ರಂಗಭೂಮಿಯೆಂಬ ಹಚ್ಚಿಟ್ಟ ಕರ್ಪೂರ...

ಇತರ ರಂಗಾಯಣಗಳ ಹಾಗೆ ನಮ್ಮ ರಂಗಾಯಣವಲ್ಲ. ವೃತ್ತಿ ರಂಗಭೂಮಿ ಕುರಿತು ಗಂಭೀರ ಅಧ್ಯಯನವಾಗಬೇಕು, ಚಾರಿತ್ರಿಕ ಅಧ್ಯಯನಗಳಾಗಿವೆ. ಆದರೆ ನಾಟಕದ ಆಶಯಗಳು, ಸ್ವರೂಪದ ವಿನ್ಯಾಸಗಳನ್ನು ತೋರಿಸಿಕೊಟ್ಟಿಲ್ಲ. ಸಂಶೋಧನೆ-ಅಧ್ಯಯನದ ಮೂಲಕ ನಿಜವಾದ ರಂಗಶಿಕ್ಷಣ ಆಗಬೇಕಿದೆ ಎನ್ನುವ ಉದ್ದೇಶ ಇಂತಹದೊಂದು ಮಹತ್ವದ ಶಿಬಿರ ಆಯೋಜಿಸಿದ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರದು.;

Update: 2025-02-14 12:27 IST
ರಂಗಭೂಮಿಯೆಂಬ ಹಚ್ಚಿಟ್ಟ ಕರ್ಪೂರ...
  • whatsapp icon

‘‘ರಂಗಭೂಮಿಯು ತನ್ನನ್ನೇ ಉರಿಸಿಕೊಂಡು ಬೆಳಕೆಂಬ ಜ್ಞಾನ ಕೊಡುತ್ತದೆ. ಹೀಗಾಗಿ ರಂಗಭೂಮಿ ಎನ್ನುವುದು ಹಚ್ಚಿಟ್ಟ ಕರ್ಪೂರದಂತೆ. ಅದರಲ್ಲಿ ಇದ್ದಿಲು ಹುಡುಕಬಾರದು ಎಂದು ರಂಗಕರ್ಮಿ ಎಚ್.ಕೆ. ಯೋಗಾನರಸಿಂಹ ಹೇಳುತ್ತಿದ್ದರು’’ ಎಂದು ಸ್ಮರಿಸಿದರು ಹಾರ್ಮೋನಿಯಂ ಮೇಷ್ಟ್ರು ವೈ.ಎಂ. ಪುಟ್ಟಣ್ಣಯ್ಯ.

ಅವರು ದಾವಣಗೆರೆಯಿಂದ ಇಪ್ಪತ್ತು ಕಿ. ಮೀ. ದೂರದಲ್ಲಿರುವ ಕೊಂಡಜ್ಜಿಯಲ್ಲಿ ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣ ಆಯೋಜಿಸಿದ್ದ ರಂಗ ನಾಟಕ ರಚನಾ ಶಿಬಿರದಲ್ಲಿ ಮಾತನಾಡುವಾಗ ಯೋಗಾನರಸಿಂಹ ಅವರ ಮಾತುಗಳನ್ನು ನೆನಪಿಸಿಕೊಂಡು ‘ಮಥಿಸಿ ಮಥಿಸಿ ಬರಲು ಬೇಕು ಮುತ್ತಿನಂಥ ಮಾತುಗಳು’ ಎಂದು ಕಲಾವಿದರಿಗೆ ಯೋಗಾನರಸಿಂಹ ಅವರು ಕಿವಿಮಾತು ಹೇಳುತ್ತಿದ್ದರು ಎಂಬುದನ್ನೂ ಹೇಳಿದರು. ಕಲಾವಿದರಿಗೆ ಕಂಠಶುದ್ಧಿ ಜೊತೆಗೆ ಸೊಂಟಶುದ್ಧಿಯೂ ಬೇಕು ಎಂದು ತಿಳುವಳಿಕೆ ಹೇಳಿದರು. ಹಾಡಲು ಕಂಠಶುದ್ಧಿ ಬೇಕು. ರಾತ್ರಿಯೆಲ್ಲಾ ನಿಂತು ನಾಟಕವಾಡಲು ಸೊಂಟಶುದ್ಧಿ ಬೇಕು ಎಂಬುದನ್ನು ವಿವರಿಸಿದರು. ಬಳಿಕ ಅವರು ಬೆಳ್ಳಾವೆ ನರಸಿಂಹಶಾಸ್ತ್ರಿಗಳ ‘ಕಂಸವಧೆ’ ನಾಟಕದಲ್ಲಿ ರಜಕ, ರಜಕೆ ಹಾಡುವ ಹಾಡನ್ನು ಶಿಬಿರಾರ್ಥಿಗಳಿಗೆ ಕಲಿಸಿದರು. ಆ ಹಾಡು...

