ಜಾನಕಿ ಫೇಲಾದ ಸುದ್ದಿ!
‘‘ಗೋವು ಪವಿತ್ರ ಅಲ್ಲವೇ?’’
‘‘ಹೌದು...ಪವಿತ್ರ ಅಂತಲೇ ತಿಂತಾ ಇರೋದು...ಅಪವಿತ್ರವಾದುದನ್ನು ಯಾರಾದರೂ ತಿಂತಾರ?’’ ಅಂಜನಪ್ಪ ಕೇಳಿದಾಗ ಪಪ್ಪು ಆವಕ್ಕಾದ. ಅವನ ಮಾತನ್ನು ಉಳಿದವರು ಅನುಮೋದಿಸಿದ್ದರು. ಆರೆಸ್ಸೆಸ್ ಶಾಖೆಯಲ್ಲಿ ಬೆಳೆದ ಮೃತ್ಯು ಕೂಡ ಅದಕ್ಕೆ ಸಮ್ಮತಿಸಿದ್ದ.
‘‘ಸೈನಿಕರು ಎಂದರೆ ಈ ನೆಲವನ್ನು ಕಾಪಾಡಬೇಕಾದವರು....ಶಕ್ತಿ ಬೇಕು ಶಕ್ತಿ...’’ ಎಂದು ಮೃತ್ಯು ತನ್ನ ರಟ್ಟೆಯ ಶಕ್ತಿಯನ್ನು ತೋರಿಸುತ್ತಿದ್ದ. ಪಪ್ಪು ಆಗೆಲ್ಲ ಕೀಳರಿಮೆಯಿಂದ ನರಳುತ್ತಿದ್ದ. ಒಂದು ರಾತ್ರಿ ಜಾನಕಿಯ ಪತ್ರವನ್ನು ಓದುತ್ತಿದ್ದ ಸಮಯದಲ್ಲೇ ಅಪ್ಪಯ್ಯ ಕೇಳಿದ ‘‘ಅದು ಯಾರ ಪತ್ರ? ತಾಯಿಯದೋ ?’’
ಪಪ್ಪು ವೌನವಾಗಿದ್ದ. ‘‘ನಿನ್ನ ಗುರೂಜಿ ಬರೆದಿರೋದೋ...?’’
‘‘ಅಲ್ಲ...ಜಾನಕಿಯ ಪತ್ರ...’’ ಪಪ್ಪು ಬಾಯಿ ಬಿಟ್ಟ.
‘‘ಜಾನಕಿ...ಓಹೋ...ನಿನ್ನ ಫ್ರೆಂಡ್ ಜಾನಕಿ? ಆಕೆ ಬರೆದ ಪತ್ರವೋ?’’
‘‘ಊಹುಂ...ಆಕೆ ಬರೆದಿರೋದಲ್ಲ...ಆಕೆಗೆ ನಾನು ಬರೆದಿರುವ ಪತ್ರ...’’
‘‘ಆಕೆಗೆ ನೀನು ಬರೆದ ಪತ್ರವೇ?’’ ಅಪ್ಪಯ್ಯ ಅಚ್ಚರಿಗೊಂಡ ‘‘ಹೌದು. ನಾನು ಬರೆದ ಪತ್ರ. ಆಕೆಗೆ ಇನ್ನೂ ಕೊಟ್ಟಿಲ್ಲ’’
ಅಪ್ಪಯ್ಯ ಕಿಸಕ್ಕನೇ ನಕ್ಕ. ‘‘ನೀನೇ ಬರೆದ ಪತ್ರವನ್ನು ನೀನೇ ಇಷ್ಟು ಬಾರಿ ಓದುತ್ತಾ ಇದ್ದೀಯಲ್ಲ...ಆಕೆ ಇದನ್ನು ಓದುವುದು ಯಾವಾಗ?’’
