ಹೆಮ್ಮಾರಿ ರೋಗ: ಹೆಪಟೈಟಿಸ್ - ಬಿ
ಹೆಪಟೈಟಿಸ್ -ಬಿ ಎನ್ನುವುದು ಯಕೃತ್ತಿಗೆ ಸಂಬಂಧ ಪಟ್ಟ ರೋಗವಾಗಿದ್ದು ಹೆಪಟೈಟಿಸ್ -ಬಿ ಎಂಬ ವೈರಾಣುವಿನ ಸೋಂಕಿನಿಂದ ಈ ರೋಗ ಬರುತ್ತದೆ. ಯಕೃತ್ತು ನಮ್ಮ ದೇಹದ ಅತೀ ಮುಖ್ಯವಾದ ಅಂಗವಾಗಿದ್ದು, ದೇಹದ ರಕ್ಷಣಾ ಪ್ರಕ್ರಿಯೆ ಮತ್ತು ಜೀರ್ಣಾಂಗ ಪ್ರಕ್ರಿಯೆಯಲ್ಲಿ ಬಹುಮುಖ್ಯ ಭೂಮಿಕೆ ವಹಿಸುತ್ತದೆ. ಹೆಪಟೈಟಿಸ್ ವೈರಾಣುವಿನಿಂದ ಸೋಂಕಿಗೊಳಗಾದ ಯಕೃತ್ತು ತನ್ನ ಕೆಲಸವನ್ನು ಸರಿಯಾಗಿ ನಿಭಾಯಿಸಲಾಗದೆ ದೇಹದ ಆರೋಗ್ಯ ಹದಗೆಟ್ಟು ವ್ಯಕ್ತಿ ಜಾಂಡೀಸ್ ರೋಗದಿಂದ ಬಳಲುತ್ತಾನೆ. ಸಕಾಲದಲ್ಲಿ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಯಕೃತ್ತಿನ ವೈಫಲ್ಯ ಮತ್ತು ಯಕೃತ್ತಿನ ಕ್ಯಾನ್ಸರ್ ಉಂಟಾಗಿ ಜೀವ ಹಾನಿಯಾಗುವ ಸಾಧ್ಯತೆಯೂ ಇರುತ್ತದೆ.
ಏನಿದು ಹೆಪಟೈಟಿಸ್?:
ಯಕೃತ್ತಿನ ಉರಿಯೂತವನ್ನು ಹೆಪಟೈಟಿಸ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ವೈರಾಣುವಿನ ಸೋಂಕಿನಿಂದಲೇ ಹೆಚ್ಚಾಗಿ ಹೆಪಟೈಟಿಸ್ ಉಂಟಾಗುತ್ತದೆ. ಹೆಪಟೈಟಿಸ್ ವೈರಾಣುವಿನಲ್ಲಿ ಎ,ಬಿ,ಸಿ,ಡಿ ಮತ್ತು ಇ ಎಂದು ಐದು ಪ್ರಭೇದಗಳಿವೆ. ವೈರಾಣುವಿನ ರಚನೆಯನ್ನು ಆಧರಿಸಿ ಈ ವಿಂಗಡಣೆ ಮಾಡಲಾಗಿದೆ. ಸಾಮಾನ್ಯವಾಗಿ ಹೆಪಟೈಟಿಸ್ ಎ ಡಿ ಮತ್ತು ಇ ವೈರಾಣುವಿನಿಂದ ಉಂಟಾಗುವ ಹೆಪಟೈಟಿಸ್ ಹೆಚ್ಚು ಮಾರಣಾಂತಿಕವಾಗಿರುವುದಿಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ತನ್ನಿಂತಾನೆ ಗುಣವಾಗುತ್ತದೆ. ಆದರೆ ಹೆಪಟೈಟಿಸ್ ಬಿ ಮತ್ತು ಸಿ ಬಹಳ ಅಪಾಯಕಾರಿ ರೋಗವಾಗಿರುತ್ತದೆ. ಈ ರೋಗವನ್ನು ಗುಣಪಡಿಸುವ ಔಷಧಿ ಇಲ್ಲದಿರುವುದರಿಂದ ಲಸಿಕೆ ಹಾಕಿಸಿ ರೋಗ ತಡೆಗಟ್ಟಬೇಕಾದ ಅನಿವಾರ್ಯತೆ ಇದೆ. ಜಾಗತಿಕವಾಗಿ ವರ್ಷವೊಂದರಲ್ಲಿ 240ರಿಂದ 245 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ. ಏನಿಲ್ಲವೆಂದರೂ 