ಕ್ಯಾನ್ಸರ್ ಅಪಾಯದ ಐದು ಲಕ್ಷಣಗಳು

Update: 2017-07-11 11:11 GMT

ಸಾವಿಗೆ ಇನ್ನೊಂದು ಹೆಸರಾಗಿರುವ ಕ್ಯಾನ್ಸರ್ ರೋಗವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಪುರುಷರು ಆಗಾಗ್ಗೆ ಈ ಬಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯುತ್ತಮ ಮಾರ್ಗವಾಗಿದೆ. ಹೆಚ್ಚಿನ ಜನರು ಕ್ಯಾನ್ಸರ್ ಲಕ್ಷಣಗಳನ್ನು ಅಲಕ್ಷಿಸುತ್ತಾರೆ ಅಥವಾ ತಮ್ಮ ಸ್ಥಿತಿ ಎಷ್ಟು ಗಂಭೀರವಾಗಿದೆ ಎನ್ನುವುದು ಅವರಿಗೆ ಅರ್ಥವಾಗುವಷ್ಟರಲ್ಲಿ ತುಂಬ ತಡವಾಗಿರುತ್ತದೆ. ಆದರೆ ಪುರುಷರಲ್ಲಿ ಕ್ಯಾನ್ಸರ್‌ನ ಲಕ್ಷಣಗಳು ಎಷ್ಟೊಂದು ಅಸ್ಪಷ್ಟವಾಗಿರುತ್ತವೆ ಎಂದರೆ ತಾವು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದೇವೆ ಎನ್ನುವುದು ಜನರಿಗೆ ಗೊತ್ತೇ ಆಗುವುದಿಲ್ಲ. ಅವು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳೆಂದು ಕಡೆಗಣಿಸಿಬಿಡುತ್ತಾರೆ. ಕ್ಯಾನ್ಸರ್‌ನ ಲಕ್ಷಣಗಳನ್ನು ಗಮನಿಸುವುದರಿಂದ ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಗುಣಪಡಿಸ ಬಹುದಾಗಿದೆ.

ದಿಢೀರ್ ದೇಹತೂಕ ಕಳೆದುಕೊಳ್ಳುವಿಕೆ

ಆರೋಗ್ಯವನ್ನು ಕಾಯ್ದುಕೊಳ್ಳಲು ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿ ರುವವರ ದೇಹತೂಕ ದಿಢೀರ್‌ನೆ ಕಡಿಮೆಯಾದರೆ ಚಿಂತೆ ಬೇಕಾಗಿಲ್ಲ. ಆದರೆ ಇಂತಹ ಯಾವುದೇ ಪ್ರಯತ್ನ ಮಾಡದೆ ದಿಢೀರ್‌ನೆ ದೇಹತೂಕ ಕಡಿಮೆಯಾದರೆ ಅದು ಕಳವಳಕಾರಿ. ಅನಿರೀಕ್ಷಿತವಾಗಿ ದೇಹವು ತೂಕವನ್ನು ಕಳೆದುಕೊಳ್ಳುವುದು ಮೇದೋಜ್ಜೀರಕ ಗ್ರಂಥಿ, ಜಠರ ಅಥವಾ ಶ್ವಾಸಕೋಶಗಳ ಕ್ಯಾನ್ಸರ್‌ನ ಲಕ್ಷಣವಾಗಿದೆ. ಥೈರಾಯ್ಡಾ ಗ್ರಂಥಿಯ ಮಿತಿಮೀರಿದ ಕ್ರಿಯಾಶೀಲತೆ, ಮಧುಮೇಹ, ಸಿರೋಸಿಸ್ ಮತ್ತು ಕ್ಷಯ ಇವು ದಿಢೀರನೆ ದೇಹತೂಕ ನಷ್ಟಕ್ಕೆ ಇತರ ಕಾರಣಗಳಾಗಿವೆ.

ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ

ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು ಕ್ಯಾನ್ಸರ್‌ನ್ನು ಸೂಚಿಸಬಹುದು. ಮೂತ್ರ ವಿಸರ್ಜನೆಯನ್ನು ಆರಂಭಿಸುವಲ್ಲಿ ತೊಂದರೆ, ಮೂತ್ರದ ಹರಿವನ್ನು ನಿಲ್ಲಿಸುವಲ್ಲಿ ತೊಂದರೆ, ಸಾಮಾನ್ಯ ಪ್ರಮಾಣಕ್ಕಿಂತ ಸಪೂರ ಧಾರೆಯಾಗಿ ಮೂತ್ರ ಹರಿಯುವಿಕೆ, ಹನಿಹನಿಯಾಗಿ ಮೂತ್ರ ಹೋಗುವಿಕೆ ಅಥವಾ ಮೂತ್ರ ಸೋರುವಿಕೆ, ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ಬದಲಾವಣೆ, ವೃಷಣಗಳ ಬಾತುವಿಕೆ ಅಥವಾ ಕುಗ್ಗುವಿಕೆ ಅಥವಾ ವೃಷಣಗಳಲ್ಲಿ ಗಡ್ಡೆ ಕಟ್ಟುವಿಕೆ, ನಿಮಿರುವಿಕೆ ಸಮಸ್ಯೆ ಇವು ಕ್ಯಾನ್ಸರ್ ಸೂಚಕಗಳಾಗಿರಬಹುದು.

ಬಾಯಿಯಲ್ಲಿ ಬದಲಾವಣೆಗಳು 

ಬಾಯಿ ಮತ್ತು ಗಂಟಲಿನಲ್ಲಿ ಕೆಲವು ಬದಲಾವಣೆಗಳು ಕ್ಯಾನ್ಸರ್‌ನ ಲಕ್ಷಣಗಳಾ ಗಿರಬಹುದು.

ಬಾಯಿಯಲ್ಲಿ ಬಿಳಿಯ ಮಚ್ಚೆಗಳು ಅಥವಾ ಕಲೆಗಳು, ಬಾಯಿ ಮತ್ತು ಗಂಟಲು ಭಾಗದಲ್ಲಿ ನಿರಂತರ ನೋವು, ನುಂಗುವಿಕೆಯಲ್ಲಿ ತೊಂದರೆ, ಕೆಳದವಡೆಯ ಚಲನೆ ಕಠಿಣವಾಗುವಿಕೆ, ಸಕಾರಣವಿಲ್ಲದೆ ಹಲ್ಲುಗಳು ಬೀಳುವುದು ಅಥವಾ ಸಡಿಲಗೊಳ್ಳುವುದು, ಮುಖದಲ್ಲಿ ಬಾತು, ತುಟಿಗಳು ಮತ್ತು ಕೆನ್ನೆ ಅಥವಾ ನಾಲಿಗೆ ಮರಗಟ್ಟಿದ ಅಥವಾ ಹೆಚ್ಚು ಮೃದುವಾದ ಅನುಭವ, ನಾಲಿಗೆಯಲ್ಲಿ ಹುಣ್ಣುಗಳು ಅಥವಾ ರಕ್ತಸ್ರಾವ, ನಿರಂತರ ಕೆಮ್ಮು ಅಥವಾ ಧ್ವನಿಯಲ್ಲಿ ಕರ್ಕಶತೆ, ಕೆಮ್ಮಿನ ಜೊತೆ ರಕ್ತ ಬರುವಿಕೆ ಇವು ಈ ಕ್ಯಾನ್ಸರ್ ಲಕ್ಷಣಗಳಲ್ಲಿ ಒಳಗೊಂಡಿವೆ.

ಸ್ತನಗಳಲ್ಲಿ ಬದಲಾವಣೆಗಳು

ಪುರುಷರಲ್ಲಿ ಸ್ತನ ಕ್ಯಾನ್ಸರ್ ಉಂಟಾಗುವುದು ಅಪರೂಪವಾಗಿದ್ದು, ಇದರ ಪ್ರಮಾಣ ಎಲ್ಲ ಸ್ತನ ಕ್ಯಾನ್ಸರ್‌ಗಳ ಶೇ.1ರಷ್ಟು ಮಾತ್ರವಿದೆ. ಪುರುಷರು ಸ್ತನ ಕ್ಯಾನ್ಸರ್‌ನ್ನು ಕಡೆಗಣಿಸಲು ಇದು ಮುಖ್ಯಕಾರಣವಾಗಿದೆ. ಈಸ್ಟ್ರೋಜನ್ ಮಟ್ಟದಲ್ಲಿ ಹೆಚ್ಚಳ, ಹಾನಿಕಾರಕ ವಿಕಿರಣಗಳಿಗೆ ತೆರೆದುಕೊಳ್ಳುವಿಕೆ ಅಥವಾ ಸ್ತನ ಕ್ಯಾನ್ಸರ್‌ನ ಕುಟುಂಬದ ಇತಿಹಾಸ ಇವು ಪುರುಷರಲ್ಲಿ ಸ್ತನ ಕ್ಯಾನ್ಸರ್‌ಗೆ ಕಾರಣಗಳಾಗಿವೆ.

