ಇದು ಬಾಬಾಸಾಹೇಬರು ನಡೆದು ಬಂದ ಹಾದಿ
‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಎಂದು ಉಡುಪಿಗೆ ಹೊರಟ ಬಿಸಿರಕ್ತದ ತರುಣರು ಈ ನಿರಾಶಾದಾಯಕ ವಾತಾವರಣದಲ್ಲೂ ಭರವಸೆಯ ಬೆಳಕನ್ನು ಚೆಲ್ಲಿದ್ದಾರೆ. ಬುದ್ಧ ಬಸವಣ್ಣನಿಂದ ಹಿಡಿದು ಬಾಬಾ ಸಾಹೇಬರವರೆಗೆ ನಿರಂತರವಾಗಿ ಸಾಗಿ ಬಂದ ಸಮಾನತೆಯ ಜ್ಯೋತಿಯನ್ನು ಆರಿಸಲು ಭಾರೀ ಹುನ್ನಾರವೇ ನಡೆದಿರುವ ಹಿನ್ನೆಲೆಯಲ್ಲಿ ಡಾ. ಅಂಬೇಡ್ಕರ್ ಬದುಕಿದ್ದಾಗ ಇಂತಹ ಶಕ್ತಿಗಳೊಂದಿಗೆ ಹೇಗೆಲ್ಲ ಸೆೆಣಸಿದರು ಎಂಬ ಬಗ್ಗೆ ನಾವು ಚರಿತ್ರೆಯತ್ತ ಹೊರಳಿ ನೋಡಬೇಕಾಗಿದೆ.
ಬಹಳ ಜನ ತಿಳಿದೋ, ತಿಳಿಯದೆಯೋ ಭಾವಿಸಿದಂತೆ ಬಾಬಾ ಸಾಹೇಬರು ಕಮ್ಯುನಿಸ್ಟ್ ವಿರೋಧಿ ಆಗಿರಲಿಲ್ಲ. ಹಾಗೆಂದು ಕಮ್ಯುನಿಸಂ ಅನ್ನು ಅವರು ಪೂರ್ಣ ಒಪ್ಪಿರಲೂ ಇಲ್ಲ. ಆದರೆ ಸಮಾಜ ಬದಲಾವಣೆಗೆ ಅಡ್ಡಿಯಾಗಿರುವ ಪ್ರಧಾನ ಶತ್ರುವಿನ ವಿರುದ್ಧ ಹೋರಾಡಲು ಸಮಾನ ಮನಸ್ಕ ಶಕ್ತಿಗಳು ಹೆಗಲಿಗೆ ಹೆಗಲು ಕೊಡಬೇಕೆಂದು ಅಂಬೇಡ್ಕರ್ ನಿಲುವಾಗಿತ್ತು. ಅಂತಲೇ ಅನೇಕ ಬಾರಿ ಕಮ್ಯುನಿಸ್ಟರನ್ನು ಜೊತೆಗೆ ಕರೆದುಕೊಂಡು ಅವರು ಕೆಲಸ ಮಾಡಿದರು.
