ಸೌತೆಕಾಯಿ.....ನೆನೆಸಿಕೊಂಡರೇ ಅರ್ಧ ಆಯಾಸ ಪರಿಹಾರ
ಬಿರುಬೇಸಿಗೆಯ ಬಿಸಿಲನ್ನು ತಡೆದುಕೊಳ್ಳುವುದು ತುಂಬ ಕಷ್ಟ. ಇಂತಹ ಸಂದರ್ಭದಲ್ಲಿ ಮನೆಯ ಹಿತ್ತಿಲಲ್ಲಿ ಬೆಳೆದಿರುವ ಸೌತೆಯನ್ನೊಮ್ಮೆ ನೆನಪಿಸಿಕೊಳ್ಳಿ, ಆಯಾಸ ಅರ್ಧ ಪರಿಹಾರಗೊಳ್ಳುತ್ತದೆ. ಆದರೆ ಈಗಿನ ದಿನಗಳಲ್ಲಿ ನಗರಗಳಲ್ಲಂತೂ ಹೆಚ್ಚಿನ ಮನೆಗಳಿಗೆ ಹಿತ್ತಿಲೇ ಇರುವುದಿಲ್ಲ. ಇದ್ದ ಕೆಲವರಿಗೆ ತರಕಾರಿ ಬೆಳೆಸುವುದು ಗೊತ್ತಿಲ್ಲ. ಹೀಗಾಗಿ ತರಕಾರಿ ಅಂಗಡಿಗಳಲ್ಲಿ ಕಾಣುವ ಸೌತೆಯನ್ನೇ ನೆನಪಿಸಿಕೊಳ್ಳಿ..ಸಾಕು. ಆದರೆ ಸೌತೆ ನಮ್ಮ ಶರೀರಕ್ಕೆ ತಂಪು ನೀಡುವುದು ಮಾತ್ರವಲ್ಲ, ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಈ ಅದ್ಭುತ ತರಕಾರಿ ತನ್ನಲ್ಲಿ ಯಥೇಚ್ಛವಾಗಿರುವ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಜೊತೆಗೆ ಹೆಚ್ಚಿನ ಪೋಷಕಾಂಶಗಳನ್ನೂ ಒಳಗೊಂಡಿದೆ.
ಈ ಭೂಮಿಯಲ್ಲಿನ ಅತ್ಯಂತ ಹಳೆಯ ಕೃಷಿಬೆಳೆಗಳಲ್ಲೊಂದಾಗಿರುವ ಸೌತೆಯ ಮೂಲ ಭಾರತದ ಉತ್ತರ ಹಿಮಾಲಯದ ತಪ್ಪಲು ಪ್ರದೇಶ ಎಂದು ಹೇಳಲಾಗಿದೆ. ತನ್ನ ವರ್ಗಕ್ಕೆ ಸೇರಿದ ಕುಂಬಳ, ಕಲ್ಲಂಗಡಿ ಇತ್ಯಾದಿಗಳಂತೆ ಸೌತೆಯೂ ಬಳ್ಳಿಯಲ್ಲೇ ಬೆಳೆಯುತ್ತದೆ. ಸಸ್ಯಶಾಸ್ತ್ರೀಯವಾಗಿ ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ಸೌತೆಕಾಯಿಯ ವೈಜ್ಞಾನಿಕ ಹೆಸರು ಕುಕುಮಿಸ್ ಸಾಟಿವಸ್.
ಸೌತೆಯ ಆರೋಗ್ಯವರ್ಧಕ ಅಂಶಗಳು
ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿಗಳಲ್ಲೊಂದಾಗಿರುವ ಸೌತೆ ಪ್ರತಿ 100 ಗ್ರಾಮ್‌ನಲ್ಲಿ ಕೇವಲ 15 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ನಮ್ಮ ಹೃದಯಕ್ಕೆ ಹಾನಿಕರವಾಗಿರುವ ಕೊಲೆಸ್ಟ್ರಾಲ್ ಇದರಲ್ಲಿ ಇಲ್ಲವೇ ಇಲ್ಲ. ಸೌತೆಯ ಸಿಪ್ಪೆ ಹೇರಳ ನಾರನ್ನು ಹೊಂದಿದ್ದು, ಮಲಬದ್ಧತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಮತ್ತು ಕರುಳಿನಲ್ಲಿ ಸೇರಿಕೊಳ್ಳುವ ಆಹಾರದಲ್ಲಿನ ಕೆಲವು ವಿಷಪದಾರ್ಥಗಳನ್ನು ನಿವಾರಿಸುವ ಮೂಲಕ ಗುದ ಕ್ಯಾನ್ಸರ್‌ನ ವಿರುದ್ಧ ಕೊಂಚಮಟ್ಟಿಗೆ ರಕ್ಷಣೆಯನ್ನು ನೀಡುತ್ತದೆ.
