ಗೆಣಸು...ಶರೀರದ ಆರೋಗ್ಯಕ್ಕೆ ತುಂಬ ಸೊಗಸು
ಗೆಣಸು ನಿಮ್ಮ ನಾಲಗೆಯಲ್ಲಿನ ರುಚಿಮೊಗ್ಗುಗಳಿಗೆ ಸಿಹಿ ಮಾತ್ರವಲ್ಲ, ನಿಮ್ಮ ಹೃದಯದ ಅರೋಗ್ಯಕ್ಕೂ ಅಷ್ಟೇ ಸಿಹಿಯಾಗಿದೆ. ನೆಲದೊಳಗೆ ಬೆಳೆಯುವ ಈ ಗೆಡ್ಡೆ ಮಧ್ಯ ಅಮೇರಿಕ ಮೂಲದ್ದೆಂದು ನಂಬಲಾಗಿದೆ.
ಸಸ್ಯಶಾಸ್ತ್ರೀಯವಾಗಿ ಕನ್ವೊಲವುಲೇಸಿ ಕುಟುಂಬಕ್ಕೆ ಸೇರಿರುವ ಇದರ ವೈಜ್ಞಾನಿಕ ಹೆಸರು ಐಪೊಮೋವಾ ಬಟಾಟಾಸ್ ಆಗಿದೆ.
ಇದು ಆರೋಗ್ಯಕ್ಕೆ ಲಾಭಕಾರಿಯಾದ ಫ್ಲಾವನಾಯ್ಡಾ ಪಿಗ್ಮೆಂಟ್ ಫೈಟೊ ಆ್ಯಂಟಿ ಆಕ್ಸಿಡಂಟ್‌ಗಳು, ಖನಿಜಗಳು, ವಿಟಾಮಿನ್‌ಗಳು ಮತ್ತು ನಾರಿನಂಶವನ್ನು ಹೇರಳವಾಗಿ ಹೊಂದಿದೆ.
ಹೆಚ್ಚಾಗಿ ಉಷ್ಣಪ್ರದೇಶಗಳಲ್ಲಿ ಬೆಳೆಯುವ ಗೆಣಸು ಬೆಳೆಯಲು ಹೆಚ್ಚು ನೀರಿನ ಅಗತ್ಯ ವಿಲ್ಲ, ಅದರ ಬಗ್ಗೆ ಹೆಚ್ಚಿನ ಕಾಳಜಿಯೂ ಬೇಡ.
ಗೆಣಸಿನ ಆರೋಗ್ಯವರ್ಧಕ ಗುಣಗಳು
ಗೆಣಸು ಹೆಚ್ಚಿನ ಕ್ಯಾಲೊರಿಯ ಪಿಷ್ಟ ಆಹಾರಗಳಲ್ಲಿ ಒಂದಾಗಿದ್ದು, ಪ್ರತಿ 100 ಗ್ರಾಮಿನಲ್ಲಿ 70 ಕ್ಯಾಲರಿಗಳನ್ನು ನೀಡುತ್ತದೆ. ಆದರೆ ಇದರಲ್ಲಿ ಕೊಲೆಸ್ಟರಾಲ್ ಇಲ್ಲ. ಇದು ಬಟಾಟೆಗಿಂತ ಹೆಚ್ಚಿನ ಅಮಿಲೋಸ್ ಹೊಂದಿದೆ.
ಹಣ್ಣುಗಳಲ್ಲಿರುವ ಸಕ್ಕರೆ(ಫ್ರುಕ್ಟೋಸ್,ಗ್ಲುಕೋಸ್ ಇತ್ಯಾದಿ)ಗೆ ಹೋಲಿಸಿದರೆ ಅಮಿಲೋಸ್ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಧಾನವಾಗಿ ಹೆಚ್ಚಿಸುತ್ತದೆ. ಹೀಗಾಗಿ ಮಧುಮೇಹ ರೋಗಿಗಳಿಗೂ ಆಹಾರದಲ್ಲಿ ಗೆಣಸನ್ನು ಬಳಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ.
ಗೆಣಸು ಬಿಟಾ-ಕ್ಯಾರೊಟಿನ್ ಮತ್ತು ವಿಟಾಮಿನ್-ಎಗಳಂತಹ ಫ್ಲಾವನಾಯ್ಡಾ ಫಿನಾಲಿಕ್ ಸಂಯುಕ್ತಗಳ ಅತ್ಯುತ್ತಮ ಮೂಲವಾಗಿದೆ. ಇವು ಶಕ್ತಿಶಾಲಿ ನೈಸರ್ಗಿಕ ಆ್ಯಂಟಿ ಆಕ್ಸಿಡಂಟ್‌ಗಳಾಗಿವೆ. ಶರೀರದೊಳಗಿನ ಲೋಳೆಯ ವಪೆಗಳು ಮತ್ತು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳಲು ವಿಟಾಮಿನ್-ಎ ಅಗತ್ಯವಾಗಿದೆ. ಅಲ್ಲದೇ ಕಣ್ಣಿನ ದೃಷ್ಟಿಗೂ ಉತ್ತಮವಾಗಿದೆ.
ಫ್ಲಾವನಾಯ್ಡಾಗಳನ್ನು ಸಮೃದ್ಧವಾಗಿ ಹೊಂದಿರುವ ನೈಸರ್ಗಿಕ ತರಕಾರಿಗಳು ಮತ್ತು ಹಣ್ಣುಗಳ ಸೇವನೆ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ.
ಪೈರಿಡಾಕ್ಸಿನ್(ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬಿ1), ರಿಬೊಫ್ಲಾವಿನ್, ಪ್ಯಾಂಟೊಥೆನಿಕ್ ಆ್ಯಸಿಡ್ ಮತ್ತು ನಿಯಾಸಿನ್‌ಗಳಂತಹ ಅಗತ್ಯ ವಿಟಾಮಿನ್‌ಗಳು ಗೆಣಸಿನಲ್ಲಿ ಹೇರಳವಾಗಿವೆ. ಈ ವಿಟಾಮಿನ್‌ಗಳು ನಮ್ಮ ಶರೀರದೊಳಗೆ ಪಚನಕ್ರಿಯೆಯಲ್ಲಿ ವಿವಿಧ ಕಿಣ್ವಗಳಂತೆ ಪಾತ್ರಗಳನ್ನು ನಿರ್ವಹಿಸುತ್ತವೆ.
ಮ್ಯಾಗ್ನೇಶಿಯಂ,ಕ್ಯಾಲ್ಸಿಯಂ,ಪೊಟ್ಯಾಶಿಯಂ,ಕಬ್ಬಿಣ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳು ಗೆಣಸಿನಲ್ಲಿ ಉತ್ತಮ ಪ್ರಮಾಣದಲ್ಲಿವೆ.