ಬ್ರಾಹ್ಮಣ ಸಮ್ಮೇಳನ; ಅಂದು-ಇಂದು

Update: 2016-12-18 18:39 GMT

ಪ್ರತೀ ವರ್ಷ ಡಿಸೆಂಬರ್ ತಿಂಗಳು ಬಂತೆಂದರೆ, ಅದೇನೋ ಉತ್ಸಾಹ ಮತ್ತು ಸಂಭ್ರಮ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಉಮೇದು ತೀವ್ರಗೊಳ್ಳುತ್ತದೆ. ಬಿಜಾಪುರ ಜಿಲ್ಲೆಯಲ್ಲಿ ಕಳೆದ ಡಿಸೆಂಬರ್ ದಿನಗಳ ನೆನಪುಗಳು ಮಸುಕಾಗುತ್ತಿವೆ. ಆದರೆ 90ರ ದಶಕದಿಂದ ಈಚಿನ ಡಿಸೆಂಬರ್ ತಿಂಗಳು ಮರೆಯಲಾಗದ ನೆನಪುಗಳನ್ನು ಉಳಿಸಿ ಹೋಗುತ್ತದೆ. 1992ರ ಡಿಸೆಂಬರ್ 6ರಂದು ಅಯೋಧ್ಯೆ ಬಾಬರಿ ಮಸೀದಿ ನೆಲಸಮಗೊಂಡ ನಂತರ, ಡಿಸೆಂಬರ್ ತಿಂಗಳ ಸ್ವರೂಪವೇ ಬದಲಾಗಿದೆ. ಆ ನಂತರದ ವರ್ಷಗಳಲ್ಲಿ ಹೊಸ ವರ್ಷದ ಆಚರಣೆಗಿಂತ, ಹಳೆಯ ವರ್ಷದ ನೆನಪುಗಳನ್ನು ಮೆಲುಕು ಹಾಕುತ್ತ ಪ್ರತಿಭಟನೆೆ, ಹೋರಾಟ, ಚಳವಳಿಗಳಲ್ಲೇ ಈ ತಿಂಗಳು ಕಳೆದು ಹೋಗುತ್ತದೆ. ವೈಚಾರಿಕ ಸಂಘರ್ಷದ ಅಲೆಗಳು ಬಂದು ಅಪ್ಪಳಿಸುತ್ತಲೇ ಇರುತ್ತದೆ. ಹಿಂದಿನ ವರ್ಷದಂತೆ ಈ ಬಾರಿಯೂ ಬಲಪಂಥೀಯರಿಗೂ, ಎಡಪಂಥೀಯರಿಗೂ, ನಡುಪಂಥೀಯರಿಗೂ ಈ ತಿಂಗಳು ಪುರಸೊತ್ತು ಇಲ್ಲದ್ದಷ್ಟು ಕೆಲಸ.

ಬಾಬಾ ಬುಡಾನ್‌ಗಿರಿ ಜಯಂತಿ, ಬೆಳಗಾವಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಮ್ಮೇಳನ, ಹುಬ್ಬಳ್ಳಿಯಲ್ಲಿ ಮಾದಿಗರ ಸಮಾವೇಶ, ರಾಯಚೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ, ಮಂಗಳೂರಿನಲ್ಲಿ ಜನನುಡಿ ಸಮಾವೇಶ, ಕೊಡಗಿನ ದಿಡ್ಡಹಳ್ಳಿಯಲ್ಲಿ ಕಾಡಿನಿಂದ ಬೀದಿಗೆ ಬಂದ ಆದಿವಾಸಿಗಳ ಹೋರಾಟ... ಹೀಗೆ ತಲ್ಲಣಗಳನ್ನು ಉಂಟು ಮಾಡಿದ ತಿಂಗಳಿದು. ಈ ಬಾರಿ ಬ್ರಾಹ್ಮಣ ಸಮ್ಮೇಳನದಲ್ಲಿ ಪಕ್ಷಭೆೇದ ಮರೆತು ಪಾಲ್ಗೊಂಡು ಕೇಂದ್ರ ಸಚಿವ ಅನಂತಕುಮಾರ್, ಕರ್ನಾಟಕದ ಸಚಿವ ಆರ್.ವಿ.ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತು ಸಮಾರೋಪದಲ್ಲಿ ಪಾಲ್ಗೊಂಡ ಪರಮೇಶ್ವರ್... ಹೀಗೆ ನಾನಾ ಗಣ್ಯರು, ಬ್ರಾಹ್ಮಣರು ತಮ್ಮ ಜ್ಞಾನಬಲದಿಂದ ಭಾರತವನ್ನು ಬೆಳಗಿದರು. ಶತಮಾನಗಳ ಹಿಂದಿನ ಆ ಭಾರತವನ್ನು ಮತ್ತೆ ಸೃಷ್ಟಿಸೋಣ ಎಂದು ಕರೆ ನೀಡಿದರು. ಕರ್ನಾಟಕದ ಸಚಿವ ದೇಶಪಾಂಡೆ ಅವರು, ಬ್ರಾಹ್ಮಣರು ದೇಶದ ಸಂಪತ್ತು, ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಅವರಿಂದಲೇ ಎಂದು ಹೇಳಿಕೊಂಡರು. ಸಮಾರೋಪ ಸಮಾರಂಭದಲ್ಲಿ ಪರಮೇಶ್ವರ್, ನಾವು ನೀವು ಕಟ್ಟಹೊರಟ ಭಾರತವನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು. ಮುಂದುವರಿದ ಜಾತಿಯೊಂದು ತನ್ನ ಮುಂದುವರಿಕೆಯನ್ನು ಉಳಿಸಿಕೊಳ್ಳಲು, ಶ್ರೇಣೀಕೃತ ಸಮಾಜ ಉಳಿಸಿಕೊಳ್ಳಲು ನಡೆಸಿದ ಸಮ್ಮೇಳನವನ್ನು ಯಾರೂ ಟೀಕಿಸಲಿಲ್ಲ. ಆದರೆ, 80ರ ದಶಕದ ದಿನಗಳು ಈ ರೀತಿ ಇರಲಿಲ್ಲ.

1982ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಬ್ರಾಹ್ಮಣ ಸಮ್ಮೇಳನದ ವಿದ್ಯಮಾನಗಳು ನನಗಿನ್ನೂ ನೆನಪಿನಲ್ಲಿವೆ. ಹುಬ್ಬಳ್ಳಿಯ ಸವಾಯ್ ಗಂಧರ್ವ ಸಭಾಂಗಣದಲ್ಲಿ ನಡೆದ ರಾಜ್ಯ ಬ್ರಾಹ್ಮಣ ಸಮ್ಮೇಳನವನ್ನು ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಉದ್ಘಾಟಿಸಿದ್ದರು. ಈ ಸಮ್ಮೇಳನವನ್ನು ನಾವು ಮತ್ತು ಕೆಲ ಪ್ರಗತಿಪರ ಗೆಳೆಯರು ವಿರೋಧಿಸಿದ್ದೆೆವು. ನಮ್ಮದು ಬರೀ ಹೇಳಿಕೆಯ ವಿರೋಧವಾಗಿರಲಿಲ್ಲ. ಬ್ರಾಹ್ಮಣರ ಸಮ್ಮೇಳನ ನಡೆಯುವ ದಿನ, ಪ್ರತಿಭಟನಾ ಕಾರ್ಯಕ್ರಮ ರೂಪಿಸಿಕೊಂಡಿದ್ದೆವು. ಈ ಪ್ರತಿಭಟನೆೆಯಲ್ಲಿ ಲೋಹಿಯಾವಾದಿಗಳು, ಮಾರ್ಕ್ಸ್‌ವಾದಿಗಳು ಮತ್ತು ದಲಿತ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಮಗೆಲ್ಲ ನಾಯಕತ್ವ ವಹಿಸಿದವರು ಸಾಹಿತಿ ಪ್ರೊ.ಚಂಪಾ. ಇಂತಹ ಪ್ರತಿಭಟನೆೆ ರೂಪಿಸುವಾಗ, ಸಾಕಷ್ಟು ಕಸರತ್ತು ಮಾಡಬೇಕಾಯಿತು.

