ಸಂಕ್ರಾಂತಿಗೆ ರಂಗಾಯಣದ ಬಹುತ್ವದ ರಂಗಹಬ್ಬ
ಅಲ್ಲಿ ಹಳೆಯ ನಾಟಕಗಳ ಸೆಟ್ ಪ್ರಾಪರ್ಟಿಗಳನ್ನು ನೋಡಬಹುದು, ಮುಟ್ಟಿ ಆನಂದಿಸಬಹುದು. ನಿಜ, ಮೂವತ್ತೈದು ವರ್ಷಗಳಿಂದ ಮೈಸೂರು ರಂಗಾಯಣ ಪ್ರದರ್ಶಿಸುತ್ತಿರುವ ಎಲ್ಲ ನಾಟಕಗಳ ಮರುಪ್ರದರ್ಶನ ಕಷ್ಟಸಾಧ್ಯ. ಆದರೆ ಆ ನಾಟಕಗಳಿಗೆ ಬಳಸಿದ ಸೆಟ್ ಪ್ರಾಪರ್ಟಿಗಳನ್ನು ನೋಡಿ ಖುಷಿಪಡಬಹುದು. ಇದು ಸಾಧ್ಯವಾಗಲಿದೆ ಮೈಸೂರು ರಂಗಾಯಣದ ಬಹುರೂಪಿ ನಾಟಕೋತ್ಸವ (ಜನವರಿ 14-19)ದಲ್ಲಿ.
ಬಟ್ಟೆ, ಸ್ಪಾಂಜ್, ಚಾಪೆ, ಥರ್ಮೋಕೋಲ್, ಪ್ಲೈವುಡ್, ಸೊಳ್ಳೆಪರದೆ... ಹೀಗೆ ವಿವಿಧ ಸಲಕರಣೆಗಳಿಂದ ತಯಾರಿಸಿದ ರಂಗಸಜ್ಜಿಕೆಯು ಅನಾವರಣವಾಗಲಿದೆ. ಇಡೀ ರಂಗಾಯಣದ ಆವರಣವು ನಾಟಕಗಳ ಸೆಟ್ ಪ್ರಾಪರ್ಟಿ ಮೂಲಕ ಅಣಿಗೊಳಿಸಲಾಗುತ್ತಿದೆ. ಈಮೂಲಕ ಹಳೆಯ ನಾಟಕಗಳನ್ನು ತೋರಿಸಲಾಗದಿದ್ದರೂ ನೆನಪುಗಳನ್ನು ತೋರಿಸಲು ಸಾಧ್ಯವಾಗುತ್ತಿದೆ. ಇವೆಲ್ಲ ರಂಗಾಯಣದ ಗೋದಾಮಿನಲ್ಲಿದ್ದವು. ಅವುಗಳನ್ನು ಹೊರತಂದು ರಂಗಾಯಣದ ಆವರಣವನ್ನು ಸಿಂಗರಿಸಲಾಗುತ್ತಿದೆ. ಇದರಿಂದ ಬಹುರೂಪಿಗೊಂದು ಹೊಸ ಆಯಾಮ ದಕ್ಕಲಿದೆ. ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಆಧರಿಸಿದ, ಜನ್ನಿ ನಿರ್ದೇಶಿಸಿದ್ದ ‘ಸಂಸ್ಕಾರ’ ನಾಟಕ, ‘ರಾಮಾಯಣ’ ನಾಟಕದ ಕುಂಭಕರ್ಣನ ಪಾದಗಳು... ಹೀಗೆ ವಿವಿಧ ನಾಟಕಗಳಿಗೆ ಬಳಸಿದ ಪರಿಕರಗಳನ್ನು ಅಲ್ಲಿ ಜೋಡಿಸಲಾಗುತ್ತಿದೆ. ಇದರಿಂದ ಈ ನಾಟಕಗಳನ್ನು ನೋಡಿದ ಪ್ರೇಕ್ಷಕರು ಮತ್ತೆ ನೆನಪುಗಳಿಗೆ ಜಾರಬಹುದು. ಜೊತೆಗೆ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ನಾಟಕ ಕುರಿತು ಹೇಳಬಹುದು. ಹೀಗೆ ನೆನಪುಗಳ ಮೆರವಣಿಗೆ ನಡೆಯಲಿದೆ. ಇದನ್ನು ರಂಗಾಯಣದ ವಿನ್ಯಾಸಕಾರ ಎಚ್.