ಬಾರೆ ಹುಡುಗಿ

ತಾರೆ ತಾರೆ ಗಡಗಿ

ಮಾರಾಯರ ಮನಿಗೋಗಿ

ಮರ್ವಾದಿ ತಕ್ಕೊಂಬರೋಣಾ

ಹೀಗೆ ರಜಕ ಹಾಡಿದರೆ ಇದಕ್ಕೆ ಉತ್ತರವಾಗಿ ರಜಕೆ

ಬತ್ತೀನಿ ಕಣಾ ತಡಬಡ ಬತ್ತೀನಿ ಕಣಾ

ನೆತ್ತೀಲಿ ಬಾಯಿ ಬಡ್ಕೊಂಡು

ಈ ಹೊತ್ತೆ ಹೊಂಡ್ಕೊತಿಯಲ್ಲೊ

ಬತ್ತೀನಿ ಕಣಾ ತಡಬಡಾ ಬತ್ತೀನಿ ಕಣಾ

ಹೀಗೆ ಹಾಡಿಸುವ ಮೂಲಕ ರಂಗಗೀತೆಯನ್ನು ಕಂಠಪಾಠ ಮಾಡಿಸಿದರು. ಈಗಿನ ಕಂಪೆನಿ ನಾಟಕಗಳ ಈಚಿನ ವರ್ಷಗಳಲ್ಲಿ ಸಿನೆಮಾ ಹಾಡುಗಳ ಬದಲು ರಂಗಗೀತೆಗಳನ್ನು ಕಲಿತು ಹಾಡಬೇಕು ಎನ್ನುವ ತಿಳಿವಳಿಕೆಯನ್ನೂ ಪುಟ್ಟಣ್ಣಯ್ಯ ಹೇಳಿದರು.

ಈ ಶಿಬಿರವನ್ನು (ಫೆಬ್ರವರಿ 9-13) ಉದ್ಘಾಟಿಸಿದ ರಂಗಕರ್ಮಿ ಡಾ. ಕೆ.ವೈ. ನಾರಾಯಣಸ್ವಾಮಿ ಅವರು ರಂಗಭೂಮಿಯ ಇತಿಹಾಸವನ್ನು, ಅದರ ಮಹತ್ವವನ್ನು ಬಿಡಿಸಿಟ್ಟರೆ, ಸಂಪನ್ಮೂಲ ವ್ಯಕ್ತಿ ಡಾ. ರಾಮಕೃಷ್ಣ ಮರಾಠೆ ಅವರು ಶಾಂತಕವಿಗಳು (ಸಕ್ಕರಿ ಬಾಳಾಚಾರ‌್ಯ) ಹೇಳಿದ ಪದ್ಯವನ್ನು ಉಲ್ಲೇಖಿಸಿದರು.

