ಕುಟುಂಬದ ಮಹತ್ವ ಸಾರುವ ‘ಮೈ ಫ್ಯಾಮಿಲಿ’

Update: 2025-03-14 09:21 IST
Editor : Ismail | Byline : ಗಣೇಶ ಅಮೀನಗಡ
ಕುಟುಂಬದ ಮಹತ್ವ ಸಾರುವ ‘ಮೈ ಫ್ಯಾಮಿಲಿ’
  • whatsapp icon

‘‘ನಾನು ಚಿಕ್ಕಂದಿನಲ್ಲಿದ್ದಾಗ ಎಷ್ಟು ಅವಮಾನಗಳನ್ನು ಅನುಭವಿಸಿದ್ದೀನಿ ಅನ್ನೋದು ನನಗೆ ಗೊತ್ತು. ಹೆಜ್ಜೆ ಹೆಜ್ಜೆಗೂ ಅವಮಾನಗಳ ಗುರುತು ಇರುವ ಆ ನನ್ನ ಊರು ನನ್ನ ಮಕ್ಕಳಿಗೆ ಬೇಡವಾಗಿತ್ತು. ಎಷ್ಟೇ ಶಾಲೆಗಳು ಬರಲಿ, ಅಲ್ಲಿಯ ಜನ ಮಾತ್ರ ಬದಲಾಗಲ್ಲ. ನಾನು ಈಗಲೂ ಊರಿಗೆ ಹೋದ್ರೆ ನನ್ನ ಏನಂಥ ಕರೀತಾರೆ ಗೊತ್ತಾ? ‘ಅಲಲ, ಏನ್ ಯಂಕ್ಟ? ಯಾವಾಗ ಬಂದ್ಲಾ?’ ಊರಲ್ಲಿ ಕುಡಿಯೋಕೆ ನೀರು ಕೇಳಿದ್ರೆ ಬೇರೆ ಲೋಟದಲ್ಲಿ ತರ್ತಾರೆ ಈಗಲೂ! ನಾನು ಎಷ್ಟೇ ಓದಲಿ, ಎಷ್ಟೇ ಸಂಪಾದನೆ ಮಾಡಲಿ. ಆ ನನ್ನ ಊರಿನ ಕಣ್ಣಲ್ಲಿ ಅದೇ ಯಂಕ್ಟ, ಅದೇ ತಂಬೂರಿ ಜವರಯ್ಯನ ಮಗ. ಹೆಜ್ಜೆ ಹೆಜ್ಜೆಗೂ ನನ್ನ ಅವಮಾನ ಮಾಡಿದ ಊರು ಬೇಡ’’ ಎಂದು ಭಾರ್ಗವ ಹೇಳುತ್ತಾನೆ.

ಇದಕ್ಕೆ ಉತ್ತರವಾಗಿ ಆತನ ಹೆಂಡತಿ ಸೌಮ್ಯಾ ‘‘ಅದು ನಿನ್ನ ಅನುಭವ. ಕಾಲ ಬದಲಾಗಿದೆ. ಎಲ್ಲವೂ ಬದಲಾಗಿರಬಹುದು, ಹಟ್ಟಿ ಕೂಡಾ. ಹಟ್ಟಿಗಳಿಗೂ ಶಾಲೆಗಳು ಬಂದಿವೆ. ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ’’ ಎಂದು ಸಮಾಧಾನ ಮಾಡುತ್ತಾಳೆ.

