ಪುರುಷರ ಎತ್ತರ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ನ ನಂಟು
ಹೆಚ್ಚಿನ ಪುರುಷರು ತಮ್ಮ ಎತ್ತರ ಇತರರಿಗಿಂತ ಕೆಲವೇ ಇಂಚುಗಳಷ್ಟು ಹೆಚ್ಚಿದ್ದರೂ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ದಪ್ಪಗಿರುವ ಮಹಿಳೆಯರು ತೆಳ್ಳಗಾಗಬೇಕೆಂದು ಬಯಸುವಂತೆ ಎತ್ತರ ಕಡಿಮೆಯಿರುವ ಪುರುಷರೂ ತಾವು ಇನ್ನಷ್ಟು ಎತ್ತರವಿರಬೇಕಿತ್ತು ಎಂದು ಬಯಸುತ್ತಿರುತ್ತಾರೆ.
ಹೆಚ್ಚಿನ ಮಹಿಳೆಯರು ತಮ್ಮ ಅಂಗಸೌಷ್ಟವದಲ್ಲಿ ಕೊರತೆಯಿದೆ, ತಾವು ಸುಂದರವಾಗಿಲ್ಲ ಎಂದು ಕೊರಗುತ್ತಿರುತ್ತಾರೆ. ಅಂತಹ ಹೇಳಿಕೊಳ್ಳುವಂತಹ ಕೊರತೆಯಿಲ್ಲದಿದ್ದರೂ ಸಾಮಾಜಿಕ ಮಾನದಂಡಕ್ಕಿಂತ ತಾವು ಕೊಂಚ ಕೆಳಗೇ ಇದ್ದೇವೆ ಎಂದು ಅವರು ಭಾವಿಸುತ್ತಿರುತ್ತಾರೆ. ಇದೇ ರೀತಿ, ಪುರುಷರು ಕನಿಷ್ಠ ಐದು ಅಡಿ ಹತ್ತು ಇಂಚು ಎತ್ತರವಿದ್ದರೆ ಚೆನ್ನ ಎಂದು ಭಾವಿಸಲಾಗಿದೆ. ನಿಜ ಹೇಳಬೇಕೆಂದರೆ ಹಲವಾರು ಸಂಸ್ಕೃತಿಗಳಲ್ಲಿ ಐದು ಅಡಿ ಏಳು ಇಂಚಿಗಿಂತ ಕಡಿಮೆ ಎತ್ತರ ಹೊಂದಿರುವ ಪುರುಷರನ್ನು ಕುಳ್ಳ ಎಂದು ಗೇಲಿಯನ್ನೂ ಮಾಡಲಾಗುತ್ತದೆ.
ಎತ್ತರ ಕಡಿಮೆಯಿರುವ ಪುರುಷರು ಎತ್ತರದ ವ್ಯಕ್ತಿಗಳನ್ನು ನೋಡಿದಾಗಲೆಲ್ಲ ಹತಾಶ ಭಾವನೆಗಳಿಗೆ ಪಕ್ಕಾಗುತ್ತಾರೆ. ತಮ್ಮ ಕಡಿಮೆ ಎತ್ತರದಿಂದಾಗಿಯೇ ಖಿನ್ನತೆಗೊಳಗಾದ ಹಲವಾರು ಪುರುಷರಿಗೆ ತಾವು ಚಿಕಿತ್ಸೆ ನೀಡಿದ್ದೇವೆ ಎಂದು ಬಹಳಷ್ಟು ಮನೋಶಾಸ್ತ್ರಜ್ಞರು ಹೇಳಿದ್ದಾರೆ.
ಕುಳ್ಳಗಿದ್ದಾರೆಂಬ ಏಕೈಕ ಕಾರಣದಿಂದ ಹಲವಾರು ಪುರುಷರು ತಿರಸ್ಕಾರಕ್ಕೆ ಒಳಗಾಗು ತ್ತಾರೆ. ಆದರೆ ಎತ್ತರ ಬದಲಿಸಲು ಸಾಧ್ಯವಿಲ್ಲದ ಕೆಲವು ವಿಷಯಗಳಲ್ಲೊಂದು ಎನ್ನುವುದು ವಾಸ್ತವ. ಉದಾಹರಣೆಗೆ ಪುರುಷ ಅಥವಾ ಮಹಿಳೆ ಹೆಚ್ಚು ತೂಕವನ್ನು ಹೊಂದಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ. ತೂಕ ಕಡಿಮೆಯಿದ್ದರೆ ಅದನ್ನು ಹೆಚ್ಚಿಸಿಕೊಳ್ಳಲೂ ಸಾಧ್ಯ. ಮೂಗಿನ ಆಕಾರ ಸರಿಯಿಲ್ಲವೆಂದು ಅನಿಸಿದರೆ ಕಾಸ್ಮೆಟಿಕ್ ಸರ್ಜರಿಯ ಮೊರೆ ಹೋಗಬಹುದಾಗಿದೆ. ಆದರೆ ಎತ್ತರವನ್ನು ಬದಲಿಸುವುದು ಸಾಧ್ಯವಿಲ್ಲ, ನಾವಿರುವುದೇ ಹೀಗೆ ಎಂದು ಒಪ್ಪಿಕೊಳ್ಳುವುದೇ ನಿಜವಾದ ಜಾಣತನ.
ಆದರೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಪುರುಷರು ಕುಳ್ಳಗಿದ್ದಷ್ಟೂ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಕಡಿಮೆ ಎನ್ನುವದನ್ನು ಇತ್ತೀಚಿನ ಸಂಶೋಧನಾ ಅಧ್ಯಯನವೊಂದು ಬೆಳಕಿಗೆ ತಂದಿದೆ. ಎತ್ತರಕ್ಕೂ ಪ್ರಾಸ್ಟೇಟ್ ಕ್ಯಾನ್ಸರ್‌ಗೂ ಏನು ಸಂಬಂಧ ಎನ್ನುವುದು ಇಲ್ಲಿದೆ........
ಕ್ಯಾನ್ಸರ್ ಮಾರಣಾಂತಿಕ ರೋಗವಾಗಿದ್ದು, ಯಾವುದೇ ವಯಸ್ಸಿನ ಮತ್ತು ಯಾವುದೇ ಲಿಂಗದ ವ್ಯಕ್ತಿಗಳಿಗೆ ಅವರ ಜೀವನದ ಯಾವುದೇ ಹಂತದಲ್ಲಾದರೂ ಬಾಧಿಸಬಹುದು ಎನ್ನುವುದು ಎಲ್ಲರಿಗೂ ಗೊತ್ತು. ಕೆಲವೊಮ್ಮೆ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಿರುವರೂ ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗುತ್ತಾರೆ. ನಮ್ಮ ಶರೀರದಲ್ಲಿನ ಜೀವಕೋಶಗಳ ಸಂಖ್ಯೆ ಅಸಹಜವಾಗಿ ಹೆಚ್ಚಾದಾಗ ಗಡ್ಡೆಗಳು ರೂಪುಗೊಳ್ಳತೊಡಗುತ್ತವೆ ಮತ್ತು ಅಂಗಾಂಶಗಳು ಮತ್ತು ಅಂಗಾಂಗಗಳು ಹಾನಿಗೀಡಾಗುತ್ತವೆ. ಇದು ಕ್ಯಾನ್ಸರ್ ರೋಗ.
ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿರುವ ಪ್ರಾಸ್ಟೇಟ್ ಗ್ರಂಥಿಗಳನ್ನು ಬಾಧಿಸುವ ಕ್ಯಾನ್ಸರ್‌ನ ವಿಧವಾಗಿದೆ. ಪ್ರತೀ ಏಳು ಪುರುಷರಲ್ಲಿ ಒಬ್ಬನನ್ನು ಪ್ರಾಸ್ಟೇಟ್ ಕ್ಯಾನ್ಸರ್ ಮಾರಣಾಂತಿಕವಾಗಿ ಬಾಧಿಸುತ್ತದೆ ಎನ್ನಲಾಗಿದೆ.
ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದಲ್ಲಿ ರಕ್ತ ಹೋಗುವಿಕೆ, ದಣಿವು, ತೂಕ ಕಡಿಮೆಯಾಗುವಿಕೆ ಇತ್ಯಾದಿಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಕೆಲವು ಲಕ್ಷಣಗಳಾಗಿವೆ. ಹೆಚ್ಚು ಎತ್ತರವನ್ನು ಹೊಂದಿರುವವರು ಮತ್ತು ಬೊಜ್ಜುದೇಹವಿರುವವರು ಸಹ ಪ್ರಾಸ್ಟೇಟ್ ಕ್ಯಾನ್ಸರ್‌ಗೆ ತುತ್ತಾಗುವ ಹೆಚ್ಚಿನ ಅಪಾಯವಿದೆ ಎನ್ನುವುದನ್ನು ಆಕ್ಸ್‌ಫರ್ಡ್ ವಿವಿಯು ನಡೆಸಿರುವ ಇತ್ತೀಚಿನ ಸಂಶೋಧನೆಯೊಂದು ಹೇಳಿದೆ.
ಎತ್ತರದಲ್ಲಿ ಪ್ರತೀ 3.9 ಇಂಚುಗಳ ಹೆಚ್ಚಳ ದೊಂದಿಗೆ ಪ್ರಾಸ್ಟೇಟ್ ಕ್ಯಾನ್ಸರ್‌ನ ಅಪಾಯವೂ ಶೇ.21ರಷ್ಟು ಹೆಚ್ಚುತ್ತದೆ ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಪುರುಷರ ಹೆಚ್ಚಿನ ಎತ್ತರಕ್ಕೆ ಕಾರಣವಾಗುವ ಬೆಳವಣಿಗೆಯ ಹಾರ್ಮೋನ್‌ಗಳು ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಳ್ಳಲು ಮುಖ್ಯ ಕಾರಣವೆನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಪುರುಷರ ಎತ್ತರ ಪ್ರಾಸ್ಟೇಟ್ ಕ್ಯಾನ್ಸರ್‌ನೊಂದಿಗೆ ಹೊಂದಿರುವ ಸಂಬಂಧದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಂಶೋಧಕರು ಇನ್ನೂ ಪ್ರಯತ್ನಿಸುತ್ತಿದ್ದಾರೆ.