‘‘ಒಂದು ಇರುಳ್ ಕಳಿಯಲ್

ಸಾಧಿಸುವವು ಇಹಪರಗಳು ಎಮಗೆ’’

ಅಂದರೆ ಕನ್ನಡದಲ್ಲಿ ಆಧುನಿಕ ನಾಟಕಗಳು ಶುರುವಾದಾಗ ಅವುಗಳನ್ನು ನೋಡಿದ ಪ್ರೇಕ್ಷಕರು ಆಡಿಕೊಳ್ಳುತ್ತಿದ್ದ ಮೆಚ್ಚುಗೆಯ ಮಾತುಗಳಿವು. ಒಂದು ರಾತ್ರಿ ನಾಟಕ ನೋಡಿದರೆ ನಮಗೆ ಲೌಕಿಕ ಜ್ಞಾನ ಹಾಗೂ ಪಾರಮಾರ್ಥಿಕ ಜ್ಞಾನ ಎರಡೂ ಒದಗುತ್ತವೆ. ಬಯಲಾಟ ಪರಂಪರೆಯಿದ್ದ ಕಾಲದಲ್ಲಿ ಶಾಂತಕವಿಗಳು ಹೊಸ ರೀತಿಯ ನಾಟಕಗಳನ್ನು ಆಡಿದಾಗ ನಾಟಕ ನೋಡಿದ ಪ್ರೇಕ್ಷಕರು ಹೀಗೆ ಮಾತನಾಡಿಕೊಂಡರು. ಹೀಗೆಯೇ ಹುಯಿಲಗೋಳ ನಾರಾಯಣರಾಯರು ‘ಶಿಕ್ಷಣ ಸಂಭ್ರಮ’ ನಾಟಕದಲ್ಲಿನ ಬರುವ ಮುಕ್ಕಣ್ಣನ ಪಾತ್ರಧಾರಿ ಹಾಡುವ ಹಾಡಿದು...

ಅಹುದಾದರೆ ಅಹುದೆನ್ನಿ ಇಲ್ಲವಾದರೆ ಇಲ್ಲವೆನ್ನಿ

ಚಹಾದ ಗುಣಗಳನ್ನು ಬಹುಪರಿಯ ಹೇಳುವರು ॥ಪ॥

ಚಹಾ ಚೂಡವ ಭಕ್ಷಣವು ಗ್ರಹಸ್ಥನ ಲಕ್ಷರಾಮ

ಚಹಾ ಕುಡಿಯೇ ಶಿಕ್ಷಣವು ಬಹುದಯ್ಯ ತತ್‌ಕ್ಷಣವು॥

ಚಹವ ಕುಡಿಯದ ಬಾಯಿ ಒಡಕು ಮೆಣಸಿನಕಾಯಿ

ಚಹವ ನೀಡದ ಮರುಕವಿಲ್ಲದವನೆ ಘನತಿರುಕ

ಚಹ ಕುಡಿದರೆ ಶಕ್ತಿ ಸಾಬರಾಗುವ ಯುಕ್ತಿ

ಚಹಾದೊಳಗೆ ಇಡು ಭಕ್ತಿ, ಚಹ ಕುಡಿದರೆ ಮುಕ್ತಿ

ಅಂದರೆ ಚಹಾವು ಜನಪ್ರಿಯವಾಗುತ್ತಿದ್ದ ಸಂದರ್ಭದಲ್ಲಿ ಚಹಾದ ಕುರಿತ ವಿಡಂಬನೆಯಿದು. ಅಂಬಲಿ, ಗಂಜಿ ಕುಡಿಯುತ್ತಿದ್ದ ಜನರು ಚಹಾದ ರುಚಿಗೆ ಮರುಳಾಗಿದ್ದನ್ನು ಕಂಡು ನಾರಾಯಣರಾಯರು ವಿಡಂಬಿಸಿ ಹೀಗೆ ಹಾಡನ್ನು ರಚಿಸಿದರು.

