ಬಿಜೆಪಿ ಬಿಕ್ಕಟ್ಟಿನ ಒಳಗುಟ್ಟು
ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಇಲ್ಲಿನ ರಾಜಕೀಯ ಅಧಿಕಾರ ವಶಪಡಿಸಿಕೊಳ್ಳಲು ಆ ಮೂಲಕ ವೈದಿಕೇತರ ಪರಂಪರೆಯನ್ನು ನಾಶಪಡಿಸಲು ಸಂಘ ಪರಿವಾರ ಮಸಲತ್ತು ನಡೆಸಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಾಯಕತ್ವ ಇರುವವರೆಗೆ ತನ್ನ ಕಾರ್ಯಸೂಚಿ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂಬುದು ಅದಕ್ಕೆ ಗೊತ್ತಿದೆ. ಆದ್ದರಿಂದಲೇ ರಾಜ್ಯದ ಅಧಿಕಾರ ಸೂತ್ರವನ್ನು ವಶಪಡಿಸಿಕೊಳ್ಳಲು ಈಗಿರುವ ತಂತ್ರಗಳ ಬದಲಾಗಿ ಬೇರೆ ತಂತ್ರಗಳನ್ನು ಅನುಸರಿಸಲು ಅದು ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಯಾವ ತಂತ್ರ ರೂಪಿಸುತ್ತದೆ ಎಂಬುದು ಇನ್ನೂ ಗೊತ್ತಿಲ್ಲ.
ರಾಜ್ಯ ಬಿಜೆಪಿಯಲ್ಲಿ ನಿಜವಾಗಿಯೂ ನಡೆಯುತ್ತಿರುವುದೇನು? ಮಾಧ್ಯಮ ಗಳಲ್ಲಿ ಬರುತ್ತಿರುವ ವರದಿಗಳಲ್ಲಿ ಸತ್ಯವೆಷ್ಟು? ಸುಳ್ಳು ಎಷ್ಟು? ಅಸಲಿ ಸಂಗತಿ ಯಾವುದು? ಇವೆಲ್ಲವುಗಳ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ, ಸಂಘ ಪರಿವಾರದ ಬೆಂಬಲಿಗರಲ್ಲಿ ಗಲಿಬಿಲಿ ಉಂಟಾಗಿದೆ. ಸಾರ್ವಜನಿಕರಲ್ಲೂ ಮುಂದೇನು ಆಗಬಹುದು ಎಂಬ ಕುತೂಹಲ ಮೂಡಿದೆ. ಯಡಿಯೂರಪ್ಪ ಮತ್ತು ಈಶ್ವರಪ್ಪ ಬಹಿರಂಗವಾಗಿ ನೀಡುತ್ತಿರುವ ಪತ್ರಿಕಾ ಹೇಳಿಕೆಗಳು ಗೊಂದಲಕ್ಕೆ ಕಾರಣವಾಗಿವೆ.
ಬಿಜೆಪಿಯಲ್ಲಿ ಬಿಕ್ಕಟ್ಟು ಉಂಟಾದಾಗಲೆಲ್ಲ, ಮಧ್ಯೆಪ್ರವೇಶಿಸುತ್ತಿದ್ದ ಆರೆಸ್ಸೆಸ್ ಈ ಬಾರಿ ವೌನವಾಗಿದೆ. ಮೇಲ್ನೋಟಕ್ಕೆ ಅದು ಅಸಹಾಯಕವಾದಂತೆ ಕಾಣುತ್ತದೆ. ಸಂಘ ಪರಿವಾರದಲ್ಲೇ ಭಿನ್ನ ಸ್ವರಗಳು ಕೇಳಿ ಬರುತ್ತಿವೆ. ಕಾಣುವುದಕ್ಕಿಂತ ಬೇರೆ ಇನ್ನೇನೋ ನಡೆದಿದೆ ಎಂಬ ಸಂದೇಹ ಮೂಡುತ್ತದೆ. ವಾಸ್ತವವಾಗಿ ರಾಜ್ಯ ಬಿಜೆಪಿಯ ಇಬ್ಬರು ಹಿರಿಯ ಧುರೀಣರು ಈ ಪರಿ ಕಿತ್ತಾಡುವುದನ್ನು ಆರೆಸ್ಸೆಸ್ ನಾಯಕರು ಸುಮ್ಮನೆ ಕೂತು ನೋಡುವುದಿಲ್ಲ. ಪಕ್ಷದ ಮೇಲೆ ಬಲವಾದ ಹಿಡಿತ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯಾಕೆ ಕಂಡೂ ಕಾಣದಂತೆ ಇದ್ದಾರೆ ಎಂಬ ಕುತೂಹಲ ಎಲ್ಲರಿಗೂ ಉಂಟಾಗಿದೆ.
ಆದರೆ ಕರ್ನಾಟಕದಲ್ಲಿ ಪಕ್ಷದೊಳಗೆ ನಡೆದಿರುವ ಈ ಕೋಲಾಹಲ ಪ್ರಧಾನಿಗೆ ಗೊತ್ತಿಲ್ಲದೇ ನಡೆದಿಲ್ಲ. ಸಂಘ ಪರಿವಾರದ ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಯಡಿಯೂರಪ್ಪ ಮತ್ತು ಈಶ್ವರಪ್ಪ ಪರಸ್ಪರ ತೊಡೆ ತಟ್ಟಿ ಕಾಳಗಕ್ಕೆ ಇಳಿದಿ ರುವುದು ಮೋದಿ ಮತ್ತು ಅಮಿತ್ ಶಾ ಪ್ರಚೋದನೆಯಿಂದಲೇ ಎಂಬುದು ಪರಿವಾರದ ಕೆಲ ಕಾರ್ಯಕರ್ತರ ಅನಿಸಿಕೆಯಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ತನ್ನಿಂದಲೇ, ಈ ಬಾರಿ ತಾನಿಲ್ಲದೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಯಡಿಯೂರಪ್ಪನವರ ಅಹಂಕಾರಕ್ಕೆ ಅಂಕುಶ ಹಾಕಲು ಮೋದಿ ಮತ್ತು ಅಮಿತ್ ಶಾ ಈ ತಂತ್ರ ರೂಪಿಸಿದ್ದಾರೆ. ತನ್ನೆದುರು ಯಾವುದೇ ರಾಜ್ಯದಲ್ಲಿ ಇನ್ನೊಬ್ಬ ವ್ಯಕ್ತಿ ಪ್ರಬಲವಾಗಿ ಬೆಳೆಯಬಾರದು. ಎಷ್ಟೇ ಬೆಳೆದರೂ ಆತ ಸಂಘ ಪರಿವಾರದ ನಿಯಂತ್ರಣದಲ್ಲಿ ಇರಬೇಕು ಎಂಬುದು ಮೋದಿಯವರ ನಿಲುವು.
ಯಡಿಯೂರಪ್ಪ ಸಂಘ ಪರಿವಾರದ ಕಾರ್ಯಕರ್ತರಾಗಿದ್ದರೂ ಅನೇಕ ಬಾರಿ ಪ್ರಭಾಕರ ಕೋರೆ, ಸಿದ್ದೇಶ್ವರರಂತಹ ಉದ್ಯಮಪತಿಗಳು, ಕೆಲ ವೀರಶೈವ ಮಠಾಧೀಶರು ಮತ್ತು ಶೋಭಾ ಕರಂದ್ಲಾಜೆಯವರು ಯಡಿಯೂರಪ್ಪನವರನ್ನು ನಿಯಂತ್ರಿಸುತ್ತಾರೆ ಎಂಬುದು ಗೊತ್ತಿರುವ ಸಂಗತಿ. ಅಂತಲೇ ಈ ಬಾರಿ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡಿ, ಉತ್ತರಪ್ರದೇಶದಂತೆ ಆರೆಸ್ಸೆಸ್ ಪ್ರಚಾರಕನೊಬ್ಬನನ್ನು ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಿಸಲು ಆರೆಸ್ಸೆಸ್ ಮತ್ತು ಮೋದಿ ಜಂಟಿ ತಂತ್ರ ರೂಪಿಸಿದ್ದಾರೆ.
ಈ ಷಡ್ಯಂತ್ರ ಬರೀ ಮೋದಿ ಮತ್ತು ಅಮಿತ್ ಶಾ ಅವರದ್ದು ಮಾತ್ರವಲ್ಲ, ನಾಗಪುರದ ಆರೆಸ್ಸೆಸ್ ಕೇಂದ್ರ ಕಚೇರಿಯ ತುಪ್ಪ ತಿಂದ ತಲೆಗಳು ಕೂಡ ಈ ತಂತ್ರದಲ್ಲಿ ಶಾಮೀಲಾಗಿವೆ. ಉತ್ತರ ಪ್ರದೇಶದ ಮೇಲೆ ಯೋಗಿ ಆದಿತ್ಯನಾಥ್ ಅವರನ್ನು ಹೇರಿದಂತೆ ಕರ್ನಾಟಕದ ಮೇಲೂ ಸಂಘದ ಪ್ರಚಾರಕನೊಬ್ಬನನ್ನು ಹೇರಲು ಮಸಲತ್ತು ನಡೆದಿದೆ. ಸಂಘ ಪರಿವಾರ ಎಂಥ ಚಾಣಾಕ್ಷ ಆಟ ಆಡುತ್ತಿದೆಯೆಂದರೆ, ಉಡುಪಿ ಮೂಲದ ಸಂತೋಷ್ ನೇತೃತ್ವದ ಗುಂಪು ಈಶ್ವರಪ್ಪನವರಿಗೆ ಬೆಂಬಲವಾಗಿ ನಿಂತು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮಾಡುವಂತೆ ಪ್ರಚೋದಿಸುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ಟ ಗುಂಪು ಯಡಿಯೂರಪ್ಪರಿಗೆ ಬೆಂಬಲವಾಗಿ ನಿಂತಿದೆ. ಅತ್ಯಾಚಾರದ ಆರೋಪಕ್ಕೆ ಒಳಗಾದ ರಾಘವೇಶ್ವರ ಭಾರತಿ ಸ್ವಾಮೀಜಿ ಪ್ರಕರಣದಲ್ಲೂ ಆರೆಸ್ಸೆಸ್ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನೇತೃತ್ವದ ಗುಂಪು ರಾಘವೇಶ್ವರ ಭಾರತಿ ವಿರೋಧವಾಗಿದ್ದರೆ, ಕಲ್ಲಡ್ಕ ಪ್ರಭಾಕರ ಭಟ್ಟ ನೇತೃತ್ವದ ಗುಂಪು ರಾಘವೇಶ್ವರ ಪರವಾಗಿದೆ. ಸಂಘ ಪರಿವಾರವು ಈ ದ್ವಿಮುಖ ನೀತಿ ಅನುಸರಿಸುತ್ತಲೇ ಬಂದಿದೆ.
ಮೇಲ್ನೋಟಕ್ಕೆ ಇದು ಎರಡು ಗುಂಪುಗಳ ನಡುವಿನ ಜಗಳದಂತೆ ಕಂಡರೂ ಕೂಡ ಇದಕ್ಕೆ ಮೀರಿದ ರಹಸ್ಯ ಕಾರ್ಯಸೂಚಿ ಸಂಘ ಪರಿವಾರ ಹೊಂದಿದೆ. ಕರ್ನಾಟಕವನ್ನು ಬಸವಾದಿ ಶರಣರ ವೈಚಾರಿಕ ಪ್ರಭಾವದಿಂದ ಮುಕ್ತಗೊಳಿಸಿ, ಮನುವಾದಿ ಕಂದಕದಲ್ಲಿ ಈ ರಾಜ್ಯವನ್ನು ನೂಕುವ ದೀರ್ಘಕಾಲೀನ ಯೋಜನೆಯನ್ನು ಅದು ರೂಪಿಸಿದೆ. ಈ ಕಾರ್ಯಸೂಚಿಯ ಭಾಗವಾಗಿಯೇ ಮುರುಘಾ ಶರಣರಂತಹ ವೀರಶೈವ ಮಠಾಧೀಶರನ್ನು ಅದು ಬುಟ್ಟಿಗೆ ಹಾಕಿಕೊಳ್ಳುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಕಸ್ಮಾತ್ ಬಿಜೆಪಿ ಬಹುಮತ ಪಡೆದರೆ, ಆಗ ಯಡಿಯೂರಪ್ಪ ಮತ್ತು ಈಶ್ವರಪ್ಪ ಮುಖ್ಯಮಂತ್ರಿಯಾಗುವುದಿಲ್ಲ. ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರಿಗೂ ಅವಕಾಶವಿಲ್ಲ. ಅನಂತಕುಮಾರ್ ಕೂಡ ಆ ಆಸೆ ಕೈಬಿಟ್ಟಿದ್ದಾರೆ. ಇವರೆಲ್ಲರ ಬದಲಾಗಿ, ಆರೆಸ್ಸೆಸ್ ಆಯ್ಕೆ ಮಾಡುವ ಸಂತೋಷ ಅಥವಾ ಇನ್ನ್ಯಾರೋ ಸಂಘದ ಕಟ್ಟಾ ಪ್ರಚಾರಕರು ರಾಜ್ಯದ ಅಧಿಕಾರ ಸೂತ್ರ ಹಿಡಿಯುವುದು ನಿಶ್ಚಿತ. ಇದು ಬರೀ ಒಂದು ಚುನಾವಣೆಯ ಸೋಲು ಗೆಲುವಿನ ಪ್ರಶ್ನೆಯಲ್ಲ. ಮಹಾರಾಷ್ಟ್ರದಲ್ಲಿ ಜ್ಯೋತಿಬಾ ಫುಲೆ, ಶಾಹು ಮಹಾರಾಜ, ಅಂಬೇಡ್ಕರ್ ಅವರ ಪರಂಪರೆಯನ್ನು ಅಳಿಸಿ ಹಾಕಲು ಯತ್ನಿಸಿದಂತೆ ಬಸವಾದಿ ಶರಣರು, ಕನಕದಾಸರು ಮುಂತಾದವರ ವೈಚಾರಿಕ ಪರಂಪರೆಯನ್ನು ನಾಶ ಮಾಡುವ ಕಾರ್ಯತಂತ್ರ ಇದರಲ್ಲಿ ಅಡಗಿದೆ.
ಯಡಿಯೂರಪ್ಪನಂತಹವರು ಅಧಿಕಾರ ದಲ್ಲಿದ್ದರೆ, ಇದನ್ನು ಜಾರಿಗೊಳಿಸುವುದು ಕಷ್ಟ ಎಂಬುದು ಸಂಘ ಪರಿವಾರಕ್ಕೆ ಗೊತ್ತಿದೆ. ಕೇರಳದಲ್ಲಿ ನಾರಾಯಣಗುರುಗಳ ಭಾವಚಿತ್ರ ಮುಂದಿಟ್ಟುಕೊಂಡೇ ಅವರ ಸಮಾಜ ಸುಧಾರಣೆ ಪರಂಪರೆಯನ್ನು ನಾಶಪಡಿಸಲು ಸಂಚು ರೂಪಿಸಿದೆ. ಆದರೆ ಅಲ್ಲಿ ನಾರಾಯಣಗುರುಗಳ ನಿಜ ವಾರಸುದಾರರಾದ ಕಮ್ಯುನಿಸ್ಟರು ಅದಕ್ಕೆ ಅವಕಾಶ ಕೊಡಲಿಲ್ಲ. ಕೇರಳದ ಮತದಾರರು ಅದನ್ನು ತಿರಸ್ಕರಿಸಿದರು. ತಮಿಳುನಾಡಿನಲ್ಲೂ ಕೂಡ ಪೆರಿಯಾರ್ ಪರಂಪರೆಯನ್ನು ಅಳಿಸಿ ಹಾಕಲು ದ್ರಾವಿಡ ಪಕ್ಷಗಳಲ್ಲಿ ಒಡಕು ಉಂಟು ಮಾಡಲು ಯತ್ನಿಸುತ್ತಲೇ ಇದೆ.
ಇನ್ನೂಂದು ವರ್ಷದಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದರಿಂದ ಇಲ್ಲಿನ ರಾಜಕೀಯ ಅಧಿಕಾರ ವಶಪಡಿಸಿಕೊಳ್ಳಲು ಆ ಮೂಲಕ ವೈದಿಕೇತರ ಪರಂಪರೆಯನ್ನು ನಾಶಪಡಿಸಲು ಸಂಘ ಪರಿವಾರ ಮಸಲತ್ತು ನಡೆಸಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಾಯಕತ್ವ ಇರುವವರೆಗೆ ತನ್ನ ಕಾರ್ಯಸೂಚಿ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂಬುದು ಅದಕ್ಕೆ ಗೊತ್ತಿದೆ. ಆದ್ದರಿಂದಲೇ ರಾಜ್ಯದ ಅಧಿಕಾರ ಸೂತ್ರವನ್ನು ವಶಪಡಿಸಿಕೊಳ್ಳಲು ಈಗಿರುವ ತಂತ್ರಗಳ ಬದಲಾಗಿ ಬೇರೆ ತಂತ್ರಗಳನ್ನು ಅನುಸರಿಸಲು ಅದು ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಯಾವ ತಂತ್ರ ರೂಪಿಸುತ್ತದೆ ಎಂಬುದು ಇನ್ನೂ ಗೊತ್ತಿಲ್ಲ.
ಈ ದೇಶದಲ್ಲಿ ವೈದಿಕೇತರ ಧಾರೆಗಳನ್ನು ನಾಶ ಮಾಡಿದ ದೊಡ್ಡ ಇತಿಹಾಸವೇ ಇದೆ. ಈ ದೇಶದಿಂದ ಓಡಿಸಲ್ಪಟ್ಟ ಬೌದ್ಧ ಧರ್ಮ ಚೀನಾ, ಜಪಾನ್ ಮತ್ತು ವಿಯೆಟ್ನಾಂಗಳಲ್ಲಿ ಬೆಳೆಯಿತು. ಇನ್ನೊಂದು ವೈದಿಕೇತರ ಧರ್ಮವಾದ ಜೈನ ಧರ್ಮವನ್ನು ಆಪೋಷನ ಮಾಡಿಕೊಂಡ ವೈದಿಕಶಾಹಿ ಅದನ್ನು ಈಗಾಗಲೇ ಮೂಲೆಗುಂಪು ಮಾಡಿದೆ. ಅಳಿದುಳಿದ ಜೈನ ಧರ್ಮ ವೈದಿಕ ಶಾಹಿಯೊಂದಿಗೆ ರಾಜಿ ಮಾಡಿಕೊಂಡಿದೆ. ಉಳಿದಂತೆ ಬಸವಣ್ಣನವರಿಂದ ಅಸ್ತಿತ್ವ ಪಡೆದ ಲಿಂಗಾಯತ ಧರ್ಮ ಈಗ ಪ್ರತ್ಯೇಕವಾಗಿದೆ. ಅದು ಕೂಡ ಹಿಂದೂ ಧರ್ಮದ ಭಾಗವೆಂದು ಜೀರ್ಣಿಸಿಕೊಳ್ಳಲು ಸಂಘ ಪರಿವಾರ ಯತ್ನಿಸುತ್ತಿದ್ದರೂ ಅದಕ್ಕೆ ಸಾಕಷ್ಟು ಪ್ರತಿರೋಧವೂ ಕಂಡು ಬರುತ್ತಿದೆ.
ಲಿಂಗಾಯತರು ತಮ್ಮದನ್ನು ಪ್ರತ್ಯೇಕ ಧರ್ಮವೆಂದು ಮಾನ್ಯತೆ ನೀಡುವಂತೆ ರಾಷ್ಟ್ರಪತಿಯವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ನಾಯಕತ್ವವನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ. ಯಡಿಯೂರಪ್ಪ ಸಂಘ ಪರಿವಾರದಿಂದ ಬಂದಿದ್ದರೂ ತಮಗೆ ವೋಟು ಹಾಕಿ ಗೆಲ್ಲಿಸಿದ ಲಿಂಗಾಯತ ಸಮುದಾಯದ ಪರ ಇರಲೇಬೇಕಾಗುತ್ತದೆ. ಅಂತಲೇ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವೆ ಕಿತ್ತಾಟ ಉಂಟು ಮಾಡಿ, ಸಂಘ ಪರಿವಾರದ ಅಜೆಂಡಾ ಜಾರಿಗೆ ತರುವ ಮೂರನೆ ವ್ಯಕ್ತಿಯನ್ನು ಅಧಿಕಾರಕ್ಕೆ ತರುವ ಯತ್ನ ನಡೆದಿದೆ. ಈ ಬೆಳವಣಿಗೆಯಿಂದ ಅನಂತಕುಮಾರ್ ಕೂಡ ಅಪ್ರಸ್ತುತರಾದಂತೆ ಕಾಣುತ್ತದೆ. ಅಂತಲೇ ಯಡಿಯೂರಪ್ಪ ಅವರನ್ನು ಇನ್ನಷ್ಟು ಬದ್ನಾಮ ಮಾಡುವಂತೆ ಮೋದಿಯವರು ಕರ್ನಾಟಕದ ಕೆಲ ಬಿಜೆಪಿ ನಾಯಕರಿಗೆ ಸೂಚಿಸಿದ್ದಾರಂತೆ. ಅಂತಲೇ ಸಿ.ಟಿ.ರವಿ, ಚಕ್ರವರ್ತಿ ಸೂಲಿಬೆಲೆ ಅಂಥವರು ಕೂಡ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ.
ಇನ್ನೊಂದು ವರ್ಷದಲ್ಲಿ ಬಿಜೆಪಿ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಯಡಿಯೂರಪ್ಪ ಸಂಪೂರ್ಣ ಮೂಲೆಗುಂಪಾದ ನಂತರ ಮೋದಿ ಮತ್ತು ಅಮಿತ್ ಶಾ ರಂಗಪ್ರವೇಶ ಮಾಡಲಿದ್ದಾರೆ.