ಬೇಯಿಸಿದ ಕಲ್ಲಂಗಡಿ ಬೀಜಗಳನ್ನು ತಿನ್ನುವುದರ ಲಾಭಗಳು ಗೊತ್ತೇ?
ಹಲವಾರು ಪೋಷಕಾಂಷಗಳನ್ನು ಹೊಂದಿರುವ ಕಲ್ಲಂಗಡಿ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಹಣ್ಣಾಗಿದೆ. ಅದು ಎ,ಬಿ1,ಬಿ6 ಮತ್ತು ಸಿ ವಿಟಾಮಿನ್‌ಗಳು, ತಾಮ್ರ, ಪೊಟ್ಯಾಷಿಯಂ, ಮ್ಯಾಗ್ನೇಷಿಯಂ, ಪ್ಯಾಂಟೊಥೆನಿಕ್ ಆಮ್ಲ ಮತ್ತು ಬಯೊಟಿನ್‌ಗಳ ಉತ್ತಮ ಮೂಲವಾಗಿದೆ. ಆದರೆ ಕಲ್ಲಂಗಡಿ ಹಣ್ಣಿನ ಬೀಜಗಳೂ ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತವೆ ಎನ್ನುವುದು ನಿಮಗೆ ಗೊತ್ತೇ?
ಕಲ್ಲಂಗಡಿ ಹಣ್ಣಿನ ಬೀಜಗಳು ಫ್ಯಾಟಿ ಆ್ಯಸಿಡ್‌ಗಳು, ಅಗತ್ಯ ಪ್ರೋಟೀನ್‌ಗಳು, ಮ್ಯಾಗ್ನೇಷಿಯಂ, ಪೊಟ್ಯಾಷಿಯಂ, ಮ್ಯಾಂಗನೀಸ್, ಕಬ್ಬಿಣ, ಸತುವು ಮತ್ತು ರಂಜಕ ದಂತಹ ಖನಿಜಗಳು, ಥಿಯಾಮೈನ್, ನಿನಾಸಿನ್ ಮತ್ತು ಫಾಲೇಟ್‌ಗಳಂತಹ ಬಿ ವಿಟಾಮಿನ್‌ಗಳನ್ನು ಒಳಗೊಂಡಿವೆ. ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿ ಸುವ ಮತ್ತು ರಕ್ತನಾಳಗಳ ಭಿತ್ತಿ ಗಟ್ಟಿಗೊಳ್ಳುವಿಕೆ, ಅಧಿಕ ರಕ್ತದೊತ್ತಡ, ಗಂಟಲೂತ ಮತ್ತು ನಿಮಿರುವಿಕೆ ದೌರ್ಬಲ್ಯಗಳ ವಿರುದ್ಧ ಧನಾತ್ಮಕ ಪರಿಣಾಮಗಳನ್ನು ಬೀರುವ ಸಿಟ್ರುಲಿನ್ ಅನ್ನೂ ಇವು ಒಳಗೊಂಡಿವೆ. ಮೂತ್ರಪಿಂಡಗಳು ಮತ್ತು ಮೂತ್ರನಾಳ ಸೋಂಕಿಗೆ ಚಿಕಿತ್ಸೆಯಲ್ಲಿಯೂ ಕಲ್ಲಂಗಡಿ ಹಣ್ಣಿನ ಬೀಜಗಳು ಉಪಯುಕ್ತವಾಗಿವೆ.
ಹೃದಯಕ್ಕೆ ರಕ್ಷಣೆ:
ಕಲ್ಲಂಗಡಿ ಹಣ್ಣಿನ ಬೀಜಗಳು ಹೃದಯದ ಸಹಜ ಕಾರ್ಯ ನಿರ್ವಹಣೆಗೆ ಅಗತ್ಯವಾಗಿರುವ ಮ್ಯಾಗ್ನೇಷಿಯಂನ ಸಮೃದ್ಧ ಮೂಲಗಳಾಗಿವೆ. ಅವು ರಕ್ತದೊತ್ತಡದ ಸಾಮಾನ್ಯ ಮಟ್ಟಗಳನ್ನು ಕಾಯ್ದುಕೊಳ್ಳುವ ಕೊತೆಗೆ ಚಯಾಪಚಯ ಪ್ರಕ್ರಿಯೆಯನ್ನು ಉತ್ತೇಜಿಸುತ್ತವೆ. ಇದು ಬೇಯಿಸಿದ ಕಲ್ಲಂಗಡಿ ಹಣ್ಣಿನ ಬೀಜಗಳ ಅತ್ಯುತ್ತಮ ಆರೋಗ್ಯಲಾಭವಾಗಿದೆ.
