ಯರು ಅಭಿಪ್ರಾಯಪಡುತ್ತಾರೆ. ಆದರೆ ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಇಲ್ಲ ಎನ್ನುವುದು ಡಾ.ಮೇಘಶ್ಯಾಂ ಅವರ ಅಭಿಪ್ರಾಯ. ಅವರು ನೀಡುವ ಸಲಹೆ ಎಂದರೆ ಹೆಚ್ಚು ಹೆಚ್ಚು ಹಣ್ಣು ಸೇವಿಸಿ.ಇದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹೆಚ್ಚಿನ ದ್ರವ ಆಹಾರ ಅದರಲ್ಲೂ ಮುಖ್ಯವಾಗಿ ಮುಸುಂಬಿ ರಸ ಸೇವಿಸಿ. ವಿಶ್ರಾಂತಿ ಪಡೆಯಿರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News