ಪಪ್ಪು ವೌನವಾಗಿದ್ದವನು ಇದ್ದಕ್ಕಿದ್ದಂತೆಯೇ ಹೇಳಿದ ‘‘ನನಗೆ ಊರಿಗೆ ಹೋಗಬೇಕು. ಅಮ್ಮನನ್ನು ನೋಡಬೇಕು’’
‘‘ಅಮ್ಮನನ್ನು ನೋಡೋದಕ್ಕ್ಕಾ, ಜಾನಕಿಯನ್ನು ನೋಡೋದಕ್ಕಾ?’’ ಅಪ್ಪಯ್ಯ ನಕ್ಕು ಕೇಳಿದ.
‘‘ನಾನು ಹೋದರೆ ಮತ್ತೆ ಬರಲ್ಲ....ಅಮ್ಮನಿಗೆ ನನ್ನನ್ನು ಬಿಟ್ಟರೆ ಯಾರೂ ಇಲ್ಲ’’
‘‘ಇದು ನಿನಗೆ ಸೇನೆಗೆ ಸೇರುವ ಮುಂಚೆ ಗೊತ್ತಿರಲಿಲ್ಲವಾ? ನಮಗೆಲ್ಲರಿಗೂ ಅಮ್ಮ ಇದ್ದಾರೆ. ಇಲ್ಲಿರುವ ಎಲ್ಲರಿಗೂ ಓಡಿ ಹೋಗಬೇಕು ಎಂಬ ಆಸೆಯಿದೆ. ಎಲ್ಲರೂ ಓಡಿಹೋಗಬೇಕು ಎಂದು ಬಯಸಿದರೆ ಈ ನಾಡನ್ನು ಕಾಪಾಡುವವರು ಯಾರು? ತಾಯ್ನಾಡಿನ ಪ್ರೇಮವೇ ನಮ್ಮನ್ನು ಇಲ್ಲಿ ಉಳಿಸಿದೆ. ನಿನಗೆ ಹೋಗಲೇ ಬೇಕು ಎಂದಿದ್ದರೆ ಒಂದು ವಾರ ರಜೆ ಹಾಕಿ ಹೋಗಿ ಬಾ. ಆದರೆ ವಾಪಸ್ ಬರಲ್ಲ ಎನ್ನುವ ಮಾತನ್ನು ಯಾವತ್ತೂ ಹವಾಲ್ದಾರ್ ಮುಂದೆ ಹೇಳಬೇಡ. ಯಾರಲ್ಲೂ ಹೇಳಬೇಡ. ಅದು ನಿನಗೆ ಅವಮಾನ...’’ ಅಪ್ಪಯ್ಯ ಎಚ್ಚರಿಸಿದ.
ಮರುದಿನವೇ ಪಪ್ಪು ಹವಾಲ್ದಾರ್ ಮುಂದೆ ರಜೆಯ ಅರ್ಜಿ ಇಟ್ಟ. ಸಾಧಾರಣವಾಗಿ ಒಮ್ಮೆ ಶಿಬಿರಕ್ಕೆ ಸೇರಿದ ಬಳಿಕ, ತರಬೇತಿಯಲ್ಲಿ ಉತ್ತೀರ್ಣವಾಗುವವರೆಗೆ ರಜೆ ದೊರಕುವುದು ಕಷ್ಟ. ಪಪ್ಪುವಿನ ಸ್ಥಿತಿ ಅರಿತ ಹವಾಲ್ದಾರ್ ಮೆದುವಾಗಿದ್ದ. ಒಂದು ವಾರದ ರಜೆಯಲ್ಲಿ ಅವನು ಊರಿಗೆ ಹೊರಟ. ಈ ರೀತಿ ರಜೆಯಲ್ಲಿ ಹೋಗುವುದೇ ಯೋಧನಾದವನಿಗೆ ಅವಮಾನ. ಒಂದು ರೀತಿಯ ಪಾಪಪ್ರಜ್ಞೆ, ನಾಚಿಕೆ ಎಲ್ಲವನ್ನು ಒಳಗಿಟ್ಟುಕೊಂಡು, ಶಿಬಿರದಿಂದ ಮನೆಯ ಕಡೆ ಹೊರಟಿದ್ದ. ಬೆಂಗಳೂರಿನಿಂದ ಒಂದು ರಾತ್ರಿಯ ಪಯಣ. ಉಪ್ಪಿನಂಗಡಿ ತಲುಪಿದ್ದ. ಬಸ್‌ಸ್ಟಾಂಡ್‌ಗೆ ತಂದೆ ಬಂದಿದ್ದರು. ಗುರೂಜಿಯೂ ತಂದೆಯ ಜೊತೆಗೆ ಬರುತ್ತಾರೆ ಎಂದು ಭಾವಿಸಿದ್ದ. ಆದರೆ ಗುರೂಜಿ ಇದ್ದಿರಲಿಲ್ಲ.
