ಬಲ್ಲಿರಾ ಸೋರೆಕಾಯಿಯ ಮಹಿಮೆಯನ್ನು.....?

Update: 2017-01-01 09:13 GMT

ಸೋರೆಕಾಯಿ ಯಾರಿಗೆ ಗೊತ್ತಿಲ್ಲ? ಸಾಂಬಾರದಲ್ಲಿ ಬಳಕೆಯಾಗುವ ಜೊತೆಗೆ ರುಚಿರುಚಿಯಾದ ಸಿಹಿತಿಂಡಿಗಳಿಗೂ ಇದು ಪ್ರಸಿದ್ಧವಾಗಿದೆ. ಹಿತವಾದ ಪರಿಮಳ ಹೊಂದಿರುವ ಇದು ಕಕುರ್ಬಿಟಾ ತರಕಾರಿಗಳ ಗುಂಪಿಗೆ ಸೇರಿದೆ. ವಿಶ್ವಾದ್ಯಂತ ಉಷ್ಣವಲಯಗಳಲ್ಲಿ ಆಹಾರದಲ್ಲಿ ಬಳಕೆಯಾಗುವ ಪ್ರಮುಖ ತರಕಾರಿಯಾಗಿದೆ.

ಇಂಗ್ಲೀಷ್‌ನಲ್ಲಿ ಬಾಟಲ್ ಗರ್ಡ್ ಎಂದು ಕರೆಯಲಾಗುವ ಸೋರೆಕಾಯಿಯ ವೈಜ್ಞಾನಿಕ ಹೆಸರು ಲಾಜೆನಾರಿಯಾ ಸಿಸೆರಾರಿಯಾ ಸ್ಟಾಂಡ್ಲಿ.

ಬಳ್ಳಿಯಲ್ಲಿ ಬೆಳೆಯುವ ಸೋರೆಕಾಯಿ ಹೂವು ಬಿಡಲು ಮತ್ತು ಕಾಯಿಯಾಗಲು ಸಾಕಷ್ಟು ಬಿಸಿಲಿನ ಅಗತ್ಯವಿದೆ. ಎಲ್ಲ ಮಣ್ಣಿನಲ್ಲಿಯೂ ಸುಲಭವಾಗಿ ಬೆಳೆಯುತ್ತದೆ.

ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಬೆಳೆಯುವ ಇದು ತಿಳಿಹಸಿರು ಬಣ್ಣದ ಮೃದುವಾದ ಸಿಪ್ಪೆಯನ್ನು ಹೊಂದಿರುತ್ತದೆ. ಬಿಳಿಯ ಬಣ್ಣದ ಸ್ಪಂಜಿನಂತಹ ತಿರುಳು ಹೊಂದಿದ್ದು, ವುೃದುವಾದ ಪುಟ್ಟ ಬೀಜಗಳಿರುತ್ತವೆ.

ಸೋರೆಕಾಯಿಯ ಆರೋಗ್ಯವರ್ಧಕ ಅಂಶಗಳು

ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿಗಳಲ್ಲಿ ಒಂದಾಗಿರುವ ಸೋರೆಕಾಯಿ ಪ್ರತಿ 100 ಗ್ರಾಮ್‌ನಲ್ಲಿ ಕೇವಲ 14 ಕ್ಯಾಲೊರಿಗಳನ್ನೊಳಗೊಂಡಿರುತ್ತದೆ. ದೇಹದ ತೂಕವನ್ನು ಇಳಿಸಲು ಬಯಸುವವರಿಗೆ ವೈದ್ಯರು ಸೂಚಿಸುವ ಪ್ರಮುಖ ತರಕಾರಿಗಳಲ್ಲಿ ಇದೂ ಒಂದಾಗಿದೆ.