ಮಾರ್ಕ್ಸ್‌ವಾದಿಗಳಾದ ನಮಗೆ ಜಾತಿ ವ್ಯವಸ್ಥೆಯ ಭಯಾನಕ ಸ್ವರೂಪದ ಬಗ್ಗೆ ಆಗ ಅಷ್ಟು ಸ್ಪಷ್ಟತೆ ಇರಲಿಲ್ಲ. ಆದರೆ ಜಾತಿ ಸಮ್ಮೇಳನ ವಿರೋಧಿಸಬೇಕೆಂಬ ಕಾರಣಕ್ಕಾಗಿ ಸಮಾಜವಾದಿಗಳ ಜೊತೆ ನಾವೂ ಸೇರಿದ್ದೆೆವು. ಈ ಪ್ರತಿಭಟನೆೆಗೆ ಕರಪತ್ರ ರೂಪಿಸುವ ಮೂವರ ಸಮಿತಿಯಲ್ಲಿ ನಾನೂ ಇದ್ದೆ. ಹುಬ್ಬಳ್ಳಿಯಲ್ಲಿ ಪ್ರಜಾವಾಣಿ ವರದಿಗಾರರಾಗಿದ್ದ ಶಿವಾಜಿ ಗಣೇಶನ್, ಚಂಪಾ ಮತ್ತು ನಾನು ಸೇರಿ ರೂಪಿಸಿದ ಕರಪತ್ರದ ಕರಡು ಅಂತಿಮ ಸ್ವರೂಪ ಪಡೆಯಲು ಸಾಕಷ್ಟು ಕಿತ್ತಾಡಬೇಕಾಯಿತು. ವರ್ಗ ಹೋರಾಟದ ಗುಂಗಿನಲ್ಲಿದ್ದ ಮಾರ್ಕ್ಸ್‌ವಾದಿಗಳಾದ ನಾವು ಲೋಹಿಯಾವಾದದ ಪರಿಬಾಷೆಯಲ್ಲಿ ಕರಪತ್ರ ರೂಪುಗೊಳ್ಳಬಾರದೆಂದು ಎಚ್ಚರವಹಿಸಿದ್ದೆವು. ಬ್ರಾಹ್ಮಣರಲ್ಲೂ ಬಡವರು, ಸಿರಿವಂತರು ಎಂಬ ಒಮ್ಮತಕ್ಕೆ ಬಂದು ಕರಪತ್ರಕ್ಕೆ ಅಂತಿಮ ಸ್ವರೂಪ ನೀಡಿದ್ದೆವು.

ಈ ಬ್ರಾಹ್ಮಣ ಸಮ್ಮೇಳನ ವಿರೋಧಿಸಿ ನಾವೆಲ್ಲ ಎಡಪಂಥೀಯರು, ಪ್ರಗತಿಪರರು ಕಾರ್ಯಕ್ರಮ ರೂಪಿಸಿದರೂ ಕೂಡ ಎಡಪಂಥೀಯರ ಒಂದು ಗುಂಪು ನಮ್ಮಾಂದಿಗೆ ಬರಲೇ ಇಲ್ಲ. ಬ್ರಾಹ್ಮಣ ಸಮ್ಮೇಳನ ವಿರೋಧಿಸುವುದು ಸರಿಯಲ್ಲವೆಂದು ಕರಪತ್ರ ಹೊರಡಿಸಿ, ಆ ಗುಂಪು ಪ್ರತ್ಯೇಕವಾಗಿ ಉಳಿಯಿತು. ಆ ಪಕ್ಷದ ನಿಲುವು ಈಗ ಬದಲಾಗಿರುವುದರಿಂದ ಹೆಚ್ಚು ವಿವರಿಸಬೇಕಿಲ್ಲ. ಆದರೆ, ಸಿಪಿಐ ಹಿನ್ನೆಲೆ ಹೊಂದಿದ ನಮಗೆ ಯಾವುದೇ ಗೊಂದಲ ಇರಲಿಲ್ಲ. ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎ.ಜೆ.ಮುಧೋಳ ಅವರು ಬ್ರಾಹ್ಮಣ ವಿರೋಧಿ ಜಂಟಿ ಪ್ರತಿಭಟನೆೆಗೆ ಹಸಿರು ನಿಶಾನೆ ತೋರಿಸಿದರು. ಪ್ರತಿಭಟನೆೆ ದಿನ ಸಾರಿಗೆ ನೌಕರರ ಸಮ್ಮೇಳನಕ್ಕೆಂದು ಹುಬ್ಬಳ್ಳಿಗೆ ಬಂದಿದ್ದ ಕಾರ್ಮಿಕ ನಾಯಕ ಎಚ್.ವಿ.ಅನಂತ ಸುಬ್ಬರಾವ್ ಅವರು ಕೂಡ ಬ್ರಾಹ್ಮಣ ಸಮ್ಮೇಳನ ವಿರೋಧಿ ಹೋರಾಟವನ್ನು ಬೆಂಬಲಿಸಿದ್ದರು.