ಕೆ.ದ್ವಾರಕಾನಾಥ್ (ದ್ವಾರ್ಕಿ) ವಿನ್ಯಾಸಗೊಳಿಸುತ್ತಿದ್ದಾರೆ. ಇದಲ್ಲದೆ ‘ಲಂಕೇಶ್ ಕಲಾ ಗ್ಯಾಲರಿಯಲ್ಲಿ ಮೈಸೂರು ಶೈಲಿಯ ಪೇಂಟಿಂಗ್, ಕಲಾಮಂದಿರದ ಸುಚಿತ್ರಾ ಕಲಾಗ್ಯಾಲರಿಯಲ್ಲಿ ವಾಸ್ತವಿಕ ಚಿತ್ರಕಲಾ ಕೃತಿಗಳ ಪ್ರದರ್ಶನ ಇರುತ್ತದೆ’ ಎನ್ನುತ್ತಾರೆ ದ್ವಾರ್ಕಿ.
ರಂಗಕರ್ಮಿ ಪ್ರಸನ್ನ ಅವರು ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದಾಗ ‘ಅಕ್ಕ’ ಎನ್ನುವ ಹೆಸರಲ್ಲಿ ನಾಟಕೋತ್ಸವ ಆರಂಭವಾಯಿತು. ನಂತರ ಇದನ್ನು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವೆಂದು ಕರೆಯಲಾಯಿತು. ಈ ‘ಬಹುರೂಪಿ’ಗೆ ದೇಶದ ವಿವಿಧ ತಂಡಗಳು ಬಂದು ನಾಟಕ ಪ್ರದರ್ಶಿಸುತ್ತವೆ. ಈ ಬಾರಿ ತೆಲಂಗಾಣ, ಮುಂಬೈ, ಪಾಂಡಿಚೇರಿ, ಮಧ್ಯಪ್ರದೇಶ, ಕೇರಳ, ಅಸ್ಸಾಂ ಹೀಗೆ ಹೊರನಾಡಿನ ರಾಜ್ಯಗಳ ಏಳು ನಾಟಕಗಳಲ್ಲದೆ ಕನ್ನಡದ 13, ಇಂಗ್ಲಿಷಿನ ಎರಡು ನಾಟಕಗಳು ಸೇರಿದಂತೆ ಒಟ್ಟು 22 ನಾಟಕಗಳು ಪ್ರದರ್ಶನಗೊಳ್ಳಲಿವೆ. ಯಕ್ಷಗಾನಗಳೂ ಭೂಮಿಗೀತ, ವನರಂಗ, ಕಲಾಮಂದಿರ ಹಾಗೂ ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿವೆ. ಇದರೊಂದಿಗೆ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ಕಿಂದರಿಜೋಗಿ ವೇದಿಕೆಯಲ್ಲಿ ಪ್ರದರ್ಶಿಸಲಿವೆ.
