ಜಾನಕಿ ತೆರೆದ ಮೂರನೇ ಕಣ್ಣು!
‘‘ಜಾನಕಿ ಸಿಕ್ಕಿದಳಾ? ಮಾತನಾಡಿದೆಯಾ?’’ ಅಪ್ಪಯ್ಯ ಅಂದು ರಾತ್ರಿ ನಗುತ್ತಾ ಕೇಳಿದ್ದ.
ಪಪ್ಪು ವೌನವಾದ. ‘‘ಯಾಕೆ? ಜಾನಕಿ ಸಿಗಲಿಲ್ಲವಾ?’’ ಅಪ್ಪಯ್ಯ ಮತ್ತೆ ಕೆದಕಿದ.
‘‘ಅವಳು ಮಂಗಳೂರಿನಲ್ಲಿ ಕಲಿಯುತ್ತಿದ್ದಾಳೆ. ಊರಿಗೆ ಬರುವುದೇ ಅಪರೂಪವಂತೆ....’’ ಪಪ್ಪು ಉತ್ತರಿಸಿದ.
ಆಕೆ ಫೇಲಾಗಿರುವುದನ್ನು ಗೆಳೆಯರ ಜೊತೆಗೆ ಹಂಚಿಕೊಳ್ಳುವುದು ನನಗೂ, ಗುರೂಜಿಗೂ ಭೂಷಣವಲ್ಲ ಎಂದು ಅವನಿಗೆ ಅನ್ನಿಸಿತ್ತು. ಆದರೆ ಫೇಲಾಗಿರುವ ವಿಷಯ ಅವನನ್ನು ನಿರಾಳವಾಗಿಸಿದ್ದು ನಿಜ. ತನ್ನ ಅವಳ ಮಧ್ಯೆ ಇದ್ದ ಎತ್ತರದ ಗೋಡೆಯೊಂದು ಕುಸಿದು ಬಿದ್ದ ಹಾಗೆ. ‘‘ನೀನೇ ಅವಳ ಹಾಸ್ಟೆಲ್‌ಗೆ ಹೋಗಿ ಈ ಪತ್ರವನ್ನು ಕೊಟ್ಟು ಬರಬೇಕಾಗಿತ್ತು. ಎಷ್ಟು ಸಮಯ ಇದನ್ನು ನೀನು ಹೀಗೆ ಇಟ್ಟುಕೊಳ್ಳುತ್ತೀಯ? ನೀನು ಓದಿ ಓದಿಯೇ ಈ ಪತ್ರ ಅರ್ಧ ಸವೆದು ಹೋಗಿದೆ. ಪೂರ್ತಿ ಸವೆದು ಹೋಗುವ ಮೊದಲು ಅವಳಿಗೆ ಅದನ್ನು ಕೊಟ್ಟು ಬಿಡಬಾರದೆ’’ ಅಪ್ಪಯ್ಯ ಕಾಳಜಿಯಿಂದ ಕೇಳಿದ.
‘‘ಯಾಕೋ ಭಯ ಆಗತ್ತೆ’’ ಪಪ್ಪು ಮೆಲ್ಲಗೆ ಹೇಳಿದ.
‘‘ಯಾಕೆ ಭಯ? ಇಬ್ಬರೂ ಹೀಗೆ ಭಯಪಟ್ಟು ದೂರ ಉಳಿದರೆ ದೂರವಾಗಿಯೇ ಉಳಿಯುತ್ತೀರ. ಆಕೆಗೂ ನಿನ್ನನ್ನು ಭೇಟಿ ಮಾಡಲು, ತನ್ನ ಪ್ರೀತಿಯನ್ನು ನೇರವಾಗಿ ಹೇಳಲು ಭಯವಿರಬಹುದು. ಹೆಣ್ಣು ಮಕ್ಕಳಿಗೆ ಸಾವಿರ ಅಡ್ಡಿ ಆತಂಕ. ನೀನು ಪ್ರೀತಿಸುತ್ತಿರುವುದು ಆಕೆಗೆ ಗೊತ್ತೇ ಇದೆ. ಆಕೆ ಯೋಧನನ್ನು ಮದುವೆಯಾಗುವ ಕನಸು ಕಂಡವಳು. ನೀನಲ್ಲದೆ ಇನ್ನಾರೂ ಆಕೆಯನ್ನು ವರಿಸಲು ಅಸಾಧ್ಯ. ಆಕೆ ನಿನಗಾಗಿಯೇ ಹುಟ್ಟಿದವಳು. ನೀನು ಪತ್ರವನ್ನು ಆಕೆಗೆ ಕೊಟ್ಟು ಬರಬೇಕಾಗಿತ್ತು’’ ಅಪ್ಪಯ್ಯ ಆಕ್ಷೇಪಿಸಿದ.