ನಾವೆಲ್ಲ ಸುಮಾರು ನೂರಕ್ಕೂ ಹೆಚ್ಚು ಜನ ಬ್ರಾಹ್ಮಣ ಸಮ್ಮೇಳನ ನಡೆಯುವ ದಿನ ಹುಬ್ಬಳ್ಳಿಯ ಈದ್ಗಾ ಮೈದಾನದಿಂದ ದೇಶಪಾಂಡೆ ನಗರದ ಸವಾಯ್ ಗಂಧರ್ವ ಹಾಲ್‌ಗೆ ಮೆರವಣಿಗೆಯಲ್ಲಿ ಹೊರಟೆವು. ಈ ಮೆರವಣಿಗೆಯಲ್ಲಿ ಚಂಪಾ ಅವರಲ್ಲದೇ ಆಗ ಎಐಎಸ್‌ಎಫ್ ನಾಯಕರಾಗಿದ್ದ ಸಿದ್ದನಗೌಡ ಪಾಟೀಲ, ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜ ಬಾಂಗಿ, ಸಮಾಜವಾದಿ ನಾಯಕರಾದ ರಾಚಪ್ಪ ಹಡಪದ, ವೀರಣ್ಣ ದೇಸಾಯಿ ಮತ್ತು ಹುಬ್ಬಳ್ಳಿ ಸಂಯುಕ್ತ ಕರ್ನಾಟಕದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಜಿ.ಎಚ್.ರಾಘವೇಂದ್ರ ಪಾಲ್ಗೊಂಡಿದ್ದರು. ಪ್ರತಿಭಟನೆೆಯ ಮುಂದಿನ ಸಾಲಿನಲ್ಲಿದ್ದ ರಾಘವೇಂದ್ರ ಧಿಕ್ಕಾರದ ಘೋಷಣೆ ಹಾಕುತ್ತಿದುದ್ದನ್ನು ಕೇಳಿ, ಅವರ ಅನೇಕ ಸಂಬಂಧಿಕರು ಅಚ್ಚರಿಯಿಂದ ನೋಡುತ್ತಿದ್ದರು. ಆ ದಿನ, ಸವಾಯ್ ಗಂಧರ್ವ ಹಾಲ್‌ನಲ್ಲಿ ಸಮ್ಮೇಳನ ನಡೆದರೆ, ಅದರ ಎದುರಿಗೆ ನಾವು ಪ್ರತಿಭಟಿಸಿದೆವು.

ಆ ಪ್ರತಿಭಟನಾ ಸಭೆಯಲ್ಲಿ ನಮ್ಮ ಜಿ.ಎಚ್.ರಾಘವೇಂದ್ರ, ಮಂತ್ರಾಲಯದ ರಾಘವೇಂದ್ರರಾಯರ ಬಗ್ಗೆ ಒಂದು ಪದ್ಯ ಓದಿದರು. ಆಗ ನಮ್ಮೆಲ್ಲ ಹೋರಾಟದೊಂದಿಗೆ ಜೊತೆಗೆ ಇರುತ್ತಿದ್ದ ಜಿ.ಎಚ್.ರಾಘವೇಂದ್ರ ಈಗಿಲ್ಲ. ಆದರೆ ನಮ್ಮ ನೆನಪಿನಂಗಳದಲ್ಲಿ ನಿತ್ಯ ಹಸಿರಾಗಿರುತ್ತಾರೆ. ಅಂದಿನ ಪ್ರತಿಭಟನೆೆಯಲ್ಲಿ ಚಂಪಾ ಅವರು ಬ್ರಾಹ್ಮಣ ಸಮ್ಮೇಳನ ಖಂಡಿಸಿ ಮಾತನಾಡಿದರು. ಆ ದಿನಗಳು ಎಷ್ಟು ಆರೋಗ್ಯಪೂರ್ಣ ಆಗಿದ್ದವೆಂದರೆ, ಸಮ್ಮೇಳನದ ಸಂಘಟಕರಲ್ಲಿ ಒಬ್ಬರಾಗಿದ್ದ ಹಿರಿಯ ಸಂಸ್ಕೃತ ವಿದ್ವಾಂಸ ಪಂಡರಿನಾಥ ಆಚಾರ್ಯ ಗಲಗಲಿಯವರು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದನ್ನು ಬಿಟ್ಟು ನಾವು ನಡೆಸುತ್ತಿದ್ದ ಪ್ರತಿಭಟನಾ ಸಭೆಯಲ್ಲಿ ದೂರ ನಿಂತು ನಮ್ಮ ಮಾತುಗಳನ್ನು ಆಲಿಸಿ ನಗುತ್ತ ಒಳಹೋದರು. ಆಗ ಚಂಪಾ ಅವರು, ಹಿರಿಯರಾದ ಪಂಡರಿನಾಥ ಆಚಾರ್ಯ ಅವರು ಇಲ್ಲಿ ಬಂದಿದ್ದಾರೆ. ಅವರು ನಮ್ಮ ಸಂದೇಶವನ್ನು ಸಮ್ಮೇಳನದವರಿಗೆ ತಲುಪಿಸಲಿ ಎಂದರು.

