ಸಾಮಾನ್ಯ ಶೀತಕ್ಕೂ ನೋವಿನ ಮಾತ್ರೆ ನುಂಗುತ್ತಿದ್ದೀರಾ..?
ತೈಪೆ(ತೈವಾನ್),ಫೆ.5: ನಿಮ್ಮ ಕಚೇರಿಯಲ್ಲಿ ಏನೋ ಒಂದು ಮಹತ್ವದ ಸಭೆ ಇದ್ದಾಗ ಮತ್ತು ನಿಮಗೆ ದಿಢೀರ್ ಶೀತವುಂಟಾದಾಗ ತುರ್ತು ಪರಿಹಾರಕ್ಕೆಂದು ನೋವಿನ ಮಾತ್ರೆಗಳನ್ನು ನುಂಗುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಕೆಟ್ಟ ಸುದ್ದಿ ಇಲ್ಲಿದೆ: ಸಾಮಾನ್ಯ ಶೀತ ಅಥವಾ ಫ್ಲೂದಂತಹ ಶ್ವಾಸನಾಳ ಸೋಂಕುಗಳ ಚಿಕಿತ್ಸೆಗಾಗಿ ನೋವಿನ ಮಾತ್ರೆಗಳನ್ನು ಬಳಸುವವರು ತಮ್ಮ ಹೃದಯಕ್ಕೆ ಅಪಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಎನ್ನುವದು ಸಂಶೋಧನೆಗಳಿಂದ ವ್ಯಕ್ತವಾಗಿದೆ.
ಶ್ವಾಸನಾಳದ ಸೋಂಕು ತೀವ್ರವಾಗಿದ್ದಾಗ ಸ್ಟಿರಾಯ್ಡೇತರ ಆ್ಯಂಟಿ-ಇನ್‌ಫ್ಲೆಮೇಟರಿ ಔಷಧ(ಎನ್‌ಎಸ್‌ಎಐಡಿ)ಗಳ ಬಳಕೆಯು ಹೃದಯಾಘಾತದ ಸಾಧ್ಯತೆಯನ್ನು 3.4 ಪಟ್ಟುಗಳಷ್ಟು ಹೆಚ್ಚಿಸುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ರೋಗಿಗಳು ಆಸ್ಪತ್ರೆಗಳಲ್ಲಿ ಡ್ರಿಪ್ ಮೂಲಕ ನೋವಿನಿಂದ ಶಮನ ನೀಡುವ ಔಷಧಿಗಳನ್ನು ತೆಗೆದುಕೊಂಡರೆ ಈ ಅಪಾಯದ ಸಾಧ್ಯತೆ 7.2 ಪಟ್ಟುಗಳಷ್ಟು ಹೆಚ್ಚಿರುತ್ತದೆ.
ಶ್ವಾಸನಾಳದ ತೀವ್ರ ಸೋಂಕು ಇರುವಾಗ ಎನ್‌ಎಸ್‌ಎಐಡಿಗಳ ಬಳಕೆ ಹೃದಯಾಘಾತದ ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬ ಅರಿವು ವೈದ್ಯರಲ್ಲಿರಬೆಕು ಎನ್ನುತ್ತಾರೆ ತೈಪೆಯಲ್ಲಿರುವ ನ್ಯಾಷನಲ್ ತೈವಾನ್ ವಿವಿ ಆಸ್ಪತ್ರೆಯ ಡಾ.ಚೆಂಗ್-ಚುಂಗ್ ಫಾಂಗ್.
ಇನ್ನೊಂದೆಡೆ ಶ್ವಾಸನಾಳದ ಸೋಂಕು ಇದ್ದರೂ ರೋಗಿಯು ಔಷಧಿಯನ್ನು ಸೇವಿಸದಿದ್ದಾಗ ಹೃದಯಾಘಾತದ ಅಪಾಯ ಆರೋಗ್ಯವಂತ ವ್ಯಕ್ತಿಗೆ ಹೋಲಿಸಿದರೆ 2.7ರಷ್ಟು ಹೆಚ್ಚಾಗಿರುತ್ತದೆ. ಆದರೆ ರೋಗಿ ಸೋಂಕುಮುಕ್ತನಾಗಿದ್ದಾಗ ಔಷಧಿಯನ್ನು ಸೇವಿಸಿದರೆ ಅಪಾಯ 1.5 ಪಟ್ಟಿಗೆ ಇಳಿಯುತ್ತದೆ ಎಂದು ಸಂಶೋಧಕರು ಬೆಟ್ಟು ಮಾಡಿದ್ದಾರೆ.
ಶೀತ ಮತ್ತು ಫ್ಲೂ ಲಕ್ಷಣಗಳಿಂದ ಉಪಶಮನ ಪಡೆಯಲು ಬಯಸುವ ರೋಗಿಗಳು ಎನ್‌ಎಸ್‌ಎಐಡಿಗಳನ್ನು ಬಳಸುವ ಮೊದಲು ತಮ್ಮ ವೈದ್ಯರು ಅಥವಾ ಫಾರ್ಮಾಸಿಸ್ಟ್‌ರನ್ನು ಕಡ್ಡಾಯವಾಗಿ ಸಂಪರ್ಕಿಸಬೇಕು ಎನ್ನುತ್ತಾರೆ ಫಾಂಗ್.