ಸ್ತನಗಳ ದೊಡ್ಡದಾಗುವಿಕೆ, ತೊಟ್ಟುಗಳಲ್ಲಿ ನೋವು, ತೊಟ್ಟುಗಳ ತಿರುಚುವಿಕೆ ಅಥವಾ ಕುಗ್ಗುವಿಕೆ, ತೊಟ್ಟುಗಳ ಮೇಲೆ ಅಥವಾ ಸುತ್ತಲೂ ಹುಣ್ಣುಗಳು, ಸ್ತನದೊಳಗೆ ನೋವನ್ನುಂಟು ಮಾಡುವ ಅಥವಾ ನೋವನ್ನುಂಟು ಮಾಡದಿರುವ ಗಡ್ಡೆಗಳಾಗಿರುವ ಅನುಭವ, ತೊಟ್ಟುಗಳಿಂದ ಸ್ವಚ್ಛ ಅಥವಾ ಕಪ್ಪು ಅಥವಾ ರಕ್ತಮಿಶ್ರಿತ ಸ್ರಾವ, ತೋಳಿನ ಕೆಳಗೆ ಗಡ್ಡೆಗಳು, ತೊಟ್ಟು ಅಥವಾ ಸುತ್ತಲಿನ ಭಾಗ ಕೆಂಪಗಾಗುವಿಕೆ ಇವು ಸ್ತನ ಕ್ಯಾನ್ಸರ್ ಲಕ್ಷಣಗಳು.

ಜಠರ ಸಂಬಂಧಿತ ಲಕ್ಷಣಗಳು

ಹೊಟ್ಟೆ ನೋಯುವುದು ಕ್ಯಾನ್ಸರ್ ಅಲ್ಲದೆ ಇತರ ಹಲವಾರು ಆರೋಗ್ಯ ಸ್ಥಿತಿಗಳನ್ನೂ ಸೂಚಿಸುತ್ತದೆ. ಆದರೆ ಹೊಟ್ಟೆನೋವಿಗೆ ಚಿಕಿತ್ಸೆ ಪಡೆದುಕೊಂಡರೂ ಅದು ನಿರಂತರವಾಗಿದ್ದರೆ ಕ್ಯಾನ್ಸರ್‌ನ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ.

ಹಸಿವೆ ಕಡಿಮೆಯಾಗುವುದು, ತೀವ್ರ ಆ್ಯಸಿಡಿಟಿ ಅಥವಾ ಎದೆಯುರಿತ(ಜಠರ ಅಥವಾ ಗಂಟಲು ಕ್ಯಾನ್ಸರ್), ರಕ್ತಸಹಿತ ಅಥವಾ ರಕ್ತರಹಿತ ವಾಂತಿಯಾಗುವಿಕೆ, ಹೊಟ್ಟೆ ಊದುಕೊಳ್ಳುವಿಕೆ ಅಥವಾ ಹೊಟ್ಟೆಯಲ್ಲಿದ ದ್ರವಗಳ ಪ್ರಮಾಣದಲ್ಲಿ ಹೆಚ್ಚಳ, ಹೊಟ್ಟೆಯೊಳಗಿನಿಂದ ಒತ್ತಿ ಬರುವ ನೋವು(ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್), ಹೊಟ್ಟೆ ಮುರಿದಂತಾಗುವುದು ಮತ್ತು ಹೊಟ್ಟೆಯಲ್ಲಿ ತಳಮಳ(ಯಕೃತ್ತಿನ ಕ್ಯಾನ್ಸರ್), ಸ್ವಲ್ಪ ಊಟ ಮಾಡಿದರೂ ಹೊಟ್ಟೆ ತುಂಬಿದಂತಾಗುವುದು ಮತ್ತು ಮೂತ್ರ ಅಥವಾ ಮಲದಲ್ಲಿ ರಕ್ತ ಬೀಳುವಿಕೆ(ಮೂತ್ರಪಿಂಡ ಆತವಾ ಮೂತ್ರಕೋಶ,ಗುದನಾಳ ಕ್ಯಾನ್ಸರ್) ಇವು ಕ್ಯಾನ್ಸರ್ ಸೂಚಕಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News