ಹೀಗೆಯೇ ದೇಹ ಪೌರಾಣಿಕ, ಜೀವ ಸಾಮಾಜಿಕ ಎನ್ನುವ ಮಹತ್ವದ ಅಂಶವನ್ನು ಮರಾಠೆ ಅವರು ವಿವರಿಸಿದರು. ಪೌರಾಣಿಕ, ಐತಿಹಾಸಕ ವಸ್ತುವುಳ್ಳ ನಾಟಕಗಳಿಗೆ ಸಾಮಾಜಿಕವಾದ ಜೀವ ಕೊಟ್ಟ ನಾಟಕಗಳು ಆಗ ಪ್ರದರ್ಶನಗೊಂಡವು ಎಂಬುದನ್ನು ಸ್ಮರಿಸಿದರು. ಕಂದಗಲ್ ಹನುಮಂತರಾಯರು ‘ಮಾತಂಗ ಕನ್ಯಾ’ ನಾಟಕವನ್ನು ರಚಿಸುವ ಮೂಲಕ ಗಾಂಧೀಜಿ ಕರೆಕೊಟ್ಟ ಅಸ್ಪಶ್ಯತಾ ನಿವಾರಣೆ ಕುರಿತು ಸಾರಿದರು. ಕಂದಗಲ್ ಹನುಮಂತರಾಯರ ‘ಅಕ್ಷಯಾಂಬರ’ ನಾಟಕವು ಖಾದಿ ಬಟ್ಟೆಯ ಮಹತ್ವ ಸಾರುವಂಥದ್ದಾಗಿತ್ತು. ಹೀಗೆ ಗಾಂಧೀಜಿ ಕರೆ ಕೊಟ್ಟಿದ್ದನ್ನು ನೇರವಾಗಿ ನಾಟಕವಾಡಿದರೆ ಬ್ರಿಟಿಷರಿಂದ ಪರವಾನಿಗೆ ಸಿಗುತ್ತಿರಲಿಲ್ಲ ಜೊತೆಗೆ ಬಂಧನವಾಗುವ ಭೀತಿಯಿತ್ತು. ಇದಕ್ಕಾಗಿ ಪೌರಾಣಿಕ, ಐತಿಹಾಸಿಕ ನಾಟಕಗಳ ಹೂರಣಕ್ಕೆ ಸ್ವಾತಂತ್ರ್ಯ ಚಳವಳಿಯ ತೋರಣ ಕಟ್ಟಿದರು. ಈಮೂಲಕ ಸಮಕಾಲೀನ ಸಮಸ್ಯೆಗಳಿಗೆ ಕಂಪೆನಿ ನಾಟಕಗಳು ಸ್ಪಂದಿಸಿದವು ಎಂಬುದನ್ನು ಮರಾಠೆಯವರು ಮಾರ್ಮಿಕವಾಗಿ ಬಿಂಬಿಸಿದರು. ಆಗ ಶಿಬಿರಾರ್ಥಿ ಶ್ರೀಹರಿ ಧೂಪದ ಅವರು ‘ಬಹುಮಾಧ್ಯಮಗಳು ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುತ್ತಿವೆ. ಮರು ಕಟ್ಟುವುದು ಮತ್ತು ಅಪ್‌ಡೇಟ್ ಆಗುವುದು ಹೇಗೆ?’ ಎಂದು ಪ್ರಶ್ನಿಸಿದಾಗ ಮರಾಠೆಯವರು ‘‘ಪೊರೆ ಕಳಚಿಕೊಂಡ ಹಾವಿನಂತಾಗಬೇಕು. ವೃತ್ತಿ ರಂಗಭೂಮಿಯೂ ಪೊರೆ ಕಳಚಿಕೊಂಡು ಹೊಸದಾಗಬೇಕು’’ ಎಂದರು. ಇದಕ್ಕೆ ಪೂರಕವಾಗಿ ದಾವಣಗೆರೆ ವೃತ್ತಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ‘‘ಪರಂಪರೆ ಉಳಿಸಿಕೊಂಡು ಅಪ್‌ಡೇಟ್ ಆಗಬೇಕು. ಪೂರ್ತಿ ಒಡೆದು ಕಟ್ಟುವುದಲ್ಲ. ಮನೆ, ರಸ್ತಾ, ದರ್ಬಾರ್ ದೃಶ್ಯಗಳು ಸಾಮಾನ್ಯವಾಗಿವೆ. ಸ್ಟ್ಯಾಂಡ್ ಅಪ್ ಕಾಮಿಡಿ, ರಿಯಾಲಿಟಿ ಶೋಗಳು ಹೆಚ್ಚಿವೆ. ಇಂತಹ ಸವಾಲುಗಳ ನಡುವೆ ವೃತ್ತಿ ರಂಗಭೂಮಿಯತ್ತ ಪ್ರೇಕ್ಷಕರನ್ನು ಸೆಳೆಯುವ ಸವಾಲಿದೆ. ಹೊಸ ನಾಟಕಗಳು ಬರುತ್ತಿಲ್ಲ. ಹಳೆಯ ನಾಟಕಗಳಿಗೆ ಹೊಸ ಹೆಸರಿಟ್ಟು ಕಂಪೆನಿಗಳು ನಾಟಕ ಆಡುತ್ತಿವೆ. ಹೀಗೆ ಪ್ರೇಕ್ಷಕರ ಸದಭಿರುಚಿಯನ್ನು ಹಾಳು ಮಾಡಲಾಗುತ್ತಿದೆ’’ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಮರಾಠೆಯವರು ಪರಂಪರೆ ಕಟ್ಟಿಕೊಟ್ಟ ಮೌಲ್ಯಗಳನ್ನು ಮರೆಯಬಾರದು, ಸದಭಿರುಚಿ ಕಡೆಗೆ ಹೆಜ್ಜೆ ಹಾಕಬೇಕು ಎಂದು ಅರಿವು ಮೂಡಿಸಿದರು.