ಬಸ್ಸಿನಿಂದಿಳಿದವನೇ ಮೊದಲು ಕೇಳಿದ್ದು ‘‘ಗುರೂಜಿ ಹೇಗಿದ್ದಾರೆ ಅಪ್ಪಾ?’’
‘‘ಚೆನ್ನಾಗಿದ್ದಾರೆ ಮಗಾ. ಸಿಕ್ಕಿದಾಗೆಲ್ಲ ನಿನ್ನನ್ನು ಕೇಳುತ್ತಿರುತ್ತಾರೆ....’’
‘‘ಅಮ್ಮ ಹೇಗಿದ್ದಾರೆ...?’’
‘‘ನೀನೇ ನೋಡುವಂತೆ ಬಾ...’’
‘‘ಜಾನಕಿ...?’’ ಅಪ್ಪ ವೌನವಾಗಿದ್ದರು.
‘‘ಜಾನಕಿ ಊರಿಗೆ ಬಂದಿಲ್ಲವೆ ಅಪ್ಪಾಜಿ...’’
‘‘ಅದೆಲ್ಲ ಮನೆಗೆ ಹೋದ ಬಳಿಕ ಮಾತನಾಡುವ...’’ ಪಪ್ಪುವಿಗೆ ನಿರಾಸೆಯಾಯಿತು. ಜಾನಕಿಯನ್ನು ನೋಡುವುದು ಸಾಧ್ಯವಿಲ್ಲವೇ? ಮನೆಯ ಬಾಗಿಲಲ್ಲೇ ತಾಯಿ ಲಕ್ಷ್ಮಮ್ಮ ಮಗನಿಗಾಗಿ ಕಾಯುತ್ತಿದ್ದರು.
ಹಸುವಿನ ಕೆಚ್ಚಲೆಡೆಗೆ ಧಾವಿಸುವ ಕರುವಿನಂತೆ ಪಪ್ಪು ತಾಯಿಯೆಡೆಗೆ ಧಾವಿಸಿದ. ತಾಯಿಯನ್ನು ತಬ್ಬಿಕೊಂಡಾಕ್ಷಣ ಕಣ್ಣಿಂದ ದಳದಳನೆ ನೀರಿಳಿಯಿತು. ಲಕ್ಷ್ಮಮ್ಮನೂ ಅಳುತ್ತಿದ್ದರು. ಮಗನು ತೀರಾ ಸೊರಗಿರುವುದು ಕಂಡು ಅವರ ಎದೆ ಒಡೆದಂತಾಗಿತ್ತು. ಇರುವ ದಿನವೆಲ್ಲ, ಮಗನಿಗೆ ಬಡಿಸಿ ಬಡಿಸಿ ಹಾಕಿದರು. ‘‘ಅದು ತಿನ್ನು ಮಗಾ...ಇದು ತಿನ್ನು ಮಗಾ...’’ ಎಂದು ತಟ್ಟೆಗೆ ಸುರಿಯ ತೊಡಗಿದ್ದರು.
