ನೀವು ಮೊಬೈಲ್ ಫೋನ್‌ನ್ನು ಜೇಬಿನಲ್ಲಿಡಬಾರದು....ಏಕೆ ಗೊತ್ತೇ?

Update: 2017-07-07 09:02 GMT

ಮೊಬೈಲ್ ಫೋನ್ ಇಂದು ನಮ್ಮ ಮೂಲಭೂತ ಅಗತ್ಯಗಳಲ್ಲೊಂದಾಗಿಬಿಟ್ಟಿದೆ. ಮೊಬೈಲ್ ಫೋನ್ ಕೈಯಲ್ಲಿ ಇಲ್ಲದೇ ನಾವು ಮನೆಯಿಂದ ಹೊರಗೆ ಬೀಳುವುದೇ ಇಲ್ಲ. ಇಡೀ ದಿನ ಮೊಬೈಲ್ ಇಲ್ಲದೆ ಕಳೆಯುವುದನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಇಡೀ ದಿನ ಮೊಬೈಲ್ ಫೋನ್‌ನ್ನು ನಮ್ಮ ದೇಹಕ್ಕೆ ಹತ್ತಿರವೇ ಇಟ್ಟುಕೊಳ್ಳುವುದು ಎಷ್ಟು ಸುರಕ್ಷಿತ ಎನ್ನುವುದನ್ನು ಪ್ರಸಕ್ತ ಅಧ್ಯಯನಗಳು ಸ್ಪಷ್ಟಪಡಿಸಿಲ್ಲ.

ಮೊಬೈಲ್ ವಿಕಿರಣದ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನಗಳು ನಡೆಯಬೇಕಿವೆ. ಮೊಬೈಲ್ ಫೋನ್‌ನ್ನು ನಿಮ್ಮ ಶರ್ಟ್ ಅಥವಾ ಪ್ಯಾಂಟ್‌ನ ಜೇಬಿನಲ್ಲಿ ಇಟ್ಟುಕೊಳ್ಳುವುದು ಆರೋಗ್ಯಕ್ಕೆ ಹಾನಿಕರ ಎನ್ನುವುದು ಆರೋಗ್ಯ ತಜ್ಞರ ಸದ್ಯದ ಪ್ರತಿಪಾದನೆ. ಅವರ ಕೆಲವು ಅಭಿಪ್ರಾಯಗಳು ಇಲ್ಲಿವೆ.....

ಸಂತಾನಶಕ್ತಿ ಕುಂಠಿತ

ಪ್ಯಾಂಟ್‌ನ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಳ್ಳುವುದರಿಂದ ಅದರಿಂದ ಹೊರಹೊಮ್ಮುವ ವಿದ್ಯುದಾಯಸ್ಕಾಂತೀಯ ಅಲೆಗಳು ವೀರ್ಯಾಣುಗಳ ಉತ್ಪಾದನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸ್ಪರ್ಮಟೊರೆವಾ ಎಂಬ ಜೀವಕೋಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರ ಫಲವಾಗಿ ಪುರುಷರಲ್ಲಿ ಸಂತಾನಶಕ್ತಿ ಕುಂದಬಹುದು.

ವೀರ್ಯಾಣುಗಳ ಸಂಖ್ಯೆ

ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆನ್ ಸ್ಥಿತಿಯಲ್ಲಿ ತಮ್ಮ ಪ್ಯಾಂಟ್ ಜೇಬಿನಲ್ಲಿ ಸುದೀರ್ಘ ಅವಧಿಗೆ ಇಟ್ಟುಕೊಳ್ಳುವ ಪುರುಷರಲ್ಲಿ ವಿಕಿರಣವು ವೀರ್ಯಾಣುಗಳ ಸಂಖ್ಯೆ ಮತ್ತು ಅವುಗಳ ಚಲನಶೀಲತೆಯು ಕುಗ್ಗಬಹುದು ಎಂದು ಅಧ್ಯಯನವೊಂದು ಹೇಳಿದೆ. ಅಲ್ಲದೆ ವೈದ್ಯಕೀಯ ಪರಿಭಾಷೆಯಲ್ಲಿ ‘ಆಕ್ಸಿಡೇಟಿವ್ ಸ್ಟ್ರೆಸ್’ ಎಂದು ಕರೆಯಲಾಗುವ ಒತ್ತಡಕ್ಕೆ ಕಾರಣವಾಗುವ ಜೊತೆಗೆ ಡಿಎನ್‌ಎ ರಚನೆಗೂ ಹಾನಿಯನ್ನುಂಟು ಮಾಡಬಹುದು.

