ಸೊಳ್ಳೆಗಳಿಂದ ದೂರವಿರೋಣ

Update: 2017-08-19 05:55 GMT

ಜಗತ್ತಿನಾದ್ಯಂತ ನಾಳೆ ಆಗಸ್ಟ್ 20ನ್ನು ವಿಶ್ವ ಸೊಳ್ಳೆಗಳ ದಿನ ಎಂದುಆಚರಿಸಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಆಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನುಕುಲದ ಮಹೋನ್ನತಿಗೆ ಮಹತ್ತರ ಕೊಡುಗೆ ನೀಡಿ, 1902ರಲ್ಲಿ ವೈದ್ಯವಿಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ದೊರೆತ ಭಾರತೀಯ ಸಂಜಾತ ಬ್ರಿಟಿಷ್ ವೈದ್ಯ ಸರ್ ರೋನಾಲ್ಡ್ ರೋಸ್ ಅವರನ್ನು ಸ್ಮರಿಸುವ ದಿನ. 1897ರ ಈ ದಿನದಂದು ತಾನು ಮಾಡಿದ ಸಂಶೋಧನೆಗಳಿಂದ ಸೊಳ್ಳೆಗಳಿಂದಾಗಿ ಮನುಷ್ಯನಿಗೆ ಮಲೇರಿಯಾ ಹರಡುತ್ತದೆ ಎಂದು ಜಗತ್ತಿಗೆ ಸಾರಿ ಹೇಳಿದ ದಿನ.

ಸೊಳ್ಳೆಗಳಿಗೆ ಮನುಷ್ಯನ ರಕ್ತವೆಂದರೆ ಅತೀವ ಪ್ರೀತಿ.ಮನುಷ್ಯನ ರಕ್ತವನ್ನು ಹೀರಿ ರೋಗಗಳನ್ನು ಹರಡಿಸುವ, ಉಂಡ ಮನೆಗೆ ದ್ರೋಹ ಬಗೆಯುವ ಕಾರ್ಯವನ್ನು ಸೊಳ್ಳೆಗಳು ಸದ್ದಿಲ್ಲದೆ ಮಾಡುತ್ತವೆ. ಮಲೇರಿಯಾ, ಆನೆಕಾಲು ರೋಗ, ಡೆಂಗ್, ಚಿಗುನ್‌ಗುನ್ಯಾ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತವೆ. ಅನಾಫೆಲಿಸ್ ಹೆಣ್ಣು ಸೊಳ್ಳೆ, ಏಡಿಸ್ ಸೊಳ್ಳೆ ಮತ್ತು ಕ್ಯೂಲೆಕ್ಸ್ ಸೊಳ್ಳೆ ಇವುಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳು ಅನಾಫೆಲಿಸ್ ಮಲೇರಿಯಾ ರೋಗಕ್ಕೆ ನಾಂದಿ ಹಾಡಿದಲ್ಲಿ ಏಡಿಸ್ ಸೊಳ್ಳೆ ಡೆಂಗ್ ಮತು ್ತಚಿಕುನ್‌ಗುನ್ಯಾ ರೋಗಕ್ಕೆ ದಾರಿ ಮಾಡಿಕೊಡುತ್ತದೆ. ಕ್ಯೂಲೆಕ್ಸ್ ಸೊಳ್ಳೆಯಿಂದ ಮೆದುಳು ಜ್ವರ ಮತ್ತು ಆನೆಕಾಲು ರೋಗ ಹರಡುತ್ತದೆ.