ಊಟ ಮಾಡುತ್ತಿರುವಾಗೆಲ್ಲ, ಪಪ್ಪುವಿಗೆ ಏನೋ ಒಂದು ಪಾಪಪ್ರಜ್ಞೆ. ಗೆಳೆಯರೆಲ್ಲ ಸೇರಿ ತನಗೆ ಮಾಂಸ ತಿನ್ನಿಸಿದ್ದನ್ನು ತಾಯಿ ತಿಳಿದರೆ ಏನನ್ನಬಹುದು? ತಂದೆಗೆ ಗೊತ್ತಾದರೆ? ಮಾಂಸ ತಿಂದು ಮನೆಯೊಳಗೆ ಕಾಲಿಟ್ಟು ಮನೆಯನ್ನು ಮೈಲಿಗೆ ಮಾಡಿಬಿಟ್ಟೆಯಲ್ಲೋ...ಎಂದು ಅಪ್ಪ ಬೊಬ್ಬಿಡಬಹುದೇ? ದೇವರಕೋಣೆಗೆ ಪ್ರವೇಶಿಸುವುದಕ್ಕೂ ಅವನಿಗೆ ಸಣ್ಣದೊಂದು ಅಳುಕು. ಒಟ್ಟಿನಲ್ಲಿ ಇಡೀ ವಾರವನ್ನು ಅವನು ಮನೆಯಲ್ಲಿ ಅಳುಕಿನಿಂದಲೇ ಕಳೆದಿದ್ದ. ‘‘ಗುರೂಜಿಯನ್ನು ನೋಡುವುದಕ್ಕೆ ಹೋಗುವುದಿಲ್ಲವೇ?’’ ತಂದೆ ಹಲವು ಬಾರಿ ಕೇಳಿದ್ದರು.
ಆದರೆ ತಾನು ತರಬೇತಿಯ ಸಂದರ್ಭದಲ್ಲಿ, ಪಲಾಯನ ಮಾಡಿ ಬಂದಿರುವುದು ಗುರೂಜಿಗೆ ತಿಳಿದು ಬಿಟ್ಟರೆ? ಎಲ್ಲಕ್ಕಿಂತಲೂ ಮುಖ್ಯವಾಗಿ ಮಾಂಸ ತಿಂದಿರುವುದು ಗೊತ್ತಾಗಿ ಬಿಟ್ಟರೆ? ಸ್ವಾಮಿ ವಿವೇಕಾನಂದರು ಮಾಂಸ ತಿನ್ನುತ್ತಿದ್ದರು ಎಂದರೆ ಅದನ್ನು ಗುರೂಜಿ ನಂಬಬಹುದೇ?
ಇಲ್ಲ ಅನ್ನಿಸಿತು. ಗುರೂಜಿ ಯಾವತ್ತೂ ಮಾಂಸ ತಿನ್ನುವವರ ಜೊತೆಗೆ ಕುಳಿತು ತಿಂದವರಲ್ಲ. ವಿವೇಕಾನಂದರು ಮಾಂಸ ತಿಂದಿರುವುದೇ ಸುಳ್ಳಾಗಿರಬಹುದೇ?
ವಿವೇಕಾನಂದರು ಮಾಂಸ ತಿನ್ನುತ್ತಿದ್ದರು ಎಂದು ಜಾನಕಿಯ ಬಳಿ ಹೇಳಿದರೆ ಆಕೆ ನಂಬಬಹುದೇ?