‘ಬಹುರೂಪಿ’ಯಿಂದ ವಿವಿಧ ಭಾಷೆಗಳ ನಾಟಕಗಳನ್ನು ಇಲ್ಲಿನ ಪ್ರೇಕ್ಷಕರು ನೋಡಲು ಸಾಧ್ಯವಾಗುತ್ತದೆ. ಹಾಗೆಯೇ ನಮ್ಮ ಕನ್ನಡದ ನಾಟಕಗಳನ್ನು ಹೊರರಾಜ್ಯದ ತಂಡಗಳು ನೋಡಲು ಸಾಧ್ಯವಾಗುತ್ತದೆ. ಇದರಿಂದ ಭಾಷೆ, ಸಂಸ್ಕೃತಿ ಕೊಡುಕೊಳ್ಳುವಿಕೆ ಸಾಧ್ಯವಾಗುತ್ತದೆ. ಹಾಗೆಯೇ ನಾಟಕ ಕಟ್ಟುವ ಕ್ರಮ, ಅಭಿನಯವನ್ನು ರಂಗಕರ್ಮಿಗಳು ಗಮನಿಸಿದರೆ, ನಾಟಕ ನೋಡುವ ಕ್ರಮವನ್ನೂ ಪ್ರೇಕ್ಷಕರು ಅರಿಯುತ್ತಾರೆ. ಹಾಗೆ ಅರಿತು ಬೆಳೆಯಲು ಸಾಧ್ಯವಾಗುತ್ತದೆ. ಮುಖ್ಯವಾಗಿ ರಂಗಾಯಣದಲ್ಲಿ ಕಲಾವಿದರಾಗಿ ಪಡೆದ ಅನುಭವಗಳ ಜೊತೆಗೆ ಸಂಘಟನೆಯಾಗಿ ಹೇಗೆ ಕೆಲಸ ಮಾಡಬೇಕು, ತಂಡವನ್ನು ಹೇಗೆ ಕಟ್ಟಬೇಕೆಂದು ಯುವಕಲಾವಿದರು ಅರಿಯುತ್ತಾರೆ. ಇದರೊಂದಿಗೆ ವೈವಿಧ್ಯಮಯ ನಾಟಕಗಳನ್ನು ನೋಡುವ ಮೂಲಕ ಸಂಭ್ರಮಿಸುತ್ತಾರೆ.
ನಾಟಕಗಳು ಮಾತ್ರವಲ್ಲ; ಕರಕುಶಲ ವಸ್ತುಗಳು, ಪುಸ್ತಕ, ಬಟ್ಟೆಗಳ ಮಾರಾಟವೂ ನಡೆಯುತ್ತದೆ. ಪ್ರಸನ್ನ ಅವರು ಸಂಘಟಿಸಿದ್ದ ನಾಟಕೋತ್ಸವದಲ್ಲಿ ಸೀರೆ ಮಾರಾಟ ಶುರು ಮಾಡಿದಾಗ ಅನೇಕರು ಹಾಸ್ಯ ಮಾಡಿದ್ದರು. ಆದರೆ ಸೀರೆ ಕೊಳ್ಳಲು ಮಹಿಳೆಯರು ಬರುತ್ತಾರೆ. ಅವರೊಂದಿಗೆ ಅವರ ಮಕ್ಕಳೂ ಬರುತ್ತಾರೆ ಜೊತೆಗೆ ಗಂಡಂದಿರು ಬರುತ್ತಾರೆಂದು ಸಾಬೀತಾಗಿತ್ತು. ಕೈಮಗ್ಗಗಳ ಸೀರೆಗಳ ಮಾರಾಟದ ಮೂಲಕ ಕೈಮಗ್ಗಗಳನ್ನು ಉಳಿಸಲು ಪ್ರಸನ್ನ ಶ್ರಮಿಸಿದ್ದರು. ನಂತರದ ‘ಬಹೂರೂಪಿ’ಯಲ್ಲಿ ಬಟ್ಟೆ, ಪುಸ್ತಕ ಹಾಗೂ ಕರಕುಶಲ ವಸ್ತುಗಳ ಮಾರಾಟದ ಮಳಿಗೆಗಳೂ ಇದ್ದವು, ಇರುತ್ತವೆ.
ಮಕ್ಕಳ ಬಹುರೂಪಿ: ‘ಕನ್ನಡದ ಪ್ರಮುಖವಾದ ಸಾಂಸ್ಕೃತಿಕ ಅಭಿವೃಕ್ತಿ ಬಹುರೂಪಿ’ ಎನ್ನುವುದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರ ಅಭಿಪ್ರಾಯ. ‘ಇದು ಬಹುರೂಪದಲ್ಲಿ ವ್ಯಕ್ತವಾಗುತ್ತದೆ. ಹಲವು ಕಲಾಮಾಧ್ಯಮಗಳು ಅಂದರೆ ರಂಗಭೂಮಿ ಸೇರಿದಂತೆ ಸಿನೆಮಾ, ಚಿತ್ರಕಲೆ, ಜಾನಪದ ಉತ್ಸವ, ಕರಕುಶಲ ಇವೆಲ್ಲ ಒಳಗೊಂಡು ಬಹುರೂಪಿಯಲ್ಲಿ ವ್ಯಕ್ತವಾಗುತ್ತದೆ’ ಎನ್ನುವ ಖಚಿತತೆ ಅವರದು.
‘‘ಈ ವರ್ಷದಿಂದ ಮಕ್ಕಳ ಬಹುರೂಪಿ ಶುರುವಾಗುತ್ತಿದೆ. ಈ ಸಮಾಜದ ಭಾಗವಾದ ಮಕ್ಕಳನ್ನು ಒಳಗೊಳ್ಳಬೇಕೆಂದು ಆಯೋಜಿಸಿದ್ದೇವೆ. ಸಮಾಜ ಕೇಂದ್ರವಾದ ಮಕ್ಕಳಿಗಾಗಿಯೇ ಕಲಾಮಂದಿರದಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಜನವರಿ 18,19ರಂದು ಮಕ್ಕಳ ಚಲನಚಿತ್ರೋತ್ಸವವಿದ್ದರೆ, ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನವಿರುತ್ತವೆ. ಕುಂಬಾರಿಕೆ, ಬುಟ್ಟಿ ಹೆಣೆಯುವ... ಹೀಗೆ ವಿವಿಧ ಕರಕುಶಲದಲ್ಲೂ ಮಕ್ಕಳು ತೊಡಗಿಕೊಳ್ಳುತ್ತಾರೆ’’ ಎನ್ನುವ ವಿಶ್ವಾಸ ಸತೀಶ್ ಅವರದು.
‘‘ಜನವರಿ 18,19ರಂದು ನಡೆಯುವ ವಿಚಾರ ಸಂಕಿರಣದ ವಿಷಯ ಬಿಡುಗಡೆ. ಇದರ ಅಡಿಬರಹ ಸಾಮಾಜಿಕ ನ್ಯಾಯ, ಚಳವಳಿಗಳು ಹಾಗೂ ರಂಗಭೂಮಿ. ಎರಡೂ ದಿನಗಳ ಗೋಷ್ಠಿಗಳಲ್ಲಿ ವಿದ್ವಾಂಸರು ಭಾಗವಹಿಸುವರು. ಸಂವಿಧಾನದ ಹಕ್ಕು, ಮಾನವೀಯತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಸಾಮರಸ್ಯ ಈ ಎಲ್ಲವನ್ನು ಒಳಗೊಂಡ ಹುಡುಕಾಟ ಈ ನಾಟಕೋತ್ಸವ’’ ಎನ್ನುವ ನಂಬಿಕೆ ಅವರದು.
ಅಂತೂ ರಂಗಾಯಣವು ‘ಬಹುರೂಪಿ’ಗೆ ಸಜ್ಜಾಗುತ್ತಿದೆ. ಮೈಸೂರು ಸೇರಿದಂತೆ ಸುತ್ತಲಿನ ಪ್ರೇಕ್ಷಕರಿಗೆ ಸಂಕ್ರಾಂತಿ ಹಬ್ಬದೊಂದಿಗೆ ರಂಗಾಯಣದ ರಂಗಹಬ್ಬವೂ ಜೊತೆಯಾಗಲಿದೆ. ಎಳ್ಳುಬೆಲ್ಲ ಮೆಲ್ಲುತ್ತ ಬಹುತ್ವದ ರಂಗಹಬ್ಬವನ್ನು ಕಣ್ತುಂಬಿಕೊಳ್ಳಲಿದ್ದಾರೆ.