ನಾಟಕಕಾರ ಡಿ.ಎಸ್. ಚೌಗಲೆ ಅವರು ಕನ್ನಡದ ಮೇಲೆ ಮರಾಠಿ ನಾಟಕಗಳ ಪ್ರಭಾವ ಕುರಿತು ಮಾತನಾಡಿ, ‘‘ಮರಾಠಿಯಲ್ಲಿ ತಮಾಷಾ ಮೊದಲು ಅಧ್ಯಾತ್ಮವಾಗಿತ್ತು. ಪೇಶ್ವೆ ಕಾಲದಲ್ಲಿ ಶೃಂಗಾರದತ್ತ ಹೊರಳಿತು’’ ಎಂದರಲ್ಲದೆ, ‘‘ಉತ್ತರ ಕರ್ನಾಟಕದ ಸಂಗೀತ ನಾಟಕಗಳಿಗೆ ಮರಾಠಿಯ ಸಂಗೀತ ನಾಟಕಗಳ ಪ್ರಭಾವ ಹೆಚ್ಚಾಗಿದೆ. ಆದರೆ ಮರಾಠಿಯಲ್ಲಿ ರಂಗಭೂಮಿ ಕುರಿತು ದಾಖಲಾತಿಯಾದ ಹಾಗೆ ಕನ್ನಡದಲ್ಲಿ ಆಗಿಲ್ಲ’’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಮರಾಠಿಯಲ್ಲಿ ಪ್ರತೀ ನಾಟಕಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ಸಂದಾಯವಾಗುತ್ತದೆ ಜೊತೆಗೆ ಪ್ರತೀ ಪ್ರದರ್ಶನಕ್ಕೂ ಸಂಭಾವನೆ ಸಿಗುತ್ತದೆ. ಅಲ್ಲಿಯ ನಾಟಕಗಳ ರಂಗಸಜ್ಜಿಕೆ ನ್ಯಾಚುರಲಿಸ್ಟಿಕ್ ಆಗಿದ್ದರೆ ಕನ್ನಡದಲ್ಲಿ ಆರ್ಟಿಸ್ಟಿಕ್ ಆಗಿರುತ್ತವೆ ಎನ್ನುವ ಮಾಹಿತಿ ನೀಡಿ, ಮರಾಠಿ ರಂಗಭೂಮಿಗೆ ಪ್ರಭಾಕರ ಪಣಶೀಕರ, ವಿಜಯ್ ತೆಂಡುಲ್ಕರ್ ಮೊದಲಾದವರ ಕೊಡುಗೆಗಳನ್ನು ತಿಳಿಸಿದರು.

ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಮಾಲಕರೂ, ನಾಟಕಕಾರರೂ ಆದ ಜೇವರ್ಗಿ ರಾಜಣ್ಣ ಅವರು, ‘‘ಈಚಿನ ವರ್ಷಗಳಲ್ಲಿ ಕಂಪೆನಿ ನಾಟಕಗಳಿಗೆ ಹಾಸ್ಯಕ್ಕೆ ಮಹತ್ವವಿದೆ. ಪ್ರೇಕ್ಷಕರೂ ಜಾಣರಾಗಿದ್ದಾರೆ. ನಟರು ಹಾಸ್ಯ ಆರಂಭಿಸಿದರೆ ಅಂತ್ಯ ಹೇಳಬಲ್ಲ ಪ್ರೇಕ್ಷಕರೂ ಇದ್ದಾರೆ’’ ಎಂದಾಗ ಮಲ್ಲಿಕಾರ್ಜುನ ಕಡಕೋಳ ಅವರು ‘‘ಕಂಪೆನಿ ನಾಟಕಗಳಲ್ಲಿ ಕಾಮಿಡಿ ಊಟವಾಗಿದೆ, ಕಥೆ ಉಪ್ಪಿನಕಾಯಿಯಾಗಿದೆ’’ ಎಂಬ ವಾಸ್ತವಾಂಶ ಬಿಚ್ಚಿಟ್ಟರು. ಇದು ಅನಿವಾರ್ಯ. ಆದರೂ ನಮ್ಮ ಕಂಪೆನಿಯಲ್ಲಿ ಅಶ್ಲೀಲ ಸಂಭಾಷಣೆ, ಐಟಂ ಸಾಂಗ್ ಇರುವುದಿಲ್ಲ. ತಲೆ ಎತ್ತಿ ನಾಟಕ ನೋಡಬೇಕು. ತಲೆ ತಗ್ಗಿಸಿ ನೋಡು ವಂತಾಗಬಾರದು ಎಂಬುದನ್ನು ಜೇವರ್ಗಿ ರಾಜಣ್ಣ ಹೇಳಿದರು.

ನಾಟಕ ರಚನೆಗೆ ಪ್ರವೇಶ ಹೇಗೆ? ಸಂಸ್ಕೃತ ಹಾಗೂ ಕನ್ನಡದ ಪ್ರಮುಖ ನಾಟಕಗಳ ರಚನೆ ಹೇಗಾಗಿದೆ? ವರ್ತಮಾನದಲ್ಲಿ ನೋಡುವುದು ಹೇಗೆ? ಬರವಣಿಗೆಯಲ್ಲಿ ವರ್ತಮಾನವನ್ನು ಹೇಗೆ ತರಬೇಕು ಎನ್ನುವುದನ್ನು ರಂಗಕರ್ಮಿ ನಟರಾಜ ಹೊನ್ನವಳ್ಳಿ ತಿಳಿಸುವುದರ ಜೊತೆಗೆ ವೃತ್ತಿ ರಂಗಭೂಮಿಯ ಆರಂಭ, ಅದರ ಕ್ಲಾಸಿಕಲ್ ಪೀರಿಯಡ್, ಮಧ್ಯಕಾಲ, ವರ್ತಮಾನದಲ್ಲಿ ಕಂಪೆನಿ ನಾಟಕಗಳು ಹೇಗಿವೆ? ಅನುಕರಣೆ ಮಾಡದೆ ನಾಟಕಗಳನ್ನು ಹೇಗೆ ಕಟ್ಟಿಕೊಡಬಹುದು?, ಪ್ರೇಕ್ಷಕರ ಕಡೆಯಿಂದ ನಾಟಕವನ್ನು ಹೇಗೆ ನೋಡುತ್ತೀರಿ? ಎನ್ನುವ ಮಹತ್ವದ ಮಾತುಗಳನ್ನಾಡಿದರು.

