ಆಕ್ರೋಟು ( ವಾಲ್ನಟ್ ) ಎಂಬ ಸೂಪರ್ ಫುಡ್ ಬಗ್ಗೆ ನಿಮಗೇನೇನು ಗೊತ್ತು ?

Update: 2017-08-24 09:30 GMT

ನಿಮಗೆ ಹಸಿವಾಗಿದೆ ಎಂದು ಯಾವಾಗಲೂ ಅನ್ನಿಸುತ್ತದೆಯೇ? ಏನು ಸಿಗುತ್ತೋ ಅದನ್ನು ತಿನ್ನುತ್ತೀರಾ? ಹಾಗಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇಲ್ಲಿದೆ. ತಜ್ಞರು ಈಗ ನಿಮ್ಮ ಹಸಿವೆಯನ್ನು ನೀಗಿಸುವ ಮತ್ತು ಅದಕ್ಕೆ ಕಡಿವಾಣ ಹಾಕುವ ಆರೋಗ್ಯಕರ ತಿನಿಸು ಎಂದರೆ ಅಕ್ರೋಟು(ವಾಲ್ನಟ್) ಎನ್ನುವುದನ್ನು ತಮ್ಮ ಇತ್ತೀಚಿನ ಅಧ್ಯಯನದಿಂದ ಕಂಡುಕೊಂಡಿದ್ದಾರೆ. ನಿಯಮಿತವಾಗಿ ಅಕ್ರೋಟು ತಿನ್ನುವುದರಿಂದ ಹಸಿವನ್ನು ನಿಯಂತ್ರಿಸಲು ಸಾಧ್ಯ ಮತ್ತು ಇದು ಶರೀರದ ತೂಕವನ್ನು ಇಳಿಸಿಕೊಳ್ಳಲೂ ನೆರವಾಗುತ್ತದೆ ಎನ್ನುವುದನ್ನು ಅಧ್ಯಯನವು ದೃಢಪಡಿಸಿದೆ.

  

ಮಾನವನ ಮಿದುಳಿನ ರೂಪದ ಗಟ್ಟಿಯಾದ ಕವಚದ ಒಳಗೆ ಅಡಗಿರುವ ಅಕ್ರೋಟು ಆರೋಗ್ಯಕರ ಶರೀರ ಮತ್ತು ಮನಸ್ಸಿಗೆ ಪೂರಕವಾಗಿದೆ. ಅಕ್ರೋಟು ಮೊದಲಿನಿಂದಲೂ ಮಿದುಳಿನ ಉತ್ತಮ ಕಾರ್ಯನಿರ್ವಹಣೆಯೊಂದಿಗೆ ಗುರುತಿಸಿಕೊಂಡಿದೆ. ಅದು ವ್ಯಕ್ತಿಗೆ ಉತ್ತಮ ಆರೋಗ್ಯವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಅತ್ಯಂತ ಪರಿಣಾಮ ಕಾರಿ ಸೂಪರ್‌ಫುಡ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟಿದೆ. ಡಯಾಬಿಟೀಸ್,ಒಬೆಸಿಟಿ ಆ್ಯಂಡ್ ಮೆಟಾಬಾಲಿಸಂ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟಗೊಂಡಿರುವ ನೂತನ ಅಧ್ಯಯನ ವರದಿಯು ಪ್ರತಿದಿನ ಅಕ್ರೋಟು ತಿನ್ನುವುದರಿಂದ ಹಸಿವನ್ನು ತಗ್ಗಿಸುವ ಮಿದುಳಿನಲ್ಲಿಯ ಪ್ರದೇಶವನ್ನು ಕ್ರಿಯಾಶೀಲಗೊಳಿಸಬಹುದು ಎಂದು ಬೆಟ್ಟು ಮಾಡಿದೆ. ಅಕ್ರೋಟು ಹೊಟ್ಟೆ ತುಂಬಿದ ಭಾವನೆಯನ್ನು ಮೂಡಿಸುವ ಮೂಲಕ ಅತಿಯಾಗಿ ತಿನ್ನುವ ಪ್ರವೃತ್ತಿಗೆ ಕಡಿವಾಣವನ್ನೂ ಹಾಕುತ್ತದೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಕ್ರೋಟು ತಿಂದ ಬಳಿಕ ಹೊಟ್ಟೆ ತುಂಬಿದಂತೆ ಎನಿಸುತ್ತದೆ ಎಂದು ಹೆಚ್ಚಿನ ಜನರು ಹೇಳುತ್ತಾರೆ. ಆಹಾರವನ್ನು ಗ್ರಹಿಸುವ ಮಿದುಳಿನ ಚಟುವಟಿಕೆಗಳಲ್ಲಿ ಬದಲಾವಣೆ ಗಳಾಗುತ್ತಿರುತ್ತವೆ ಎನ್ನುತ್ತಾರೆ ಅಧ್ಯಯನ ಲೇಖಕಿ,ಬೆತ್ ಇಸ್ರೇಲ್ ಡೀಕೊನೆಸ್ ಮೆಡಿಕಲ್ ಸೆಂಟರ್(ಬಿಐಡಿಎಂಸಿ)ನ ಒಲಿವಿಯಾ ಎಂ.ಫಾರ್ ಹೇಳುತ್ತಾರೆ.