 ಮೂರ್ತಿ ಚಿಕ್ಕದಾದರೂ ಕೀರ್ತಿದೊಡ್ಡದು

ಸೊಳ್ಳೆಗಳು ದೇಹದಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ, ಮನುಕುಲದ ಬಹುದೊಡ್ಡ ವೈರಿ. ಸೊಳ್ಳೆಗಳು ಮನುಷ್ಯನ ಏಳಿಗೆಗೆ ಬಹು ದೊಡ್ಡ ಕಂಟಕವೆಂದರೂ ತಪ್ಪಲ್ಲ. ಮಲೇರಿಯಾ ಬಾಧಿಸಿದಷ್ಟು ತೊಂದರೆ, ಆರ್ಥಿಕ ನಷ್ಟ, ಸಾವು ನೋವು ಇನ್ನಾವುದೇ ರೋಗದಿಂದಲೂ ಬಂದಿಲ್ಲ. ಮಲೇರಿಯಾದ ಕಪಿಮುಷ್ಟಿಗೆ ಸಿಕ್ಕಿ ಮನುಕುಲ ವಿಲವಿಲನೆ ಒದ್ದಾಡಿದೆ ಎಂದರೂಅತಿಶಯೋಕ್ತಿಯಲ್ಲ. ಒಂದು ಅಂಕಿ ಅಂಶಗಳ ಪ್ರಕಾರ ವಿಶ್ವದಾದ್ಯಂತ ವರ್ಷಕ್ಕೆ 5 ಮಿಲಿಯನ್ ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ.ಲಕ್ಷಾಂತರಮಂದಿ ಸಾಯುತ್ತಲೇ ಇದ್ದಾರೆ. ಮಲೇರಿಯಾದ ಜೊತೆಗೆ ಇತರ ಡೆಂಗ್, ಮೆದುಳು ಜ್ವರ, ಆನೆಕಾಲು ರೋಗ, ಚಿಕುನ್‌ಗುನ್ಯಾ ಜ್ವರ ಹೀಗೆ ಸೊಳ್ಳೆಗಳಿಂದ ಹಲವು ರೋಗಗಳು ಮನುಷ್ಯನ ಮೇಲೆ ಪ್ರಹಾರ ಮಾಡುತ್ತಲೇ ಇವೆ.
ಜೀವಜಗತ್ತಿನ ಪ್ರಭೇದಗಳಲ್ಲಿ ಕೀಟ ಪ್ರಭೇದ ಬಹಳ ದೊಡ್ಡದು. ಇದರಲ್ಲಿ ಸೊಳ್ಳೆಗಳದ್ದೇ ಸಿಂಹಪಾಲು. ಜಗತ್ತಿನಾದ್ಯಂತ ಜನಿಸುವ ಸೊಳ್ಳೆಗಳಲ್ಲಿ ಶೇ. 80ರಿಂದ 90ರಷ್ಟು ಕಾಡುಗಳಲ್ಲಿ ಹುಟ್ಟಿ ಬೆಳೆದು ಸಾಯುತ್ತವೆ. ಕೇವಲ ಶೇ. 10ರಿಂದ 20 ಮಾತ್ರ ಮನುಷ್ಯರ ಸಂಪರ್ಕಕ್ಕೆ ಬರುತ್ತವೆ. ಸಂತಸದ ವಿಚಾರವೆಂದರೆ ಈ ಶೇಕಡಾ 10ರಲ್ಲಿ, ಕೇವಲ ನೂರರಲ್ಲಿ ಒಂದೆರಡು ಸೊಳ್ಳೆಗಳಿಗೆ ಮಾತ್ರ ಮಾನವನ ರಕ್ತಹೀರುವ ಅವಕಾಶ ದೊರಕುತ್ತದೆ. ಎಲ್ಲಾ ಸೊಳ್ಳೆಗಳಿಗೂ ಮನುಷ್ಯನ ರಕ್ತಹೀರುವ ಅವಕಾಶ ದೊರೆತಲ್ಲಿ ನಮ್ಮ ಊಹೆಗೂ ನಿಲುಕದ ರೋಗಗಳು ಹುಟ್ಟಬಹುದು ಮತ್ತು ಹರಡ ಬಹುದು.