ಇದು ಮೈಸೂರು ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸುತ್ತಿರುವ ‘ಮೈ ಫ್ಯಾಮಿಲಿ’ ನಾಟಕದ ಬಹಳ ಪ್ರಮುಖವಾದ ಮಾತು ಮತ್ತು ಸನ್ನಿವೇಶ. ಹಟ್ಟಿಯಿಂದ ದೂರವಾಗಿ ನಗರದಲ್ಲಿ ವಾಸಿಸುವ ಭಾರ್ಗವ ಹಾಗೂ ಆತನ ಪತ್ನಿ ಸೌಮ್ಯಾಳಿಗೆ ತಮ್ಮ ಮಕ್ಕಳಿಗೆ ಸಮಯ ಕೊಡಲಾಗುತ್ತಿಲ್ಲ. ಇದಕ್ಕಾಗಿ ಸೌಮ್ಯಾ ‘‘ಮೊಬೈಲ್ ತಗೊಳ್ರೊ, ವೀಡಿಯೊ ಗೇಮ್ ಆಡ್ತಾ ಇರಿ. ಮನೆ ಬಿಟ್ಟು ಎಲ್ಲೂ ಹೋಗಬೇಡಿ’’ ಎಂದು ಹೇಳುತ್ತಾಳೆ. ಮೀಟಿಂಗ್, ಒತ್ತಡ ಎಂದು ಗಡಿಬಿಡಿಯಲ್ಲಿರುವ ಭಾರ್ಗವನೊಂದಿಗೆ ಸೌಮ್ಯಾ, ಮಕ್ಕಳನ್ನು ಕರೆದುಕೊಂಡು ನಾಲ್ಕಾರು ದಿನಗಳವರೆಗೆ ಹೊರಗೆಲ್ಲಾದರೂ ಹೋಗೋಣವೆಂದಾಗ ರಜೆ ಇಲ್ಲವೆನ್ನುತ್ತಾನೆ. ಆಗ ಇಬ್ಬರಿಗೂ ಜಗಳವಾಗುವಾಗ ಅವರ ಮಕ್ಕಳಾದ ಸ್ಯಾಮ್, ಸಾನ್ವಿ ಕಂಗಾಲಾಗಿ ನೋಡುತ್ತಾರೆ. ಆಗ ಕೆಲಸದಾಕೆ ಸಿರಿ ಸಮಾಧಾನಿಸುತ್ತಾಳೆ.