ನಿಮಿರುವಿಕೆ ದೌರ್ಬಲ್ಯ

ಮೊಬೈಲ್ ಫೋನ್‌ನ್ನು ಯಾವಾಗಲೂ ಪ್ಯಾಂಟ್ ಜೇಬಿನಲ್ಲಿರಿಸಿಕೊಳ್ಳುವ ಪುರುಷರಲ್ಲಿ ನಿಮಿರುವಿಕೆ ದೌರ್ಬಲ್ಯ ಕಾಣಿಸಿಕೊಳ್ಳುವ ಅಪಾಯವಿದೆ.

ಕ್ಯಾನ್ಸರ್,ಹೃದ್ರೋಗ

ಹಾಗೆಂದು ಮೊಬೈಲ್ ಫೋನ್‌ನ್ನು ಶರ್ಟ್ ಜೇಬಿನಲ್ಲಿ ಇಟ್ಟುಕೊಳ್ಳುವುದೂ ಸುರಕ್ಷಿತವಲ್ಲ. ಅದರಿಂದ ಹೊರಹೊಮ್ಮುವ ವಿಕಿರಣವು ಕ್ಯಾನ್ಸರ್‌ಗೆ ಕಾರಣವಾಗ ಬಹುದು, ಜೊತೆಗೆ ಹೃದ್ರೋಗಗಳನ್ನೂ ತರಬಹುದು.

ಮೊಬೈಲ್ ಸಂಕೇತಗಳು

 ಮೊಬೈಲ್ ಫೋನ್‌ಗಳಿಂದ ಹೆಚ್ಚಿನ ಅಪಾಯ ಅವುಗಳ ಸಂಕೇತಗಳ ಮೂಲಕ ಉಂಟಾಗುತ್ತದೆ. ಮೊಬೈಲ್ ಫೋನ್‌ಗಳು ಆ್ಯಂಟೆನ್ನಾದ ಮೂಲಕ ರೇಡಿಯೋ ಅಲೆಗಳನ್ನು ಹೊರಡಿಸುತ್ತವೆ. ಹೀಗಾಗಿ ಮೊಬೈಲ್ ಪೋನ್ ನಮ್ಮ ಶರೀರಕ್ಕೆ ಅತಿ ಹತ್ತಿರವಾಗಿದ್ದರೆ ನಮ್ಮ ಅಂಗಾಂಶಗಳು ಅದನ್ನು ಹೀರಿಕೊಂಡು ಹಾನಿಗೊಳಗಾಗುತ್ತವೆ. ಮೊಬೈಲ್ ಫೋನ್‌ಗಳು ಸಂಕೇತಗಳನ್ನು ಕಳುಹಿಸುತ್ತವೆ ಮತ್ತು ಸಂಕೇತಗಳನ್ನು ಸ್ವೀಕರಿಸುತ್ತವೆ. ಈ ಸಂಕೇತಗಳು ತಕ್ಷಣಕ್ಕಲ್ಲದಿದ್ದರೂ ಸುದೀರ್ಘಾವಧಿಯಲ್ಲಿ ನಮ್ಮ ಜೀವಕೋಶಗಳನ್ನು ಬಿಸಿಯಾಗಿಸುವ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗ ಬಹುದು.

ಇತರ ಅಂಶಗಳು

 ಕರೆಗಳ ಸಂಖ್ಯೆ, ಮಾತನಾಡುವ ಅವಧಿ ಮತ್ತು ಮೊಬೈಲ್ ಫೋನ್‌ನ್ನು ನಿಮ್ಮ ದೇಹದ ಎಷ್ಟು ಸಮೀಪವಿಟ್ಟುಕೊಳ್ಳುತ್ತೀರಿ ಎನ್ನುವುದು ಆರೋಗ್ಯಕ್ಕೆ ಅಪಾಯವನ್ನು ಹೆಚ್ಚಿಸುವ ಅಥವಾ ತಗ್ಗಿಸುವ ಅಂಶಗಳಾಗಿವೆ. ಮೊಬೈಲ್ ಫೋನ್ ಬಳಸದಿರುವುದು ಅಸಾಧ್ಯವಾದರೂ ಕನಿಷ್ಠ ಪಕ್ಷ ಅದನ್ನು ನಮ್ಮ ಜೇಬಿನಲ್ಲಿರಿಸಿಕೊಳ್ಳುವುದನ್ನು ನಿವಾರಿಸ ಬಹುದಾಗಿದೆ. ಅಪಾಯವಂತೂ ಇದ್ದೇ ಇದೆ, ಆದರೆ ಮೊಬೈಲ್ ಫೋನ್‌ನ್ನು ಬ್ಯಾಗ್‌ನಲ್ಲಿ ಇರಿಸುವ ಅಥವಾ ಕೈಯಲ್ಲಿ ಹಿಡಿದುಕೊಳ್ಳುವ ಮೂಲಕ ಅದನ್ನು ಕನಿಷ್ಠಗೊಳಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News