ಇಂತಹದೊಂದು ಮಹತ್ವದ ಶಿಬಿರ ಆಯೋಜಿಸಿದ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು, ‘‘ನಾಟಕ ಕಂಪೆನಿಗಳ ಮಾಲಕರ ಕೊರಗೆಂದರೆ ನಾಟಕಗಳ ಕೊರತೆಯಿದೆ ಎನ್ನುತ್ತಾರೆ. ಇದಕ್ಕಾಗಿ ಹಳೆಯ ನಾಟಕಗಳಿಗೆ ಹೊಸ ಹೆಸರಿಟ್ಟು ನಾಟಕವಾಡುತ್ತಾರೆ. ಈ ಕೊರತೆ ನೀಗಿಸುವುದರ ಜೊತೆಗೆ ವೃತ್ತಿ ರಂಗಭೂಮಿಯ ನಾಟಕಗಳು ಹೇಗಿದ್ದವು, ಹೇಗಿರಬೇಕು ಎಂದು ಚರ್ಚಿಸಲು ಈ ಶಿಬಿರ ಆಯೋಜಿಸಿದ್ದೇವೆ. ಇದರಲ್ಲಿ ಭಾಗವಹಿಸಿದ ಇಪ್ಪತ್ತು ಶಿಬಿರಾರ್ಥಿಗಳು ನಾಟಕ ಬರೆದುಕೊಟ್ಟ ಮೇಲೆ ಸಮಿತಿಯು ಪರಿಶೀಲಿಸುತ್ತದೆ. ಒಳ್ಳೆಯ ನಾಟಕಗಳನ್ನು ನಮ್ಮ ರಂಗಾಯಣದಿಂದ ಪ್ರಕಟಿಸುವುದರ ಜೊತೆಗೆ ಪ್ರದರ್ಶಿಸುವ ಉದ್ದೇಶವೂ ಇದೆ’’ ಎಂದರು.

ಇತರ ರಂಗಾಯಣಗಳ ಹಾಗೆ ನಮ್ಮ ರಂಗಾಯಣವಲ್ಲ. ವೃತ್ತಿ ರಂಗಭೂಮಿ ಕುರಿತು ಗಂಭೀರ ಅಧ್ಯಯನವಾಗಬೇಕು, ಚಾರಿತ್ರಿಕ ಅಧ್ಯಯನಗಳಾಗಿವೆ. ಆದರೆ ನಾಟಕದ ಆಶಯಗಳು, ಸ್ವರೂಪದ ವಿನ್ಯಾಸಗಳನ್ನು ತೋರಿಸಿಕೊಟ್ಟಿಲ್ಲ. ಸಂಶೋಧನೆ-ಅಧ್ಯಯನದ ಮೂಲಕ ನಿಜವಾದ ರಂಗಶಿಕ್ಷಣ ಆಗಬೇಕಿದೆ ಎನ್ನುವ ಉದ್ದೇಶ ಅವರದು.

ಇದರೊಂದಿಗೆ ‘‘ರಾಜ್ಯದಲ್ಲಿ ಒಂದು ಕಾಲಕ್ಕೆ 136 ನಾಟಕ ಕಂಪೆನಿಗಳಿದ್ದವು. ಇವುಗಳ ಅಧ್ಯಯನ ಆಗಬೇಕು. ವೃತ್ತಿ ರಂಗಭೂಮಿಯನ್ನು ಮರು ರೂಪಿಸಬೇಕಿದೆ. ಮುರಿದು ಕಟ್ಟುವುದಲ್ಲ, ಪರಂಪರೆಯನ್ನು ಉಳಿಸಿಕೊಂಡು ರೂಪಿಸಬೇಕಿದೆ. ಇತರ ರಂಗಾಯಣಗಳಿಗಿಂತ ನಮ್ಮ ರಂಗಾಯಣಕ್ಕೆ ಸವಾಲುಗಳು ಭಿನ್ನವಾಗಿವೆ. ಮೂಲ ಸೌಕರ್ಯದಿಂದ ಕಟ್ಟಬೇಕಿದೆ. ಕೊಂಡಜ್ಜಿ ಹತ್ತಿರ ಹತ್ತು ಎಕರೆಯು ನಮ್ಮ ರಂಗಾಯಣಕ್ಕೆ ದೊರಕಿದೆ. ಇಲ್ಲಿ ಅಭಿನಯ, ರಂಗಸಜ್ಜಿಕೆ ಹಾಗೂ ರಂಗಸಂಗೀತ ಈ ಪರಂಪರೆಗಳ ಮೂಲಕ ಹಿಡಿದಿಡಬೇಕಿದೆ. ಇದಕ್ಕಾಗಿ ಒಂದೆರಡು ಎಕರೆಯಲ್ಲಿ ಮ್ಯೂಸಿಯಂ ಆರಂಭಿಸುವ ಉದ್ದೇಶವಿದೆ. ಇಂಡಿಯಾದಲ್ಲಿ ಎಲ್ಲಿಯೂ ವೃತ್ತಿ ರಂಗಭೂಮಿಯ ಮ್ಯೂಸಿಯಂ ಇಲ್ಲ. ಇದಕ್ಕಾಗಿ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಬೃಹತ್ತಾದ ಮ್ಯೂಸಿಯಂ ನಿರ್ಮಾಣವಾಗಲಿದೆ. ಅದು ಕೇವಲ ವೃತ್ತಿ ರಂಗಭೂಮಿಯಲ್ಲದೆ ಸಮಗ್ರ ರಂಗಭೂಮಿಯ ಮ್ಯೂಸಿಯಂ ಆಗಬೇಕು ಎನ್ನುವ ಕನಸಿದೆ. ಇದರಿಂದ ಕರ್ನಾಟಕದ ಸಾಂಸ್ಕತಿಕ ಅದರಲ್ಲೂ ರಂಗಸಂಸ್ಕೃತಿ ಕೇಂದ್ರವಾಗಲಿದೆ. ಇದನ್ನು ನೋಡಲು ಬರುವವರಿಗೆ ನಾಟಕವನ್ನೂ ನೋಡುವಂತಾಗಬೇಕು. ಇದಕ್ಕಾಗಿ ರಂಗಮಂದಿರಗಳು, ಗ್ರಂಥಾಲಯ ಆಗಬೇಕಿದೆ’’ ಎನ್ನುವ ಯೋಜನೆಗಳನ್ನು ಹಂಚಿಕೊಂಡರು.

ಕೊನೆಗೊಂದು ಮಾತು; ವೃತ್ತಿ ರಂಗನಾಟಕ ರಚನಾ ಶಿಬಿರವು ಹಚ್ಚಿಟ್ಟ ಕರ್ಪೂರದಂತೆ. ಆದರೆ ಇದರ ಇದ್ದಿಲು ಹುಡುಕಬಾರದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News