ಕರಾವಳಿಗೆ ಹೆಮ್ಮೆಯ ಅರೆಹೊಳೆಯ ರಂಗಮಂದಿರ

ಅರೆಹೊಳೆಯಲ್ಲಿ ಆರಂಭವಾದರೂ ಮಂಗಳೂರನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಅರೆಹೊಳೆ ಪ್ರತಿಷ್ಠಾನಕ್ಕೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವಾಧ್ಯಕ್ಷರಾಗಿದ್ದಾರೆ. ಅರೆಹೊಳೆ ಮತ್ತು ಮಂಗಳೂರಲ್ಲಿ ನಿರಂತರವಾಗಿ ನಾಟಕೋತ್ಸವ, ನೃತ್ಯೋತ್ಸವ ನಡೆಯುತ್ತಿವೆ. ಇದರೊಂದಿಗೆ ವಿವಿಧೆಡೆ ನೃತ್ಯ, ನಾಟಕ ಮತ್ತು ಯಕ್ಷಗಾನ ತರಗತಿಗಳನ್ನು ಆಯೋಜಿಸುತ್ತಿದ್ದಾರೆ.
‘‘ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರಂಗ ಶಿಕ್ಷಣ ಕೇಂದ್ರಗಳಿಲ್ಲ. ಇದಕ್ಕಾಗಿ ಮೈಸೂರಿನ ರಂಗಾಯಣ, ಹೆಗ್ಗೋಡಿನ ನೀನಾಸಂ ನೆಚ್ಚಿಕೊಳ್ಳಬೇಕು. ರಂಗಾಸಕ್ತರಿಗೆ ಅವಕಾಶ ಸಿಗಲಿ ಎನ್ನುವ ಉದ್ದೇಶದಿಂದ ಅರೆಹೊಳೆಯಲ್ಲಿ ಡಾ.ಹಂದಟ್ಟು ಹರೀಶ್ ಹಂದೆ ರಂಗಮಂದಿರ ಕಟ್ಟಿದ್ದೇವೆ’’ ಎಂದು ಮಾತು ನಿಲ್ಲಿಸಿದರು ಅರೆಹೊಳೆ ಸದಾಶಿವ ರಾವ್. ಅವರು ಅರೆಹೊಳೆ ಪ್ರತಿಷ್ಠಾನದ ಸ್ಥಾಪಕರು.
ಅರೆಹೊಳೆಯು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿದೆ. ಪುಟ್ಟ ಗ್ರಾಮವಾದ ಅರೆಹೊಳೆಯಲ್ಲಿ ರಂಗಮಂದಿರದ ಹತ್ತಿರ ಸೌಪರ್ಣಿಕ ನದಿ ಹರಿಯುತ್ತಿದೆ. ‘‘ಅರೆಹೊಳೆ ಹತ್ತಿರ ಚಿತ್ಕಾಡಿ ಗ್ರಾಮವಿದ್ದು, ನಾಟಕವಾಡಿದರೆ ೩೦೦-೩೫೦ ಜನ ಸೇರುತ್ತಾರೆ. ಆಧುನಿಕ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆದಿದೆ. ಹೀಗಿದ್ದಾಗ ರಂಗಮಂದಿರ ಕಟ್ಟಿದೆವು’’ ಎಂದು ಖುಷಿ ಹಂಚಿಕೊಂಡರು ಸದಾಶಿವ ರಾವ್.
ಇದಕ್ಕೂ ಮೊದಲು ಅಂದರೆ ೨೦೧೧ರಲ್ಲಿ ಅರೆಹೊಳೆ ಪ್ರತಿಷ್ಠಾನವು ಶಿಕ್ಷಣ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅರೆಹೊಳೆಯಲ್ಲಿ ಆರಂಭವಾದರೂ ಮಂಗಳೂರನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಅವರ ಪ್ರತಿಷ್ಠಾನಕ್ಕೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವಾಧ್ಯಕ್ಷರಾಗಿದ್ದಾರೆ. ಅರೆಹೊಳೆ ಮತ್ತು ಮಂಗಳೂರಲ್ಲಿ ನಿರಂತರವಾಗಿ ನಾಟಕೋತ್ಸವ, ನೃತ್ಯೋತ್ಸವ ನಡೆಯುತ್ತಿವೆ. ಇದರೊಂದಿಗೆ ವಿವಿಧೆಡೆ ನೃತ್ಯ, ನಾಟಕ ಮತ್ತು ಯಕ್ಷಗಾನ ತರಗತಿಗಳನ್ನು ಆಯೋಜಿಸುತ್ತಿದ್ದಾರೆ. ಈಗಾಗಲೇ ೧೫೦ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. ಅರೆಹೊಳೆ ಪ್ರತಿಷ್ಠಾನದ ಅಂಗಸಂಸ್ಥೆಯಾಗಿ ನಂದಗೋಕುಲ ರೆಪರ್ಟರಿ ಮತ್ತು ರಂಗ ಶಿಕ್ಷಣ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, ಇದರ ಭಾಗವಾಗಿ ನಂದಗೋಕುಲ ನೃತ್ಯ ತಂಡವು ಈಗಾಗಲೇ ರಾಜ್ಯದ ಅನೇಕ ಕಡೆ ನೃತ್ಯ ಪ್ರದರ್ಶನ ನೀಡಿ ಹೆಸರು ಗಳಿಸಿದೆ.

೨೦೧೪ರಲ್ಲಿ ಆರಂಭವಾದ ನಂದಗೋಕುಲ ತಂಡವು ಇಪ್ಪತ್ತು ಕಲಾವಿದರನ್ನು ಒಳಗೊಂಡಿದೆ. ಶಾಸ್ತ್ರೀಯ, ಲಘು ಶಾಸ್ತ್ರೀಯ, ಜಾನಪದ, ಯಕ್ಷಗಾನ ನೃತ್ಯ ಪ್ರದರ್ಶನ ನೀಡುವ ಈ ತಂಡವು ಸದಾಶಿವ ರಾವ್‌ರವರ ಪುತ್ರಿ ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ನೃತ್ಯಗಳನ್ನು ಪ್ರದರ್ಶಿಸುತ್ತಿದೆ. ಇದರೊಂದಿಗೆ ಕಳೆದ ವರ್ಷ ‘ಋತುಮಾನ’ ಎಂಬ ರಂಗ ತರಬೇತಿ ಶಿಬಿರವನ್ನು ಅರೆಹೊಳೆಯಲ್ಲಿ ಆಯೋಜಿಸಿತ್ತು. ಈ ವರ್ಷ ಮಕ್ಕಳಿಗಾಗಿ ರಂಗಿನಾಟ ಎನ್ನುವ ರಂಗ ತರಬೇತಿ ಶಿಬಿರವು ಮೇ ಒಂದರಿಂದ ಆರಂಭಗೊಳ್ಳಲಿದೆ.
‘‘ಮಂಗಳೂರಲ್ಲಿ ಅರೆಹೊಳೆ ನಾಟಕೋತ್ಸವ ದಶಮಾನ ಕಂಡಿದೆ. ಅರೆಹೊಳೆಯಲ್ಲಿ ನಾಟಕೋತ್ಸವವನ್ನು ಎರಡು ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಒಟ್ಟಾರೆ ರಂಗ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಸದ್ಯದಲ್ಲೇ ರಂಗ ಶಿಕ್ಷಣ ಕೇಂದ್ರ ಆರಂಭಗೊಳ್ಳಲಿದೆ’’ ಎಂದು ವಿಷಯ ಹಂಚಿಕೊಂಡರು ಕೈಗಾರಿಕೋದ್ಯಮಿಯಾಗಿರುವ ಸದಾಶಿವ ರಾವ್.
ಅವರ ನೃತ್ಯ ತಂಡದಲ್ಲಿರುವ ಚೈತ್ರಾ ಕೋಟ್ಯಾನ್ ಅವರು ಮೈಸೂರಿನ ರಂಗಾಯಣದ ರಂಗ ಶಿಕ್ಷಣ ಕೇಂದ್ರದಲ್ಲಿ ಒಂದು ವರ್ಷ ತರಬೇತಿ ಪಡೆದು ಬಂದಿದ್ದಾರೆ. ‘‘ಮೈಸೂರು ರಂಗಾಯಣದ ನಾಟಕಗಳನ್ನು ನೋಡಿದೆ. ತರಬೇತಿಯಲ್ಲಿ ಹೆಚ್ಚಿನ ತಿಳುವಳಿಕೆ ಸಿಕ್ಕಿತು. ರಂಗಭೂಮಿ ಕುರಿತು ಇತಿಹಾಸ ಅರಿತೆ. ಬದ್ಧತೆಯಿಂದ ಕೆಲಸ ಮಾಡುವುದನ್ನು ಕಲಿತೆ. ‘ಕಾಕನಕೋಟೆ’, ‘ವೆನಿಸಿನ ವ್ಯಾಪಾರಿ’, ‘ಆ ಮನಿ’, ‘ವೃಕ್ಷರಾಜ’ ಹೀಗೆ ನಾಲ್ಕು ನಾಟಕಗಳಲ್ಲೂ ಪಾತ್ರ ಮಾಡಿದೆ. ಅಭಿನಯದ ಜೊತೆಗೆ ಲೈಟಿಂಗ್, ರಂಗ ಪರಿಕರ, ರಂಗ ಚಲನೆ ಕುರಿತು ತಿಳಿದೆ. ಇದೆಲ್ಲ ಶ್ವೇತಾ ಹಾಗೂ ಸದಾಶಿವ ರಾವ್ ಅವರ ಪ್ರೋತ್ಸಾಹದಿಂದ ಸಾಧ್ಯವಾಯಿತು’’ ಎಂದು ಹೆಮ್ಮೆಯಿಂದ ಹೇಳಿದರು. ಅವರೊಂದಿಗೆ ಎಂಟು ವರ್ಷಗಳಿಂದ ನೃತ್ಯ ತಂಡದಲ್ಲಿರುವ ಅಕ್ಷಿತ್ ಅವರು ಮಂಗಳೂರಿನವರು. ಕಳೆದ ವರ್ಷ ನೀನಾಸಂನಲ್ಲಿ ಪದವಿ ಪಡೆದು, ತಿರುಗಾಟದ ನಾಟಕವಾಡಿದರು. ‘‘ನಟನೆ, ಶಿಸ್ತು, ಸಮಯಪಾಲನೆ, ವೃತ್ತಿಪರತೆಯ ಜೊತೆಗೆ ರಂಗಪರಿಕರ, ವಸ್ತ್ರವಿನ್ಯಾಸ ಮಾಡುವುದನ್ನೂ ಕಲಿತೆ’’ ಎನ್ನುವ ಹೆಗ್ಗಳಿಕೆ ಅವರದು. ‘‘ನೀನಾಸಂ ತಿರುಗಾಟದಲ್ಲಿ ಹೇಗೆ ಬದುಕಬೇಕೆಂದು ಕಲಿತೆ. ಬೇರೆ ಬೇರೆ ಊರು, ಊಟವಿತ್ತು. ಇದರಿಂದ ಹೊಂದಾಣಿಕೆ ಕಲಿತೆ. ಮುಖ್ಯವಾಗಿ ನೀನಾಸಂ ವಗ್ಗರಣೆ ಡಬ್ಬಿ ಕೊಟ್ಟಿತು. ಇದರಿಂದ ಯಾವುದೇ ಪದಾರ್ಥ ಮಾಡಬಹುದು ಎಂದು ಕಲಿತೆ. ಒಟ್ಟಾರೆ ನೀನಾಸಂನಲ್ಲಿ ಏನೆಲ್ಲಾ ಕಲಿತೆ’’ ಎನ್ನುವ ಸಾರ್ಥಕತೆ ಅವರದು.

ಮಂಗಳೂರಿನ ಬೋಂದೆಲ್‌ನಲ್ಲಿರುವ ಕಲಾಗ್ರಾಮವನ್ನು ಅರೆಹೊಳೆ ಪ್ರತಿಷ್ಠಾನ ಹಾಗೂ ಯು.ವಿ. ಉಜ್ವಲ್ ಅವರ ‘ಕಲಾಭಿ’ ತಂಡದ ಸಹಯೋಗದಲ್ಲಿ ಆರಂಭಿಸಲಾಗಿದೆ. ‘‘ಮಂಗಳೂರಿನಲ್ಲಿ ರಂಗಮಂದಿರಗಳ ಕೊರತೆಯಿದೆ. ಟೌನ್‌ಹಾಲಿನಲ್ಲಿ ಸರಿಯಾದ ಸೌಂಡ್, ಲೈಟು ಇಲ್ಲ. ನಾವೇ ಬಾಡಿಗೆಗೆ ತಂದು ಅಲ್ಲಿ ಹಾಕಬೇಕು. ಇದಕ್ಕಾಗಿ ಬೋಂದೆಲ್‌ನಲ್ಲಿ ಕಲಾಗ್ರಾಮ ಆರಂಭಿಸಿದ್ದೇವೆ. ನಿರಂತರವಾಗಿ ಅಭಿನಯ ತರಬೇತಿ ನೀಡುವ ಉದ್ದೇಶವಿದೆ. ನಾಟಕೋತ್ಸವವನ್ನೂ ಹಮ್ಮಿಕೊಳ್ಳುತ್ತೇವೆ’’ ಎನ್ನುವ ಉತ್ಸಾಹ ಉಜ್ವಲ್ ಅವರದು.
ಕಲಾಗ್ರಾಮದಲ್ಲಿ ಎರಡು ಅಡಿ ಎತ್ತರದ ರಂಗ ವೇದಿಕೆ ಇರುವುದರಿಂದ ನೆಲದ ಮೇಲೆ ಪ್ರೇಕ್ಷಕರು ಕುಳಿತು ನಾಟಕ ನೋಡಬಹುದು. ಹೀಗೆ ಕುಳಿತವರ ಹಿಂದೆ ಕುರ್ಚಿಗಳನ್ನು ಹಾಕಬಹುದು. ಒಟ್ಟು ೪೦೦ ಪ್ರೇಕ್ಷಕರು ನಾಟಕ ನೋಡಲು ಸಾಧ್ಯವಾಗಲಿದೆ.
ಹೀಗೆ ಕರಾವಳಿಯಲ್ಲಿ ಕಲಾಗ್ರಾಮ ಹಾಗೂ ರಂಗಮಂದಿರವು ರಂಗ ಚಟುವಟಿಕೆಗಳ ಮೂಲಕ ಸದ್ದು ಮಾಡುತ್ತಿವೆ. ಇದಕ್ಕೆ ಕಾರಣರಾಗಿರುವ ಸದಾಶಿವ ರಾವ್ ಹಾಗೂ ಅರೆಹೊಳೆ ಸದಾಶಿವರಾವ್ ಅವರನ್ನು ಅಭಿನಂದಿಸುವೆ.