ನಾನು ಮಾಂಸ ತಿಂದಿರುವುದು ಗೊತ್ತಾದರೆ ಅವರ ಪ್ರತಿಕ್ರಿಯೆ ಹೇಗಿರಬಹುದು? ಅದನ್ನವರು ಜಾನಕಿಗೆ ತಿಳಿಸಿದರೆ? ಮಾಂಸ ತಿಂದು ಜಾತಿ ಕೆಡಿಸಿಕೊಂಡವನಿಗೆ ಮಗಳನ್ನು ಹೇಗೆ ಕೊಡುವುದು? ಎಂದು ಅವರು ತಂದೆಯ ಬಳಿ ಕೇಳಿ ಬಿಟ್ಟರೆ?
‘‘ಅಮ್ಮಾ, ಜಾನಕಿ ಊರಿಗೆ ಬರಲಿಲ್ಲವೇ?’’
ಲಕ್ಷ್ಮಮ್ಮ ಒಮ್ಮೆಲೆ ಮೌನವಾಗಿ ಬಿಟ್ಟಿದ್ದರು.
ತುಸು ಹೊತ್ತಿನ ಬಳಿಕ ಹೇಳಿದಳು ‘‘ನಿನಗೆ ಗೊತ್ತಿಲ್ಲವಾ? ಜಾನಕಿ ಅದ್ಯಾವುದೋ ಸೈನ್ಸ್ ಓದುತ್ತಿದ್ದಳು...ಅವಳು ಈ ಬಾರಿ ಪಿಯುಸಿಯಲ್ಲಿ ಫೇಲ್ ಅಂತೆ...’’
ತಾಯಿಯ ಮಾತಿನಿಂದ ಸ್ತಂಭೀಭೂತ ನಾಗಿದ್ದ. ‘ಕಲಿಯುವುದರಲ್ಲಿ ಪುತ್ತೂರಿಗೇ ಪ್ರಥಮಳಾಗಿದ್ದ ಜಾನಕಿ, ಪಿಯುಸಿಯಲ್ಲಿ ಫೇಲ್ ಆದಳೇ?’
ಪಪ್ಪು ಬಾಯಲ್ಲಿ ಮಾತೇ ಹೊರಡಲಿಲ್ಲ. ತುಸು ಹೊತ್ತು ಅಷ್ಟೇ. ಅವನು ಆಘಾತದಿಂದ ಚೇತರಿಸಿಕೊಳ್ಳತೊಡಗಿದ. ನಿಧಾನಕ್ಕೆ ಮನದಲ್ಲೆಲ್ಲೋ ಸಣ್ಣದೊಂದು ಕಾರಂಜಿ ಪುಟಿದೆದ್ದಂತೆ.
ತನಗಿಂತ ಅತಿ ಎತ್ತರಲ್ಲಿದ್ದ ಜಾನಕಿ ಫೇಲಾಗುವ ಮೂಲಕ ಮತ್ತೆ ತನ್ನ ಕೈಗೆಟಕುವಷ್ಟು ಕೆಳಗಿಳಿದ ಹಾಗೆ.
‘‘ಏನಮ್ಮ ನೀನು ಹೇಳುತ್ತಾ ಇರೋದು..?.’’ ಪಪ್ಪು ತಾಯಿಯನ್ನೇ ನೋಡುತ್ತಾ ಕೇಳಿದ. ‘‘ಹೌದಪ್ಪ...ಅಷ್ಟು ಚೆನ್ನಾಗಿ ಓದುತ್ತಾ ಇದ್ದವಳಿಗೆ ಅದೇನಾಯಿತೋ...ಎಕ್ಸಾಂ ಮುಗಿಸಿ ಬಂದವಳು ಮನೆಯಲ್ಲಿ ಗುಮ್ಮನೆ ಕೂತಿದ್ದಳಂತೆ. ಹೊರಗೆ ಓಡಾಡುತ್ತಲೇ ಇರಲಿಲ್ಲವಂತೆ...ಅವರ ಮನೆಯವರೂ ಅದನ್ನು ಅಷ್ಟೇನೂ ತಲೆಗೆ ಹಚ್ಚಿಕೊಂಡಿರಲಿಲ್ಲ. ಆದರೆ ಫಲಿತಾಂಶ ಬಂದಾಗ ಎಲ್ಲರಿಗೂ ಆಘಾತವಾಗಿದೆ...ಗುರೂಜಿಯಂತೂ ತುಂಬಾ ಗಾಬರಿಯಾಗಿದ್ದರು. ನಿನ್ನ ಅಪ್ಪ ಕೂಡ ಜಾನಕಿಯನ್ನು ಭೇಟಿ ಮಾಡಿ ವಿಚಾರಿಸಿದ್ದರು. ತುಂಬಾ ಕಡಿಮೆ ಅಂಕ ಪಡೆದುಕೊಂಡಿದ್ದಾಳಂತೆ...’’