ಈ ಮಾತನ್ನು ಯಾವುದೇ ಪಕ್ಷದ ಸಮರ್ಥನೆಗಾಗಿ ನಾನು ಹೇಳುತ್ತಿಲ್ಲ. ಚಾರಿತ್ರಿಕ ಸತ್ಯಗಳು ಮರೆಮಾಚಲ್ಪಡಬಾರದೆಂಬ ಕಾಳಜಿಯಿಂದ ಪ್ರಸ್ತಾಪಿಸುತ್ತಿರುವೆ. ಬಾಬಾಸಾಹೇಬರ ಜೊತೆ ಒಡನಾಟ ಹೊಂದಿದ್ದು ಕೆಲ ಹಿರಿಯರು ಹೇಳಿದ್ದ ಮಾತುಗಳನ್ನು ಇಲ್ಲಿ ದಾಖಲಿಸುತ್ತಿರುವೆ. ಮನುವಾದಿ ಶಕ್ತಿಗಳು ಕಾರ್ಪೊರೇಟ್ ಬಂಡವಾಳಶಾಹಿ ಜೊತೆಗೆ ಸೇರಿ ಭಾರತವನ್ನು ಶತಮಾನಗಳ ಹಿಂದಿನ ಕತ್ತಲ ಯುಗಕ್ಕೆ ಕೊಂಡೊಯ್ಯುವ ಮಸಲತ್ತು ನಡೆಸಿರುವ ಇಂದಿನ ದಿನಗಳಲ್ಲಿ ನಾವು ತುಂಬಾ ಎಚ್ಚರದಿಂದ ಹೆಜ್ಜೆ ಇಡಬೇಕಾಗಿದೆ, ಒಂಟಿಯಾಗಿ ಅಲ್ಲ ಜೊತೆಯಾಗಿ. ಸ್ವಾತಂತ್ರಕ್ಕಿಂತ ಮುನ್ನ ನಮ್ಮ ಬಿಜಾಪುರ ಜಿಲ್ಲೆಯಿಂದ ಬಾಬು ರಾವ್ ಹುಜರೆ ಎಂಬ ಹಿರಿಯರು ಶಾಸಕರಾಗಿದ್ದರು. ಆಗ ಕರ್ನಾಟಕ ರಾಜ್ಯ ನಿರ್ಮಾಣವಾಗಿರಲಿಲ್ಲ. ನಮ್ಮ ಬಿಜಾಪುರ ಜಿಲ್ಲೆ, ಧಾರವಾಡ, ಬೆಳಗಾವಿ, ಕಾರವಾರಗಳಂತೆ ಮುಂಬೈ ರಾಜ್ಯಕ್ಕೆ ಸೇರ್ಪಡೆಯಾಗಿತ್ತು. ಆಗ ಅಂದರೆ 1944ನೆ ಇಸವಿಯಲ್ಲಿ ಮುಂಬೈ ವಿಧಾನಸಭೆಗೆ ಪ್ರತಿನಿಧಿಗಳನ್ನು ಆರಿಸಿ ಕಳಿಸಬೇಕಾಗುತ್ತಿತ್ತು. ಹಾಗೆ ಮೀಸಲು ಕ್ಷೇತ್ರದಿಂದ ಗೆದ್ದು ಬಂದವರು ಬಾಬುರಾವ್ ಹುಜರೆ.
ಈ ಬಾಬುರಾವ್ ಹುಜರೆ ನಮ್ಮ ಹಳ್ಳಿಯ ಪಕ್ಕದ ಹಳ್ಳಿಯವರು. ಇವರು ಮುಂಬೈ ವಿಧಾನ ಸಭಾ ಸದಸ್ಯರಾಗಿದ್ದಾಗ ಡಾ.ಅಂಬೇಡ್ಕರ್ ಅಲ್ಲಿ ಹೆಸರಾಂತ ವಕೀಲರಾಗಿದ್ದರು. ಆ ದಿನಗಳಲ್ಲಿ ಸಹಜವಾಗಿ ಹುಜರೆಯವರಿಗೆ ಬಾಬಾ ಸಾಹೇಬರ ಸಂಪರ್ಕ ಬಂತು. ಇಂಗ್ಲಿಷ್ ಭಾಷೆ ಗೊತ್ತಿಲ್ಲದ ಇವರಿಗೆ ಡಾ.ಅಂಬೇಡ್ಕರ್ ಕಾನೂನು ವಿಧಿಗಳನ್ನು ವಿವರಿಸಿ, ಸದನದಲ್ಲಿ ಮಾತನಾಡಬೇಕಾದ ವಿಷಯಗಳನ್ನು ಮರಾಠಿಯಲ್ಲಿ ಬರೆದು ಬಾಯಿಪಾಠ ಮಾಡಿ ಕಳುಹಿಸುತ್ತಿದ್ದರು.ಇಂಥ ಬಾಬುರಾವ್ ಹುಜರೆ ಬದುಕಿದ್ದಾಗ ಅವರ ಸಂಪರ್ಕ ನನಗೆ ಬಂದಿತ್ತು. ಎಪ್ಪತ್ತರ ದಶಕದ ಕೊನೆಯವರೆಗೆ ಬದುಕಿದ್ದ್ದ ಹುಜರೆ ಅವರ ಬಿಜಾಪುರದ ಮನೆಗೆ ಆಗಾಗ ನಾನು ಹೋಗುತ್ತಿದ್ದೆ. ಚರ್ಚಿಸುತ್ತಿದ್ದಾಗ ಡಾ.ಅಂಬೇಡ್ಕರ್ ಬಗ್ಗೆ ಹುಜರೆ ಆಗಾಗ ಭಾವುಕರಾಗಿ ಹೇಳುತ್ತಿದ್ದರು. ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಹುಜರೆ ಅವರಿಗೆ ಕಾಂಗ್ರೆಸ್ ವಿರೋಧಿಯಾಗಿದ್ದ ಬಾಬಾ ಸಾಹೇಬರು ಸದನದಲ್ಲಿ ಮಾತಾಡಲು ಭಾಷಣ ಬರೆದು ಕೊಡುತ್ತಿದ್ದರು.