ಪಪ್ಪುವಿಗೆ ಹೌದೆನಿಸಿತು. ‘ಛೆ, ಕೊಟ್ಟು ಬರಬೇಕಾಗಿತ್ತು...ಅಥವಾ ಕನಿಷ್ಠ ಆಕೆಯನ್ನು ಭೇಟಿಯಾದರೂ ಆಗಬೇಕಾಗಿತ್ತು. ಅವಳಿಗೂ ಸಮಾಧಾನವಾಗುತ್ತಿತ್ತು. ಎಷ್ಟು ಸಮಯ ಹೀಗೆ ದೂರ ಇರುವುದು...ನಾಳೆ ಸೇನೆಯಲ್ಲಿ ಯಾವುದೋ ರೆಜಿಮೆಂಟಿಗೆ ಸೇರಿದ ಬಳಿಕ ಆಕೆಯನ್ನು ಸುಲಭದಲ್ಲಿ ಭೇಟಿಯಾಗುವುದು ಕಷ್ಟ’
ಪಪ್ಪು ಪಶ್ಚಾತ್ತಾಪದಿಂದ ನರಳಿದ. ‘ರಣವಿಕ್ರಮ’ ಪುಸ್ತಕವನ್ನು ಎದೆಗೊತ್ತಿಕೊಂಡು ಕಣ್ಮುಚ್ಚಿ ಮಲಗಿದ. ನಿದ್ದೆಯ ಜುಂಗು ಕೈಗೆ ಸಿಗದೇ ಇಡೀ ರಾತ್ರಿ ಹಾಸಿಗೆಯಲ್ಲಿ ಹೊರಳಾಡುತ್ತಲೇ ಇದ್ದ. ಬೆಳಗಿನ ಜಾವದ ನಿದ್ದೆಯಲ್ಲಿ ಜಾನಕಿ ಆಕಾಶದಂತೆ ಆವರಿಸಿದ್ದಳು. ಅವಳ ಹಣೆಯ ಕೆಂಪು ಕುಂಕುಮ ಕಣ್ಣು ಕುಕ್ಕುತ್ತಿತ್ತು.
‘‘ಜಾನಕಿ ನಿನ್ನ ಹಣೆಯ ಕುಂಕುಮ ಕಣ್ಣು ಕುಕ್ಕುತ್ತಿದೆ....ಪ್ಲೀಸ್...ಪ್ಲೀಸ್...’’ ಏನನ್ನೋ ಆಕೆಗೆ ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದ.
ಅವಳು ಜೋರಾಗಿ ನಗುತ್ತಿದ್ದಳು ‘‘ಇದು ಶಿವನ ಮೂರನೇ ಕಣ್ಣು. ಅದಕ್ಕೇ ಕುಕ್ಕುತ್ತಿದೆೆ....’’
‘‘ಆ ಕಣ್ಣನ್ನು ಮುಚ್ಚಿ ಬಿಡು. ಇಲ್ಲದೇ ಇದ್ದರೆ ನಾನು ಸುಟ್ಟು ಹೋಗುವೆ...’’ ಅವನು ಮತ್ತೆ ಗೋಗರೆಯುತ್ತಿದ್ದ. ಯಾವ ಸ್ಥಳ ಅದು? ಶಾಲೆಯ ಜಗಲಿ. ಕಣ್ಣನ್ನು ಗಟ್ಟಿಯಾಗಿ ಮುಚ್ಚಿದರೂ ಬೆಳಕು ಚುಚ್ಚುತ್ತಿತ್ತು. ಲಂಗ, ಧಾವಣಿಯ ಜಾನಕಿ. ಅವಳೇನೋ ಹೇಳುತ್ತಿದಾಳೆ. ಅವಳ ಕಣ್ಣು ಬೆಂಕಿಯಂತೆ ಉರಿಯುತ್ತಿತ್ತು.
