ರಂಗಭೂಮಿಗಾಗಿ ಮಿಡಿವ ‘ನಿರಂತರ’
ರಂಗಭೂಮಿಯನ್ನು ಹಲವು ಆಯಾಮಗಳಲ್ಲಿ, ಸ್ತರಗಳಲ್ಲಿ ಅನ್ವಯಿಸುತ್ತಾ ಸದಾ ಹಸಿರಾಗಿರಿಸುವ ಪ್ರಯತ್ನ ‘ನಿರಂತರ’ ಮಾಡುತ್ತಿದೆ. ರಂಗೋತ್ಸವ ಜೊತೆಗೆ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ತಯಾರಿಕೆ, ಪ್ರಕಾಶನ, ಕಾವ್ಯ ಕಮ್ಮಟ, ಮಕ್ಕಳ ಶಿಬಿರ, ಖಾದಿ ಮಳಿಗೆ, ಸ್ತಬ್ಧಚಿತ್ರ ನಿರ್ಮಾಣ, ವಸ್ತುಪ್ರದರ್ಶನ ಹೀಗೆ ಹತ್ತು ಹಲವು ಕೆಲಸಗಳನ್ನು ಯುವ ಮನಸ್ಸುಗಳೊಟ್ಟಿಗೆ ಸೇರಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಕೆಲಸ ಮಾಡುತ್ತಿದೆ.
‘‘ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳಾಗಿ ಕಾಣದೆ ಬೆಳೆಯಲಿ ಎಂದು ಬಯಸುತ್ತಾರೆ. ಇಂಥ ಪ್ಲಾಟ್ ಫಾರ್ಮ್ ಎಲ್ಲೂ ಸಿಗಲ್ಲ’’ ಎಂದು ಯಶಸ್ವಿನಿ ಎಂ. ಖುಷಿಯಿಂದ ಹೇಳಿದರು.
ಅವರು ಹೇಳಿದ್ದು ಮೈಸೂರು ‘ನಿರಂತರ’ ರಂಗ ತಂಡದ ಕುರಿತು. ಅವರು ಮೈಸೂರಿನ ಸೈಂಟ್ ಜೋಸೆಫ್ ಮಹಿಳಾ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ನಿರ್ವಹಣೆ ವಿಷಯದ ಸಹಾಯಕ ಪ್ರಾಧ್ಯಾಪಕಿ. ‘‘ಆದರೆ ಅದು ಪಾರ್ಟ್ ಟೈಮ್. ಫುಲ್ ಟೈಮ್ ನಿರಂತರ ತಂಡದೊಂದಿಗೆ’’ ಎಂದು ಹೆಮ್ಮೆಯಿಂದ ಹೇಳಿದರು.
ಅವರು ಮತ್ತು ಅವರ ಗೆಳೆಯರು ಈಗ ಮೈಸೂರಿನ ಕಲಾಮಂದಿರ ಪಕ್ಕದ ಕಿರು ರಂಗಮಂದಿರದಲ್ಲಿ ನಿರಂತರ ತಂಡ ಡಿಸೆಂಬರ್ 25-30ರವರೆಗೆ ಆಯೋಜಿಸಿರುವ ರಂಗೋತ್ಸವದಲ್ಲಿ ತೊಡಗಿಕೊಂಡಿದ್ದಾರೆ.
‘‘2010ರಲ್ಲಿ ನಿರಂತರ ತಂಡ ಪ್ರದರ್ಶಿಸುವ ಕೂಡಲ ಸಂಗಮ ನೃತ್ಯ ರೂಪಕಕ್ಕೆ ಪ್ರವೇಶಿಸಿದೆ. ಆಗ ನಾನು ಎಂಟನೇ ತರಗತಿಯಲ್ಲಿದ್ದೆ. ದೊಡ್ಡಪ್ಪ ರವಿಮೋಹನ್ ಅವರು ಈ ತಂಡದೊಂದಿಗೆ ಇದ್ದರು. ಅಕ್ಕ ಹರಿಣಿ ಈ ತಂಡಕ್ಕೆ ಸೇರಿಸಲು ಕರೆದುಕೊಂಡು ಬಂದಳು. ಆಮೇಲೆ ನಿರಂತರ ತಂಡ ಪ್ರತಿವರ್ಷ ಏರ್ಪಡಿಸುವ ‘ಸಹಜರಂಗ’ ರಂಗ ತರಬೇತಿಗೆ ಸೇರಿದೆ. ನಾಟಕಗಳಲ್ಲಿ ಅಭಿನಯಿಸಿದೆ. ಸಹಜರಂಗ ತರಬೇತಿ ಶಿಬಿರಕ್ಕೆ ಬಂದ ಸೋಮಶೇಖರ್ ಅವರೊಂದಿಗೆ ಸ್ನೇಹವಾಗಿ, ಪ್ರೀತಿಯಾಗಿ ಎರಡು ವರ್ಷಗಳ ಹಿಂದೆ ಮದುವೆಯಾದೆ. ರಂಗತರಬೇತಿಯಿಂದಾಗಿ ಉಪನ್ಯಾಸಕಳಾಗಲು, ಜನರೊಂದಿಗೆ ಮಾತಾಡಲು ಸಾಧ್ಯವಾಗಿದೆ. ಈಗ ಟೀಮ್ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಪ್ರತಿದಿನ ಕಲಿಯುವೆ, ಇದು ಜೀವನದ ಪಾಠವೂ ಆಗಿದೆ. ಜಾತಿ, ಧರ್ಮ ಮೀರಿ ಬೆರೆಯಲು, ಬೆಳೆಯಲು ಸಾಧ್ಯವಾಗಿದ್ದು ರಂಗಭೂಮಿಯಿಂದ’’ ಎಂದು ಯಶಸ್ವಿನಿ ಮತ್ತೆ ಮಾತಿಗಿಳಿದರು.
ಅವರ ಹಾಗೆ ಪತ್ರಕರ್ತ ಕೋದಂಡರಾಮ ಅವರ ಮಗಳು ಕೃತಿ ಸಹಜರಂಗ ಶಿಬಿರದಲ್ಲಿ ಭಾಗವಹಿಸಿ ಹಿಂಜರಿಕೆ ಮರೆತು, ಎಲ್ಲರೊಂದಿಗೆ ಬೆರೆತು ಉನ್ನತ ಅಭ್ಯಾಸಕ್ಕಾಗಿ ಆಸ್ಟ್ರೇಲಿಯಕ್ಕೆ ಹೋಗಿಬಂದರು. ಇವರಂತೆ ಜರ್ಮನಿಯಲ್ಲಿ ದಿನೇಶ್ ಹೆಗಡೆ ವಿಜ್ಞಾನಿಯಾಗಿದ್ದಾರೆ. ಹೀಗೆಯೇ ಪ್ರತಿಭಾ ಹೆಗಡೆ, ಗುರುಪ್ರಸಾದ, ಮಹೇಶ್, ಸುಬ್ರಹ್ಮಣ್ಯ ಮೊದಲಾದವರು ಬೇರೆ ಬೇರೆ ವೃತ್ತಿಗಳಲ್ಲಿದ್ದಾರೆ. ಇವರೆಲ್ಲ ಸಹಜರಂಗ ಶಿಬಿರದಿಂದ ಬಂದವರು. ಇವರ ಹಾಗೆ ನೂರಾರು ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ನಿರಂತರ ತಂಡ ನೆರವಾಗಿದೆ.
ಹೀಗೆ ನಿರಂತರ ಫೌಂಡೇಶನ್ ನಿರಂತರ ಬದಲಾವಣೆಗಳಿಗೆ ಹೊಂದಿಕೊಳ್ಳುವುದರೊಂದಿಗೆ, ಪರಂಪರೆಯ ಸೊಗಡನ್ನೂ ಮರೆಯದೆ, ಪ್ರಚಲಿತ ಸನ್ನಿವೇಶಗಳೊಟ್ಟಿಗೆ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಮುಖಾಮುಖಿಯಾಗುತ್ತಿದೆ. ಮನುಷ್ಯನ ಇರುವಿಕೆಯ ಅನೇಕ ರಂಗಗಳು ಆಗಾಗ ಜಡತ್ವದ ಮೋರೆ ಹೋಗುವ ಸಂದರ್ಭಗಳು ಎದುರಾಗುತ್ತಿವೆ. ಈ ಜಡತ್ವದ ನಿವಾರಣೆಗೆ, ಅದರೊಂದಿಗೆ ಸದಾ ಒಡನಾಟದಲ್ಲಿರುವ ಮನುಷ್ಯನನ್ನು ಸಂವೇದನೆಗೊಳಿಸಬೇಕು. ಈ ಕೆಲಸ ರಂಗಭೂಮಿಯಿಂದ ಬಹುಪಾಲು ಸಾಧ್ಯ. ಆದ್ದರಿಂದ ಈ ಕಾರ್ಯಕ್ಕಾಗಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ನಿರಂತರ ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ಹಲವು ಯಶಸ್ವಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಹೀಗೆ ಸ್ಪಷ್ಟವಾದ ಉದ್ದೇಶ ಮತ್ತು ಸಾಮಾಜಿಕ ಜವಾಬ್ದಾರಿಗಳಿಂದ ರಂಗಭೂಮಿ, ಜಾನಪದ, ಸಾಹಿತ್ಯ, ಪರಿಸರ ಮುಂತಾದ ಎಲ್ಲಾ ರಂಗಗಳಲ್ಲೂ ಕೆಲಸ ಮಾಡಿರುವ ನಿರಂತರ ಫೌಂಡೇಶನ್, ಜನಪರ ಹೋರಾಟಗಳಲ್ಲಿ ರಂಗಭೂಮಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯ ದುಷ್ಪರಿಣಾಮಗಳ ಕುರಿತು ಬೀದಿ ನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಕರ್ನಾಟಕದ ಮೊತ್ತ ಮೊದಲ ಮಳೆ ನೀರು ಸಂಗ್ರಹಣೆ ಕುರಿತಾದ ಜಲಜಾಥಾ ಹಾಗೂ ಕರ್ನಾಟಕದಾದ್ಯಂತ ಬಸವಣ್ಣನವರ ವಚನಗಳನ್ನಾಧರಿಸಿದ ‘ಕೂಡಲಸಂಗಮ’ ದೃಶ್ಯರೂಪಕದ 150ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರತಿವರ್ಷ ನಿರಂತರ ರಂಗ ಉತ್ಸವವನ್ನು ಹಮ್ಮಿಕೊಂಡು ಬರುತ್ತಿದೆ.
ಜನಪದ ಮಹಾಕಾವ್ಯ ‘ಜುಂಜಪ್ಪ’ ವಾಚನಾಭಿನಯ, ಡಾ. ಚಂದ್ರಶೇಖರ ಕಂಬಾರರ ‘ಶಿವರಾತ್ರಿ’ ನಾಟಕವನ್ನು ಮುಂಬೈನ ಮೈಸೂರು ಅಸೋಸಿಯೇಶನ್, ಭೋಪಾಲದ ಭಾರತ ರಂಗ ಮಂಡಲ ಹಾಗೂ ದಿಲ್ಲಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ಆಯೋಜಿಸಿದ್ದ 15ನೇ ಭಾರತ ರಂಗ ಮಹೋತ್ಸವದಲ್ಲಿ ಹಾಗೂ 2015ರ ಸಂಗೀತ ನಾಟಕ ಅಕಾಡಮಿಯ ಉತ್ಸವದಲ್ಲಿ ಪ್ರದರ್ಶನ ನೀಡಿದೆ. ಟಿ.ಕೆ. ದಯಾನಂದ್ ಪುಸ್ತಕ ಆಧಾರಿತ ‘ರಸ್ತೆ ನಕ್ಷತ್ರ’ ನಾಟಕವನ್ನು ರಂಗಾಯಣ ಆಯೋಜಿಸಿದ್ದ ಬಹುರೂಪಿ ಬಹುಭಾಷಾ ಅಂತರ್‌ರಾಷ್ಟ್ರೀಯ ರಂಗೋತ್ಸವ 2017ರಲ್ಲಿ ಪ್ರದರ್ಶನ ನೀಡಿದೆ.
ಜಯರಾಮ ರಾಯಪುರ ರಚನೆಯ ನಾಟಕ ‘ವಾರಸುದಾರಾ’ವನ್ನು ನಿರಂತರದ ಪ್ರಸಾದ್ ಕುಂದೂರು ಅವರ ನಿರ್ದೇಶನದಲ್ಲಿ ಅಭಿನಯಿಸಲಾಯಿತು, ವರಕವಿ ದ.ರಾ. ಬೇಂದ್ರೆಯವರ ‘ಸಾಯೋ ಆಟ’ ನಾಟಕವನ್ನು ನಿರಂತರದ ಹಿರಿಯ ಗೆಳೆಯರೇ ನಿರ್ದೇಶಿಸಿ ಹಲವು ಕಾಲೇಜಿನಲ್ಲಿ ಅಭಿನಯಿಸಿದರು. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮನಮೋಹಕ ಉಪಾಖ್ಯಾನಗಳನ್ನು ಆಧರಿಸಿ ಹೊಸ ನಾಟಕವನ್ನು ರಚಿಸಿದೆ, ಇದು ಕನ್ನಡ ಸಾಹಿತ್ಯದ ಹೆಚ್ಚಿನ ಉತ್ಸಾಹಿಗಳಿಗೆ ನಿಸ್ಸಂದೇಹವಾಗಿ ಅನುರಣಿಸುತ್ತದೆ. ನಾಟಕವು ಗೊರೂರಿನ ಮೋಡಿಮಾಡುವ ಜಗತ್ತನ್ನು ಪರಿಶೀಲಿಸುತ್ತದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ತಮ್ಮ ನೀಳ್ಗವಿತೆಯೊಳಗೆ ಸೃಷ್ಟಿಸಿರುವ ‘ಕೃಷ್ಣೇಗೌಡರ ಆನೆ’ ನಾಟಕ ಜೀವನ್ ಕುಮಾರ್ ಹೆಗ್ಗೋಡ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ಹೀಗೆ ನಿರಂತರ ರಂಗ ತಂಡವು 40ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಿದೆ ಮತ್ತು ರಂಗಭೂಮಿಯನ್ನು ಜನರಿಗೆ ತಲುಪಿಸಲು ಅಸಂಖ್ಯಾತ ವಿಚಾರ ಸಂಕಿರಣ, ಶಿಬಿರಗಳನ್ನು ನಡೆಸಿದೆ.
ಇದರೊಂದಿಗೆ ಪ್ರತಿವರ್ಷದ ಕೊನೆಗೆ ನಿರಂತರ ರಂಗ ಉತ್ಸವ ಆಯೋಜಿಸುತ್ತಿದೆ. ಈ ಬಾರಿಯದು 16ನೆಯದು.
ರಂಗಭೂಮಿಯನ್ನು ಹಲವು ಆಯಾಮಗಳಲ್ಲಿ, ಸ್ತರಗಳಲ್ಲಿ ಅನ್ವಯಿಸುತ್ತಾ ಸದಾ ಹಸಿರಾಗಿರಿಸುವ ಪ್ರಯತ್ನ ‘ನಿರಂತರ’ ಮಾಡುತ್ತಿದೆ. ರಂಗೋತ್ಸವ ಜೊತೆಗೆ ಕಿರುಚಿತ್ರ ಹಾಗೂ ಸಾಕ್ಷ್ಯಚಿತ್ರ ತಯಾರಿಕೆ, ಪ್ರಕಾಶನ, ಕಾವ್ಯ ಕಮ್ಮಟ, ಮಕ್ಕಳ ಶಿಬಿರ, ಖಾದಿ ಮಳಿಗೆ, ಸ್ತಬ್ಧಚಿತ್ರ ನಿರ್ಮಾಣ, ವಸ್ತುಪ್ರದರ್ಶನ ಹೀಗೆ ಹತ್ತು ಹಲವು ಕೆಲಸಗಳನ್ನು ಯುವ ಮನಸ್ಸುಗಳೊಟ್ಟಿಗೆ ಸೇರಿ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ರಂಗಭೂಮಿಯನ್ನು ಮಾಧ್ಯಮವನ್ನಾಗಿಸಿಕೊಂಡು ಕೆಲಸ ಮಾಡುತ್ತಿದೆ.
ಬದುಕು ಕಲೆಯೂ ಹೌದು, ವಿಜ್ಞಾನವೂ ಹೌದು. ಹಾಗೆಯೇ ರಂಗಭೂಮಿ ಕೂಡ. ಜಾಗೃತಿಗಾಗಿ ರಂಗಭೂಮಿ, ಮಾಹಿತಿಗಾಗಿ ರಂಗಭೂಮಿ, ಸಾಮರಸ್ಯಕ್ಕಾಗಿ ರಂಗಭೂಮಿ, ಸಮಗ್ರತೆಗಾಗಿ ರಂಗಭೂಮಿ, ಕೊನೆಯದಾಗಿ ಮನುಷ್ಯನ ಉಳಿವಿಗಾಗಿ ರಂಗಭೂಮಿ ಎಂದು ನಂಬಿರುವ ನಿರಂತರ ತಂಡವನ್ನು ಕಟ್ಟಿದವರು ಪ್ರಸಾದ್ ಕುಂದೂರು, ಸುಗುಣ, ಲಿಂಗರಾಜು, ಹರಿಪ್ರಸಾದ್ ಹಾಗೂ ಶ್ರೀನಿವಾಸ್ ಪಾಲಹಳ್ಳಿ. ಇದಕ್ಕೂ ಮೊದಲು ಪ್ರಸಾದ್ ಕುಂದೂರು, ಜಯರಾಮ್ ರಾಯಾಪುರ, ಶಶಿಧರ್ ಭಾರಿಘಾಟ್ ಇತರ ಗೆಳೆಯರು ಸೇರಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಓದುವಾಗ ನೆಳಲು ಬೆಳಕು ತಂಡ ಕಟ್ಟಿದರು. ಮುಂದೆ ಇವರೆಲ್ಲ ಎಂಎ ಓದುವಾಗ ಜನಮನ ತಂಡ ಕಟ್ಟಿದರು. ಇದರಲ್ಲಿ ಜನ್ನಿ ಕೂಡಾ ಇದ್ದರು. ಇದೇ ಮುಂದೆ ನಿರಂತರ ತಂಡವಾಯಿತು.