ಆಗ ಮಾತಿನ ನಡುವೆ ನಾನು ಕಮ್ಯುನಿಸಂ ಜೊತೆಗಿನ ಅಂಬೇಡ್ಕರ್ ಸಂಬಂಧದ ಬಗ್ಗೆ ಹುಜರೆ ಅವರನ್ನು ಪ್ರಶ್ನಿಸಿದ್ದೆ. ಆಗ ಹುಜರೆ ಅವರು ಈ ಬಗ್ಗೆ ತಾಸುಗಟ್ಟಲೆ ವಿವರಿಸಿದ್ದರು. ಬಾಬುರಾವ್ ಹುಜರೆ ಅವರಿಂದ ಬಾಬಾ ಸಾಹೇಬರ ಬಗ್ಗೆ ನಾನು ಅನೇಕ ವಿಷಯ ತಿಳಿದುಕೊಂಡೆ. ಆಗ ಅಂಬೇಡ್ಕರ್ ಹೊರಗೆ ಬಿಂಬಿಸಿದಕ್ಕಿಂತ ಹೇಗೆ ಭಿನ್ನವಾಗಿದ್ದರು ಎಂದು ನನಗೆ ಅರ್ಥವಾಯಿತು.
ಈವರೆಗೆ ಡಾ.ಅಂಬೇಡ್ಕರ್ ಅವರ ಒಂದು ಮುಖದ ಚಿತ್ರ ಮಾತ್ರ ವ್ಯಾಪಕವಾಗಿ ಎಲ್ಲರಿಗೆ ತಿಳಿದಿದೆ. ಡಾ.ಅಂಬೇಡ್ಕರ್ ಸಂವಿಧಾನ ಬರೆದರು, ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ದಲಿತರಿಗೆ ಕರೆ ನೀಡಿದರು, ಸ್ವತಹ ಬೌದ್ಧ ಧರ್ಮ ಸೇರಿದ್ದರು, ಇದಿಷ್ಟೇ ಹೆಚ್ಚು ಪ್ರಚಾರಕ್ಕೆ ಬಂದಿದೆ. ಆದರೆ ಅಂಬೇಡ್ಕರ್ ಸ್ವತಂತ್ರ ಮಜ್ದೂರ್ ಪಾರ್ಟಿ ಕಟ್ಟಿದರು. ಕಮ್ಯುನಿಸ್ಟರು ಮತ್ತು ಸೋಷಲಿಸ್ಟರ ಜೊತೆ ಸೇರಿ ಚಳವಳಿಗಳನ್ನು ಸಂಘಟಿಸಿದರು ಎಂಬ ಅಂಶಗಳು ಹೆಚ್ಚು ಬೆಳಕಿಗೆ ಬಂದಿಲ್ಲ.
ಕಳೆದ ಶತಮಾನದ ಮೂವತ್ತು ನಲವತ್ತರ ದಶಕದಲ್ಲಿ ಡಾ.ಅಂಬೇಡ್ಕರ್ ಕಮ್ಯುನಿಸ್ಟರ ಕಿಸಾನ್ ಸಭಾ ಜೊತೆಗೆ ಸೇರಿ ಕೊಂಕಣ್ ಭಾಗದಲ್ಲಿ ಖೋತ್ ಜಮೀನುದಾರಿ ಪದ್ಧತಿ ವಿರುದ್ಧ ಹೋರಾಡಿದ ಕಮ್ಯುನಿಸ್ಟ್ ನಾಯಕ ರಾಮದಾಸ್ ಪರುಳೇಕರ್ ಆಗ ಬಾಬಾ ಸಾಹೇಬರ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು ಎಂಬ ಸಂಗತಿಯನ್ನು ಹುಜರೆ ನನಗೆ ಹೇಳಿದರು.