‘‘ಪಾಕಿಸ್ತಾನದ ವಿದ್ರೋಹಿ ಕಬೀರನನ್ನು ಈ ಮೂರನೇ ಕಣ್ಣಿನಿಂದ ಸುಟ್ಟು ಬೂದಿ ಮಾಡಿ ಬಿಡುವೆ...’’. ದೂರದಲ್ಲಿ ಕಬೀರ ಥರಥರನೇ ನಡುಗುತ್ತಿದ್ದಾನೆ. ಅಥವಾ ಕಬೀರನೋ...ಅಪ್ಪಯ್ಯನೋ...ಎನ್ನುವ ಗೊಂದಲ...
‘‘ಬೇಡ...ಬೇಡ...ಪಾರಿವಾಳದ ಮರಿಗಳು ಸುಟ್ಟು ಹೋದೀತು...’’ ಎಂದೇನೋ ಇವನು ಹೇಳುವುದಕ್ಕೆ ಪ್ರಯತ್ನಿಸುತ್ತಿದ್ದಾನೆ.
ಬೆಳಕು ತೀವ್ರವಾಗುತ್ತಿದ್ದಂತೆಯೇ ಒಮ್ಮೆಲೆ ಕಣ್ಣು ಬಿಟ್ಟ. ನೋಡಿದರೆ ಮೃತ್ಯುಂಜಯ ತನ್ನ ಕೈಯಲ್ಲಿರುವ ಟಾರ್ಚ್‌ನಿಂದ ಕಣ್ಣಿಗೆ ಬೆಳಕು ಬಿಡುತ್ತಿದ್ದ.
‘‘ಸಮಯ ಆಯಿತು...ಏಳು ಏಳು...’’ ಎಂದು ಮೃತ್ಯು ಕೈಯಲ್ಲಿರುವ ಬೆತ್ತವನ್ನು ಮಂಚಕ್ಕೆ ಬಡಿದ.
ಉಫ್! ಪಪ್ಪು ಸಂಪೂರ್ಣ ಬೆವತಿದ್ದ. ತುಸು ಹೊತ್ತು ಕುಳಿತುಕೊಂಡವನು ಮತ್ತೊಮ್ಮೆ ಕಂಡ ಕನಸನ್ನು ನೆನೆದುಕೊಂಡ. ಊಹುಂ...ಯಾವುದೂ ಸ್ಪಷ್ಟವಾಗುತ್ತಿಲ್ಲ. ಕಬೀರನ ಮುಖ ಮತ್ತು ಜಾನಕಿಯ ಕುಂಕುಮ ಬಿಟ್ಟರೆ ಯಾವ ನೆನಪೂ ಉಳಿದಿರಲಿಲ್ಲ. ಮುಖ ತೊಳೆಯುತ್ತಿರುವ ಹೊತ್ತಿಗೆ ಅವನು ತನ್ನೊಳಗೆ ತಾನೇ ಅಚ್ಚರಿಗೊಂಡ. ‘ಜಾನಕಿಯ ಕನಸು ಬೀಳುವುದೇನೋ ಸರಿ. ಆದರೆ ಆ ಕಬೀರ ಯಾಕೆ ಕನಸಲ್ಲಿ ಬಂದ?’ ಬಹುಶಃ ಆ ಮುಖ ಕಬೀರನದಾಗಿರಲಿಕ್ಕಿಲ್ಲ, ಅಪ್ಪಯ್ಯನದಾಗಿರಬಹುದು. ಅಪ್ಪಯ್ಯನದೇ ಆಗಿದ್ದರೆ, ಜಾನಕಿ ಆತನನ್ನು ತನ್ನ ಮೂರನೇ ಕಣ್ಣಿನಿಂದ ಸುಡುವುದಕ್ಕೆ ಯಾಕೆ ಮುಂದಾದಳು? ಅದು ಕಬೀರನ ಮುಖವೇ ಹೌದು ಅನ್ನಿಸಿತು ಪಪ್ಪುವಿಗೆ.