ಮಹತ್ವದ ಅಂತರ್ ಜೀವಕೋಶ ಎಲೆಕ್ಟ್ರೋಲೈಟ್ ಆಗಿರುವ ಪೊಟ್ಯಾಶಿಯಂ ಸೌತೆಯಲ್ಲಿ ಹೇರಳವಾಗಿದೆ. 100 ಗ್ರಾಂ ಸೌತೆ 147 ಮಿ.ಗ್ರಾಂ ಪೊಟ್ಯಾಶಿಯಂ ಅನ್ನು ನೀಡುತ್ತದೆ, ಆದರೆ ಕೇವಲ 2 ಮಿ.ಗ್ರಾಂ ಸೋಡಿಯಮ್ ಅನ್ನು ಒಳಗೊಂಡಿರುತ್ತದೆ. ಹೃದಯಸ್ನೇಹಿ ಎಲೆಕ್ಟ್ರೋಲೈಟ್ ಆಗಿರುವ ಪೊಟ್ಯಾಶಿಯಂ ಸೋಡಿಯಮ್‌ನ ಪರಿಣಾಮವನ್ನು ನಿವಾರಿಸಿ ಒಟ್ಟು ರಕ್ತದೊತ್ತಡವನ್ನು ತಗ್ಗಿಸುವಲ್ಲಿ ಮತ್ತು ಹೃದಯ ಬಡಿತದ ಪ್ರಮಾಣವನ್ನು ಸಮರ್ಪಕವಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ.
ಸೌತೆ ಬಿ-ಕ್ಯಾರೊಟಿನ್ ಮತ್ತು ಎ-ಕ್ಯಾರೊಟಿನ್, ವಿಟಾಮಿನ್ ಸಿ, ವಿಟಾಮಿನ್ ಎ, ಝೀ-ಕ್ಸಾಂತಿನ್ ಮತ್ತು ಲುಟಿನ್‌ನಂತಹ ವಿಶಿಷ್ಟ ಆ್ಯಂಟಿ ಆಕ್ಸಿಡಂಟ್‌ಗಳನ್ನು ಹದವಾದ ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ಇವು ನಮ್ಮ ದೇಹಕ್ಕೆ ವಯಸ್ಸಾಗುವಿಕೆಯಲ್ಲಿ ಮತ್ತು ವಿವಿಧ ಕಾಯಿಲೆಗಳಿಗೆ ನಾಂದಿ ಹಾಡುವಲ್ಲಿ ಪಾತ್ರ ವಹಿಸುವ ಆಕ್ಸಿಜನ್ ಡಿರೈವ್ಡ್ ಫ್ರೀ ರ್ಯಾಡಿಕಲ್ಸ್ ಮತ್ತು ರಿಯಾಕ್ಟಿವ್ ಆಕ್ಸಿಜನ್ ಸ್ಪೆಸಿಸ್(ಆರ್‌ಒಎಸ್) ವಿರುದ್ಧ ರಕ್ಷಣೆಯನ್ನು ನೀಡುತ್ತವೆ.
ಸೌತಕಾಯಿಯಲ್ಲಿ ಹೇರಳ ನೀರು ಮತ್ತು ಪೊಟ್ಯಾಶಿಯಂ ಹಾಗೂ ಅಲ್ಪ ಪ್ರಮಾಣದಲ್ಲಿ ಸೋಡಿಯಮ್ ಇರುವುದರಿಂದ ಇದು ಸ್ವಲ್ಪ ಹೆಚ್ಚೇ ಮೂತ್ರ ವಿಸರ್ಜನೆಗೆ ಕಾರಣ ವಾಗುತ್ತದೆ. ತನ್ಮೂಲಕ ದೇಹದ ತೂಕ ಹೆಚ್ಚಳ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ನಮ್ಮ ದೇಹದಲ್ಲಿ ಆಸ್ಟರೋಫಿಕ್ ಅಥವಾ ಎಲುಬುಗಳಲ್ಲಿಯ ಖನಿಜಾಂಶಗಳನ್ನು ಹೆಚ್ಚಿಸುವ ಚಟುವಟಿಕೆಯನ್ನು ಉತ್ತೇಜಿಸುವ ಮೂಲಕ ಎಲುಬುಗಳನ್ನು ಸದೃಢ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ವಿಟಾಮಿನ್ ಕೆ ಸೌತೆಯಲ್ಲಿ ಸಮೃದ್ಧವಾಗಿದೆ. ಅಲ್ಝಿಮರ್ ಕಾಯಿಲೆಯಿಂದ ಬಳಲುವ ರೋಗಿಗಳ ಮಿದುಳಿನಲ್ಲಿಯ ನರವ್ಯೆಹಕ್ಕೆ ಸಂಬಂಧಿಸಿದ ಹಾನಿಯನ್ನು ಸೀಮಿತಗೊಳಿಸುವಲ್ಲಿಯೂ ಇದು ಸಹಕಾರಿಯಾಗಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ.