ಗೋವಿನ ಜೋಳ.....ತಿಂದವರೇ ಬಲ್ಲರು ರುಚಿ

Update: 2017-01-20 10:21 GMT

ಗೋವಿನ ಜೋಳ ಅಥವಾ ಮೆಕ್ಕೆ ಜೋಳ ಅಥವಾ ಈಗಿನವರು ಹೇಳುವಂತೆ ‘ಸ್ವೀಟ್ ಕಾರ್ನ್ ’ ಜೋಳದಲ್ಲಿ ವಿಶಿಷ್ಟ ಮಾದರಿಯಾಗಿದೆ. ರೊಟ್ಟಿಗೆ ಬಳಸುವ ಮುತ್ತಿನ ಮಣಿಗಳಂತಹ ಜೋಳಕ್ಕಿಂತ ವಿಭಿನ್ನ ವಂಶವಾಹಿಯನ್ನು ಹೊಂದಿರುವ ಇದರ ಕಾಳುಗಳು ಮೃದುವಾಗಿದ್ದು, ರುಚಿಯಾಗಿರುತ್ತವೆ. 

ವಿಶ್ವಾದ್ಯಂತ ವಿವಿಧ ಅಡುಗೆಗಳಲ್ಲಿ ತರಕಾರಿಯ ರೂಪದಲ್ಲಿ ಬಳಕೆಯಾಗುವ ಇದನ್ನು ಕೆಂಡದಲ್ಲಿ ಸುಟ್ಟು ತಿಂದರೂ ರುಚಿಯೇ! ಕಾಳುಗಳಲ್ಲಿ ಹಾಲು ತುಂಬಿಕೊಳ್ಳುವ ಹಂತಕ್ಕೆ ಬಂದಾಗ ಕಟಾವಾಗುವ ಗೋವಿನ ಜೋಳದಲ್ಲಿನ ಸಕ್ಕರೆ ಅಂಶ ತ್ವರಿತವಾಗಿ ಪಿಷ್ಟಕ್ಕೆ ಪರಿವರ್ತನೆಗೊಳ್ಳುವುದರಿಂದ ಅದನ್ನು ತಕ್ಷಣವೇ ಅಥವಾ ಶೀತಲೀಕರಿಸಿ ಬಳಿಕ ಬಳಸಬಹುದಾಗಿದೆ.

  ಮಧ್ಯ ಅಮೆರಿಕ ಮೂಲದ ಇದು ಸ್ಪಾನಿಷ್ ಅನ್ವೇಷಕರ ಮೂಲಕ ಇಡೀ ವಿಶ್ವಕ್ಕೆ ಹಬ್ಬಿದೆ. ಗೋವಿನ ಜೋಳ ಪ್ರಮುಖ ವಾಣಿಜ್ಯಿಕ ಬೆಳೆಯಾಗಿ ಜನಪ್ರಿಯವಾಗಿದೆ. ಝೀ ಮೇಸ್ ವರ್.ಸಚ್‌ರಾಟಾ ಇದರ ವೈಜ್ಞಾನಿಕ ಹೆಸರಾಗಿದೆ.

ಮಿನಿ ಗೋವಿನ ಜೋಳ ಅಥವಾ ಬೇಬಿ ಕಾರ್ನ್ ಅನ್ನು ತುಂಬ ಎಳೆಯದಾ ಗಿದ್ದಾಗಲೇ ಗಿಡದಿಂದ ಕೊಯ್ಯಲಾಗುತ್ತದೆ. ಫಾಸ್ಟ್ ಫುಡ್‌ಗಳಲ್ಲಿ ಬಳಕೆಯಾಗುವ ಮೂಲಕ ಜನರಿಗೆ ರುಚಿ ಹಿಡಿಸಿರುವ ಇದನ್ನು ಹಾಗೆಯೇ ತಿಂದರೂ ತುಂಬ ರುಚಿರುಚಿಯಾಗಿರುತ್ತದೆ.

ಆರೋಗ್ಯಕ್ಕೆ ಹೇಗೆ ಸಹಕಾರಿ?

ಇತರ ತರಕಾರಿಗಳಿಗೆ ಹೋಲಿಸಿದರೆ ಇದು ಕೊಂಚ ಹೆಚ್ಚೇ ಅಂದರೆ ಪ್ರತಿ 100 ಗ್ರಾಮ್‌ನಲ್ಲಿ 86 ಕ್ಯಾಲರಿಗಳನ್ನೊಳಗೊಂಡಿರುತ್ತದೆ.ಆದರೆ ತಾಜಾ ಗೋವಿನಜೋಳದಲ್ಲಿ ಕ್ಯಾಲರಿ ಪ್ರಮಾಣ ಇತರ ಮಾದರಿಯ ಜೋಳ ಮತ್ತು ಗೋದಿ,ಅಕ್ಕಿಯಂತಹ ಧಾನ್ಯಗಳಿಗಿಂತ ಕಡಿಮೆಯಿದೆ.

ಗ್ಲುಟೆನ್ ಮುಕ್ತವಾಗಿರುವ ಗೋವಿನ ಜೋಳವನ್ನು ಉದರದ ಕಾಯಿಲೆಯಿರುವವರು ಯಾವುದೇ ಅಳುಕಿಲ್ಲದೆ ಸೇವಿಸಬಹುದು.

ಆ್ಯಂಟಿ ಆಕ್ಸಿಡಂಟ್‌ಗಳು, ವಿಟಾಮಿನ್‌ಗಳು,ನಾರಿನಂಶ ಸೇರಿದ ಫೈಟೊ ನ್ಯೂಟ್ರಿಷನ್ ಘಟಕಗಳನ್ನು ಹೊಂದಿರುವ ಗೋವಿನ ಜೋಳವು ಪ್ರತಿ 100 ಗ್ರಾಮ್‌ನಲ್ಲಿ 2 ಗ್ರಾಂ ಅಥವಾ ನಮ್ಮ ದೈನಂದಿನ ಅಗತ್ಯದ ಶೇ.5ರಷ್ಟು ನಾರಿನಂಶವನ್ನು ಹೊಂದಿರುತ್ತದೆ.

ಇದು ನಿಧಾನವಾಗಿ ಜೀರ್ಣಗೊಳ್ಳುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳೊಂದಿಗೆ ಸೇರಿಕೊಂಡು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕ್ರಮಬದ್ಧಗೊಳಿಸುತ್ತದೆ. ಆದರೆ ಅಕ್ಕಿ,ಬಟಾಟೆ ಇತ್ಯಾದಿಗಳಂತೆ ಅಧಿಕ ಗೈಸಿಮಿಕ್ ಹೊಂದಿರುವುದರಿಂದ ಮಧುಮೇಹ ರೋಗಿಗಳು ಹೆಚ್ಚಾಗಿ ತಿನ್ನುವಂತಿಲ್ಲ.

  ಹಳದಿ ಬಣ್ಣದ ಗೋವಿನಜೋಳದ ಮಾದರಿಯಲ್ಲಿ ವಿಟಾಮಿನ್-ಎ ಜೊತೆಗೆ ಬೀಟಾ ಕ್ಯಾರೊಟಿನ್‌ಗಳು, ಲುಟೆನ್, ಕ್ಸಾಂತಿನ್ ಮತ್ತು ಕ್ರಿಪ್ಟೋಕ್ಸಾಂತಿನ್‌ನಂತಹ ಫ್ಲಾವನಾಯ್ಡಾ ಪಿಗ್ಮೆಂಟ್ ಫೈಟೊ ಆ್ಯಂಟಿ ಆಕ್ಸಿಡಂಟ್‌ಗಳು ಹೇರಳವಾಗಿವೆ. 100 ಗ್ರಾಂ ತಾಜಾ ಗೋವಿನಜೋಳ ನಮ್ಮ ದೈನಂದಿನ ಅಗತ್ಯದ ಶೇ.6ರಷ್ಟು ವಿಟಾಮಿನ್-ಎ ಅನ್ನು ಒದಗಿಸುತ್ತದೆ.

ಒಟ್ಟಾರೆಯಾಗಿ ಈ ಸಂಯುಕ್ತಗಳು ಚರ್ಮ ಮತ್ತು ಕಣ್ಣಿನ ಆರೋಗ್ಯ ರಕ್ಷಣೆಯಲ್ಲಿ ನೆರವಾಗುತ್ತವೆ. ಫ್ಲಾವನಾಯ್ಡಾಗಳನ್ನು ಸಮೃದ್ಧವಾಗಿ ಹೊಂದಿರುವ ನೈಸರ್ಗಿಕ ಆಹಾರದ ಸೇವನೆ ಶ್ವಾಸಕೋಶ ಮತ್ತು ಬಾಯಿ ಕ್ಯಾನ್ಸರ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ.

ಇದು ಫೆನಾಲಿಕ್ ಫ್ಲಾವನ್ಯಾಡ್ ಆ್ಯಂಟಿ ಆಕ್ಸಿಡಂಟ್ ಆಗಿರುವ ಫೆರುಲಿಕ್ ಆ್ಯಸಿಡ್‌ನ ಅತ್ಯುತ್ತಮ ಮೂಲವಾಗಿದೆ. ಕ್ಯಾನ್ಸರ್,ವಯಸ್ಸಾಗುವಿಕೆ ಮತ್ತು ಉರಿಯೂತವನ್ನು ತಡೆಯುವಲ್ಲಿ ಫೆರುಲಿಕ್ ಆ್ಯಸಿಡ್ ಉಪಕಾರಿಯಾಗಿದೆ ಎನ್ನುವುದು ಹಲವಾರು ಸಂಶೋಧನೆಗಳಿಂದ ಸಿದ್ಧಗೊಂಡಿದೆ.

    ಗೋವಿನ ಜೋಳ ಬಿ-ಕಾಂಪ್ಲೆಕ್ಸ್ ಗುಂಪಿನ ವಿಟಾಮಿನ್‌ಗಳಾದ ಪೈರಿಡಾಕ್ಸಿನ್ (ವಿಟಾಮಿನ್ ಬಿ6), ಥಿಯಾಮಿನ್(ವಿಟಾಮಿನ್ ಬಿ1), ರಿಬೊಫ್ಲಾವಿನ್, ಪ್ಯಾಂಟೊಥೆನಿಕ್ ಆ್ಯಸಿಡ್, ನಿಯಾಸಿನ್ ಮತ್ತು ಫೊಲೇಟ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ.

ಈ ವಿಟಾಮಿನ್‌ಗಳು ನಮ್ಮ ಶರೀರದೊಳಗೆ ಪಚನಕ್ರಿಯೆಯಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತವೆ. ಜೊತೆಗೆ ಮ್ಯಾಗ್ನೇಶಿಯಂ, ಕಬ್ಬಿಣ, ತಾಮ್ರ, ಸತುವು ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳು ಇದರಲ್ಲಿ ಉತ್ತಮ ಪ್ರಮಾಣದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News