ರಂಗದ ಏಣಿ ಏಣಗಿ; ಚಿತ್ತಭಿತ್ತಿಯಲ್ಲಿ ಚಿತ್ತರಗಿ

ಏಣಗಿ ಬಾಳಪ್ಪನವರ ಪುತ್ರ ಡಾ.ಬಸವರಾಜ, ನಿವೃತ್ತ ಇಂಜಿನಿಯರ್ ಸುಭಾಷ್, ವಕೀಲ ಮೋಹನ ಹಾಗೂ ಏಣಗಿಯಲ್ಲಿ ಕೃಷಿಕರಾಗಿರುವ ಅರವಿಂದ ಅವರು ಸೇರಿ ಪ್ರತೀ ವರ್ಷ ವಿಶ್ವ ರಂಗಭೂಮಿ ದಿನದಂದು ವೃತ್ತಿ ನಾಟಕ ಕಂಪೆನಿಗಳಿಗೆ ರಂಗ ಗೌರವ ನೀಡುತ್ತಿದ್ದಾರೆ. ಈ ವರ್ಷ ಶ್ರೀ ಕುಮಾರ ವಿಜಯ ನಾಟ್ಯ ಸಂಘದ ಒಡೆಯರಾಗಿದ್ದ ಚಿತ್ತರಂಗಿ ಗಂಗಾಧರ ಶಾಸ್ತ್ರಿಗಳ ಸೊಸೆ ವಿಜಯಲಕ್ಷ್ಮೀ ಹಿರೇಮಠ ಹಾಗೂ ಲಕ್ಷ್ಮೇಶ್ವರದ ಬಚ್ಚಾಸಾನಿಯ ಸ್ತ್ರೀ ಸಂಗೀತ ನಾಟಕ ಮಂಡಳಿಯ ಪರವಾಗಿ ಶಾರದಮ್ಮ ಹೊಂಬಳ ಅವರಿಗೆ ತಲಾ 20 ಸಾವಿರ ರೂಪಾಯಿ ನಗದು ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.;

Update: 2025-04-04 15:52 IST
ರಂಗದ ಏಣಿ ಏಣಗಿ; ಚಿತ್ತಭಿತ್ತಿಯಲ್ಲಿ ಚಿತ್ತರಗಿ
  • whatsapp icon

ಅದು ರಂಗಸಮ್ಮಿಲನವಾಗಿತ್ತು.

ಧಾರವಾಡದ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಕಳೆದ ವಾರ (ಮಾರ್ಚ್ 27) ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಾಟ್ಯಭೂಷಣ ಏಣಗಿ ಬಾಳಪ್ಪ ಪ್ರತಿಷ್ಠಾನವು ಬಾಳಪ್ಪನವರ ಸ್ಮರಣಾರ್ಥ ಏರ್ಪಡಿಸಿದ ದತ್ತಿ ಕಾರ್ಯಕ್ರಮದಲ್ಲಿ ಅನೇಕ ರಂಗಕರ್ಮಿಗಳು ಸೇರಿದ್ದರು. ವೃತ್ತಿ, ಹವ್ಯಾಸಿ ಎನ್ನದೆ ಎಲ್ಲ ಬಗೆಯ, ಎಲ್ಲ ವಯೋಮಾನದ ರಂಗಕರ್ಮಿಗಳು ಭಾಗವಹಿಸಿದ್ದರು. ಇದರಿಂದ ಅದು ರಂಗಸಮ್ಮಿಲನವಾಗಿತ್ತು. ಏಣಗಿ ಬಾಳಪ್ಪನವರ ಪುತ್ರ ಡಾ.ಬಸವರಾಜ, ನಿವೃತ್ತ ಇಂಜಿನಿಯರ್ ಸುಭಾಷ್, ವಕೀಲ ಮೋಹನ ಹಾಗೂ ಏಣಗಿಯಲ್ಲಿ ಕೃಷಿಕರಾಗಿರುವ ಅರವಿಂದ ಅವರು ಸೇರಿ ಪ್ರತೀ ವರ್ಷ ವಿಶ್ವ ರಂಗಭೂಮಿ ದಿನದಂದು ವೃತ್ತಿ ನಾಟಕ ಕಂಪೆನಿಗಳಿಗೆ ರಂಗ ಗೌರವ ನೀಡುತ್ತಿದ್ದಾರೆ. ಈ ವರ್ಷ ಶ್ರೀ ಕುಮಾರ ವಿಜಯ ನಾಟ್ಯ ಸಂಘದ ಒಡೆಯರಾಗಿದ್ದ ಚಿತ್ತರಂಗಿ ಗಂಗಾಧರ ಶಾಸ್ತ್ರಿಗಳ ಸೊಸೆ ವಿಜಯಲಕ್ಷ್ಮೀ ಹಿರೇಮಠ ಹಾಗೂ ಲಕ್ಷ್ಮೇಶ್ವರದ ಬಚ್ಚಾಸಾನಿಯ ಸ್ತ್ರೀ ಸಂಗೀತ ನಾಟಕ ಮಂಡಳಿಯ ಪರವಾಗಿ ಶಾರದಮ್ಮ ಹೊಂಬಳ ಅವರಿಗೆ ತಲಾ 20 ಸಾವಿರ ರೂಪಾಯಿ ನಗದು ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇದಕ್ಕೂ ಮೊದಲು ಏಣಗಿ ಬಾಳಪ್ಪ ಅವರ ಕುರಿತು ರಂಗಕರ್ಮಿ ಬಸವರಾಜ ಬೆಂಗೇರಿ ಅವರು ಮಾತನಾಡುವುದರ ಜೊತೆಗೆ ಬಸವರಾಜ ಸಾದರ ಅವರು ಧಾರವಾಡ ಆಕಾಶವಾಣಿಗೆ ಬಾಳಪ್ಪ ಅವರನ್ನು ಸಂದರ್ಶಿಸಿದ್ದನ್ನು ಕೇಳಿಸಿದರು. ಇದರಿಂದ ಬಾಳಪ್ಪ ಅವರ ಧ್ವನಿಯೂ ನೆರೆದವರು ಕೇಳುವಂತಾಯಿತು. ನಂತರ ಸ್ತ್ರೀ ಸಂಗೀತ ನಾಟಕ ಮಂಡಳಿ ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಮುಹಮ್ಮದಲಿ ಹೊಸೂರ ಮಾತನಾಡಿದರೆ, ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಹಾಗೂ ಅವರ ಕಂಪೆನಿ ಕುರಿತು ನಾನು ಮಾತನಾಡಿದೆ. ಪ್ರಶಸ್ತಿ ಪ್ರದಾನ ಮಾಡಿದ ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅವರು, ಚಿತ್ತರಗಿ ಕಂಪೆನಿಯಲ್ಲಿದ್ದುದನ್ನು ಸ್ಮರಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಡಾ.ಬಸವರಾಜ ಜಗಜಂಪಿ, ಡಾ.ರಾಮಕೃಷ್ಣ ಮರಾಠೆ, ಡಾ.ಪಿ.ಜಿ. ಕೆಂಪಣ್ಣವರ, ಶಿರೀಶ್ ಜೋಶಿ, ಡಾ.ಶಶಿಧರ ನರೇಂದ್ರ, ಡಾ.ಪ್ರಕಾಶ ಗರುಡ, ಹಿರಿಯ ಕಲಾವಿದ ಎಂ.ಎಸ್. ಕೊಟ್ರೇಶ, ಮಾಜಿ ಸಂಸದ ಐ.ಜಿ. ಸನದಿ ಮೊದಲಾದವರು ಭಾಗವಹಿಸಿದ್ದ ಸಮಾರಂಭವು ಅಚ್ಚುಕಟ್ಟಾಗಿತ್ತು. ಮುಖ್ಯವಾಗಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಇನ್ನೊಬ್ಬ ಮಗ ಶಿವರಾಜ, ಗಂಗಾಧರ ಶಾಸ್ತ್ರಿಗಳ ಮೊಮ್ಮಗಳು ಗಂಗಾದೇವಿ, ಅವರ ಪತಿ ವಕೀಲ ಶ್ರೀಗುರು ಹಿರೇಮಠ, ಗಂಗಾಧರ ಶಾಸ್ತ್ರಿಗಳ ಸೋದರರಾಗಿದ್ದ ಮುಪ್ಪಯ್ಯಸ್ವಾಮಿಗಳ ಮಗ ಕುಮಾರಸ್ವಾಮಿ ಹಿರೇಮಠ, ಗಂಗಾಧರ ಶಾಸ್ತ್ರಿಗಳ ಇನ್ನೊಬ್ಬ ಮೊಮ್ಮಗಳು ಲಕ್ಷ್ಮೀ ಮಹಾಂತೇಶ ಕಂಬಾಳಿಮಠ, ಚಿತ್ತರಗಿ ಕಂಪೆನಿಯನ್ನು ಮುನ್ನಡೆಸಿಕೊಂಡು ಹೊರಟಿರುವ ರೇಣುಕಾ ಅವರಲ್ಲದೆ ನಿವೃತ್ತ ಬ್ಯಾಂಕ್ ಉದ್ಯೋಗಿ, ಬಾಗಲಕೋಟೆಯಲ್ಲಿ ಗೆಳೆಯರ ಬಳಗದ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಬಸವರಾಜ ಭಗವತಿ ಅವರು ಈ ಕಾರ್ಯಕ್ರಮಕ್ಕೆಂದೇ ಬಂದಿದ್ದರು. ಇದು ರಂಗಭೂಮಿಯ ಶಕ್ತಿ.

ಮದುವೆಗಳಿಗೆ ನೆಂಟರು ಮಾತ್ರ ಸೇರಿದರೆ, ರಂಗಭೂಮಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭೇದಭಾವವಿಲ್ಲದೆ ಎಲ್ಲರೂ ಸೇರಿದ್ದು ಸ್ಮರಣೀಯ. ಮುಖ್ಯವಾಗಿ ಕನ್ನಡ ರಂಗಭೂಮಿಯ ಚರಿತ್ರೆಯಲ್ಲಿ ಬೆಳಗಾವಿ ಜಿಲ್ಲೆಯ ಕೊಡುಗೆ ಅನನ್ಯವೆನಿಸಿದೆ ಎನ್ನುವುದು ಹಿರಿಯ ಲೇಖಕ, ಬೆಳಗಾವಿಯ ಬಿ.ಎಸ್. ಗವಿಮಠ ಅವರ ಅಭಿಮತ. ಅವರು ಅವತ್ತು ಬಾರದಿದ್ದರೂ ಅವರ ಲೇಖನ ಗಮನ ಸೆಳೆಯಿತು. ‘ಗದಗಿನಲ್ಲಿ ಸಕ್ಕರಿ ಬಾಳಾಚಾರ‌್ಯರು ಅಂದರೆ ಶಾಂತಕವಿಗಳು ಪ್ರಾರಂಭಿಸಿದ ಕೃತಪುರ ನಾಟಕ ಮಂಡಳಿ (1870) ಮೊದಲ ನಾಟಕ ಕಂಪೆನಿಯೆಂಬ ದಾಖಲೆ ಪಡೆದಿದೆ. ಆದರೆ ಅದಕ್ಕೂ ಮೊದಲೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಶಿ (ಹಲಸಗಿ)ಯಲ್ಲಿ ಹಲಸಗಿ ನಾಟಕ ಮಂಡಳಿ ಎಂಬ ವೃತ್ತಿಪರ ನಾಟಕ ಮಂಡಳಿ ಇತ್ತು ಎಂಬುದರ ಬಗ್ಗೆ ಕೂಡ ದಾಖಲೆಗಳು ಲಭ್ಯವಾಗಿವೆ. ಅದು ನಮ್ಮ ಹೆಮ್ಮೆ. ಆ ಹಲಸಗಿಯ ಸಂಡಗಿ, ಮಂಡಗಿ ಕುಟುಂಬಗಳೇ ಆ ಕಂಪೆನಿಗೆ ಜೀವಾಳವಾಗಿದ್ದವು. ಇಂದು ಕೂಡ ಬೆಳಗಾವಿಯ ಅನಂತಶಯನಗಲ್ಲಿಯಲ್ಲಿ ಮಂಡಗಿ ಕುಟುಂಬ ನೆಲೆ ನಿಂತಿದೆ’ ಎನ್ನುವುದು ಅವರ ಅಭಿಪ್ರಾಯ.

‘ಕರ್ನಾಟಕದ ಇಂದಿನ ಉತ್ತರ ಭಾಗ ಮತ್ತು ಮಹಾರಾಷ್ಟ್ರದ ಉತ್ತರ ಭಾಗದ ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ತುಂಬ ಸಾಮ್ಯತೆ ಇದೆ. ಕನ್ನಡ ಮತ್ತು ಮರಾಠಿ ರಂಗಭೂಮಿಯು ಪರಸ್ಪರ ಪ್ರಭಾವ ಪಡೆದುಕೊಂಡು ಬೆಳೆದು ಬಂದಿವೆ. ಒಂದು ಕಾಲಕ್ಕೆ ಬೆಳಗಾವಿಯಲ್ಲಿ ಸಿನೆಮಾ ಥಿಯೇಟರುಗಳೇ ಇರಲಿಲ್ಲ. ಖಡೇಬಝಾರದಲ್ಲಿ ಶಿವಾನಂದ ಥಿಯೇಟರ್ ಇತ್ತು. ಹಂಸ ಟಾಕೀಸು ಒಂದು ಕಾಲಕ್ಕೆ ಲಕ್ಷ್ಮೀ ಥಿಯೇಟರ್ ಎನಿಸಿತ್ತು. ಬೆಳಗಾವಿಯ ಶಹಾಪುರ ಪ್ರದೇಶದಲ್ಲಿ ದನಗಳಿಗಾಗಿ ಮೇವು ಮಾರುತ್ತಿದ್ದ ಮಾರುಕಟ್ಟೆ ಇರುವೆಡೆಗೆ ಅಂಬಿಕಾ ಥಿಯೇಟರ್ ಇತ್ತೆಂದು ಕೇಳಿದ್ದೇನೆ. ಅಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ರೆಕ್ಸ್ ಥಿಯೇಟರ್ ಪಕ್ಕದ ಬಯಲಿನಲ್ಲಿ ಮಾಸ್ಟರ್ ಹಿರಣ್ಣಯ್ಯನವರು ನಾಟಕವಾಡಿದ ಬಗ್ಗೆ ಕೇಳಿದ್ದೇನೆ. 1901ರಲ್ಲಿ ಆರಂಭಗೊಂಡ ಕೊಣ್ಣೂರು ನಾಟಕ ಕಂಪೆನಿಯು ಶಿವಮೂರ್ತಿ ಸ್ವಾಮಿ ಕಣಬರಗಿಮಠರ ರಂಗಪ್ರೀತಿ, ಕನ್ನಡ ಪ್ರೀತಿಯ ಫಲವಾಗಿ ಹೊಸ ಇತಿಹಾಸ ನಿರ್ಮಿಸಿತು. ಅತಿ ಹೆಚ್ಚು ಬಂಡವಾಳ ತೊಡಗಿಸಿದ ಅತಿ ಶ್ರೀಮಂತ ನಾಟಕ ಕಂಪೆನಿ ಎನಿಸಿತು.

ಒಂದು ಕಾಲಕ್ಕೆ ಬೆಳಗಾವಿ ಜಿಲ್ಲೆ ವೃತ್ತಿ ನಾಟಕ ಕಂಪೆನಿಗಳ ತವರುಮನೆ ಎನಿಸಿತ್ತು. ನೂರಾರು ಕಂಪೆನಿಗಳು ಹುಟ್ಟಿಕೊಂಡು ಕನ್ನಡವನ್ನು ಜೀವಂತವಿರಿಸಿದ್ದು ಈಗ ಇತಿಹಾಸ. ಏಣಗಿ ಬಾಳಪ್ಪನವರ ‘ಬಸವೇಶ್ವರ’ ನಾಟಕ ವರ್ಷದುದ್ದಕ್ಕೂ ತುಂಬಿದ ಗೃಹಗಳಿಂದ ಪ್ರದರ್ಶನ ನೀಡಿ ದಾಖಲೆ ಸ್ಥಾಪಿಸಿದ್ದು ಯಾರೂ ಮರೆತಿಲ್ಲ. ಅವರ ‘ಮಾವ ಬಂದ್ನಪೊ ಮಾವ’ ಕರ್ನಾಟಕ-ಮಹಾರಾಷ್ಟ್ರಗಳೆರಡೂ ರಾಜ್ಯಗಳಲ್ಲಿ ಸಾಂಸ್ಕೃತಿಕ ಸೇತುವೆ ನಿರ್ಮಿಸಿತು.

ಏಣಗಿ ಬಾಳಪ್ಪನವರದು ಬಣ್ಣದ ಬದುಕು. ಬಣ್ಣ ಹಚ್ಚಿಕೊಂಡು ಬದುಕು ಸಾಗಿಸಿದರು. ಆದರೆ ಅವರು ತಮ್ಮ ಬದುಕಿನ ಬಣ್ಣವನ್ನು ಕಳೆದುಕೊಳ್ಳಲಿಲ್ಲ, ಬದಲಾಗಲಿಲ್ಲ. ಒಂದೇ ತೆರನಾಗಿ ಬದುಕಿದರು. ನಾಡಿಗಾಗಿ-ನುಡಿಗಾಗಿ ನಾಟಕವಾಡಿ ದುಡ್ಡು ಸಂಗ್ರಹಿಸಿಕೊಟ್ಟರು. ದೇವಾಲಯಗಳ ಜೀರ್ಣೋದ್ಧಾರಕ್ಕೆ, ಶಿಕ್ಷಣ ಸಂಸ್ಥೆಗಳನ್ನು ಕಟ್ಟಲಿಕ್ಕೆ, ಹಲವಾರು ಕಡೆಗೆ ನಿಧಿ ಸಂಗ್ರಹಿಸಿ ಕೊಟ್ಟರು. ‘ಕರ್ನಾಟಕ ಏಕೀಕರಣ’ ನಾಟಕವಾಡಿದರು. ಅವರ ಅಭಿನಯ ಕಂಡು ಧಾರವಾಡದ ಮೃತ್ಯುಂಜಯ ಅಪ್ಪಗಳು ಶಿರಸಾಷ್ಟಾಂಗ ನಮಸ್ಕಾರ ಹಾಕಿದ್ದು ಆ ನಟಶ್ರೇಷ್ಠನಿಗೆ ಸಿಕ್ಕ ಮಹಾನ್ ಗೌರವ. ಇಂಥ ಅಭಿಜಾತ ಕಲಾವಿದ 1917ರಲ್ಲಿ ನಿಧನರಾದರು. ಅವರ ಹೆಸರಿನ ರಂಗ ಪ್ರತಿಷ್ಠಾನ ಆಗಬೇಕು’ ಎನ್ನುವುದು ಗವಿಮಠ ಅವರ ಆಶಯ.

ಈಗಾಗಲೇ ಅವರ ಕುಟುಂಬದವರೇ ಪ್ರತಿಷ್ಠಾನ ಕಟ್ಟಿಕೊಂಡಿರುವುದರಿಂದ ಇನ್ನೇನಿದ್ದರೂ ಏಣಗಿ ಬಾಳಪ್ಪನವರ ಕುರಿತು ಸ್ಮಾರಕವಾಗಬೇಕು. ಅದು ಬೆಳಗಾವಿಯಲ್ಲಿ. ಬಾಳಪ್ಪನವರ ಕುಟುಂಬ ಏಣಗಿಯಲ್ಲಿ ಸಂಗ್ರಹಿಸಿದ ಪರಿಕರಗಳನ್ನು ಈ ಸ್ಮಾರಕದಲ್ಲಿಡಬಹುದು. ಶತಾಯುಷಿಯಾಗಿದ್ದ ಬಾಳಪ್ಪನವರ ಬದುಕನ್ನು ಅರಿಯುವುದರ ಜೊತೆಗೆ ಉತ್ತರ ಕರ್ನಾಟಕದ ರಂಗಭೂಮಿಯ ಚರಿತ್ರೆಯನ್ನು ಅರಿಯಲು ಸಾಧ್ಯವಾಗುವುದು. ಹೀಗೆಯೇ ಕನ್ನಡ ರಂಗಭೂಮಿಯ ಚಿತ್ತಭಿತ್ತಿಯಲ್ಲಿ ಉಳಿದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ ಕುರಿತೂ ಪ್ರತಿಷ್ಠಾನ ಇಲ್ಲವೆ ಸ್ಮಾರಕ ಆಗಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News