ಅಂದು ಬ್ರಾಹ್ಮಣ ಸಮ್ಮೇಳನ ವಿರೋಧಿಸಿದ ನಾವ್ಯಾರೂ ಬ್ರಾಹ್ಮಣ ವಿರೋಧಿಯಾಗಿರಲಿಲ್ಲ. ಈಗಲೂ ಬ್ರಾಹ್ಮಣ ವಿರೋಧಿಗಳಲ್ಲ. ನಾವೆಲ್ಲ ಬೆಳೆದು ಬಂದ ಕಮ್ಯುನಿಸ್ಟ್ ಚಳವಳಿಯಲ್ಲಿ ಬ್ರಾಹ್ಮಣ ಸಮುದಾಯದಿಂದಲೇ ಬಂದ ಅನೇಕ ನಾಯಕರು ಜಾತಿ ಸಂಕೋಲೆಯನ್ನು ಬಿಸಾಕಿ ಈ ಮಾನವತೆಯ ಮಹಾಸಾಗರದಲ್ಲಿ ಒಂದಾಗಿದ್ದನ್ನು ನೋಡಿದ್ದೆವು. ಸಮಾಜವಾದಿ ಚಳವಳಿಯಲ್ಲಿ ಬಂದ ಎಂ.ಜಿ.ಘೋರೆ, ಎಸ್.ಎಂ.ಜೋಶಿ, ಮಧು ಲಿಮಿಯೆ, ಅನಂತಮೂರ್ತಿ ಮುಂತಾದವರು ಬ್ರಾಹ್ಮಣ ಜಾತಿವಾದ ವಿರೋಧಿಸುತ್ತಲೇ ಬಂದರು. ನಮ್ಮ ವಿರೋಧ ಬ್ರಾಹ್ಮಣ ಸಮುದಾಯಕ್ಕೆ ಅಲ್ಲ. ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಬ್ರಾಹ್ಮಣ್ಯಕ್ಕೆ ಎಂಬುದನ್ನು ಆಗಾಗ ಸ್ಪಷ್ಟಪಡಿಸುತ್ತಲೇ ಬಂದಿದ್ದೇವೆ. 80ರ ದಶಕದಲ್ಲಿ ಬ್ರಾಹ್ಮಣ ಸಮ್ಮೇಳನವನ್ನು ನಾವು ವಿರೋಧಿಸಿದಾಗ, ಆ ಸಮ್ಮೇಳನದ ಸಂಘಟಕರಿಂದ ನಮಗೆ ಅಂತಹ ಪ್ರತಿರೋಧ ಬರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆ ಮಧ್ವಬ್ರಾಹ್ಮಣರ ಅಗ್ರಹಾರವೆಂದೇ ಹೆಸರಾಗಿತ್ತು. ಆದರೆ ಬ್ರಾಹ್ಮಣ ಸಮ್ಮೇಳನ ಪ್ರತಿಭಟಿಸಿ ನಾನು ಮತ್ತು ರಾಘವೇಂದ್ರ ಕೆಲಸಕ್ಕೆ ಬಂದಾಗ, ನಮ್ಮ ಅಂದಿನ ಸಂಪಾದಕ ರಾಮಚಂದ್ರ ಉಪಾಧ್ಯಾಯ ಮತ್ತು ಮೂರು ಹೊತ್ತು ಮಡಿ ಮಾಡುತ್ತಿದ್ದ ಸಹೋದ್ಯೋಗಿಗಳು ನಮ್ಮನ್ನು ನಗುನಗುತ್ತಲೇ ಸ್ವಾಗತಿಸಿದ್ದರು.