ರೋಗವಾಹಕ

ಕಾಡು ಬಿಟ್ಟು ನಾಡು ಸೇರಿದ ಸೊಳ್ಳೆಗಳಿಗೆ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ರಕ್ತವೇ ಆಹಾರ. ಕಾಡುಕಡಿದು ಕಾಂಕ್ರೀಟ್ ನಾಡು ಮಾಡಿರುವ ಮನುಷ್ಯನಿಗೆ ಉಚಿತವಾಗಿ ದೊರಕಿದ ಸಂಗಾತಿ ಸೊಳ್ಳೆ ಎಂದರೂ ತಪ್ಪಲ್ಲ. ಇದು ನಾವೇ ಮಾಡಿಕೊಂಡ ಸ್ವಯಂಕೃತ ಅಪರಾಧ.
ಹೆಣ್ಣುಸೊಳ್ಳೆಗಳಿಗೆ ಮೊಟ್ಟೆ ಇಡುವ ಸಮಯದಲ್ಲಿ ರಕ್ತ ಅತೀ ಅಗತ್ಯ. ಇದಕ್ಕಾಗಿ ಇವುಗಳು ಹೆಚ್ಚಾಗಿ ಮನುಷ್ಯನ ಮತ್ತು ಇತರ ಪ್ರಾಣಿಗಳ ರಕ್ತಹೀರುತ್ತವೆ. ಈ ಪ್ರಕ್ರಿಯೆಯಲ್ಲಿ ರೋಗಿಗಳಿಂದ ಹೀರಿದ ರಕ್ತದ ಜೊತೆಗೆ ರೋಗಿಯಲ್ಲಿನ ಜೀವಾಣುಗಳನ್ನು ಹೀರಿಕೊಂಡು ಬಿಡುತ್ತವೆ. ಆ ಬಳಿಕ ಈ ರೋಗಾಣುಯುಕ್ತ ಸೊಳ್ಳೆ ಆರೋಗ್ಯವಂತ ಮನುಷ್ಯರನ್ನು ಕಚ್ಚಿ ತನ್ನ ಎಂಜಲಿನಲ್ಲಿನ ರೋಗಾಣುಗಳನ್ನು ಆತನಿಗೂ ಹಬ್ಬಿಸಿ ರೋಗವನ್ನು ಹರಡಿಸುತ್ತದೆ. ಹೀಗೆ ಸೊಳ್ಳೆಗಳು ರೋಗವಾಹಕಕೀಟಗಳಾಗಿ ಮನುಕುಲಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ.

ಸೊಳ್ಳೆ ನಿಯಂತ್ರಣಕ್ಕೆ ಈ ಕೆಳಗಿನ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

1. ಪರಿಸರದ ಸ್ವಚ್ಛತೆಯನ್ನು ಕಾಪಾಡಬೇಕು. ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ನಾವು ಬದುಕಬೇಕಾದ ಅನಿವಾರ್ಯತೆ ಇದೆ ಮತ್ತು ಇತರ ಜೀವ ಸಂಕುಲಗಳನ್ನು ಬದುಕಲು ಬಿಡಬೇಕು

2. ಸೂಕ್ತ ನೀರಿನ ನಿರ್ವಹಣೆಗಾಗಿ ಬೇಕಾದ ವ್ಯವಸ್ಥೆ ಮಾಡಬೇಕು. ಉತ್ತಮ ಚರಂಡಿ ವ್ಯವಸ್ಥೆ, ನದಿ, ಕೆರೆ, ತೊರೆ, ಕಾಲುವೆಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು.

 3. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ.

4. ಎಲ್ಲೆಂದರಲ್ಲಿ ಕಸ ಎಸೆಯುವುದು, ತಿಪ್ಪೆಗುಂಡಿಗಳಲ್ಲಿ ನೀರು ನಿಲ್ಲುವುದು, ಘನ ಮತ್ತುದ್ರವ್ಯ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿನಿರ್ವಹಣೆಮಾಡುವುದು ಇತ್ಯಾದಿಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ.

5. ಕೃತಕವಾಗಿ ನೀರು ನಿಲ್ಲುವ ಜಾಗಗಳಾದ ತೆಂಗಿನಚಿಪ್ಪು, ಹೂದಾನಿ, ಟಯರ್, ಖಾಲಿ ಡಬ್ಬ ಮತ್ತು ಕ್ಯಾನ್‌ಗಳು, ಅಕ್ವೇರಿಯಂ, ಏರ್‌ಕಂಡಿಷನರ್ ಮತ್ತು ಏರ್‌ಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆ ನಿಲ್ಲದಂತೆ ಮಾಡಿಕೊಳ್ಳಬೇಕು 6. ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿಮೀನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು.

7. ಕೀಟನಾಶಕಗಳ ಬಳಕೆ ಸೊಳ್ಳೆ ನಿಯಂತ್ರಣ ಮಾಡುವ ಔಷಧಿಗಳ ಬಳಕೆ ಮುಂತಾದುವುಗಳಿಂದ ಸೊಳ್ಳೆಗಳ ಸಂತಾನಭಿವೃದ್ಧಿ ಆಗದಂತೆ ಮಾಡಬೇಕು.

8. ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗುವಂತಹ ಯಾವುದೇ ರೀತಿಯ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕು.

ಒಟ್ಟಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತುನೀಡಬೇಕಾದ ತುರ್ತು ಆವಶ್ಯಕತೆ ಇದೆ.

Writer - ಮುರಲೀ ಮೋಹನ್, ಚೂಂತಾರು

contributor

Editor - ಮುರಲೀ ಮೋಹನ್, ಚೂಂತಾರು

contributor

Similar News