‘‘ಈಗ ಜಾನಕಿಯೆಲ್ಲಿದ್ದಾಳೆ...?’’ ಪಪ್ಪು ಅತೀ ಆಸಕ್ತಿಯಿಂದ ಕೇಳಿದ.
‘‘ಈಗ ಸೈನ್ಸ್ ಬಿಟ್ಟು ಅದೇನೋ ಬಿಎಸ್‌ಡಬ್ಲೂ ಅಂತ ಹೊಸ ತರಗತಿಗೆ ಹೋಗುತ್ತಿದ್ದಾಳೆ....ಮಂಗಳೂರಿನಲ್ಲಿ ಕಲಿಯುತ್ತಿದ್ದಾಳೆ...’’
ಪಪ್ಪು ನಿಜಕ್ಕೂ ಉಲ್ಲಸಿತನಾಗಿದ್ದ. ಮಂಗಳೂರಿಗೆ ಹೋಗಿ ಜಾನಕಿಯನ್ನು ಭೇಟಿ ಮಾಡಿದರೆ ಹೇಗೆ? ಆದರೆ ಈ ಹೊತ್ತಿನಲ್ಲಿ ಬೇಡ ಅನ್ನಿಸಿತು. ಸಾಧ್ಯವಾದರೆ ಜಾನಕಿಗೆ ಒಂದು ಪತ್ರ ಬರೆಯಬೇಕು ಎಂದು ನಿರ್ಧರಿಸಿದ. ಇಡೀ ರಜೆಯನ್ನು ಅವನು ಮನೆಯೊಳಗೇ ಕಳೆದ. ಲಕ್ಷ್ಮಮ್ಮನಿಗೂ ಇದು ಖುಷಿಕೊಟ್ಟಿತ್ತು. ಮಗನ ಜೊತೆಗೆ ಮಾತನಾಡಿದಷ್ಟು ಆಕೆಯ ಮಾತುಗಳು ನೀರಿನ ಝರಿಯಂತೆ ಉಕ್ಕುತ್ತಿದ್ದವು. ತರಬೇತಿ ಎಂದರೆ ಏನು ಎಂದು ಕೇಳುತ್ತಿದ್ದರು. ಇವನು ವಿವರಿಸುತ್ತಿದ್ದ.
