ಮುಸ್ತಫಾನಿಗೂ ರಾಮಾಯಣಕ್ಕೂ ಏನು ಸಂಬಂಧ?

Update: 2017-03-19 06:01 GMT

ಜಾನಕಿಯ ಕುರಿತಂತೆ ಮುಸ್ತಫಾನ ದುರದೃಷ್ಟ ಮುಗಿಯಲಿಲ್ಲ. ಅದು ಮುಂದುವರಿಯುತ್ತಲೇ ಇತ್ತು. ವಿವೇಕ ಶ್ರೀ ಕಾಲೇಜಿನಲ್ಲಿ ಪ್ರತೀ ವರ್ಷ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಇದೊಂದು ಐಚ್ಛಿಕ ಪರೀಕ್ಷೆ. ಇಷ್ಟವಿದ್ದವರು ಭಾಗವಹಿಸಬಹುದಿತ್ತು. ಅದರ ಪ್ರಮಾಣ ಪತ್ರವನ್ನೂ ನೀಡಲಾಗುತ್ತಿತ್ತು. ಕಾಲೇಜಿನಿಂದ ಸುಮಾರು 30 ಮಂದಿ ಭಾಗವಹಿಸಿದ್ದರು. ಜಾನಕಿಯಂತೂ ಅತ್ಯುತ್ತಮ ತಯಾರಿಯೊಂದಿಗೆ ಬಂದಿದ್ದಳು. ರಾಮಾಯಣವನ್ನು ಅವಳು ತಂದೆಯ ಮೂಲಕ ಕಲಿತಿದ್ದಳು. ತನ್ನ ಹೆಸರೇ ರಾಮಾಯಣದ ನಾಯಕಿಯದು ಎಂಬ ಹೆಮ್ಮೆ ಬೇರೆ ಇತ್ತು. ಅಷ್ಟೇ ಅಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ತನ್ನ ತಂದೆಯ ಅವಿಶ್ರಾಂತ ಹೋರಾಟವನ್ನು ನೋಡು ನೋಡುತ್ತಾ ಅವಳು ಬೆಳೆದು ಬಂದಿದ್ದಳು. ರಾಮಾಯಣದ ಪರೀಕ್ಷೆಗಾಗಿ ಅವಳು ಓದಬೇಕಾಗಿರಲಿಲ್ಲ. ರಾಮಾಯಣ ಅವಳ ಉಸಿರೇ ಆಗಿರುವುದರಿಂದ ಪರೀಕ್ಷೆಗೆ ಯಾವ ತಯಾರಿಯನ್ನೂ ಮಾಡಿರಲಿಲ್ಲ. ರವಿವಾರ ಕಾಲೇಜಿಗೆ ರಜೆ. ರಾಮಾಯಣ ಪರೀಕ್ಷೆಗಾಗಿಯೇ ಕಾಲೇಜು ತೆರೆದಿತ್ತು. ಅಯೋಧ್ಯೆಯ ರಾಮನಿಗೆ ನಮಿಸಿ, ಜಾನಕಿ ಕಾಲೇಜಿಗೆ ಆಗಮಿಸಿದ್ದಳು. ಕೆಲವು ಹಿರಿಯ ವಿದ್ಯಾರ್ಥಿಗಳು ಅದಾಗಲೇ ಜಗಲಿ ಸೇರಿದ್ದರು. ಜಾನಕಿಯ ಪರಿಚಯ ಹಿರಿಯ ವಿದ್ಯಾರ್ಥಿಗಳಿಗೂ ಇತ್ತು. ಅವಳು ಗುರೂಜಿ ಮಗಳು ಎಂದೇ ಎಲ್ಲರಿಗೂ ಪರಿಚಿತ. ಅಷ್ಟರಲ್ಲಿ ಯಾರೋ ಕೇಳಿದರು ‘‘ಸುಗ್ರೀವನ ಹೆಂಡತಿಯ ಹೆಸರು ಯಾವುದು?’’

‘‘ನನಗೇನು ಗೊತ್ತೆ? ನಾನು ನಿಂತು ಮಾಡಿದ್ದಲ್ಲ ಮದುವೆ...’’ ಇನ್ಯಾರೋ ಹುಡುಗಿ ಹೇಳಿ ಕಿಸಕ್ಕನೆ ನಕ್ಕಳು.

‘‘ಜಾನಕಿಗೆ ಗೊತ್ತು ಜಾನಕಿಗೆ ಕೇಳು...’’ ಇನ್ಯಾರೋ ಸಲಹೆ ನೀಡಿದರು.