1936ರಲ್ಲಿ ಬಾಬಾ ಸಾಹೇಬರು ಸ್ವತಂತ್ರ ಮಜ್ದೂರ್ ಪಕ್ಷ ಸ್ಥಾಪಿಸಿದರು. ಎಲ್ಲಾ ಶ್ರಮ ಜೀವಿಗಳು ಒಂದಾಗಬೇಕೆಂಬುದು ಈ ಸ್ವತಂತ್ರ ಕಾರ್ಮಿಕ ಪಕ್ಷದ ಘೋಷಣೆಯಾಗಿತ್ತು. ಬಾಬಾ ಸಾಹೇಬರ ಸ್ವತಂತ್ರ ಮಜ್ದೂರ್ ಸಂಘವು ಕೆಂಪು ಬಣ್ಣದ ಬಾವುಟವನ್ನು ತನ್ನ ಧ್ವಜವನ್ನಾಗಿ ಸ್ವೀಕರಿಸಿತ್ತು. ಈ ಬಾವುಟದಲ್ಲಿ ಐದು ನಕ್ಷತ್ರಗಳಿದ್ದವು. ಇದನ್ನು ಕೂಡಾ ಹುಜರೆ ನನಗೆ ಹೇಳಿದ್ದರು. ನಂತರ ದಾಖಲೆಗಳನ್ನು ಹುಡುಕಿದಾಗ ನನಗೆ ಖಚಿತವಾಯಿತು.
ಸ್ವತಂತ್ರ ಕಾರ್ಮಿಕ ಪಕ್ಷದಿಂದ ಭೂಮಿಯ ಪ್ರಶ್ನೆಯನ್ನು ಪ್ರಧಾನವಾಗಿ ಎತ್ತಿಕೊಂಡ ಡಾ.ಅಂಬೇಡ್ಕರ್ ನಾಲ್ಕು ಪ್ರಮುಖ ಘೋಷಣೆಗಳನ್ನು ಮುಂದಿಟ್ಟರು. 1) ಜಮೀನ್ದಾರಿ ಪದ್ಧತಿ ರದ್ಧು 2) ದರ್ಖಾಸ್ತು ಹಾಗೂ ಅರಣ್ಯ ಭೂಮಿಯನ್ನು ದಲಿತರಿಗೆ ಹಂಚಬೇಕು 3) ಕೃಷಿ ಕೂಲಿಕಾರನಿಗೆ ಕನಿಷ್ಠ ವೇತನ ನಿಗದಿಯಾಗಬೇಕು ಹಾಗೂ ದುಡಿಯುವವನಿಗೆ ಎಂಟು ತಾಸುಗಳ ಕೆಲಸದ ಮಿತಿ ಇವು ಮಾತ್ರವಲ್ಲದೆ ಇನ್ನಿತರ ಅನೇಕ ಅಂಶಗಳಿದ್ದವು.
ಈ ಬೇಡಿಕೆಗಳಿಗಾಗಿ ಕಮ್ಯುನಿಸ್ಟರ ಕಿಸಾನ್‌ಸಭಾ ಜೊತೆ ಸೇರಿ ಅಂಬೇಡ್ಕರ್ ಜಂಟಿ ಹೋರಾಟಗಳನ್ನು ಸಂಘಟಿಸಿದರು. ಅಂದಿನ ಮುಂಬೈ ಸರಕಾರ ಕಾರ್ಮಿಕ ವಿರೋಧಿ ವಿಧೇಯಕ ತಂದಾಗ ಕಮ್ಯುನಿಸ್ಟ್ ನಾಯಕ ಎಸ್.ಎ. ಡಾಂಗೆ ಅವರನ್ನು ಜೊತೆಗೆ ಕರೆದುಕೊಂಡು ಚಾರಿತ್ರಿಕ ಮುಷ್ಕರ ಸಂಘಟಿಸಿದರು. ಈ ಮುಷ್ಕರದ ಮೆರವಣಿಗೆ ಮೇಲೆ ಪೊಲೀಸ್ ಗೋಲಿಬಾರ್ ನಡೆದು ಇಬ್ಬರು ಕಾರ್ಮಿಕರು ಸಾವಿಗೀಡಾದರು.
