ಪಾತ್ರೆಗಳನ್ನು ತೊಳೆಯಲು ಬಳಸುವ ಸ್ಪಂಜ್ ನಿಮ್ಮ ಆರೋಗ್ಯವನ್ನು ಕೆಡಿಸಬಹುದು

Update: 2017-08-03 08:45 GMT

ಮನೆಗಳಲ್ಲಿ ಮಹಿಳೆಯರು ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸುವ ಸ್ಕ್ರಬರ್ ಅಥವಾ ಸ್ಪಂಜ್ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು ಎನ್ನುವುದು ಗೊತ್ತೇ? ಹಾಗೆ ಪಾತ್ರೆ ತೊಳೆದ ನಂತರ ಸ್ಪಂಜ್‌ಗೆ ಅಂಟಿರುವ ಆಹಾರದ ಅವಶೇಷಗಳನ್ನು ನಿವಾರಿಸಲು ಅದನ್ನು ತೊಳೆದು ಸ್ವಚ್ಛವೇನೋ ಮಾಡುತ್ತಾರೆ. ಆದರೆ ಇಷ್ಟು ಮಾಡಿದರೆ ಸಾಕೇ?

 ಇಲ್ಲೊಂದು ಆಘಾತಕಾರಿ ಸುದ್ದಿಯಿದೆ. ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬಳಸುವ ಸ್ಪಂಜ್ ಶರೀರದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಅನಾರೋಗ್ಯವನ್ನುಂಟು ಮಾಡಬಲ್ಲ ಅಪಾಯಕಾರಿ ಬ್ಯಾಕ್ಟೀರಿಯಾಗಳ ಉತ್ಪತ್ತಿ ಕೇಂದ್ರವಾಗಿದೆ ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬೆಳಕಿಗೆ ತಂದಿದೆ.

 ಸ್ಪಂಜ್ ಸೂಕ್ಷ್ಮ ರಂಧ್ರಗಳನ್ನು ಹೊಂದಿರುತ್ತದೆ ಮತ್ತು ಅದು ನೀರನ್ನು ಹೀರಿಕೊಳ್ಳುತ್ತದೆ. ಸ್ಪಂಜ್‌ನೊಳಗೆ ಬ್ಯಾಕ್ಟೀರಿಯಾಗಳು ವಾಸವಿರಲು ಇಷ್ಟು ಸಾಕು. ಇದೇ ಕಾರಣದಿಂದ ಪಾತ್ರೆ ತೊಳೆಯುವ ಸ್ಪಂಜ್ ವಾಸನೆಯನ್ನು ಸೂಸುತ್ತಿರುತ್ತದೆ.

ಸ್ಪಂಜ್‌ನ್ನು ನಿಯಮಿತವಾಗಿ ತೊಳೆಯುವುದರಿಂದ ಅಥವಾ ಅದನ್ನು ಬಿಸಿನೀರಿನಲ್ಲಿ ಮುಳುಗಿಸಿಟ್ಟರೆ ಬ್ಯಾಕ್ಟೀರಿಯಾಗಳು ಸತ್ತು ಹೋಗುತ್ತವೆ ಎಂದು ಹಲವರು ಭಾವಿಸಿರಬ ಹುದು. ಆದರೆ ವಸ್ತುಸ್ಥಿತಿ ಹಾಗಿಲ್ಲ.

ಅಧ್ಯಯನದ ಭಾಗವಾಗಿ ಸಂಶೋಧಕರು ಹಲವಾರು ಬಳಸಿದ ಸ್ಪಂಜ್‌ಗಳನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ ಕಾಲರಾ ಮತ್ತು ಟೈಫಾಯ್ಡಿಗಳಂತಹ ಮಾರಣಾಂತಿಕ ಕಾಯಿಲೆಗಳಿಗೂ ಕಾರಣವಾಗಬಲ್ಲ ಮತ್ತು ಆಹಾರವನ್ನು ವಿಷಯುಕ್ತ ವನ್ನಾಗಿ ಮಾಡಬಲ್ಲ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ.

ಸ್ಪಂಜ್‌ನ್ನು ಬಿಸಿನೀರಿನಲ್ಲಿ ಮುಳುಗಿಸಿಟ್ಟರೂ ಪ್ರಯೋಜನವಿಲ್ಲ. ಅಂತಹ ಸ್ಥಿತಿಯಲ್ಲಿಯೂ ಈ ಬ್ಯಾಕ್ಟೀರಿಯಾಗಳು ಬದುಕುಳಿಯುತ್ತವೆ.

ಸ್ಪಂಜ್‌ನ ತೀರ ಒಳಭಾಗದಲ್ಲಿಯ, ಉಷ್ಣತೆ ತಲುಪಲಾಗದ ಒಂದೇ ಒಂದು ರಂಧ್ರವಿದ್ದರೂ ಅದರಲ್ಲಿ 50 ಮಿಲಿಯನ್‌ಗೂ ಅಧಿಕ ಬ್ಯಾಕ್ಟೀರಿಯಾಗಳು ಇರುತ್ತವೆ.

ಹಾಗಾದರೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಪ್ರತಿ ದಿನ ಹೊಸ ಸ್ಪಂಜ್‌ನ್ನು ಬಳಸಬೇಕೇ? ಅದು ದುಬಾರಿಯಾಗುತ್ತದೆ. ಸ್ಪಂಜ್ ಬಳಸುವುದನ್ನೇ ನಿಲ್ಲಿಸಬೇಕೇ? ಇದಕ್ಕೆ ಪರ್ಯಾಯ ಉಪಾಯಗಳಿವೆ.

ಸ್ಪಂಜ್‌ನ್ನು ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಎಂದೂ ಬಳಸಬೇಡಿ. ಸಾಧ್ಯವಾದರೆ ತೆಂಗಿನ ನಾರಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ, ಇಲ್ಲದಿದ್ದರೆ ಕೈಗಳಿಂದಲೇ ಪಾತ್ರೆಗಳನ್ನು ಸ್ವಚ್ಛಗೊಳಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News