ರಾಮಾಯಣವೇನೋ ಜಾನಕಿಗೆ ಗೊತ್ತಿತ್ತು. ಆದರೆ ಸುಗ್ರೀವನ ಹೆಂಡತಿಯ ಹೆಸರು ಆಕೆಗೆ ನೆನಪಿರಲಿಲ್ಲ. ಅದೇನೂ ನೆನಪಿಡ ತಕ್ಕ ಮುಖ್ಯ ಪಾತ್ರ ಅಲ್ಲ ಎಂದು ಅವಳು ತಿಳಿದುಕೊಂಡಿದ್ದಳು. ‘‘ನನಗೆ ಗೊತ್ತಿತ್ತು...ಆದರೆ ಈಗ ನೆನಪಿಲ್ಲ ಕಣೇ...’’ ಜಾನಕಿ ಮುಜುಗರದಿಂದ ಹೇಳಿದಳು.

ಅಷ್ಟರಲ್ಲಿ ಯಾರೋ ಒಬ್ಬಳು ಹೇಳಿದಳು ‘‘ಹೇ ಮುಸ್ತಫಾನಿಗೆ ಗೊತ್ತಿರುತ್ತದೆ ಅವನಲ್ಲಿ ಕೇಳು...’’

ಜಾನಕಿ ಒಮ್ಮೆಲೆ ಅಲುಗಾಡಿದಳು. ಎಲ್ಲಿಯ ಮುಸ್ತಫಾ? ಎಲ್ಲಿಯ ರಾಮಾಯಣ...?

‘‘ಮುಸ್ತಫಾ ಪರೀಕ್ಷೆ ಬರೆಯಲು ಬರುತ್ತೇನೆ ಎಂದಿದ್ದ...ಬಾ ಹುಡುಕುವ...’’ ಇನ್ಯಾರೋ ಹೇಳಿದ್ದು ಕೇಳಿತು.

ಜಾನಕಿ ಕಲ್ಲಿನಂತೆ ನಿಂತಳು. ಮುಸ್ತಫಾ ರಾಮಾಯಣ ಪರೀಕ್ಷೆ ಬರೆಯಲು ಬಂದಿದ್ದಾನೆಯೇ? ನೋಡಿದರೆ ಜಗಲಿಯ ಆ ತುದಿಯಲ್ಲಿ ಮುಸ್ತಫಾ ನಿಂತುಕೊಂಡು ಅದ್ಯಾವುದೋ ಪುಸ್ತಕವನ್ನು ಬಿಡಿಸಿ ಓದುತ್ತಿದ್ದ. ಕೆಲವು ಹುಡುಗಿಯರು ಅವನನ್ನು ಮುತ್ತಿಕೊಂಡರು.

ಯಾರೋ ಜಾನಕಿಯ ಪಕ್ಕದಿಂದ ಕೂಗಿ ಕೇಳಿದರು ‘‘ಏಯ್ ಮುಸ್ತಫಾ...ಸುಗ್ರೀವನ ಹೆಂಡತಿಯ ಹೆಸರೇನೋ...’’

ಮುಸ್ತಫಾ ಅಲ್ಲಿಂದಲೇ ಕೂಗಿ ಹೇಳಿದ ‘ರುಮೆ....’

‘‘ಉಮೆಯಾ?’’

‘‘ಉಮೆಯಲ್ಲ ರುಮೆ. ಆರ್‌ಯುಎಮ್‌ಇ’’ ಎಂದು ತಿದ್ದಿದ.