ಇದಕ್ಕೂ ಮೊದಲು ಅಂದರೆ ನಾಟಕದ ಮೊದಲ ದೃಶ್ಯವೇ ಶಾಲೆಯಿಂದ ಬರುವ ಮಕ್ಕಳು ಟಿ.ವಿ. ನೋಡುತ್ತಾರೆ ನಂತರ ಗೇಮ್ ಆಡುತ್ತಾರೆ. ಹೀಗಿರುವಾಗ ಕೆಟ್ಟ ಕನಸು ಕಾಣುವ ಸ್ಯಾಮ್‌ನಿಗೆ ಸಮಾಧಾನವಿಲ್ಲ. ಹೀಗಿದ್ದಾಗಲೇ ತನ್ನ ಓದು ನಿಲ್ಲಿಸಿ, ಹೆತ್ತವರಿಗೆ ನೆರವಾಗಲೆಂದು ಬಂದಿರುವ ಸಿರಿ ‘‘ನಾನು ಚಿಕ್ಕವಳಿದ್ದಾಗ ಮರಕೋತಿ, ಕುಂಟೆಬಿಲ್ಲೆ, ಚಿಣ್ಣಿದಾಂಡು, ಚೌಕಾಬಾರ, ಸರಗೋಲು, ಲಗೋರಿ, ಬುಗುರಿ... ಹೀಗೆ ತುಂಬಾ ಆಟವಾಡ್ತಾ ಇದ್ವಿ. ನಮ್ಮ ಅಜ್ಜ, ನೆಂಟರನ್ನು ಕೂರಿಸಿಕೊಂಡು ಬೆಳದಿಂಗಳ ರಾತ್ರೀಲಿ ಕಥೆ ಹೇಳೋರು. ಅನ್ನ ಉಂಡೆ ಮಾಡಿ ಎಲ್ಲರ ಕೈಗೆ ಕೊಡೋರು. ಇದಕ್ಕೆ ಕೈತುತ್ತು ಅಂತೀವಿ’’ ಎಂದು ನಗರದ ಮಕ್ಕಳಾದ ಸ್ಯಾಮ್, ಸಾನ್ವಿಗೆ ಹೇಳುತ್ತಾಳೆ. ನಂತರ ತನ್ನೊಂದಿಗೆ ತಂದ ಟ್ರಂಕ್ ತೆರೆದು ‘‘ಒಂದು ಸಲ ನಾನು, ನಮ್ಮವ್ವ, ನಮ್ಮಪ್ಪ ಮಾದಪ್ಪನ ಬೆಟ್ಟಕ್ಕೆ ತೇರಿಗೆ ಹೋಗಿದ್ವಿ. ಅಲ್ಲಿ ಈ ಗೊಂಬೆ ಕೊಡಿಸಿದ್ರು. ಇನ್ನೊಂದು ಸಲ ಸಂತೆಗೆ ಹೋಗಿದ್ದೆ. ಮಂಜಪ್ಪಣ್ಣ ಸ್ಟುಡಿಯೊ ಹಾಕಿದ್ದ. ನಮ್ಮವ್ವ ನನ್ನ ತಲೆ ಬಾಚಿ, ದೃಷ್ಟಿಬೊಟ್ಟು ಇಟ್ಟು ಈ ಫೋಟೊ ತೆಗೆಸಿದ್ಲು. ಇದು ನನ್ನ ಪಾಟಿಚೀಲ, ಹತ್ತನೇ ಕ್ಲಾಸಿನಲ್ಲಿದ್ದಾಗ ಚೆನ್ನಾಗಿ ಓದ್ತೀನಿ ಅಂತ ಮಾದಪ್ಪ ಮೇಷ್ಟ್ರು ಕೊಡಿಸಿದ್ರು. ಹಳಗನ್ನಡ ಪಾಠವನ್ನು ಎಷ್ಟು ಚೆನ್ನಾಗಿ ಪಾಠ ಮಾಡ್ತಾ ಇದ್ರು! ನಮ್ಮನ್ನೆಲ್ಲ ಸೇರಿಸಿಕೊಂಡು ನಾಟಕ ಮಾಡಿಸಿದ್ರು’’ ಎಂದ ಕೂಡಲೇ ಕರ್ಣ-ಕೃಷ್ಣ ಸನ್ನಿವೇಶದ ಜೊತೆಗೆ ರಾಮಾಯಣವೂ ಬರುತ್ತದೆ. ಲವಕುಶರೊಂದಿಗೆ ವಾಲ್ಮೀಕಿ ಇರುವಾಗ ರಾಮ ಹಾಗೂ ಸೀತೆಯರನ್ನು ಒಂದು ಗೂಡಿಸಬೇಕೆಂದುಕೊಳ್ಳುತ್ತಾರೆ. ಆಗ ಸೀತೆ ‘‘ಹೊತ್ತು ಹೆತ್ತವಳು ನಾನು. ಮೊಲೆಯುಡಿಸಿ ಗಟ್ಟಿಗೊಳಿಸಿದವಳು ನಾನು. ಕಣ್ಣರೆಪ್ಪೆ ಅಲುಗಿಸದೆ ಕಣ್ಣಿಗೆ ಎಣ್ಣೆ ಬಿಟ್ಟು ಕಾಪಿಟ್ಟುವಳು ನಾನು. ಸಾಕಿ ದೊಡ್ಡವರನ್ನಾಗಿಸಿ ಇವರಂಥ ರಾಜಭಟರನ್ನು ಎದುರಿಸುವ ಎದೆಗಾರಿಕೆಯನ್ನು ಉಣಿಸಿದವಳು ನಾನು. ಈಗ ಬಂದರಲ್ಲ ಅಶ್ವಮೇಧದ ನೆಪದಲ್ಲಿ ಮಕ್ಕಳು ತನ್ನವರೆಂಬ ಗಂಡುಹಕ್ಕಿನಲ್ಲಿ’’ ಎಂದು ಕೇಳುತ್ತಾಳೆ. ಆಗ ವಾಲ್ಮೀಕಿಯು ‘‘ನೀವಿಬ್ಬರೂ ಒಂದಾಗಿ ಬಾಳಿದರಷ್ಟೇ ಮಕ್ಕಳ ಮನಸ್ಸು ಅರಳುತ್ತದೆ, ಬೆಳೆಯುತ್ತದೆ, ಬೆಳಗುತ್ತದೆ ಇಲ್ಲದಿದ್ದರೆ ಇಲ್ಲ. ಅಷ್ಟಕ್ಕೂ ಈ ಮಕ್ಕಳು ಮಾಡಿದ ತಪ್ಪಾದರೂ ಏನು? ಮಕ್ಕಳಿಗೆ ತಾಯಿಯಷ್ಟೇ ತಂದೆಯೂ ಮುಖ್ಯ’’ ಎಂದು ರಾಮನನ್ನು, ಸೀತೆಯನ್ನು ಒಂದುಗೂಡಿಸಲು ಹೊರಟಾಗ ಸೀತೆ ತಡೆಯುತ್ತಾಳೆ ಎನ್ನುವಲ್ಲಿಗೆ ದೃಶ್ಯ ಮುಗಿಯುತ್ತದೆ. ಹೀಗೆ ವಾಲ್ಮೀಕಿಯಾಗಿ ಭಾರ್ಗವನ ತಂದೆ ತಂಬೂರಿ ಜವರಯ್ಯನಾಗುತ್ತಾರೆ. ಈ ದೃಶ್ಯವನ್ನು ಪ್ರೇಕ್ಷಕರೊಂದಿಗೆ ಕುಳಿತು ಭಾರ್ಗವ, ಸೌಮ್ಯಾ, ಸ್ಯಾಮ್, ಸಾನ್ವಿ ನೋಡುತ್ತಾರೆ. ಆಮೇಲೆ ರಂಗದ ಮೇಲೆ ಬಂದು ಕೂಡಿ ಬಾಳುವ ಭರವಸೆಯನ್ನು ಹೊಂದುತ್ತಾರೆ.

ಇದಕ್ಕೂ ಮೊದಲು ‘‘ಊರಲ್ಲಿ ಜಾತ್ರೆಯಿದೆ, ಹೋಗಿಬರುವೆ. ಮಕ್ಕಳನ್ನು ಕರೆದುಕೊಂಡು’’ ಎಂದು ಸಿರಿ ಹೇಳಿದಾಗ ಭಾರ್ಗವ ತಂಬೂರಿ ಜವರಯ್ಯನ ಮಗನೆಂದು ಜರಿದ ಕುರಿತು ಪ್ರಸ್ತಾಪಿಸುತ್ತಾನೆ. ಆದರೂ ಸೌಮ್ಯಾ ಮಕ್ಕಳನ್ನು ಕಳಿಸಿಕೊಡುತ್ತಾಳೆ. ಹಟ್ಟಿಯ ಬದುಕನ್ನು ನೋಡುವ ಮಕ್ಕಳು, ಅಜ್ಜನಾದ ತಂಬೂರಿ ಜವರಯ್ಯನ ಮೂಲಕ ರಾಗಿಬೋರನ ಕಥೆ ಕೇಳುತ್ತಾರೆ. ‘‘ರಾಗಿಬೋರ ಮನುಷ್ಯರಿಗೆ ಕಥೆ ಹೇಳ್ತಾ ಇರಲಿಲ್ಲ. ಯಾಕಂದ್ರೆ ಅವನ ಕಥೆ ಯಾರಿಗೂ ಅರ್ಥ ಆಗ್ತಾ ಇರಲಿಲ್ಲ. ಕಾಡಿಗೆ ಹೋಗಿ ಮರಗಿಡಗಳಿಗೆ, ಹುಳಹುಪ್ಪಟೆಗಳಿಗೆ, ಹಕ್ಕಿಗಳಿಗೆ, ಗಾಳಿಬೆಳಕಿಗೆ ಕಥೆ ಹೇಳೋಕೆ ಶುರು ಮಾಡಿದ. ಕಥೆ ಹೇಳ್ತಾ ಹೇಳ್ತಾ ಇಷ್ಟುದ್ದ ಆಗ್ತಾ ಬೆಳೆಯುತ್ತ ದೊಡ್ಡ ಆಲದಮರ ಎತ್ತರಕ್ಕೆ ಬೆಳೆದ. ಅವನ ಗಡ್ಡ ಆಲದಮರದ ಬಿಳಲುಗಳಾಗಿ ಭೂಮಿ ತಬ್ಬಿತು. ಹಕ್ಕಿಗಳು ಅವನ ಗಡ್ಡದಲ್ಲಿ ಗೂಡು ಕಟ್ಟಿದವು, ಮರಿ ಮಾಡಿದ್ವು. ಆಗೆಲ್ಲ ಅವನ ಗಡ್ಡದ ತುಂಬ ಹಕ್ಕಿಗಳದ್ದೇ ಹಾಡು’’ ಎಂದಾಗ ರಾಗಿಬೋರ ಬರುವ ದೃಶ್ಯ ಪ್ರೇಕ್ಷಕರನ್ನು ಸೆರೆಹಿಡಿಯುತ್ತದೆ. ಇದಕ್ಕೂ ಮೊದಲು ಕೆಟ್ಟ ಕನಸು ಕಾಣುವಾಗಲೂ ರಾಕ್ಷಾಸಾಕಾರದ ಆಕೃತಿ ಬಂದು ಪಬ್ಜಿ, ಫೇಸ್‌ಬುಕ್, ವಾಟ್ಸ್‌ಆ್ಯಪ್ ಸದಾ ಕಾಡುವುದನ್ನು ಕಾಣಿಸುವ ರೀತಿ ಅನನ್ಯ. ಇದಕ್ಕೆ ಶ್ರವಣ್ ಹೆಗ್ಗೋಡು ಅವರನ್ನು ಅಭಿನಂದಿಸಬೇಕು. ಹಾಗೆಯೇ ಎಲ್ಲ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಕೊನೆಗೆ ಹೆಂಡತಿಯೊಂದಿಗೆ ಹಟ್ಟಿಗೆ ಬರುವ ಭಾರ್ಗವನನ್ನು ಕಂಡ ಜವರಯ್ಯ, ಸ್ಯಾಮ್, ಸಾನ್ವಿ ಖುಷಿಯಾಗುತ್ತಾರೆ. ಈ ಖುಷಿಗೆ ಮೈ ಫ್ಯಾಮಿಲಿ ಫೋಟೋ ತೆಗಿಯೆಂದು ಸಿರಿಗೆ ಹೇಳುತ್ತಾರೆ. ಸೆಲ್ಫಿಯನ್ನೂ ಸ್ಯಾಮ್ ತೆಗೆದುಕೊಳ್ಳುತ್ತಾನೆ. ಆದರೆ ಸಿರಿಯನ್ನು ಕರೆಯುವುದಿಲ್ಲ. ಆಗ ಕಂಗಾಲಾದ ಸಿರಿಯ ಬಳಿ ಆಕೆಯ ಮಾದಪ್ಪ ಮೇಷ್ಟ್ರು ಬಂದು ‘‘ನೀನು ನಮ್ಮ ಹಟ್ಟೀಲಿ ಚುರುಕಿನ ಹುಡುಗಿ. ಚೆನ್ನಾಗಿ ಓದ್ತೀಯಾ, ಐಎಎಸ್ ಆಫೀಸರ್ ಆಗ್ತೀಯಾ, ಎಲ್ಲ ಮಕ್ಕಳಿಗೂ ಮಾದರಿ ಆಗ್ತೀಯಾ, ನಮ್ಮ ಹಟ್ಟಿಗೆ ಗುರುತು ತರ್ತೀಯಾ... ಎಷ್ಟೆಲ್ಲಾ ಕನಸು ಕಂಡಿದ್ದೆ’’ ಎನ್ನುತ್ತಾರೆ. ಆಗ ಸಿರಿ ‘‘ತಪ್ಪಾಯ್ತು ಮೇಷ್ಟ್ರೆ. ಕ್ಷಮಿಸಿಬಿಡಿ’’ ಎನ್ನುತ್ತಾಳೆ.

‘‘ಕಾಲ ಮಿಂಚಿಲ್ಲ. ಯೋಚ್ನೆ ಮಾಡು ಸಿರಿ’’ ಎನ್ನುತ್ತಾರೆ ಮೇಷ್ಟ್ರು.

‘‘ನಾನು ಓದಬೇಕು. ನಗರಕ್ಕೆ ಬರಲ್ಲ. ದುಡಿಲಿಕ್ಕೆ ಹೋಗಲ್ಲ’’ ಎಂದು ಸಿರಿ ಹೇಳುತ್ತಾ ‘‘ಫ್ಯಾಮಿಲಿ ಫೋಟೊ ಪ್ಲೀಸ್’’ ಎನ್ನುವಲ್ಲಿಗೆ ನಾಟಕ ಮುಗಿಯುತ್ತದೆ.

ಹೀಗೆ ನಾಟಕದೊಳಗೊಂದು ನಾಟಕ ಕಟ್ಟಿಕೊಡುವ, ಗ್ರಾಮೀಣ ಹಾಗೂ ನಗರ ಬದುಕಿನ ಸಂಘರ್ಷಗಳನ್ನು ಹೇಳುತ್ತಲೇ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ. ಅಲ್ಲದೆ ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡಬೇಡಿ, ತನ್ನ ಕುಟುಂಬಕ್ಕಾಗಿ ದುಡಿಯುತ್ತಿರುವೆನೆಂದು ಸದಾ ಗಡಬಿಡಿಯಲ್ಲಿರುವ, ಧಾವಂತದ ಬದುಕಿಗೆ ಒಡ್ಡಿಕೊಂಡಿರುವ ನಗರದವರಿಗೆ ಅರಿವು ಮೂಡಿಸುವ, ತಿಳುವಳಿಕೆ ಹೇಳುವ ನಾಟಕವಿದು.

ಎರಡು ಗಂಟೆಯ ಈ ನಾಟಕವನ್ನು ನೋಡಲು ತಾಳ್ಮೆ ಬಯಸುತ್ತದೆ. ಇದಕ್ಕಾಗಿ ಒಂದೂವರೆ ಗಂಟೆಗೆ ಇಳಿಸಿದರೆ ಸೂಕ್ತವೇನೋ? ಏಕೆಂದರೆ ಹೊಸ ತಲೆಮಾರಿನ ಪ್ರೇಕ್ಷಕರು ಪದೇ ಪದೇ ತಮ್ಮ ಬಳಿಯ ಮೊಬೈಲ್ ಫೋನ್ ಮೂಲಕ ವೇಳೆ ನೋಡಿಕೊಳ್ಳುವುದು, ಪಕ್ಕದವರೊಂದಿಗೆ ಮಾತನಾಡುವುದು, ಪಿಸುಮಾತುಗಳ ಮೂಲಕ ನಾಟಕ ಕುರಿತು ಕಮೆಂಟ್, ಕಾಂಪ್ಲಿಮೆಂಟ್ ವರ್ಗಾಯಿಸುವುದರಿಂದ ಇತರ ಪ್ರೇಕ್ಷಕರಿಗೆ ತೊಂದರೆ ಆಗುತ್ತದೆಂಬುದನ್ನು ಅರಿಯಲಾರದಷ್ಟು ದಡ್ಡರಲ್ಲ. ಇದನ್ನು ಹೇಳಲು ಕಾರಣ; ಬಿ.ಇಡಿ. ವಿದ್ಯಾರ್ಥಿಗಳಿಗೆಂದೇ ಈ ನಾಟಕವನ್ನು ನಿರಂತವಾಗಿ ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಆಡಲಾಗುತ್ತಿದೆ. ಶಿಕ್ಷಕರಾಗುವ ಅವರು ಕಲಿಕೆಯ ಭಾಗವೆಂದು ನಾಟಕ ನೋಡಲೆಂದೇ ಬಂದಿರುತ್ತಾರೆ. ಆದರೂ ಸುಮ್ಮನೆ ಕುಳಿತು ನೋಡದೆ, ನಾಟಕ ಮುಗಿದ ನಂತರ ಅದ್ಭುತವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವರು ಮೊದಲ ಬಾರಿ ನಾಟಕ ನೋಡಿದೆ ಎಂದವರೂ ಇದ್ದರು. ಅವರನ್ನು ಉದ್ದೇಶಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅವರು ರಂಗಾಯಣದ ನಾಟಕಗಳ ಮಹತ್ವ, ಶಿಕ್ಷಕರಾಗುವವರಿಗೆ ನಾಟಕ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ನಾಟಕ: ಮೈ ಫ್ಯಾಮಿಲಿ

ಮೂಲಕಥೆ: ಗೌತಮಿ, ಸ್ಕ್ರಿಪ್ಟ್, ಡ್ರಮಟರ್ಜಿ: ಸತೀಶ್ ತಿಪಟೂರು

ಗೊಂಬೆಗಳ ಪರಿಕಲ್ಪನೆ, ವಿನ್ಯಾಸ: ಶ್ರವಣ್ ಹೆಗ್ಗೋಡು

ರಂಗವಿನ್ಯಾಸ: ಎಚ್.ಕೆ. ದ್ವಾರಕಾನಾಥ್

ಪರಿಕರ, ಪ್ರಸಾಧನ, ವಸ್ತ್ರವಿನ್ಯಾಸ: ನಂದಿನಿ ಕೆ.ಆರ್.,

ಗೀತಾ ಮೋಂಟಡ್ಕ, ಶಶಿಕಲಾ ಬಿ.ಎನ್.

ಬೆಳಕಿನ ವಿನ್ಯಾಸ: ಮಹೇಶ್ ಕಲ್ಲತ್ತಿ

ಸಂಗೀತ, ವಿನ್ಯಾಸ, ನಿರ್ದೇಶನ: ಗಣೇಶ್ ಮಂದಾರ್ತಿ

ಪ್ರಸ್ತುತಿ: ಮೈಸೂರು ರಂಗಾಯಣ ರೆಪರ್ಟರಿ ಕಲಾವಿದರು

ರಂಗದ ಮೇಲೆ

ಡಿ.ಆರ್.ನಿತಿನ್ ಸುಳ್ಯ, ಕವಿತಾ ಎ.ಎಂ.ಅಳಗಂಚಿ, ರಘುರಾಜ ಕುಮಾರ್, ಈರಮ್ಮ ರಾಯಚೂರು, ರಕ್ಷಿತಾ ಟಿ.ಎಲ್., ಪುನೀತ್‌ಕುಮಾರ್ ಎಂ., ಮೀನಾಕ್ಷಿ ವಗದಾಳೆ, ದುರ್ಗಪರಮೇಶ್ ಆರ್., ಕೌಶಿಕ್ ಕೆ.ಆರ್.ಪೇಟೆ, ಅಭಿಷೇಕ್ ಗಾಣಿಗ, ಭಾಸ್ಕರ ಪುಟ್ಟಣ್ಣ, ಲೋಹಿತ್ ಆರ್., ಪ್ರಮೋದ್ ಎನ್., ಶರೀಫ್ ಕೆ.ಎ. ಕೊಪ್ಪಳ

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಗಣೇಶ ಅಮೀನಗಡ

contributor

Similar News