ಮಧುಮೇಹಿಗಳಿಗೆ ’ಸಿಹಿ’ ಸುದ್ದಿ
ಚಂಡೀಗಢ, ಅ.16: ಇನ್‌ಸುಲಿನ್, ಸ್ಟ್ರೆಪ್ಟೊಕಿನಸ್ (ಕ್ಲಾಟ್ ಬಸ್ಟರ್) ಹಾಗೂ ಹೆಪಟೈಟಿಸ್-ಬಿ ಲಸಿಕೆಯಂಥ ಪ್ರೊಟೀನ್ ಆಧರಿತ ಔಷಧಗಳನ್ನು ಇಲ್ಲಿನ ಸೂಕ್ಷ್ಮಜೀವಶಾಸ್ತ್ರ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪ್ರಪ್ರಥಮ ಬಾರಿಗೆ ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ಈ ಔಷಧಗಳ ಬೆಲೆ ಮೂರರಿಂದ ನಾಲ್ಕು ಪಟ್ಟಿನಷ್ಟು ಇಳಿಯುವ ನಿರೀಕ್ಷೆ ಇದೆ.
ಭಾರತ ಇನ್‌ಸುಲಿನ್, ಸ್ಟ್ರೆಪ್ಟೊಕಿನಸ್ (ಕ್ಲಾಟ್ ಬಸ್ಟರ್) ಹಾಗೂ ಹೆಪಟಿಟಿಸ್-ಬಿ ಲಸಿಕೆ ತಯಾರಿಕೆಗಾಗಿ ಆಮದು ಮಾಡಿಕೊಳ್ಳಲಾದ ಪೇಟೆಂಟೆಡ್ ತಂತ್ರಜ್ಞಾನವನ್ನು ಅವಲಂಬಿಸಿದೆ. ಆದರೆ ಇದೀಗ ಭಾರತದ ವಿಜ್ಞಾನಿಗಳು ಈ ಔಷಧಗಳನ್ನು ಅಭಿವೃದ್ಧಿಪಡಿಸಿರುವುದರಿಂದ ಭಾರತಕ್ಕೆ ಗಣನೀಯ ಪ್ರಯೋಜನವಾಗಲಿದೆ. ಮಧುಮೇಹ ಹಾಗೂ ಹೆಪಟೈಟಿಸ್ ಬಿ ರೋಗದಲ್ಲಿ ಚೀನಾವನ್ನು ಹೊರತುಪಡಿಸಿದರೆ, ಭಾರತ ಎರಡನೇ ಸ್ಥಾನದಲ್ಲಿದ್ದು, ಸುಮಾರು 6 ಕೋಟಿ ಮಧುಮೇಹಿಗಳು ಹಾಗೂ 4 ಕೋಟಿ ಹೆಪಟೈಟಿಸ್-ಬಿ ರೋಗಿಗಳು ದೇಶದಲ್ಲಿದ್ದಾರೆ. ಈ ವರ್ಗಕ್ಕೆ ಹೊಸ ಸಂಶೋಧನೆ ನೆರವಾಗಲಿದೆ.
ಹಾಲಿ ಬಳಕೆಯಲ್ಲಿರುವ ವಿದೇಶಿ ತಂತ್ರಜ್ಞಾನವು ಡಿಎನ್‌ಎಯ ಬೆನ್ನೆಲುಬಾಗಿದ್ದು, ಇಲ್ಲಿ ವಂಶವಾಹಿಗಳು ಪ್ರೊಟೀನ್‌ಗಳಾಗಿ ಅಭಿವ್ಯಕ್ತಗೊಳ್ಳುತ್ತವೆ. ಇದೀಗ ಪಿಚಿಯಾ ಎಂಬ ತಂತ್ರಜ್ಞಾನ ವ್ಯಾಪಕವಾಗಿ ಭಾರತದಲ್ಲಿ ಬಳಕೆಯಲ್ಲಿದೆ. ಆದರೆ ಇದು ಪೇಟೆಂಟ್ ಪಡೆದ ತಂತ್ರಜ್ಞಾನವಾಗಿರುವುದರಿಂದ ಸಂಶೋಧಕರಿಗೆ ಹಣ ನೀಡಬೇಕಾಗುತ್ತದೆ. ಇದು ಲಸಿಕೆಯ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಗೆ ಸಂಶೋಧನೆ ನಡೆದಿತ್ತು ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ಜಗನ್ಮೋಹನ ಸಿಂಗ್ ಹೇಳಿದ್ದಾರೆ.
ಮಕ್ಕಳಿಗೆ ನೀಡುವ ಹೆಪಟೈಟಿಸ್ ಬಿ ಲಸಿಕೆಯ ಮಾರುಕಟ್ಟೆ ದರ ಇದೀಗ 45 ರೂಪಾಯಿಯಿಂದ 250 ರೂಪಾಯಿವರೆಗೆ ಇದೆ. ವಯಸ್ಕರಿಗೆ ನೀಡುವ ಇಂಥ ಲಸಿಕೆ ಬೆಲೆ 140 ರೂಪಾಯಿಗಳಿಂದ 325 ರೂಪಾಯಿ ವರೆಗೂ ಇದೆ. ಗ್ಲಾರ್ಜೈನ್ ಎಂಬ ಇನ್‌ಸುಲಿನ್ ಬೆಲೆ 10 ಮಿಲಿ ಲೀಟರ್‌ಗೆ 410 ರೂಪಾಯಿನಿಂದ 1,475 ರೂಪಾಯಿವರೆಗೂ ಇದೆ.