ಜಾನಕಿಗೆ ಅಚ್ಚರಿ ಮತ್ತು ಆತಂಕ ಎರಡೂ ಆಯಿತು. ಈವರೆಗೆ ಅವಳು ಈ ಪರೀಕ್ಷೆಯಲ್ಲಿ ತನಗೇ ಮೊದಲ ರ್ಯಾಂಕ್ ಎಂದು ಬಲವಾಗಿ ನಂಬಿದ್ದಳು. ಇದೀಗ ನೋಡಿದರೆ ಈತ ಎಲ್ಲಿಂದ ಬಂದ? ನಾನು ಹೋಗುವಲ್ಲೆಲ್ಲ ಅಡ್ಡಗಾಲು ಹಾಕುತ್ತಿದ್ದಾನಲ್ಲ? ಗಡ್ಡ ಬಿಟ್ಟು, ಕುರ್‌ಆನ್ ಓದುವುದು ಬಿಟ್ಟು, ಇವನು ರಾಮಾಯಣವನ್ನು ಯಾಕೆ ಓದಿದ? ಅವಳಿಗೆ ಅರ್ಥವಾಗುತ್ತಿರಲಿಲ್ಲ. ಪರೀಕ್ಷೆ ಬರೆಯುವ ಹೊತ್ತಿನಲ್ಲೂ ಅವಳು ಓರೆಗಣ್ಣಿನಿಂದ ಮುಸ್ತಫಾನನ್ನೇ ನೋಡುತ್ತಿದ್ದಳು. ಅವನು ಕಾಗದದ ಮೇಲೆ ಕಾಗದಗಳನ್ನು ಮೇಷ್ಟ್ರಿಂದ ಕಿತ್ತುಕೊಳ್ಳುತ್ತಿದ್ದ. ಇವಳೂ ಹಟ ಹಿಡಿದು ಬರೆಯತೊಡಗಿದಳು. ಜಾನಕಿಗೆ ಅಳು ಬರುವಂತಾಯಿತು. ಪರೀಕ್ಷೆಯೇನೋ ತುಂಬಾ ಸುಲಭವಿತ್ತು. ಆದರೆ ಅವಳ ಪಾಲಿಗೆ ಈ ಪರೀಕ್ಷೆ ಪ್ರತಿಷ್ಠೆಯನ್ನು ಪಡೆದುಕೊಂಡದ್ದು ಮುಸ್ತಫಾನ ದೆಸೆಯಿಂದ. ಅಂದು ಹಾಸ್ಟೆಲ್‌ನಲ್ಲಿ ಮೀನಾಕ್ಷಿಯ ಜೊತೆಗೆ ನೇರವಾಗಿ ಮುಸ್ತಫಾನನ್ನು ಪ್ರಸ್ತಾಪಿಸಿದಳು ‘‘ಮೀನಾಕ್ಷಿ...ಆ ಅವನಿದ್ದಾನಲ್ಲ...’’

‘‘ಯಾರು?’’ ಮೀನಾಕ್ಷಿ ಅರ್ಥವಾಗದೆ ಕೇಳಿದಳು.

‘‘ಅದೇ ಮುಸ್ತಫಾ...’’

‘‘ಅವನ ವಿಷಯ ಈಗ ಯಾಕೆ? ಆ ಜಾತಿಯವರ ಸಹವಾಸ ಒಳ್ಳೆಯದಲ್ಲ...’’

‘‘ಅದಲ್ವೇ...ಅವನು ರಾಮಾಯಣ ಪರೀಕ್ಷೆ ಬರೆಯಲು ಬಂದಿದ್ದ...’’

‘‘ರಾಮಾಯಣ ಪರೀಕ್ಷೆಯ?....ಅದರಲ್ಲಿರುವ ರಾವಣ, ಕುಂಬಕರ್ಣ ಎಲ್ಲ ಅವನ ವಂಶದವರಿರಬೇಕು...ಅದಕ್ಕೆ ರಾಮಾಯಣ ಓದಿರಬೇಕು ಅವನು...’’

‘‘ತಮಾಷೆಯಲ್ಲ...ಅವನಿಗೆ ರಾಮಾಯಣದ ಬಗ್ಗೆ ತುಂಬಾ ಗೊತ್ತಿದ್ದಂತಿದೆ...’’

