ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ 6 ಪಟ್ಟು ಹೆಚ್ಚಾಗುವ ಸಾಧ್ಯತೆ

Update: 2017-02-04 04:57 GMT

ಹೊಸದಿಲ್ಲಿ, ಫೆ.4: ಮುಂದಿನ ಎರಡು ದಶಕದಲ್ಲಿ ಮಹಿಳೆಯರು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಆರು ಪಟ್ಟು ಅಧಿಕ. ಇದಕ್ಕೆ ಮುಖ್ಯ ಕಾರಣ ಬೊಜ್ಜು ಎಂದು ಬ್ರಿಟನ್‌ನ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಬೊಜ್ಜು ಸಂಬಂಧಿ ಕ್ಯಾನ್ಸರ್‌ಗಳಲ್ಲಿ ಬಹಳಷ್ಟು ಕೇವಲ ಮಹಿಳೆಯರಿಗೇ ತೊಂದರೆಯಾಗುವಂಥವು. ಇದರಿಂದಾಗಿ ಅವರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಅಧಿಕ. ಬೊಜ್ಜಿನ ಹೊರತಾಗಿ ಧೂಮಪಾನ ಕೂಡಾ ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಲು ಕಾರಣ ಎಂದು ಅಧ್ಯಯನ ಹೇಳಿದೆ.

ಅಂಡಾಶಯ, ಗರ್ಭಕಂಠ ಹಾಗೂ ಬಾಯಿ ಕ್ಯಾನ್ಸರ್ ಅತ್ಯಧಿಕವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ಹೇಳಲಾಗಿದೆ. ಮನೋಪ್ರವೃತ್ತಿ ಹಾಗೂ ಆಹಾರ ಪದ್ಧತಿಯಿಂದಾಗಿ ಸಾವಿನ ಐದು ಪ್ರಮುಖ ಕಾರಣಗಳಲ್ಲಿ ಕ್ಯಾನ್ಸರ್ ಕೂಡಾ ಒಂದಾಗಲಿದೆ. ಅಧಿಕ ದೇಹ- ತೂಕದ ಸೂಚ್ಯಂಕ, ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ, ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ತಂಬಾಕು ಹಾಗೂ ಆಲ್ಕೋಹಾಲ್ ಸೇವನೆ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವಾಗಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ವಿಶ್ವದಲ್ಲಿ ಸಂಭವಿಸುವ ಪ್ರತಿ ಆರು ಸಾವುಗಳಲ್ಲಿ ಒಂದು ಸಾವು ಕ್ಯಾನ್ಸರ್‌ನಿಂದ ಸಂಭವಿಸುತ್ತದೆ. ವಿಶ್ವಾದ್ಯಂತ 88 ಲಕ್ಷ ಕ್ಯಾನ್ಸರ್ ಸಾವುಗಳು ದಾಖಲಾಗುತ್ತವೆ. ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಲ್ಲಿ ಈ ಸಾವಿನ ಪ್ರಮಾಣ ಅಧಿಕ. ಚಿಕಿತ್ಸಾ ಸೌಲಭ್ಯಗಳು ಸೂಕ್ತವಾಗಿ ಇಲ್ಲದಿರುವುದು ಇದಕ್ಕೆ ಮುಖ್ಯಕಾರಣ ಎಂದು ವಿವರಿಸಿದೆ. ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಹೊಸ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ತಡವಾಗಿ ಚಿಕಿತ್ಸೆ ನೀಡುತ್ತಿರುವುದರಿಂದ 7 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. 2020ರ ವೇಳೆಗೆ 17.3 ಲಕ್ಷ ಕ್ಯಾನ್ಸರ್ ಚಿಕಿತ್ಸೆ ಹಾಗೂ 8,8 ಲಕ್ಷ ಮಂದಿ ಇದರಿಂದಾಗಿ ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News