ಇದನ್ನೆಲ್ಲ ಈಗ ಯಾಕೆ ನೆನಪಿಸಿಕೊಳ್ಳಬೇಕಾಯಿತೆಂದರೆ, 30 ವರ್ಷಗಳ ಹಿಂದೆ ಜಾತಿ ಸಮ್ಮೇಳನ ವಿರೋಧಿಸಿ ಮಾತನಾಡುವಷ್ಟು ನಮ್ಮ ಸಮಾಜ ಜನತಾಂತ್ರಿಕವಾಗಿತ್ತು. ಭಿನ್ನಾಭಿಪ್ರಾಯ ಗೌರವಿಸುವ ಡೆಮಾಕ್ರಟಿಕ್ ವಾತಾವರಣ ಆ ದಿನಗಳಲ್ಲಿ ಇತ್ತು. ಅಂದಿನ ಬ್ರಾಹ್ಮಣರು ಯಾರನ್ನೂ ಮುಟ್ಟಿಸಿಕೊಳ್ಳದ ಮಡಿವಂತರಾದರೂ ಕೂಡ ಇನ್ನೊಬ್ಬರನ್ನು ದ್ವೇಷಿಸುವ ಮತಾಂಧರು ಆಗಿರಲಿಲ್ಲ. ಅಂತಲೇ ಡಾ.ಅನಂತಮೂರ್ತಿಯವರು ಸಂಸ್ಕಾರ ಕಾದಂಬರಿ ಬರೆದಾಗ, ಕೆಲ ಕಂದಾಚಾರಿ ಬ್ರಾಹ್ಮಣರು ಶಪಿಸಿ ಸುಮ್ಮನಾದರೇ ಹೊರತು ದೈಹಿಕ ದಾಳಿ, ತೇಜೋವಧೆಯಂತಹ ಕೆಲಸಕ್ಕೆ ಕೈ ಹಾಕಲಿಲ್ಲ. ಆದರೆ, 90ರ ದಶಕದ ನಂತರ ಸಂಘ ಪರಿವಾರ ಹಿಂದುತ್ವದ ಸಿದ್ಧಾಂತವನ್ನು ಬಳಸಿಕೊಂಡು ರಾಜಕೀಯ ಅಧಿಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾದ ಬಳಿಕ ಪರಿಸ್ಥಿತಿ ಬದಲಾಯಿತು. ಸಂಸ್ಕಾರ ಬರೆದಾಗ, ಅಂತಹ ತೀವ್ರ ಪ್ರತಿರೋಧ ಎದುರಿಸದಿದ್ದ ಅನಂತಮೂರ್ತಿಯವರು ಕೋಮುವಾದ ವಿರೋಧಿಸಿದ ಕಾರಣಕ್ಕಾಗಿ ನಾನಾ ತರಹದ ಚಿತ್ರಹಿಂಸೆ ಅನುಭವಿಸಿದರು.

ನಿತ್ಯವೂ ಅವರಿಗೆ ಫೋನ್ ಮಾಡಿ, ಅವಾಚ್ಯ ಬೈಗುಳಗಳ ಸುರಿಮಳೆಯಾಗುತ್ತಿತ್ತು. ಡಯಾಲಿಸಿಸ್ ಮಾಡಿಕೊಳ್ಳಲು ದವಾಖಾನೆಗೆ ಹೋದಾಗಲೂ ಕೂಡ ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿ, ಸತ್ತು ಹೋಗು ಎಂದು ಬಯ್ಯುತ್ತಿದ್ದರು. ಫ್ಯಾಶಿಸ್ಟರ ಈ ಚಿತ್ರಹಿಂಸೆ ಬಗ್ಗೆ ತುಂಬಾ ನೊಂದುಕೊಂಡಿದ್ದ ಅನಂತಮೂರ್ತಿಯವರು ಕೆಲ ಬಾರಿ ಭೆೇಟಿಯಾದಾಗ ಸಂಕಟ ತೋಡಿಕೊಳ್ಳುತ್ತಿದ್ದರು. ಭಾರತದಲ್ಲಿ ಮನುವಾದ ಮತ್ತು ನಾಝಿವಾದಗಳ ಮಿಶ್ರಣ ಎಂತಹ ಘೋರ ಸ್ವರೂಪ ಪಡೆದಿದೆಯೆಂದರೆ, ಅನಂತಮೂರ್ತಿಯವರು ನಿಧನರಾದಾಗಲೂ ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಮ್ಮ ದೇಶದ ಜಾತಿ ವ್ಯವಸ್ಥೆ ಎಷ್ಟು ಕ್ರೂರವಾಗಿದೆಯೆಂದರೆ, ಜಾತಿ ಬಂಧನವನ್ನು ಕಳಚಿ ವಿಶ್ವಮಾನವರಾಗಲು ಹೊರಟ ಬಸವಣ್ಣನಂತಹವರನ್ನು ಇದು ಜೀವಂತ ಇರಕೊಡಲಿಲ್ಲ. ಅಂಬೇಡ್ಕರ್, ಜ್ಯೋತಿಬಾ ಫುಲೆಯಂತಹವರಿಗೂ ನಾನಾ ಕಿರುಕುಳ ನೀಡಿದರು. ಕೇರಳದ ನಾರಾಯಣ ಗುರು ಬದುಕಿದ್ದಾಗ, ಚಿತ್ರಹಿಂಸೆ ನೀಡಿ ಈಗ ಅವರು ‘ನೀಡಿದ ಮಾನವರೆಲ್ಲ’ ಒಂದೇ ಎಂಬ ಸಂದೇಶವನ್ನೇ ಅಳಿಸಿ ಹಾಕಲು ಸಂಘ ಪರಿವಾರ ಮುಂದಾಗಿದೆ. ‘ನಮಗೆ ಜಾತಿ ಇಲ್ಲ’ ಎಂದು ನಾರಾಯಣಗುರು ಹೇಳಲೇ ಇಲ್ಲ ಎಂದು ಆರೆಸ್ಸೆಸ್‌ನ ಭಾರತೀಯ ಸಂಶೋಧನಾ ಸಂಸ್ಥೆ ಕಟ್ಟುಕತೆ ಕಟ್ಟಿ ಕೇರಳದಲ್ಲಿ ಈಳವರಿಂದ ಉಗಿಸಿಕೊಳ್ಳುತ್ತಿದೆ.

ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರು, ಜೈನರು, ಹಿಂದೂ ಅಥವಾ ಮುಸ್ಲಿಮರಾಗಲಿ ಇವರ್ಯಾರೂ ಮೂಲಭೂತವಾಗಿ ಕೆಟ್ಟವರಲ್ಲ. ಮನುಷ್ಯರು ಮೂಲಭೂತವಾಗಿ ಒಳ್ಳೆಯವರೇ. ಆದರೆ ತಾಯಿಯ ಹೊಟ್ಟೆಯಿಂದ ಹೊರಬಂದು ಅಂಬೆಗಾಲಿಡುತ್ತಿರುವಾಗಲೇ ಮನುಷ್ಯನಿಗೆ ಅಂಟಿಕೊಳ್ಳುವ ಕೋಮು ಮತ್ತು ಜಾತಿಗಳು ಮನುಷ್ಯರನ್ನು ಪಶುವನ್ನಾಗಿ ಮಾಡುತ್ತವೆ. ಮನುಷ್ಯರ ನಡುವೆ ಜಾತಿ, ಕಂದರಗಳು ನಿರ್ಮಾಣ ಆಗುತ್ತವೆ. ಆಕಾಶದೆತ್ತರದ ಅಡ್ಡಗೋಡೆಗಳು ಎದ್ದು ನಿಲ್ಲುತ್ತವೆ. ಈ ಜಾತಿಯ ಹೊಲಸನ್ನು ಮೈಗಂಟಿಸಿಕೊಳ್ಳದ ಬಸವಣ್ಣ, ಕುವೆಂಪು, ಬುದ್ಧ, ಅಂಬೇಡ್ಕರ್ ಅಂತಹವರು ವಿಶ್ವಮಾನವರಾಗುತ್ತಾರೆ. ಇಂತಹ ವಿಶ್ವಮಾನವರೇ ಬೆಳಕನ್ನು ಚೆಲ್ಲಿ, ಈ ಮನುಕುಲವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಅವರು ಹಚ್ಚಿದ ಬೆಳಕಿನ ದೀಪ ನಂದಿ ಹೋಗದಂತೆ ನೋಡಿಕೊಳ್ಳುವುದು ಪ್ರಗತಿಪರ, ಮಾನವತಾವಾದಿಗಳಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News