ಅಕ್ರೋಟು ಹಸಿವನ್ನು ಹೇಗೆ ಅಡಗಿಸುತ್ತದೆ ಮತ್ತು ಮಿದುಳಿನ ಚಟುವಟಿಕೆಗಳಲ್ಲಿ ಹೇಗೆ ಬದಲಾವಣೆಗಳನ್ನುಂಟು ಮಾಡುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಸಂಶೋ ಧಕರು ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೋನನ್ಸ್ ಇಮೇಜಿಂಗ್ ಎಂಬ ವಿಧಾನವನ್ನು ಅನುಸರಿಸಿದ್ದರು. ಸ್ಥೂಲಕಾಯ ಹೊಂದಿರುವ 10 ಸ್ವಯಂಸೇವಕರನ್ನು ಬಿಐಡಿಎಂಸಿಯ ಕ್ಲಿನಿಕಲ್ ರೀಸರ್ಚ್ ಸೆಂಟರ್‌ನಲ್ಲಿ ಐದು ದಿನಗಳ ಕಾಲ ಉಳಿಸಿಕೊಳ್ಳಲಾಗಿತ್ತು. ಈ ಅವಧಿಯಲ್ಲಿ ಅವರಿಗೆ ಪ್ರತಿದಿನ 48 ಗ್ರಾಂ ಅಕ್ರೋಟನ್ನು ಒಳಗೊಂಡಿದ್ದ ತಿನಿಸನ್ನು ನೀಡಲಾಗಿತ್ತು. ಈ ಸ್ವಯಂಸೇವಕರಿಗೆ ಅಕ್ರೋಟು ಇಲ್ಲದ,ಆದರೆ ಅದರಷ್ಟೇ ಪೋಷಕಾಂಷಗಳನ್ನು ಹೊಂದಿದ್ದ ಮತ್ತು ಅಕ್ರೋಟಿನ ತಿನಿಸಿನ ಪರಿಮಳ ಮತ್ತು ರುಚಿಯನ್ನೇ ಹೊಂದಿದ್ದ ಬೇರೆ ತಿನಿಸನ್ನೂ ನೀಡಲಾಗಿತ್ತು.

ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಅವರು ಅತ್ಯಂತ ಇಷ್ಟಪಡುವ ಆಹಾರದ ಚಿತ್ರಗಳನ್ನು ತೋರಿಸಿದಾಗ ಅವರು ಅಕ್ರೋಟಿನ ತಿನಿಸು ತಿಂದ ಬಳಿಕ ಬಲ ಇನ್ಸುಲಾ ಎಂದು ಕರೆಯಲಾಗುವ ಮಿದುಳಿನ ಭಾಗದಲ್ಲಿ ಹೆಚ್ಚಿನ ಚಟುವಟಿಕೆಗಳು ಕಂಡು ಬಂದಿದ್ದವು. ಆದರೆ ಅಕ್ರೋಟಿನ ಬದಲು ಬೇರೆ ತಿನಿಸು ತಿಂದ ನಂತರ ಇಂತಹ ಚಟುವಟಿಕೆಗಳು ಕಂಡು ಬಂದಿರಲಿಲ್ಲ. ಈ ಅಧ್ಯಯನವು ಇನ್ಸುಲಾ ಆಹಾರದ ಅರಿವಿನ ನಿಯಂತ್ರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರು ಆಹಾರದ ಆಯ್ಕೆಯ ಬಗ್ಗೆ ಹೆಚ್ಚಿನ ಗಮನವನ್ನು ನಿಡುತ್ತಿದ್ದರು ಮತ್ತು ಅತ್ಯಂತ ಅಪೇಕ್ಷಿತ ಆಹಾರ ಅಥವಾ ಜಂಕಫುಡ್‌ಗಿಂತ ಕಡಿಮೆ ಅಪೇಕ್ಷಿತ ಆಹಾರವನ್ನು ಆಯ್ಕೆ ಮಾಡಿ ಕೊಂಡಿದ್ದರು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News