‘‘ಎಂತ ಗೊತ್ತೆ...ಮಣ್ಣಾಂಗಟ್ಟಿ. ತನಗೆಲ್ಲ ಗೊತ್ತಿದೆ ಎಂದು ತೋರಿಸಿಕೊಳ್ಳಲಿಕ್ಕೆ ಪರೀಕ್ಷೆ ಬರೆಯಲು ಬಂದಿದ್ದಾನೆ....ಕನ್ನಡ ಪಂಡಿತರನ್ನು ಮಂಕು ಮರುಳು ಮಾಡುವುದಕ್ಕೆ....’’ ಮೀನಾಕ್ಷಿ ಉತ್ತರಿಸಿದಳು. ‘‘ಇರಲೂ ಬಹುದು...’’ ಜಾನಕಿ ದನಿ ಸೇರಿಸಿದಳು. ಜಾನಕಿ ಯಾವುದು ನಡೆಯಬಾರದು ಎಂದು ದೇವರಲ್ಲಿ ಮೊರೆಯಿಟ್ಟಿದ್ದಳೋ ಅದೇ ನಡೆದು ಹೋಯಿತು. ಒಂದು ತಿಂಗಳಲ್ಲಿ ರಾಮಾಯಣದ ರಾಜ್ಯಮಟ್ಟದ ಫಲಿತಾಂಶ ಹೊರಬಿತ್ತು. ಮೊದಲ ಬಹುಮಾನ ಉಡುಪಿಯ ಕಾಲೇಜಿನ ಹುಡುಗಿಯೊಬ್ಬಳು ತನ್ನದಾಗಿಸಿಕೊಂಡಿದ್ದಳು. ದ್ವಿತೀಯ ಬಹುಮಾನವನ್ನು ಮುಸ್ತಫಾ ತನ್ನದಾಗಿಸಿಕೊಂಡಿದ್ದ. ಇಡೀ ಕಾಲೇಜಿನಲ್ಲಿ ಮುಸ್ತಫಾ ಸುದ್ದಿಯಾಗಿದ್ದ. ಜಾನಕಿ ರಾಜ್ಯಮಟ್ಟದಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದ್ದಳು. ಈ ಬಾರಿ ಮುಸ್ತಫಾ ಫೋಟೋ ಸಹಿತ ನೋಟಿಸ್ ಬೋರ್ಡಿನಲ್ಲಿ ಕಾಣಿಸಿಕೊಂಡಿದ್ದ. ಪ್ರಾಂಶುಪಾಲ ಅರವಿಂದ ಕಾಮತರು ತನ್ನ ಕೋಣೆಗೆ ಕರೆದು, ಮುಸ್ತಫಾನಿಗೆ ‘‘ಗುಡ್...ವೆರಿಗುಡ್...ನಿನ್ನಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು...’’ ಎಂದು ಬೆನ್ನು ತಟ್ಟಿದ್ದರು.

ಕನ್ನಡ ಪಂಡಿತರು ತರಗತಿಗೆ ಬಂದವರೇ ‘‘ಮುಸ್ತಫಾ’’ ಎಂದು ಕರೆದರು. ಮುಸ್ತಫಾ ಮುಜುಗರದಿಂದ ಎದ್ದು ನಿಂತ. ‘‘ಎಲ್ಲರೂ ಮುಸ್ತಫಾನಿಗಾಗಿ ಚಪ್ಪಾಳೆ ತಟ್ಟಿ’’ ಎಂದು ಆದೇಶ ನೀಡಿದರು.

ಚಪ್ಪಾಳೆ ಹೂವಿನಮಳೆಯಂತೆ ತರಗತಿ ತುಂಬಾ ಸುರಿಯಿತು. ಜಾನಕಿಗೆ ಮಾತ್ರ ಅದು ಅಕಾಲದಲ್ಲಿ ಅಪ್ಪಳಿಸಿದ ಸಿಡಿಲಿನ ಚೂರುಗಳಂತಿದ್ದವು.

ಆ ಬಳಿಕ ಮುಸ್ತಫಾನನ್ನು ತನ್ನೆಡೆಗೆ ಕರೆದರು. ತನ್ನ ಬ್ಯಾಗಿನಿಂದ ಬೃಹತ್ ಪುಸ್ತಕವನ್ನು ತೆಗೆದರು ‘‘ಇದು ಎ. ಆರ್. ಕೃಷ್ಣಶಾಸ್ತ್ರಿ ಬರೆದಿರುವ ವಚನಭಾರತ ಕೃತಿ. ಇದು ನನ್ನ ವತಿಯಿಂದ ನಿನಗೆ ಬಹುಮಾನ’’ ಎಂದರು. ಮುಸ್ತಫಾ ಖುಷಿಯಿಂದ ಪಡೆದುಕೊಂಡ. ತರಗತಿಯಲ್ಲಿ ಮತ್ತಷ್ಟು ಜೋರಾಗಿ ಚಪ್ಪಾಳೆ. ‘‘ಅನ್ಯ ಧರ್ಮೀಯನಾಗಿದ್ದರೂ ರಾಮಾಯಣ, ಮಹಾಭಾರತದ ಕತೆಯನ್ನು ತಿಳಿದುಕೊಂಡಿರುವ ಮುಸ್ತಫಾ ನಿಮಗೆಲ್ಲ ಮಾದರಿಯಾಗಬೇಕು...ಇದೆಲ್ಲ ಸಂಸ್ಕಾರದಿಂದ ಬರುವಂತಹದ್ದು. ಮುಸ್ತಫಾನ ತಂದೆಯೂ ನಾನು ಬಾಲ್ಯದಲ್ಲಿ ಗೆಳೆಯರು...’’ ಎಂದು ಹೇಳಿದ್ದು, ಮುಸ್ತಫಾನಿಗೆ ತುಂಬಾ ಸಂತೋಷವಾಗಿತ್ತು. ಮೀನಾಕ್ಷಿ ಇಡೀ ದಿನ ಸುರ್ ಎಂದು ಸಿಡಿಯುತ್ತಲೇ ಇದ್ದಳು. ‘‘ಕಾಪಿ ಮಾಡಿರಬೇಕು...ಕಣೇ...’’ ಮೀನಾಕ್ಷಿ ಹೇಳಿದಳು.

‘‘ಹಾಗೇನೂ ಇಲ್ಲ. ಅವನು ರಾಮಾಯಣ ಓದಿದ್ದಾನೆ...’’ ಜಾನಕಿ ಸಮರ್ಥನೆ ನೀಡಿದಳು.

‘‘ನಿನಗೆ ಗೊತ್ತಿಲ್ಲ. ಅಪ್ಪ ಮನೆಯಲ್ಲಿ ಹೇಳ್ತಾ ಇದ್ದರು. ಅವರ ಜಾತಿಯೇ ಹಾಗೆ. ಹಿಂದಿನಿಂದ ಚೂರಿ ಹಾಕುವುದಂತೆ...ಗೊತ್ತೇ ಆಗದ ಹಾಗೆ’’

ಜಾನಕಿ ವೌನವಾಗಿದ್ದಳು.

‘‘ಮನೆಯಲ್ಲಿ ನನಗೆ ಅಪ್ಪ ಹೇಳಿದ್ದರು. ಕಾಲೇಜಿನಲ್ಲಿ ಯಾರ ಜೊತೆ ಬೇಕಾದರೂ ಮಾತನಾಡು. ಆದರೆ ಆ ಜಾತಿಯವರ ಬಗ್ಗೆ ಮಾತ್ರ ಜಾಗ್ರತೆಯಾಗಿರು ಅಂತ....ನನಗೆ ಮುಸ್ತಫಾನ ಮುಖ ಕಂಡರೆ ಆಗುವುದಿಲ್ಲ...’’ ಮೀನಾಕ್ಷಿ ಮುಖ ಕಿವಿಚಿದಳು.

‘‘ಆದರೆ ಆತ ಕನ್ನಡ ಪಂಡಿತರ ಪ್ರೀತಿಯ ಶಿಷ್ಯ ಕಣೇ...’’ ಜಾನಕಿ ಅಸಮಾಧಾನ ತೆರೆದಿಟ್ಟಳು. ಬಂಗಾರದ ಬಣ್ಣದ ಪೆನ್ನು ಅವಳ ಕಣ್ಣಲ್ಲಿ ಈಗಲೂ ಕುಣಿಯುತ್ತಿತ್ತು.

‘‘ಒಂದು ದಿನ ಅವರಿಗೇ ಗೊತ್ತಾಗುತ್ತದೆ...ಸುಮ್ಮನಿರು. ಭೂತದ ಬಾಯಲ್ಲಿ ಭಗವದ್ಗೀತೆ...ಮುಸ್ತಫಾನ ಬಾಯಲ್ಲಿ ರಾಮಾಯಣ...’’ ಎನ್ನುತ್ತಾ ಕಿಸಕ್ಕನೆ ನಕ್ಕಳು ಮೀನಾಕ್ಷಿ. ಜಾನಕಿಗೂ ನಗು ಬಂತು. ರಾಮಾಯಣ ಪರೀಕ್ಷೆಯಲ್ಲಿ ಮುಸ್ತಫಾ ದ್ವಿತೀಯ ಬಹುಮಾನ ಪಡೆದದ್ದು ಕಾಲೇಜಿನ ಹೊರಗಡೆಯೂ ಸುದ್ದಿಯಾಯಿತು.