1.5 ಮಿಲಿಯನ್ ಮಂದಿ ಈ ಹೆಪಟೈಟಿಸ್ ರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಭಾರತ ದೇಶವೊಂದರಲ್ಲಿಯೇ ಸುಮಾರು 40 ಮಿಲಿಯನ್ ಮಂದಿ ಹೆಪಟೈಟಿಸ್ ಬಿ ರೋಗದಿಂದ ಬಳಲುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಗಳಿಂದ ತಿಳಿದುಬಂದಿದೆ. ವೈದ್ಯಕೀಯ ರಂಗದಲ್ಲಿ ಸಾಕಷ್ಟು ಸಂಶೋಧನೆಗಳು, ಆವಿಷ್ಕಾರಗಳು ಹಾಗೂ ಕ್ರಾಂತಿಗಳು ನಡೆಯತ್ತಿದ್ದರೂ, ತಡೆಗಟ್ಟಬಹುದಾದ ರೋಗಗಳಲ್ಲಿ ಒಂದಾದ ಹೆಪಟೈಟಿಸ್ ದಿನೇ ದಿನೇ ಮನುಕುಲದ ಮೇಲೆ ಸವಾರಿ ಮಾಡುವುದು ಸೋಜಿಗದ ವಿಚಾರವಾಗಿದೆ. ಏಡ್ಸ್‌ನಷ್ಟೇ ಮಾರಕವಾದ ಹೆಪಟೈಟಿಸ್ ಬಿ ಮತ್ತು ಸಿ ರೋಗವನ್ನು ಸೂಕ್ತವಾದ ವೈದ್ಯಕೀಯ ಮಾರ್ಗದರ್ಶನ ಮತ್ತು ಸಾಕಷ್ಟು ಮುಂಜಾಗರೂಕತೆಯಿಂದ ಖಂಡಿತವಾಗಿಯೂ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ.
ರೋಗದ ಲಕ್ಷಣಗಳು
ಹೆಪಟೈಟಿಸ್ ಬಿ ವೈರಾಣು ಸೋಂಕು ತಗುಲಿದ ಬಳಿಕ ಕೆಲವರಲ್ಲಿ ಯಾವ ತೊಂದರೆಯೂ ಕಾಣಿಸುವುದಿಲ್ಲ. ಇನ್ನು ಕೆಲವರಲ್ಲಿ ವಾಂತಿ, ಭೇದಿ, ಹಸಿವಿಲ್ಲದಿರುವುದು, ಹೊಟ್ಟೆನೋವು, ಸುಸ್ತು, ಕಾಮಾಲೆ ಅಥವಾ ಜಾಂಡೀಸ್ (ದೇಹದ ಚರ್ಮ ಮತ್ತು ಕಣ್ಣಿನ ಮೇಲ್ಪದರ ಹಳದಿ ಬಣ್ಣಕ್ಕೆ ತಿರುಗುವುದು), ಜ್ವರ, ಮೈಕೈ ನೋವು, ದೇಹದ ತೂಕ ಕಡಿಮೆಯಾಗು ವುದು, ಅಜೀರ್ಣ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಲ್ಲಿ ಗಾಢ ವರ್ಣದ ಮೂತ್ರ ಕಾಣಿಸಿಕೊಳ್ಳುತ್ತದೆ. ದೀರ್ಘಕಾಲಿಕ ತೊಂದರೆ ಇರುವವರಲ್ಲಿ ಹೆಚ್ಚಿನ ತೊಂದರೆ ಕಾಣಸಿಗದು. ಆದರೆ ಯಕೃತ್ತಿನಲ್ಲಿ ನಾರಿನ ಅಂಶ ಜಾಸ್ತಿಯಾದಾಗ ಯಕೃತ್ತಿನ ಕಾರ್ಯ ಕ್ಷಮತೆ ಕ್ಷೀಣಿಸಿಕೊಂಡು ಯಕೃತ್ತಿನ ಕೆಲಸಗಳು ಸ್ಥಗಿತಗೊಳ್ಳುತ್ತದೆ. ಯಕೃತ್ತು ಊದಿಕೊಂಡು ದೊಡ್ಡದಾಗಬಹುದು ಇಲ್ಲವೇ ಉದರದಲ್ಲಿ ನೀರು ಶೇಖರಣೆ ಆಗುವ ಸಾಧ್ಯತೆಯೂ ಇದೆ.
