ಹೂವಲ್ಲದ ಹೂವು ಕಾಲಿಫ್ಲವರ್

Update: 2016-12-31 07:23 GMT

ಅಗತ್ಯ ಪೋಷಕಾಂಷಗಳನ್ನು ಹೊಂದಿರುವ ಹೂಕೋಸು ಅಥವಾ ಕಾಲಿಫ್ಲವರ್ ಚಿರಪರಿಚಿತ ತರಕಾರಿಗಳಲ್ಲೊಂದಾಗಿದೆ. ಅದರ ಪುಟ್ಟ ಪುಟ್ಟ ಮೊಗ್ಗಿನಂತಹ ಹೂವುಗಳು ವಿಟಾಮಿನ್‌ಗಳು, ಇಂಡೋಲ್-3-ಕಾರ್ಬಿನಲ್, ಸಲ್ಫೋರಾಫೇನ್‌ನಂತಹ ಹಲವಾರು ಆರೋಗ್ಯ ವರ್ಧಕ ಫೈಟೊ-ನ್ಯೂಟ್ರಿಯಂಟ್‌ಗಳನ್ನು ಹೊಂದಿದ್ದು, ಇವು ಶರೀರದ ತೂಕ ಹೆಚ್ಚುವಿಕೆ ಮತ್ತು ಮಧುಮೇಹ ತಡೆಯುವಲ್ಲಿ ಸಹಕಾರಿಯಾಗಿವೆ.

ಜೊತೆಗೆ ಪ್ರಾಸ್ಟೇಟ್,ಅಂಡಾಶಯ ಮತ್ತು ಗರ್ಭಕೋಶ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆಯನ್ನೂ ಒದಗಿಸುತ್ತವೆ.

 ಸಸ್ಯಶಾಸ್ತ್ರೀಯವಾಗಿ ಕ್ರುಸಿಫೆರಸ್ ಅಥವಾ ಬ್ರಾಸಿಕಾಸೀ ತರಕಾರಿಗಳ ಕುಟುಂಬಕ್ಕೆ ಸೇರಿರುವ ಇದು ಕೋಸುಗಡ್ಡೆ ಮತ್ತು ಎಲೆಕೋಸುಗಳಂತಹ ಇತರ ಬ್ರಾಸಿಕಾ ಕುಟುಂಬಕ್ಕೆ ಸೇರಿದ ತರಕಾರಿಗಳಲ್ಲಿ ಇರುವಂಥದೇ ಪೋಷಕಾಂಶ ಮತ್ತು ಫೈಟೊ ಘಟಕಗಳನ್ನು ಹೊಂದಿದೆ.

ಕೋಸುಗಡ್ಡೆಯಂತೆ ಹೂಕೋಸು ಕೂಡ ಒತ್ತಾಗಿ ಸೇರಿಕೊಂಡ ಮೊಗ್ಗುಗಳನ್ನು ಹೊಂದಿದೆ. ಹಸಿರು,ಕಿತ್ತಳೆ,ನೇರಳೆ ಬಣ್ಣದ ಹೋಕೊಸುಗಳನ್ನೂ ವಿಶ್ವದ ವಿವಿಧೆಡೆ ಬೆಳೆಯಲಾಗುತ್ತದೆ.

ಹೂಕೋಸು ಹೇಗೆ ಆರೋಗ್ಯಕ್ಕೆ ಸಹಕಾರಿ?

 ಹೋಕೋಸಿನಲ್ಲಿ ಕ್ಯಾಲೊರಿ ಅತ್ಯಲ್ಪ ಪ್ರಮಾಣದಲ್ಲಿದೆ. 100 ಗ್ರಾಂ ಹೂಕೋಸು ಕೇವಲ 26 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಕೊಬ್ಬು ಮತ್ತು ಕೊಲೆಸ್ಟರಾಲ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುವ ಅದು ಆರೋಗ್ಯಕ್ಕೆ ಲಾಭಕಾರಿಯಾದ ಹಲವಾರು ಆ್ಯಂಟಿ ಆಕ್ಸಿಡಂಟ್ ಅಥವಾ ಉತ್ಕರ್ಷಣ ನಿರೋಧಕಗಳು ಮತ್ತು ವಿಟಾಮಿನ್‌ಗಳನ್ನು ಹೊಂದಿದೆ.

ಅದರ ಪ್ರತಿ 100 ಗ್ರಾಂ ಮೊಗ್ಗುಗಳು ಸುಮಾರು 2 ಗ್ರಾಂ ನಾರನ್ನು ಹೊಂದಿದ್ದು, ಇದು ನಮ್ಮ ಶರೀರಕ್ಕೆ ಅಗತ್ಯವಾದ ಶೇ.5ರಷ್ಟು ನಾರಿನಂಶಕ್ಕೆ ಸಮನಾಗಿದೆ.

ಸಲ್ಫೋರಾಫೇನ್‌ನಂತಹ ಹಲವಾರು ಕ್ಯಾನ್ಸರ್ ವಿರೋಧಿ ಫೈಟೊ ಕೆಮಿಕಲ್‌ಗಳು ಮತ್ತು ಆ್ಯಂಟಿ ಈಸ್ಟ್ರೋಜನ್ ಏಜಂಟ್‌ನಂತೆ ಕಾರ್ಯ ನಿರ್ವಹಿಸುವ ಇಂಡೋಲ್-3-ಕಾರ್ಬಿನಲ್‌ನಂತಹ ಪ್ಲಾಂಟ್ ಸ್ಟಿರೋಲ್‌ಗಳನ್ನು ಹೊಂದಿದೆ.

ಈ ಸಂಯುಕ್ತಗಳು ಸೇರಿಕೊಂಡು ಪ್ರಾಸ್ಟೇಟ್,ಸ್ತನ,ಗರ್ಭಕೋಶ,ಗುದನಾಳ ಮತ್ತು ಅಂಡಾಶಯ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ಒದಗಿಸುತ್ತವೆ ಎನ್ನುವುದು ಸಂಶೋಧನೆಗಳಿಂದ ರುಜುವಾತಾಗಿದೆ.

ಹೋಕೋಸಿನಲ್ಲಿ ಸಮೃದ್ಧವಾಗಿರುವ ಡೈ-ಇಂಡೊಲಿಲ್-ಮಿಥೇನ್(ಡಿಐಎಂ) ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಬ್ಯಾಕ್ಟೀರಿಯಾ ಮತ್ತು ವೈರಾಣು ಪ್ರತಿರೋಧಕವಾಗಿಯೂ ಕೆಲಸ ಮಾಡುತ್ತದೆ. ಪ್ರಸಕ್ತ ಈ ಡಿಐಎಂ ಅನ್ನು ಉಸಿರಾಟದ ತೊಂದರೆಗಳಿಗೆ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ.

 ತಾಜಾ ಹೂಕೋಸು ವಿಟಾಮಿನ್ ಸಿ ಅನ್ನು ಹೇರಳವಾಗಿ ಹೊಂದಿದೆ. ಪ್ರತಿ 100 ಗ್ರಾಂ ಹೂಕೋಸು ಸುಮಾರು 42.8 ಮಿ.ಗ್ರಾಂ ಅಥವಾ ನಮ್ಮ ದೈನಂದಿನ ಅಗತ್ಯದ ಶೇ.80ರಷ್ಟನ್ನು ಒದಗಿಸುತ್ತದೆ.

ವಿಟಾಮಿನ್ ಸಿ ಹಾನಿಕಾರಕ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಟದಲ್ಲಿ ನೆರವಾಗುವ ಜೊತೆಗೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳು ಹಾಗೂ ಕ್ಯಾನ್ಸರ್‌ಗಳನ್ನು ತಡೆಯುತ್ತದೆ.

ಫೊಲೇಟ್,ಪ್ಯಾಮಟೊಥೆನಿಕ್ ಆ್ಯಸಿಡ್(ವಿಟಾಮಿನ್ ಬಿ5), ಪೈರಿಡಾಕ್ಸಿನ್ (ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬಿ1), ನಿಯಾಸಿನ್(ಬಿ3) ಮತ್ತು ವಿಟಾಮಿನ್ ಕೆ ಸೇರಿದಂತೆ ಹಲವಾರು ಪ್ರಮುಖ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳನ್ನು ಒಳಗೊಂಡಿದೆ.

ಕೊಬ್ಬು,ಪ್ರೋಟಿನ್ ಮತ್ತು ಕಾರ್ಬೊಹೈಡ್ರೇಟ್ ಪಚನಕ್ರಿಯೆಗಾಗಿ ಈ ವಿಟಾಮಿನ್‌ಗಳು ಅಗತ್ಯವಾಗಿದ್ದು, ಶರೀರವು ಇವುಗಳನ್ನು ಹೊರಗಿನಿಂದಲೇ ಪೂರೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹೂಕೋಸು ಈ ಅಗತ್ಯವನ್ನು ಸಮರ್ಥವಾಗಿ ಒದಗಿಸುತ್ತದೆ.

ಮ್ಯಾಂಗನೀಸ್, ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂಗಳು ಉತ್ತಮ ಪ್ರಮಾಣದಲ್ಲಿ ಹೋಕೋಸಿನಲ್ಲಿವೆ. ಮ್ಯಾಂಗನೀಸ್‌ನ್ನು ಶರೀರವು ಆ್ಯಂಟಿ ಆಕ್ಸಿಡಂಟ್ ಎಂಝೈಮ್ ಆಗಿ ಬಳಸಿಕೊಂಡರೆ ಪೊಟ್ಯಾಶಿಯಂ ಸೋಡಿಯಂ ಪರಿಣಾಮ ದಿಂದಾಗುವ ರಕ್ತದೊತ್ತಡ ಸಮಸ್ಯೆಯನ್ನು ತಗ್ಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News