ನವಿಲುಕೋಸು.....ಎಳೆಯದಾಗಿದ್ದರೆ ಇನ್ನೂ ರುಚಿ
ನವಿಲುಕೋಸು ಜನಪ್ರಿಯ ಗೆಡ್ಡೆರೂಪದ ತರಕಾರಿಯಾಗಿದೆ. ತಂಪು ಋತುವಿನ ತರಕಾರಿಗಳಲ್ಲೊಂದಾದ ದುಂಡನೆಯ ಆಕಾರದ ಇದನ್ನು ಯುರೋಪಿನ ವಿವಿಧ ಭಾಗಗಳಲ್ಲಿ ಮತ್ತು ಏಷ್ಯಾದಲ್ಲಿ ಬೆಳೆಯಲಾಗುತ್ತದೆ. ಸಸ್ಯಶಾಸ್ತ್ರೀಯವಾಗಿ ಬ್ರಾಸಿಕೇಸಿ ಕುಟುಂಬಕ್ಕೆ ಸೇರಿರುವ ಇದರ ವೈಜ್ಞಾನಿಕ ಹೆಸರು ಬ್ರಾಸಿಕಾ ರಾಪಾ ಆಗಿದೆ.
ಇಡೀ ನವಿಲುಕೋಸು ಉತ್ತಮ ಪೋಷಕಾಂಶಗಳನ್ನು ಹೊಂದಿದೆಯಾದರೂ ಗೆಡ್ಡೆಯ ಹಸಿರು ಬಣ್ಣದ ಮೇಲ್ಭಾಗವು ಹೆಚ್ಚಿನ ಪೋಷಕಾಂಶಗಳನ್ನೊಳಗೊಂಡಿದ್ದು, ವಿಟಾಮಿನ್‌ಗಳು,ಖನಿಜಗಳು ಮತ್ತು ಆ್ಯಂಟಿಆಕ್ಸಿಡಂಟ್‌ಗಳು ಹಲವು ಪಟ್ಟು ಹೆಚ್ಚಿರುತ್ತವೆ.
ಎಳೆಯ ನವಿಲುಕೋಸನ್ನು ಅದು ಇನ್ನೂ ಬೆಳೆಯುತ್ತಿರುವ ಹಂತದಲ್ಲೇ ಕೀಳಲಾಗುತ್ತದೆ. ಮೃದುವಾದ ಇದು ಸಿಹಿ ರುಚಿಯನ್ನು ಹೊಂದಿದ್ದು ಸಲಾಡ್‌ಗಳಲ್ಲಿ ಬೇಯಿಸದೇ ಬಳಸಬಹುದಾಗಿದೆ. ಆದರೆ ಬೆಳೆದಂತೆಲ್ಲ ಈ ಗೆಡ್ಡೆ ಗಟ್ಟಿಯಾಗುವ ಜೊತೆಗೆ ಗಾಢವಾದ ವಾಸನೆಯನ್ನು ಹೊಂದಿರುತ್ತದೆ. ಪುರಾತನ ಗ್ರೀಕ್ ಮತ್ತು ರೋಮನ್ ಯುಗದಿಂದಲೂ ಇದನ್ನು ಪೌಷ್ಟಿಕ ಆಹಾರವನ್ನಾಗಿ ಬೆಳೆಯಲಾಗುತ್ತದೆ.
ನವಿಲುಕೋಸು ಆರೋಗ್ಯಕ್ಕೆ ಹೇಗೆ ಸಹಕಾರಿ?
ಅತ್ಯಂತ ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ಗೆಡ್ಡೆ ರೂಪದ ತರಕಾರಿ ಗಳಲ್ಲೊಂದಾಗಿರುವ ನವಿಲುಕೋಸು ಪ್ರತಿ 100 ಗ್ರಾಮ್‌ನಲ್ಲಿ ಕೇವಲ 28 ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಆ್ಯಂಟಿ ಆಕ್ಸಿಡಂಟ್‌ಗಳು, ನಾರಿನಂಶ, ಖನಿಜಗಳು ಮತ್ತು ವಿಟಾಮಿನ್‌ಗಳ ಅತ್ಯುತ್ತಮ ಮೂಲವಾಗಿದೆ.