ಹೇಗೆ ಹರಡುತ್ತದೆ?
1. ವೈರಾಣು ಸೋಂಕಿತ ರಕ್ತದ ಮತ್ತು ದೇಹದ ದ್ರವ್ಯಗಳಾದ ವೀರ್ಯ, ಯೋನಿದ್ರವಗಳ ಸಂಪರ್ಕದಿಂದ ಹರಡುತ್ತದೆ. ಸೋಂಕು ಇರುವ ವ್ಯಕ್ತಿಗಳ ಜೊತೆ ಅಸುರಕ್ಷಿತ ಸಂಭೋಗದಿಂದ ಹರಡುವ ಸಾಧ್ಯತೆ ಇದೆ.
2. ವೈರಾಣು ಸೋಂಕು ಇರುವ ರಕ್ತಪೂರಣದಿಂದಲೂ ರೋಗ ಹರಡಬಹುದು.
3. ಕಿಡ್ನಿ ರೋಗಗಳ ಡಯಾಲಿಸಿಸ್ ಚಿಕಿತ್ಸೆ ನೀಡುವ ಸಮಯದಲ್ಲಿ ವೈರಾಣು ಸೋಂಕು ತಗಲುವ ಸಾಧ್ಯತೆ ಇದೆ.
4. ವೈರಾಣು ಸೋಂಕಿತ ತಾಯಿಯಿಂದ ಮಗುವಿಗೆ ಹೆರಿಗೆ ಸಮಯದಲ್ಲಿ ಹರಡುವ ಸಾಧ್ಯತೆ ಇದೆ.
5. ಹಚ್ಚೆ ಹಾಕಿಸಿಕೊಳ್ಳುವವರು, ಆಕ್ಯುಪಂಚರ್ ಮಾಡಿಸಿಕೊಂಡಾಗ ಒಂದೇ ಸೂಜಿಯಿಂದ ಮಾದಕ ದ್ರವ್ಯ ಗಳನ್ನು ಹಲವರು ಸೇವಿಸಿಕೊಂಡಾಗ ಸೋಂಕು ತಗಲುವ ಸಾಧ್ಯತೆ ಇದೆ. ವಿಶ್ವದಾದ್ಯಂತ ಎರಡು ಮಿಲಿಯನ್ ಮಂದಿ ಅಸುರಕ್ಷಿತ ಚುಚ್ಚು ಮದ್ದಿನ ಬಳಕೆಯಿಂದ ಹೆಪಟೈಟಸ್ ಬಿ ಮತ್ತು ಸಿ ರೋಗಕ್ಕೆ ತುತ್ತಾಗುವುದು ಈ ಇಪ್ಪತ್ತೊಂದನೆ ಶತಮಾನದ ದುರಂತ ಎಂದರೂ ತಪ್ಪಾಗದು.
6. ಅಸುರಕ್ಷಿತ ವೈದ್ಯಕೀಯ ಚಿಕಿತ್ಸೆ, ರೋಗಪೂರಿತ ವೈದ್ಯಕೀಯ ಉಪಕರಣಗಳ ಮೂಲಕವೂ ಹೆಪಟೈಟಿಸ್ ಬಿ ವೈರಾಣು ಹರಡುವ ಸಾಧ್ಯತೆ ಇದೆ.
ಚಿಕಿತ್ಸೆ ಹೇಗೆ?
ಹೆಪಟೈಟಿಸ್ ಬಿ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ರೋಗದ ತೀವ್ರತೆಯನ್ನು ತಗ್ಗಿಸುವ ಹಲವಾರು ಔಷಧಿಗಳು ಲಭ್ಯವಿದೆ. ಯಕೃತ್ತಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳು ಲಭ್ಯವಿದೆ. ಯಕೃತ್ತು ಮತ್ತಷ್ಟು ಹಾಳಾಗದಂತೆ ತಡೆಯುವ ಔಷಧಿಗಳು ಲಭ್ಯವಿದೆ. ಯಕೃತ್ತಿಗೆ ಮಾರಕವಾಗುವ ಔಷಧಿಗಳು, ಮದ್ಯಪಾನ, ಜಂಕ್ ಆಹಾರಗಳು, ಕರಿದ ತಿಂಡಿಗಳು ಮುಂತಾದವುಗಳನ್ನು ವರ್ಜಿಸಬೇಕು. ಪೌಷ್ಟಿಕ ಆಹಾರ ಸೇವಿಸತಕ್ಕದ್ದು. ದೇಹದ ರಕ್ಷಣಾ ವ್ಯವಸ್ಥೆಗೆ ಪೂರಕವಾದ ಆಹಾರ ಮತ್ತು ಔಷಧಿ ಸೇವಿಸಬೇಕು. ಕೃತ್ ಸಂಪೂರ್ಣವಾಗಿ ಹಾಳಾಗಿ ಸಿರ್ವೋಸಿಸ್ ರೋಗ ಅಂತಿಮ ಹಂತ ತಲುಪಿದ್ದಲ್ಲಿ ಯಕೃತ್ತಿನ ಕಸಿ ಮಾಡಬೇಕಾದೀತು.