ತಾಜಾ ಸೋರೆಕಾಯಿ ಕಡಿಮೆ ಪ್ರಮಾಣದಲ್ಲಿ ಫೋಲೇಟ್‌ಗಳನ್ನು ಹೊಂದಿರುತ್ತದೆ. ಗರ್ಭಿಣಿ ಮಹಿಳೆಯರು ಆರಂಭದ ವಾರಗಳಲ್ಲಿ ಸೋರೆಕಾಯಿಯನ್ನು ತಿಂದರೆ ಈ ಫೋಲೆಟ್‌ಗಳು ಗರ್ಭದಲ್ಲಿನ ಭ್ರೂಣದ ಮಿದುಳು ಮತ್ತು ಮಿದುಳು ಬಳ್ಳಿಯ ರಚನೆಯಲ್ಲಿ ಪ್ರಮುಖ ಪಾತ್ರ ಹೊಂದಿರುವ ನ್ಯೂರಲ್ ಟ್ಯೂಬ್‌ನ ದೋಷಗಳನ್ನು ತಗ್ಗಿಸುತ್ತವೆ.

 ಸೋರೆಕಾಯಿಯಲ್ಲಿ ವಿಟಾಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಪ್ರತಿ 100 ಗ್ರಾಮ್ ತಾಜಾ ಸೋರೆಕಾಯಿ 10 ಮಿ.ಗ್ರಾಂ ಅಥವಾ ಶರೀರದ ದೈನಂದಿನ ಅಗತ್ಯದ ಶೇ.17ರಷ್ಟು ವಿಟಾಮಿನ್ ಸಿ ಅನ್ನು ಒದಗಿಸುತ್ತದೆ.

ಪ್ರಬಲ ನೈಸರ್ಗಿಕ ಆ್ಯಂಟಿ ಆಕ್ಸಿಡಂಟ್‌ಗಳು ಅಥವಾ ಉತ್ಕರ್ಷಣ ನಿರೋಧಕಗಳಲ್ಲೊಂದಾಗಿರುವ ವಿಟಾಮಿನ್ ಸಿ ಕ್ಯಾನ್ಸರ್‌ಗೆ ಕಾರಣವಾಗುವ ನಮ್ಮ ದೇಹದಲ್ಲಿನ ಫ್ರೀ ರ್ಯಾಡಿಕಲ್‌ಗಳನ್ನು ನಿವಾರಿಸುವಲ್ಲಿ ನೆರವಾಗುತ್ತದೆ.

ಪಚನ ಕ್ರಿಯೆಯನ್ನು ಸುಲಭವಾಗಿಸುವ ಸೋರೆಕಾಯಿ ನಾವು ತಿಂದ ಆಹಾರವು ಜೀರ್ಣಗೊಂಡು ದೇಹದಿಂದ ವಿಸರ್ಜನೆಯಾಗುವವರೆಗೂ ಅದರ ಚಲನೆಗೆ ನೆರವಾಗುತ್ತದೆ. ಹೀಗೆ ಅಜೀರ್ಣ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.

ಜೊತೆಗೆ ಸೋರೆಕಾಯಿ ಥಿಯಾಮಿನ್, ನಿಯಾಸಿನ್(ವಿಟಾಮಿನ್ ಬ-3), ಪ್ಯಾಂಟೊಥೆನಿಕ್ ಆ್ಯಸಿಡ್(ವಿಟಾಮಿನ್ ಬಿ-5), ಪೈರಿಡಾಕ್ಸಿನ್(ವಿಟಾಮಿನ್ ಬಿ-6) ಮತ್ತು ಕ್ಯಾಲ್ಸಿಯಂ,ಕಬ್ಬಿಣ,ಸತುವು,ಪೊಟ್ಯಾಶಿಯಂ,ಮ್ಯಾಂಗನೀಸ್ ಮತ್ತು ಮ್ಯಾಗ್ನೇಶಿಯಂ ನಂತಹ ಖನಿಜಗಳ ಉತ್ತಮ ಮೂಲವೂ ಆಗಿದೆ.

ಸೋರೆಕಾಯಿಯ ಬಳ್ಳಿಯ ಎಳೆಯ ಎಲೆಗಳು ಮತ್ತು ಕುಡಿಬಳ್ಳಿ ಕೂಡ ಖಾದ್ಯಯೋಗ್ಯವಾಗಿದ್ದು, ಕಾಯಿಯಲ್ಲಿರುವುದಕ್ಕಿಂತ ಹೆಚ್ಚಿನ ವಿಟಾಮಿನ್‌ಗಳನ್ನು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News