ತಾಜಾ ನವಿಲುಕೋಸು ಸಮೃದ್ಧ ವಿಟಾಮಿನ್ ಸಿ ಅನ್ನು ಹೊಂದಿದ್ದು, ಪ್ರತಿ ನೂರು ಗ್ರಾಂ ಗೆಡ್ಡೆಯು ಸುಮಾರು 21 ಮಿ.ಗ್ರಾಂ ಅಥವಾ ನಮ್ಮ ಶರೀರದ ದೈನಂದಿನ ಅಗತ್ಯದ ವಿಟಾಮಿನ್ ಸಿ ಅನ್ನು ಒದಗಿಸುತ್ತದೆ. ವಿಟಾಮಿನ್ ಸಿ ಶಕ್ತಿಶಾಲಿಯಾದ, ನೀರಿನಲ್ಲಿ ಕರಗಬಲ್ಲ ಆ್ಯಂಟಿ ಆಕ್ಸಿಡಂಟ್ ಆಗಿದ್ದು ಕೊಲಾಜಿನ್ ತಯಾರಿಕೆಯಲ್ಲಿ ನಮ್ಮ ಶರೀರಕ್ಕೆ ಅಗತ್ಯವಾಗಿದೆ.
ಹಾನಿಕಾರಕ ಫ್ರೀ ರ್ಯಾಡಿಕಲ್‌ಗಳನ್ನು ಶರೀರದಿಂದ ನಿವಾರಿಸುವಲ್ಲಿ, ಕ್ಯಾನ್ಸರ್ ಮತ್ತು ಉರಿಯೂತದ ವಿರುದ್ಧ ರಕ್ಷಣೆಯಲ್ಲಿ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿಯೂ ವಿಟಾಮಿನ್ ಸಿ ನೆರವಾಗುತ್ತದೆ.
ನವಿಲುಕೋಸಿನ ಹಸಿರು ಭಾಗವು ಹಲವಾರು ಮುಖ್ಯ ವಿಟಾಮಿನ್‌ಗಳ ಆಗರವಾಗಿದೆ. ಹಸಿರು ಬಣ್ಣದ ಮೇಲ್ಭಾಗವು ಗೆಡ್ಡೆಯಲ್ಲಿರುವುದಕ್ಕಿಂತ ಎಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಹಲವಾರು ಖನಿಜಗಳು ಮತ್ತು ವಿಟಾಮಿನ್‌ಗಳನ್ನು ಒಳಗೊಂಡಿರುತ್ತದೆ.
ವಿಟಾಮಿನ್ ಎ,ವಿಟಾಮಿನ್ ಸಿ,ಕ್ಯಾರೊಟಿನಾಯ್ಡಾ,ಕ್ಸಾಂತಿನ್ ಮತ್ತು ಲುಟೆನ್‌ಗಳಂತಹ ಆ್ಯಂಟಿ ಆಕ್ಸಿಡಂಟ್‌ಗಳ ಅತ್ಯುತ್ತಮ ಮೂಲವಾಗಿದೆ. ಗೆಡ್ಡೆಯ ಮೇಲ್ಭಾಗದಲ್ಲಿರುವ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಕೆ ಅನ್ನು ಹೊಂದಿರುತ್ತವೆ.
ಫೋಲೇಟ್‌ಗಳು,ರಿಬೊಫ್ಲಾವಿಯನ್,ನಿಯಾಸಿನ್,ಪೈರಿಡಾಕ್ಸಿನ್(ವಿಟಾಮಿನ್ ಬಿ-6) ಮತ್ತು ಥಿಯಾಮಿನ್(ವಿಟಾಮಿನ್ ಬಿ-1)ನಂತಹ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳು ಸಾಕಷ್ಟು ಉತ್ತಮ ಪ್ರಮಾಣದಲ್ಲಿ ನವಿಲುಕೋಸಿನಲ್ಲಿವೆ. ಕಬ್ಬಿಣ, ತಾಮ್ರ, ಪೊಟ್ಯಾಶಿಯಂ ಮತ್ತು ಮ್ಯಾಗ್ನೇಶಿಯಂನಂತಹ ಅಗತ್ಯ ಖನಿಜಗಳು ನವಿಲುಕೋಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ.