ಮಹಿಳೆಯರ ‘ಆ ದಿನಗಳಲ್ಲಿ’ ನೋವು ನಿವಾರಕ ಮಾತ್ರೆಗಳ ಸೇವನೆ ಒಳ್ಳೆಯದೇ?

Update: 2017-06-29 09:50 GMT

ಮಾಸಿಕ ಋತುಚಕ್ರ ಏಕಾದರೂ ಬರುತ್ತದೆಯೋ ಎಂದು ಹಲವು ಮಹಿಳೆಯರಿಗೆ ಅನ್ನಿಸುವುದಿದೆ. ಆ ದಿನಗಳಲ್ಲಿ ಸ್ನಾಯುಗಳ ಸೆಳೆತದಿಂದ ತೀವ್ರವಾಗಿ ಕಾಡುವ ಹೊಟ್ಟೆನೋವಿನಿಂದ ಪಾರಾಗಲು ಹೆಚ್ಚಿನ ಮಹಿಳೆಯರು ನೋವು ನಿವಾರಕ ಮಾತ್ರೆಗಳನ್ನು ನುಂಗುತ್ತಾರೆ. ಇದು ತಾತ್ಕಾಲಿಕ ಉಪಶಮನವನ್ನೇನೋ ನೀಡುತ್ತದೆ. ಆದರೆ ದೀರ್ಘ ಕಾಲಿಕ ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ನೋವು ನಿವಾರಕ ಮಾತ್ರೆಗಳ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡರೆ ಮಹಿಳೆ ಯರು ಖಂಡಿತವಾಗಿಯೂ ಅವುಗಳನ್ನು ಸೇವಿಸುವ ಮುನ್ನ ಎರಡೆರಡು ಬಾರಿ ಯೋಚಿಸುತ್ತಾರೆ. ಮಹಿಳೆ ರಜಸ್ವಲೆಯಾಗಿರುವ ಆ ದಿನಗಳಲ್ಲಿ ಅವರನ್ನು ಕಾಡುವ ಸ್ನಾಯುಗಳ ಸೆಳೆತಕ್ಕೆ ಕಾರಣಗಳೇನು? ಗರ್ಭಕೋಶದಲ್ಲಿರುವ ಸ್ನಾಯುಗಳು ದಿಢೀರ್ ಆಗಿ ಕೊಂಚ ಸಂಕುಚಿತಗೊಳ್ಳುತ್ತವೆ ಮತ್ತು ಇದರಿಂದಾಗಿ ಸಮೀಪದ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ಹೀಗಾದಾಗ ಗರ್ಭಕೋಶಕ್ಕೆ ಆಮ್ಲಜನಕದ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ. ಇದು ನೋವಿಗೆ ಮುಖ್ಯಕಾರಣವಾಗಿದೆ.

ನೋವು ನಿವಾರಕಗಳೇನು ಮಾಡುತ್ತವೆ?

 ತಕ್ಷಣ ನೋವಿನಿಂದ ಉಪಶಮನ ನೀಡುವ ಹಲವಾರು ಸ್ಟಿರಾಯ್ಡಿರಹಿತ ಉರಿಯೂತ ಶಮನಕಾರಿ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮುಟ್ಟಿನ ಅವಧಿ ಯಲ್ಲಿ ಶರೀರದಲ್ಲಿಯ ಪ್ರಮುಖ ಹಾರ್ಮೋನ್ ಆಗಿರುವ ಪ್ರೊಸ್ಟಾಗ್ಲಾಂಡಿನ್ ಅತಿಯಾಗಿ ಉತ್ಪಾದನೆಯಾಗುತ್ತದೆ ಮತ್ತು ಇದು ಸ್ನಾಯುಗಳ ಸೆಳೆತಕ್ಕೆ ಕಾರಣವಾಗುತ್ತದೆ. ಈ ಔಷಧಿಗಳು ಪ್ರೊಸ್ಟಾಗ್ಲಾಂಡಿನ್‌ನ ಉತ್ಪಾದನೆಯನ್ನು ತಾತ್ಕಾಲಿವಾಗಿ ಸ್ಥಗಿತಗೊಳಿಸುತ್ತವೆ. ಈ ಹಾರ್ಮೋನ್ ಶರೀರದಲ್ಲಿನ ಕೆಲವು ಪ್ರಮುಖ ಚಟುವಟಿಕೆಗಳಲ್ಲಿ ಮುಖ್ಯಪಾತ್ರವನ್ನು ಹೊಂದಿದೆ. ಹೀಗಾಗಿ ಈ ನೋವು ನಿವಾರಕ ಔಷಧಿಗಳನ್ನು ಮೇಲಿಂದ ಮೇಲೆ ಸೇವಿಸು ವುದು ಹಲವು ದುಷ್ಪರಿಣಾಮಗಳಿಗೆ ಕಾರಣವಾಗಬಹುದು.

ನೋವು ನಿವಾರಕಗಳ ಅಡ್ಡಪರಿಣಾಮಗಳು

ಮುಟ್ಟಿನ ಸಮಯದಲ್ಲಿ ನೋವು ನಿವಾರಕಗಳ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳ ಪಟ್ಟಿ ಬೆಳೆಯುತ್ತಲೇ ಹೋಗಬಹುದು. ಯಕೃತ್ತಿಗೆ ಹಾನಿ, ರಕ್ತಸ್ರಾವದಲ್ಲಿ ಏರುಪೇರು, ಅತಿಸಾರ, ವಾಕರಿಕೆ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ಯಾದಿಗಳು ಈ ಪಟ್ಟಿಯಲ್ಲಿ ಸೇರುತ್ತವೆ. ಕೆಲವು ನೋವು ನಿವಾರಕಗಳನ್ನು ನೋವಿಗೆ ಸರಿಯಾದ ಕಾರಣಗಳನ್ನು ತಿಳಿದುಕೊಳ್ಳದೆ ಸೇವಿಸುವುದರಿಂದ ನೋವು ಇನ್ನಷ್ಟು ಹೆಚ್ಚಬಹುದು. ನೋವು ನಿವಾರಕಗಳನ್ನು ಪದೇ ಪದೇ ಸೇವಿಸುತ್ತಿದ್ದರೆ ಅದೇ ಒಂದು ಚಟವಾಗಬಹುದು ಮತ್ತು ಮಹಿಳೆಯರು ಅಲ್ಝೀಮರ್ಸ್ ಕಾಯಿಲೆಗೆ ತುತ್ತಾಗುವ ಗಂಭೀರ ಅಪಾಯವೂ ಇದೆ.

ನೋವನ್ನು ನಿವಾರಿಸಲು ಇತರ ಸುರಕ್ಷಿತ ಮಾರ್ಗಗಳು

ಮುಟ್ಟಿನ ಅವಧಿಯಲ್ಲಿನ ನೋವು ನಿವಾರಣೆಗಾಗಿ ಇತರ ಕೆಲವು ಸುರಕ್ಷಿತ ಮಾರ್ಗಗಳಿವೆ.

ಕಡಿಮೆ ಕೊಬ್ಬಿರುವ ಆಹಾರ ಸೇವನೆ: ಇಂತಹ ಆಹಾರ ಸೇವನೆಯು ಶರೀರವನ್ನು ಒಟ್ಟಾರೆಯಾಗಿ ಸುಸ್ಥಿತಿಯಲ್ಲಿರಿಸುವ ಜೊತೆಗೆ ಋತುಚಕ್ರದ ಅವಧಿಯಲ್ಲಿ ನೋವನ್ನು ತಗ್ಗಿಸುತ್ತದೆ.

ಪೂರಕ ವಿಟಮಿನ್‌ಗಳು: ಬಿ1,ಡಿ3 ಮತ್ತು ಮ್ಯಾಗ್ನೇಶಿಯಂ ಸಮೃದ್ಧವಾಗಿರುವ ಪೂರಕ ವಿಟಮಿನ್‌ಗಳ ಸೇವನೆಯು ನೋವನ್ನು ನಿವಾರಿಸುವ ಉತ್ತಮ ವಿಧಾನವಾಗಿದೆ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ.

ಹೊಟ್ಟೆಯ ಭಾಗವನ್ನು ಬಿಸಿಯಾಗಿಡಿ: ಇದು ಮುಟ್ಟಿಗೆ ಸಂಬಂಧಿಸಿದ ಸಮಸ್ಯೆಗಳಿ ಗೊಂದು ಖಂಡಿತ ಪರಿಹಾರವಾಗಿದೆ. ಹೊಟ್ಟೆ ಮತ್ತು ಕೆಳಬೆನ್ನಿನ ಮೇಲೆ ಬಿಸಿನೀರಿನ ಪ್ಯಾಕ್ ಇಡುವುದರಿಂದ ನೋವಿನಿಂದ ಹೆಚ್ಚಿನ ಉಪಶಮನವನ್ನು ಪಡೆಯಬಹುದು.

ಹಿಗ್ಗಿಸುವ ವ್ಯಾಯಾಮಗಳು: ಕೆಲವು ಯೋಗ ಭಂಗಿಗಳು ಮತ್ತು ಶರೀರವನ್ನು ಹಿಗ್ಗಿಸುವ ವ್ಯಾಯಾಮಗಳನ್ನು ಮಾಡುವುದು ಮುಟ್ಟಿನ ನೋವನ್ನು ತಗ್ಗಿಸಲು ಉತ್ತಮ ಮತ್ತು ಆರೋಗ್ಯಕರ ವಿಧಾನವಾಗಿದೆ.

ಸಾರಭೂತ ತೈಲಗಳಿಂದ ಮಸಾಜ್: ಲ್ಯಾವೆಂಡರ್ ಎಣ್ಣೆ, ಕ್ಲಾರಿ ಸೇಜ್ ಎಣ್ಣೆ, ಸಿಪ್ರೆಸ್ ಎಣ್ಣೆಯಂತಹ ಸಾರಭೂತ ಎಣ್ಣೆಗಳಿಂದ ಮಸಾಜ್ ಮಾಡುವುದರಿಂದ ನೋವಿನಿಂದ ಉಪಶಮನ ಸಾಧ್ಯ.

ಹರ್ಬಲ್ ಟೀ ಸೇವನೆ: ನೋವಿನಿಂದ ಪಾರಾಗಲು ಶುಂಠಿ ಮತ್ತು ದಾಲ್ಚಿನ್ನಿಯಂತಹ ಅಡುಗೆಮನೆಯಲ್ಲಿನ ವಸ್ತುಗಳನ್ನು ಬಳಸಿ ಮಾಡಿದ ಬಿಸಿಬಿಸಿಯಾದ ಚಹಾದ ಸೇವನೆಗಿಂತ ಉತ್ತಮವಾದ ಅನ್ಯ ಮಾರ್ಗ ಬೇರಿಲ್ಲ.

ಈ ಉಪಾಯಗಳನ್ನು ಬಳಸಿಯೂ ಮುಟ್ಟಿನ ನೋವು ಕಡಿಮೆಯಾಗಿಲ್ಲವೆಂದರೆ ಏನಾದರೂ ವೈದ್ಯಕೀಯ ಸಮಸ್ಯೆಯಿರಬಹುದು ಮತ್ತು ಇದಕ್ಕಾಗಿ ತಜ್ಞವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News