ಪಪ್ಪು ಅರ್ಧಕ್ಕರ್ಧ ಸುಳ್ಳೇ ಹೇಳಿದ್ದ. ಆಹಾರದ ವಿಷಯದಲ್ಲಂತೂ ಅಪ್ಪಟ ಸುಳ್ಳು. ದಿನಾ ಸಂದ್ಯಾವಂದನೆ ಮಾಡುತ್ತೇನೆಂದೂ ಹೇಳಿದ್ದ. ಶಿಬಿರದಲ್ಲಿ ನಮಗಾಗಿಯೇ ವಿಶೇಷ ಬ್ರಾಹ್ಮಣರೊಬ್ಬರು ಅಡುಗೆ ಮಾಡುತ್ತಾರೆಂತಲೂ, ಪೂಜೆಗೆ ವಿಶೇಷ ವ್ಯವಸ್ಥೆಯಿದೆಯೆಂತಲೂ, ನನ್ನ ಹಾಗಿನ 50 ಮಂದಿ ಬ್ರಾಹ್ಮಣ ಹುಡುಗರಿದ್ದಾರೆ ಎಂದೆಲ್ಲ ಹೇಳಿ ತಾಯಿಯನ್ನು ಖುಷಿ ಪಡಿಸುತ್ತಿದ್ದ. ಲಕ್ಷ್ಮಮ್ಮ ಸಂತೋಷ ಪಡುತ್ತಿದ್ದರು. ಅವರಿಗೆ ಮಗನ ಮಾತುಗಳಾವುದೂ ಕೇಳಿಸುತ್ತಿರಲಿಲ್ಲ. ಬದಲಿಗೆ ಮಗನ ಮುಖವನ್ನಷ್ಟೇ ಅವರು ಕಣ್ತುಂಬಿಕೊಳ್ಳುತ್ತಿದ್ದರು.
ರಜೆ ಮುಗಿಯುವ ಹಿಂದಿನ ದಿವಸ ಪಪ್ಪು ತಲ್ಲಣಿಸಿದ್ದ. ಮತ್ತೆ ಆ ನರಕಕ್ಕೆ ಹೋಗುವುದೇ? ಹೋಗದೇ ಇದ್ದರೆ? ಜಾನಕಿ ಮತ್ತು ಗುರೂಜಿಯ ಮುಂದಾಗುವ ಅವಮಾನ ನೆನೆದು ಆತಂಕಗೊಂಡ. ಇಲ್ಲ, ಸಹಿಸಿಕೊಳ್ಳಲೇ ಬೇಕು. ಜಾನಕಿಗಾಗಿ ನಾನಿದನ್ನು ಸಹಿಸಲೇ ಬೇಕು. ತನ್ನ ಸರಂಜಾಮುಗಳನ್ನು ನಿಧಾನಕ್ಕೆ ಸಿದ್ಧಪಡಿಸತೊಡಗಿದ. ಮೂಲೆ ಸೇರಿದ್ದ ಆತ್ಮ ಚೈತನ್ಯವನ್ನೆಲ್ಲ ಜೊತೆಗೂಡಿಸಿ, ಬೆಂಗಳೂರಿಗೆ ಹೊರಟೇ ಬಿಟ್ಟ. ಶಿಬಿರ ಸೇರಿದಾಗ ಅವನ ಸ್ನೇಹಿತರೆಲ್ಲ ಪಪ್ಪುವನ್ನು ನೋಡಿ ಆವಕ್ಕಾಗಿದ್ದರು. ಯಾಕೆಂದರೆ, ಅವನು ಮಳೆಗಾಲದ ನೀರುಂಡು ಹಸನಾದ ಮರದಂತೆ ಪೂರ್ಣವಾಗಿ ಚಿಗುರಿ ಬಿಟ್ಟಿದ್ದ. ಮೊದಲಿನ ಪಪ್ಪುವೇ ಆಗಿದ್ದಿರಲಿಲ್ಲ. ಮೈ, ಮುಖ ಮತ್ತೆ ತುಂಬಿಕೊಂಡಿತ್ತು. ತಾಯಿಯ ಕೈಯಿಂದ ಒಂದು ವಾರ ಆತ ಉಂಡದ್ದು ಆಹಾರವಾಗಿರಲಿಲ್ಲ, ಅವನ ಪಾಲಿಗೆ ಪ್ರತೀ ತುತ್ತು ಅಮೃತವಾಗಿತ್ತು. ಇದನ್ನು ಅವರಿಗೆ ವಿವರಿಸುವುದು ಪಪ್ಪುವಿಗೆ ಬಹಳ ಕಷ್ಟವಿತ್ತು.
(ರವಿವಾರದ ಸಂಚಿಕೆಗೆ)