ಸ್ಥಳೀಯ ಪತ್ರಿಕೆಯಲ್ಲಿ ‘‘ರಾಮಾಯಣ ಪರೀಕ್ಷೆಯಲ್ಲಿ ದ್ವಿತೀಯ ಬಹುಮಾನ ಪಡೆದ ಮುಸ್ಲಿಮ್ ಹುಡುಗ...’’ ಎಂಬ ತಲೆಬರಹದಲ್ಲಿ ಸಣ್ಣದೊಂದು ಸುದ್ದಿ ಪ್ರಕಟವಾಯಿತು. ಆ ಸುದ್ದಿಯ ಪ್ರತಿಯನ್ನೂ ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಯಿತು. ಇದು ಮುಸ್ತಫಾನ ಖ್ಯಾತಿಯನ್ನು ಶಾಲೆಯಲ್ಲಿ ಸಹಜವಾಗಿಯೇ ಹೆಚ್ಚಿಸಿತು. ಸುಧಾಕರ, ನರೇಶ್ ಮೊದಲಾದವರೆಲ್ಲ ಮುಸ್ತಫಾನನ್ನು ತಮ್ಮ ಆತ್ಮೀಯ ಬಳಗದಲ್ಲಿ ಸೇರಿಸಿಕೊಂಡರು. ಇಷ್ಟೆಲ್ಲ ಇದ್ದರೂ ಮುಸ್ತಫಾ ತನ್ನ ಸಂಕೋಚದ ಸ್ವಭಾವವನ್ನು ಬಿಟ್ಟುಕೊಟ್ಟಿರಲಿಲ್ಲ. ತಾನಾಯಿತು, ತನ್ನ ಓದಾಯಿತು ಎಂಬಂತೆಯೇ ಇರುತ್ತಿದ್ದ. ಕಾಲೇಜು, ಓದು, ಪರೀಕ್ಷೆ...ಹೀಗೆ ದಿನಗಳು ಉರುಳುತ್ತಿದ್ದವು.

ಹೀಗಿರುವಾಗ ಒಂದು ದಿನ ಮಧ್ಯಾಹ್ನದ ಊಟದ ಹೊತ್ತು. ತರಗತಿಯಲ್ಲಿ ಒಬ್ಬನೇ ಕೂತು ಮುಸ್ತಫಾ ಅದೇನೋ ಓದುತ್ತಿದ್ದ. ಅಷ್ಟರಲ್ಲಿ ಒಂದಿಷ್ಟು ಸೀನಿಯರ್‌ಗಳು ತರಗತಿ ಪ್ರವೇಶಿಸಿ ನೇರವಾಗಿ ಇವನೆಡೆಗೆ ಬಂದರು.

ನೋಡಿದರೆ ಅದೇ ಎಬಿವಿಪಿ ನಾಯಕರು ! ಸುಧಾಕರ ಹೇಳಿದ ದೋಂಟಿ ಸತೀಶ. ಮುಸ್ತಫಾ ಎದ್ದು ನಿಂತ. ‘‘ಕೂತ್ಕೋ...ರಾಮಾಯಣದಲ್ಲಿ ಫಸ್ಟ್ ಪ್ರೈಝ್ ಸಿಕ್ಕಿತಂತೆ....ನೋಟಿಸ್ ಬೋರ್ಡ್ ನೋಡಿದೆ...’’

ಮುಸ್ತಫಾ ವೌನವಾಗಿದ್ದ. ‘‘ಹೆದರಬೇಡ...ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ನೀನೂ ಸಪೋರ್ಟ್ ಮಾಡಬೇಕು...ನಿನ್ನ ಜಾತಿಯವರಿಗೆಲ್ಲ ಹೇಳಬೇಕು...ಗೊತ್ತಾಯಿತಾ...’’ ಸತೀಶ ಆದೇಶ ನೀಡಿದ.

ಮುಸ್ತಫಾ ಕಂಗಾಲಾಗಿದ್ದ. ‘‘ಅಯೋಧ್ಯೆಯಲ್ಲಿ ರಾಮಮಂದಿರವಾಗಬೇಕು ಎಂದು ಬೆಂಬಲಿಸಿ ನಾಡಿದ್ದು ಪುತ್ತೂರಿನಲ್ಲಿ ಸಭೆ ಉಂಟು...ಅಲ್ಲಿ ನಿನಗೆ ಸನ್ಮಾನ ಮಾಡಿಸುವ....ನಾನು ಸಂಘಟಕರಲ್ಲಿ ಹೇಳಿದ್ದೇನೆ....ಗೊತ್ತಾಯಿತಾ....’’ ಮುಸ್ತಫಾ ವೌನವಾಗಿದ್ದ. ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ಅವನಿಗೆ ಅರ್ಥವಾಗಲಿಲ್ಲ. ‘‘ಗೊತ್ತಾಯಿತಾ?’’ ದೋಂಟಿ ಸತೀಶ ಜೋರು ಧ್ವನಿಯಲ್ಲಿ ಕೇಳಿದ.

(ಗುರುವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News