ಕಮ್ಯನಿಸ್ಟರ ಜೊತೆ ಸೇರಿ ಅನೇಕ ಹೋರಾಟಗಳನ್ನು ಬಾಬಾಸಾಹೇಬರು ಸಂಘಟಿಸಿದರು. ಆದರೆ ಮಹಾರಾಷ್ಟ್ರದ ಅಂದಿನ ಕಮ್ಯುನಿಸ್ಟ್ ನಾಯಕರು ಬಾಬಾಸಾಹೇಬರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಬಾಲ ಗಂಗಾಧರ ತಿಲಕರಂತಹ ಬಲಪಂಥೀಯ ಸನಾತನವಾದಿಗಳ ಜೊತೆ ಹೆಚ್ಚು ಒಡನಾಟ ಹೊಂದಿದ್ದ ಅಲ್ಲಿನ ಕಮ್ಯುನಿಸ್ಟ್ ನಾಯಕರು ಬಾಬಾ ಸಾಹೇಬರ ನೋವಿಗೆ ಸ್ಪಂದಿಸಲಿಲ್ಲ.
‘ಪ್ರೊಲೆಟೇರಿಯನ್’ ಎಂದು ಯುರೋಪಿಯನ್ ಸಂಬಂಧದಲ್ಲಿ ಕಾರ್ಲ್ ಮಾರ್ಕ್ಸ್ ವ್ಯಾಖ್ಯಾನಿಸಿದ ಕಾರ್ಮಿಕ ವರ್ಗ ಭಾರತದ ಸಂದರ್ಭದಲ್ಲಿ ಜಾತಿಗಳಾಗಿ ಒಡೆದು ಹೋಗಿದೆ. ಶ್ರಮಿಕರ ನಡುವಿನ ಜಾತಿ ಸಂಬಂಧಗಳು ಕೂಡಾ ನಾಶವಾಗಬೇಕೆಂಬುದು ಬಾಬಾ ಸಾಹೇಬರ ನಿಲುವಾಗಿತ್ತು. ಆದರೆ ಕಮ್ಯುನಿಸ್ಟ್ ಚಳವಳಿಯ ಮೇಲ್ಜಾತಿ ನಾಯಕರಿಗೆ ಇದು ಅರ್ಥವಾಗಲಿಲ್ಲ ಹಾಗೆಂದು ಕಮ್ಯುನಿಸ್ಟರು ಜಾತಿವಾದಿಗಳಾಗಿದ್ದರೆಂದಲ್ಲ. ಕಮ್ಯುನಿಸ್ಟ್ ಚಳವಳಿಯಲ್ಲೂ ನಾನಾ ಪಾಟೀಲ ಎಸ್.ಎಸ್ ಮಿರಾಜ್‌ಕರ್ ಅವರಂಥ ಬ್ರಾಹ್ಮಣೇತರ ನಾಯಕರು ಅಣ್ಣಾ ಬಾಪು ಸಾಠೆ, ರಾಮಚಂದ್ರ ಮೋರೆ, ಅಮರ್ ಶೇಖ್, ನಾರಾಯಣ ಸುರ್ವೆ ಅವರಂಥ ದಲಿತ ಅಲ್ಪಸಂಖ್ಯಾತ ನಾಯಕರು ಹೊರ ಹೊಮ್ಮಿದರು. ಆದರೆ ಭಾರತದ ಜಾತಿ ಪದ್ಧತಿಯ ವಾಸ್ತವವನ್ನು ಕಮ್ಯುನಿಸ್ಟರು ಅರ್ಥ ಮಾಡಿಕೊಳ್ಳಲಿಲ್ಲ. ಅಂತಲೆ ಅಂಬೇಡ್ಕರ್ ಜೊತೆಗಿನ ಜಂಟಿ ಹೋರಾಟ ಮುಂದುವರಿಯಲಿಲ್ಲ. ಆದರೆ ಅಂಬೇಡ್ಕರ್ ಮುಕ್ತ ಸೈದ್ಧಾಂತಿಕವಾಗಿ ಕಮ್ಯುನಿಸ್ಟರಿಗೆ ಹತ್ತಿರದಲ್ಲೇ ಇದ್ದರು. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಅವರು ಭೂಮಿಯ ರಾಷ್ಟ್ರೀಕರಣದ ಘೋಷಣೆ ಮಾಡಿದರು. ಕೈಗಾರಿಕೆಗಳು ರಾಷ್ಟ್ರದ ಸಂಪತ್ತಾಗಬೇಕೆಂದು ಹೇಳಿದರು. ಆದರೆ ಜಾತಿ ವ್ಯವಸ್ಥೆಯ ಕ್ರೌರ್ಯದ ಬಗೆಗಿನ ಕಮ್ಯುನಿಸ್ಟರ ಉದಾಸೀನತೆ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಇಂಥ ಅಂಬೇಡ್ಕರ್ ನಮ್ಮನ್ನಗಲಿದ ಆರು ದಶಕದ ನಂತರ ಜಗತ್ತಿನ ಮತ್ತು ದೇಶದ ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸೋವಿಯತ್ ರಶ್ಯದ ಪತನದ ನಂತರ ಹೊಸ ಪೀಳಿಗೆಯ ಕಮ್ಯುನಿಸ್ಟರು ಸಾಕಷ್ಟು ಬದಲಾಗಿದ್ದಾರೆ. ಭಾರತದಲ್ಲಿ ಮನುವಾದಿ ಪ್ರತಿಗಾಮಿ ಶಕ್ತಿಗಳ ಅಟ್ಟಹಾಸ ನಡೆದಿದೆ. ಇಂಥ ಸಂದರ್ಭದಲ್ಲಿ ಬಾಬಾ ಸಾಹೇಬರನ್ನು ಬಿಟ್ಟರೆ ಗತಿ ಇಲ್ಲ ಎಂಬ ಅರಿವು , ಎಡಪಂಥೀಯರಿಗೂ ಇದೆ.
ಈ ಕಾಲಘಟ್ಟದಲ್ಲಿ ದಲಿತ ಸಂಘಟನೆಗಳು ಮತ್ತೆ ಭೂಮಿಯ ಪ್ರಶ್ನೆಯನ್ನು ಕೈಗೆತ್ತಿಕೊಂಡಿದೆ. ಗುಜರಾತಿನಲ್ಲಿ ಆರಂಭವಾದ ಹೋರಾಟ ಉಡುಪಿವರೆಗೆ ಬಂದಿದೆ. ಈ ಸಂದರ್ಭದಲ್ಲಿ ದಲಿತ ಪ್ರಜ್ಞೆಯ ಹೊಸ ಐಕಾನ್ ಆದ ಜಿಗ್ನೇಶ್ ಮೆವಾನಿ ಹೇಳಿದ ಮಾತು ಹೊಸ ಆಂದೋಲನದ ಮುನ್ನಡೆಯ ಬೆಳಕಾಗ ಬೇಕಾಗಿದೆ.‘ಚರಿತ್ರೆಯಲ್ಲಿ ಏನೇ ತಪ್ಪು ಮಾಡಿದ್ದರೂ ಕಮ್ಯುನಿಸ್ಟರು ನಮ್ಮ ಹೋರಾಟದ ನೈಜ ಸಂಗಾತಿಗಳು ಎಂದು ಹೇಳಿದ್ದಾರೆ’.
ದನ ಹತ್ಯೆ ಹೆಸರಿನಲ್ಲಿ ಮನುಷ್ಯರನ್ನೇ ಮನುವಾದಿಗಳು ಕೊಚ್ಚಿಕೊಂದು ಹಾಕುತ್ತಿರುವ ಈ ದಿನಗಳಲ್ಲಿ ಸಮಾನತೆಯ ದನಿಗಳೆಲ್ಲ ಒಂದೆಡೆ ಸೇರಬೇಕಾಗಿದೆ. ಅಂತಲೇ ‘ಜೈ ಭೀಮ್’ ಜೊತೆ ‘ಲಾಲ್ ಸಲಾಂ’ ಎಂದು ಘೋಷಣೆ ಹಾಕಿದರೆ ನಾವೆಲ್ಲಾ ಸ್ವಾಗತಿಸಬೇಕಾಗಿದೆ.