ನಿಧಾನಕ್ಕೆ ಪಪ್ಪು ಶಿಬಿರದ ಹುಡುಗರ ಜೊತೆಗೆ ಒಂದಾಗ ತೊಡಗಿದ. ಅಂದರೆ, ಅವರ ಕೀಟಲೆಗಳಿಗೆ ನಿಧಾನಕ್ಕೆ ಪಪ್ಪು ಒಗ್ಗ ತೊಡಗಿದ್ದ. ತೀರಾ ಕಿರಿ ಕಿರಿ ಎನಿಸಿದರೆ, ಒಬ್ಬಂಟಿಯಾಗಿ ಕೋಣೆಯೊಳಗೆ ಕೂತು, ರಣವಿಕ್ರಮ ಪುಸ್ತಕವನ್ನು ಬಿಡಿಸುತ್ತಿದ್ದ. ಅದರೊಳಗಿರುವ ಕಾಗದವನ್ನು ಸುಮ್ಮನೆ ಬಿಡಿಸಿ ಓದಿ ಮಡಚಿಡುತ್ತಿದ್ದ. ರಣವಿಕ್ರಮ ಕಾದಂಬರಿಯ ಯಾವುದಾದರೂ ಒಂದು ಅಧ್ಯಾಯವನ್ನು ಓದುತ್ತಿದ್ದ. ಆ ಕಾದಂಬರಿಯಲ್ಲಿ ರಾಣಪ್ರತಾಪ ಕಾಡಿನಲ್ಲಿ ತನ್ನ ಮಕ್ಕಳ ಜೊತೆಗೆ ಹಸಿವಿನಿಂದ ಬದುಕು ಸವೆಸುವುದು ಅವನ ಹೃದಯವನ್ನು ತುಂಬಾ ದ್ರವಗೊಳಿಸಿತ್ತು. ಹಸಿವಿನಿಂದ ಕಂಗೆಟ್ಟರೂ, ಧೃತಿಗೆಡದ ರಾಣಾ ಪ್ರತಾಪನ ಮಕ್ಕಳು ಪಪ್ಪುವಿಗೆ ಶಿಬಿರದಲ್ಲಿ ಸ್ಫೂರ್ತಿಯಾಗಿದ್ದರು. ಆ ಅಧ್ಯಾಯವನ್ನು ಒಂದು ಹತ್ತು ಬಾರಿಯಾದರೂ ಪಪ್ಪು ಓದಿರಬೇಕು. ಒಮ್ಮುಮ್ಮೆ ಅವನು ಕುಳಿತಲ್ಲೇ ಕನಸು ಕಾಣುತ್ತಿದ್ದ. ಆ ಕನಸಿನಲ್ಲಿ ಅವನ ಮನಸ್ಸು ಯುದ್ಧ ಭೂಮಿಗಾಗಿ ಹಪಹಪಿಸುತ್ತಿತ್ತು. ಯುದ್ಧವಾಗಬೇಕು. ಅಲ್ಲಿ ಪಾಕಿಸ್ತಾನಿಗಳನ್ನು ಎದುರುಗೊಳ್ಳಬೇಕು. ಶತ್ರು ಸೈನಿಕರ ರುಂಡಗಳನ್ನು ಚೆಂಡಾಡಬೇಕು. ಗುರೂಜಿಗೆ ಗುರುದಕ್ಷಿಣೆ ಸಲ್ಲಿಸಬೇಕು. ಆಗ ಗುರೂಜಿ ಪ್ರತಿಯಾಗಿ ಕೇಳುತ್ತಾರೆ ‘‘ನಿನಗೇನು ಬೇಕು ಕೇಳು?’’
ಆಗ ಪಪ್ಪು ಪ್ರೀತಿಯ ಕಣ್ಣಿನಿಂದ ಜಾನಕಿಯ ಕಡೆಗೆ ನೋಡುತ್ತಾನೆ. ಗುರುಗಳು ಹಸನ್ಮುಖರಾಗಿದ್ದಾರೆ. ಅವರಿಗೆ ಪಪ್ಪುವಿನ ಮನಸ್ಸು ಅರ್ಥವಾಗಿದೆ. ಹಣೆ ತುಂಬಾ ಕುಂಕುಮವಿಟ್ಟ ಜಾನಕಿ ಬಾಗಿ ತನ್ನ ಪಾದಸ್ಪರ್ಶವನ್ನು ಮಾಡಿದ್ದಾಳೆ. ಅವಳನ್ನು ಮೇಲೆತ್ತಿ, ಗಲ್ಲದ ತುದಿಯನ್ನು ಮುಟ್ಟಿ ಪಪ್ಪು ಕೇಳುತ್ತಿದ್ದಾನೆ
‘‘ಭಾರತ ಮಾತೆ ಕರೆಯುತ್ತಿದ್ದಾಳೆ. ನನ್ನೊಂದಿಗೆ ಯುದ್ಧಭೂಮಿಗೆ ಬರುವೆಯಾ?’’
‘‘ನಿಮ್ಮ ಜೊತೆಗೆ ಯಾವ ಅಗ್ನಿಕುಂಡಕ್ಕೆ ಹಾರುವುದಕ್ಕೂ ನಾನು ಸಿದ್ಧಳಿದ್ದೇನೆ....’’ ಜಾನಕಿ ಪಿಸುಗುಡುತ್ತಾಳೆ.
ಜಾನಕಿಯನ್ನು ಪಪ್ಪು ಎದೆಗೊತ್ತಿಕೊಳ್ಳಬೇಕು....
ಅಷ್ಟರಲ್ಲಿ ಯಾರೋ ಅವನ ಪ್ಯಾಂಟನ್ನು ಕೆಳಗೆ ಎಳೆದಂತಾಗಿ ವಾಸ್ತವಕ್ಕೆ ಬಂದ. ನೋಡಿದರೆ ಮೃತ್ಯು! ‘‘ಏನೋ...ಕನಸು ಕಾಣುತ್ತಿದ್ದೀಯ?’’ ಕೇಳಿದ. ಪಕ್ಕದಲ್ಲಿದ್ದ ಆಂಜನಪ್ಪ ಕಿಸಕ್ಕನೆ ನಕ್ಕ.
ಪಪ್ಪು ಪ್ಯಾಂಟ್ ಸರಿಪಡಿಸಿಕೊಂಡು ಏನೂ ಪ್ರತಿಕ್ರಿಯಿಸದೇ ಅಲ್ಲಿಂದ ಎದ್ದು ಹೋದ.
***
ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡು, ಜಾನಕಿ ಪುತ್ತೂರಿನ ವಿವೇಕ ಶ್ರೀ ಕಾಲೇಜು ಸೇರಿದಾಗ ಇಡೀ ಕಾಲೇಜು ತನ್ನ ನಿರೀಕ್ಷೆಯಲ್ಲಿದೆ ಎಂಬ ಹೆಮ್ಮೆ ಜಾನಕಿಯೊಳಗಿತ್ತು. ಯಾಕೆಂದರೆ, ವಿವೇಕ ಶ್ರೀ ಕಾಲೇಜಿನ ಟ್ರಸ್ಟ್‌ನಲ್ಲಿ ಜಾನಕಿಯ ತಂದೆ ಗುರೂಜಿಗೆ ದೊಡ್ಡ ಸ್ಥಾನವೊಂದಿತ್ತು. ವಿವೇಕಶ್ರೀ ಕಾಲೇಜಿನ ಸ್ಥಾಪಕ ಸಮಿತಿಯಲ್ಲೇ ಅವರಿದ್ದರು. ಹಾದಿ ತಪ್ಪುತ್ತಿರುವ ತರುಣರನ್ನು ಭಾರತೀಯ ಸಂಸ್ಕೃತಿಯ ಚೌಕಟ್ಟಿನೊಳಗೆ ತರುವ ಮಹದುದ್ದೇಶವೂ ಆ ಕಾಲೇಜು ಸ್ಥಾಪನೆಯ ಹಿಂದಿತ್ತು. ವಿವೇಕ ಶ್ರೀ ಕಾಲೇಜಿನ ತರಗತಿಗಳು ಆರಂಭವಾಗುವುದೇ ‘ವಂದೇ ಮಾತರಂ’ ಹಾಡಿನ ಜೊತೆಗೆ. ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಹೊರಹೊಮ್ಮಿದ ಶಾಲೆ ಅದಾಗಿರುವುದರಿಂದ, ಆಸುಪಾಸಿನ ಊರುಗಳ ಗಮನವನ್ನು ತನ್ನೆಡೆಗೆ ಸೆಳೆದಿತ್ತು. ಜಾನಕಿ, ಕಾಲೇಜಿನ ಹಾಸ್ಟೆಲ್ ಸೇರಿದಾಗ, ಖುದ್ದು ಪ್ರಾಂಶುಪಾಲ ಅರವಿಂದ ಕಾಮತರೇ ಹಾಸ್ಟೆಲ್ ಕೊಠಡಿಗೆ ಭೇಟಿ ನೀಡಿ, ಎಲ್ಲ ಸರಿಯಾಗಿದೆಯೇ ಎಂದು ಪರಿಶೀಲಿಸಿದ್ದರು. ಆ ಭೇಟಿ, ಹಾಸ್ಟೆಲ್‌ನಲ್ಲಿ ಜಾನಕಿಯ ಘನತೆಯನ್ನು ತೀರಾ ಹೆಚ್ಚಿಸಿತ್ತು. 40 ವರ್ಷ ಪ್ರಾಯದ ವಾರ್ಡನ್ ಪಾರ್ವತಮ್ಮ ಕೂಡ ಆನಂತರ ಜಾನಕಿಯ ಜೊತೆಗೆ ಅತ್ಯಂತ ಭಯಭಕ್ತಿಯಿಂದ ಮಾತನಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ಪುತ್ತೂರು ವಲಯದ ಆರೆಸ್ಸೆಸ್ ಸಂಚಾಲಕರಾಗಿರುವ ಸುಬ್ರಹ್ಮಣ್ಯ ಭಟ್ಟರ ಮಗಳು ಮೀನಾಕ್ಷಿ ಆಕೆಗೆ ಜೊತೆಯಾಗಿದ್ದಳು.
ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕ ಬಂದಾಗ, ಗುರೂಜಿಯವರು ಮಗಳು ವಿಜ್ಞಾನವನ್ನು ತೆಗೆದುಕೊಳ್ಳುವುದು ಮತ್ತು ಆಕೆಯನ್ನು ವಿವೇಕ ಶ್ರೀ ಕಾಲೇಜಿಗೆ ಸೇರಿಸುವುದೆಂದು ನಿರ್ಧರಿಸಿಯೂ ಆಗಿತ್ತು. ಆದರೆ ಜಾನಕಿಗೆ ವಿಜ್ಞಾನಕ್ಕಿಂತ ಇತಿಹಾಸ ಇಷ್ಟವಾಗಿತ್ತು. ವಿಜ್ಞಾನದಲ್ಲಿ ಇತಿಹಾಸ ಪಠ್ಯವಿಲ್ಲ ಎನ್ನುವುದು ಆಕೆಗೆ ನಿರಾಸೆ ತಂದಿತ್ತು. ಶಿವಾಜಿ, ರಾಣಾಪ್ರತಾಪ ಸಿಂಹ, ಪೃಥ್ವಿರಾಜರ ಇತಿಹಾಸವನ್ನು ಓದುವುದು ಅವಳಿಗೆ ಅಭಿಮಾನದ ಸಂಗತಿಯಾಗಿತ್ತು. ತಾಯಿಯೊಂದಿಗೆ ಈ ಮಾತನ್ನು ಹಂಚಿಕೊಂಡಳು. ಆಕೆಯ ತಾಯಿ ಅದನ್ನು ಗುರೂಜಿಗೆ ದಾಟಿಸಿದ್ದರು.
‘‘ಇಷ್ಟು ಅಂಕಗಳನ್ನು ಪಡೆದು ವಿಜ್ಞಾನವನ್ನು ತೆಗೆದುಕೊಳ್ಳದೇ ಇದ್ದರೆ, ತಿಳಿದವರು ಏನೆಂದಾರು?’’ ಗುರೂಜಿ ಸ್ಪಷ್ಟವಾಗಿ ಆಡಿದ್ದರು.