ಕೊನೆ ಮಾತು
ಜುಲೈ 28 ಹೆಪಟೈಟಿಸ್ ವೈರಸ್‌ನ್ನು ಕಂಡುಹಿಡಿದು, ರೋಗಕ್ಕೆ ಲಸಿಕೆ ಕಂಡು ಹಿಡಿದ ನೊಬೆಲ್ ಪ್ರಶಸ್ತಿ ವಿಜೇತ ಪ್ರೊ. ಬರೂಚ ಸಾಮ್ಯುಯಲ್ ಬ್ಲೂಮ್‌ಬರ್ಗ್ ಇವರ ಜನ್ಮ ದಿನವಾಗಿದ್ದು, ಅವರ ಸ್ಮರಣಾರ್ಥ ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆ ಮತ್ತು ವೈದ್ಯರು ತಮ್ಮ ಹೊಣೆಯರಿತು ಜವಾಬ್ದಾರಿಯುತವಾಗಿ ವರ್ತಿಸಿದಲ್ಲಿ ಈ ಹೆಪಟೈಟಿಸ್ ಬಿ ಎಂಬ ಹೆಮ್ಮಾರಿಗೆ ಮೂಗುದಾರ ಹಾಕುವುದು ಖಂಡಿತವಾಗಿಯೂ ಸಾಧ್ಯವಾಗಬಹುದು
ಹೇಗೆ ತಡೆಗಟ್ಟಬಹುದು?
1. ಹೆಪಟೈಟಿಸ್ ರೋಗವನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ. ವೈದ್ಯರ ಸೂಚನೆಯಂತೆ ಹುಟ್ಟಿನಿಂದ 9 ತಿಂಗಳ ಒಳಗೆ ಮೂರು ಬಾರಿ ಈ ಲಸಿಕೆ ನೀಡಲಾಗುತ್ತದೆ. ಇದರಿಂದ ಶೇ. 99ರಷ್ಟು ರಕ್ಷಣೆ ದೊರಕುತ್ತದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಆರಂಭಿಕ ಲಸಿಕೆ ಮೂರು ಬಾರಿ ಹಾಕಿಸಿದ ಬಳಿಕ ಪ್ರತೀ 5 ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳತಕ್ಕದ್ದು.
2. ಹೆಪಟೈಟಿಸ್ ಸೋಂಕು ಇರುವ ವ್ಯಕ್ತಿಯ ಜೊತೆ ದೈಹಿಕ ಸಂಪರ್ಕ ಮಾಡಬಾರದು.
3. ಮಾದಕ ದ್ರವ್ಯ ವ್ಯಸನಿಗಳು ಬಳಸಿದ ಸೂಜಿಯನ್ನು ಮತ್ತೊಬ್ಬರಿಗೆ ಬಳಸಬಾರದು.
4. ಡಯಾಲಿಸಿಸ್ ಮಾಡಿಸುವಾಗ ಸಾಕಷ್ಟು ಮುಂಜಾಗರೂಕತೆ ವಹಿಸತಕ್ಕದ್ದು.
5. ಹೆಪಟೈಟಿಸ್ ರೋಗಿಗೆ ಬಳಸಿದ ಶಸ್ತ್ರಚಿಕಿತ್ಸೆ ಉಪಕರಣಗಳನ್ನು ಬೇರೆಯವರಿಗೆ ಉಪಯೋಗಿಸಬಾರದು. ಮರುಬಳಕೆ ಮಾಡದ ಉಪಕರಣಗಳನ್ನೇ ಬಳಸತಕ್ಕದ್ದು.