‘‘ಇತಿಹಾಸವನ್ನು ಮನೆಯಲ್ಲೇ ಕಲಿಯಬಹುದು. ಅದಕ್ಕಾಗಿ ಕಾಲೇಜಿಗೆ ಹೋಗಬೇಕೆ. ಇಲ್ಲಿ ನಾನೇ ಇಲ್ಲವೆ ಇತಿಹಾಸ ಅಧ್ಯಾಪಕ?’’ ಗುರೂಜಿ ಒಂದಿಷ್ಟು ಹೆಮ್ಮೆಯಿಂದ ಹಸನ್ಮುಖರಾಗಿ ಜಾನಕಿಯನ್ನು ಕೇಳಿದ್ದರು.
‘‘ಒಟ್ಟಾರೆ ಆ ಪಪ್ಪುವಿನ ಸ್ನೇಹ ಮಾಡಿ ಇವಳು ಹಾಳಾಗಿದ್ದಾಳೆ. ಕಲಿಕೆಯಲ್ಲಿ ಅವನು ತುಂಬಾ ಹಿಂದು...’’ ಗುರೂಜಿ ಮಗಳ ಮನಸ್ಥಿತಿಗೆ ಕಾರಣವನ್ನು ಹುಡುಕಿದ್ದರು.
ಪಪ್ಪುವಿಗೆ ತೀರಾ ಕಡಿಮೆ ಅಂಕ ದೊರಕಿರುವುದು, ಆತನನ್ನು ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ಸೇರಿಸಲು ತೀರ್ಮಾನಿಸಿರುವ ಸುದ್ದಿ ಗುರೂಜಿಗೆ ತಲುಪಿತ್ತು. ‘‘ಜಾನಕಿಯ ದಾರಿ ದೊಡ್ಡದಿದೆ. ಅದು ಇಲ್ಲಿಗೆ ನಿಲ್ಲುವಂತಹದಲ್ಲ. ವಿವೇಕ ಶ್ರೀ ಕಾಲೇಜಿಗೆ ಸೇರಿದರೆ ವಿಜ್ಞಾನ, ಇತಿಹಾಸ, ಸಂಸ್ಕೃತಿ ಎಲ್ಲವನ್ನೂ ಒಟ್ಟಿಗೆ ಕಲಿತಂತಾಗುತ್ತದೆ’’ ಗುರೂಜಿ ತೀರ್ಪು ನೀಡಿ ಬಿಟ್ಟಿದ್ದರು. ಅದರಾಚೆಗೆ ಪ್ರತಿವಾದದ ಮಾತಿಲ್ಲ. ಜಾನಕಿಗೂ ಸರಿ ಅನ್ನಿಸಿತ್ತು. ಎಸೆಸೆಲ್ಸಿ ಪಾಸಾಗಿರುವ ಪಪ್ಪು, ಅದಾಗಲೇ ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಆರ್ಟ್ಸ್ ತೆಗೆದುಕೊಳ್ಳುತ್ತಾನೆ ಎನ್ನೋದು ತೀರ್ಮಾನ ಆಗಿತ್ತು. ತನಗೆ ತಿಳಿದಿರುವುದು ಉಳಿದ ಸಹಪಾಠಿಗಳಿಗೆ ತಿಳಿದಿಲ್ಲ ಎನ್ನೋದು ಆಕೆಗೆ ಸದಾ ಹೆಮ್ಮೆ ಕೊಡುವ ವಿಷಯವಾಗಿತ್ತು. ಅಪ್ಪ ವಿವರಿಸಿದ ಹಲವು ಸಂಗತಿಗಳನ್ನು ಅವಳು ಇತರರಲ್ಲಿ ಹಂಚಿಕೊಂಡಾಗ ಅವರೆಲ್ಲ ತನ್ನ ಮೇಧಾವಿತನಕ್ಕೆ ಬೆಕ್ಕಸ ಬೆರಗಾಗಿದ್ದರು.
(ಗುರುವಾರದ ಸಂಚಿಕೆಗೆ)