ವಯಸ್ಸಾಗುವುದನ್ನು ತಡೆಯುತ್ತದೆ:
ಈ ಬೀಜಗಳು ಉತ್ಕರ್ಷಣ ನಿರೋಧಿ ಗುಣಗಳನ್ನು ಹೊಂದಿದ್ದು, ಇವು ಶರೀರಕ್ಕೆ ವಯಸ್ಸಾಗುವುದನ್ನು ನಿಧಾನಗೊಳಿಸುತ್ತವೆ ಮತ್ತು ಚರ್ಮವು ಕಾಂತಿಯುಕ್ತವಾಗಿರುತ್ತದೆ.
ಮೊಡವೆಗಳನ್ನು ನಿವಾರಿಸುತ್ತದೆ:
ಕಲ್ಲಂಗಡಿ ಹಣ್ಣಿನ ಬೀಜಗಳ ಎಣ್ಣೆಯನ್ನು ಮುಖವನ್ನು ಸ್ವಚ್ಛಗೊಳಿಸಲು ಬಳಸಿದರೆ ಮೊಡವೆಗಳು, ಕೊಳೆ ಮತ್ತು ಮೃತ ಚರ್ಮ ಜೀವಕೋಶಗಳು ನಿವಾರಣೆಯಾಗುತ್ತವೆ. ಯಾವುದೇ ಬಗೆಯ ಚರ್ಮಕ್ಕೂ ಈ ಎಣ್ಣೆಯು ಸೂಕ್ತವಾಗಿದೆ.
ತಲೆಕೂದಲನ್ನು ಬಲಗೊಳಿಸುತ್ತದೆ:
ಕಲ್ಲಂಗಡಿ ಹಣ್ಣಿನ ಬೀಜಗಳು ಕೂದಲನ್ನು ಬಲ ಗೊಳಿಸಲು ನೆರವಾಗುವ ಅಧಿಕ ಪ್ರೋಟೀನ್ ಮತ್ತು ಅಮಿನೊ ಆ್ಯಸಿಡ್‌ಗಳನ್ನು ಒಳಗೊಂಡಿವೆ. ಹುರಿದ ಕಲ್ಲಂಗಡಿ ಹಣ್ಣಿನ ಬೀಜಗಳು ಕೂದಲಿಗೆ ಬಣ್ಣ ನೀಡುವ ಮೆಲಾನಿನ್ ಅನ್ನು ಉತ್ಪಾದಿಸುವ ತಾಮ್ರವನ್ನು ಒಳಗೊಂಡಿರುತ್ತವೆ ಮತ್ತು ಇದು ಕೂದಲಿಗೆ ಹೊಳಪನ್ನು ನೀಡುತ್ತದೆ.
ತಲೆಗೂದಲಿಗೆ ಹಾನಿಯನ್ನು ತಡೆಯುತ್ತದೆ:
ಈ ಬೀಜಗಳು ಅಗತ್ಯ ಫ್ಯಾಟಿ ಆ್ಯಸಿಡ್ ಗಳನ್ನೊಳಗೊಂಡಿದ್ದು, ಇವು ಕೂದಲಿಗೆ ಹಾನಿಯಾಗುವುದನ್ನು ತಡೆಯುತ್ತವೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಈ ಬೀಜಗಳು ನಮ್ಮ ಶರೀರಕ್ಕೆ ಮ್ಯಾಗ್ನೀಷಿಯಂ ಅನ್ನು ಒದಗಿಸುತ್ತವೆ. ಇವುಗಳಲ್ಲಿರುವ ವಿಟಾಮಿನ್ ಬಿ5 ಕಾರ್ಬೊಹೈಡ್ರೇಟ್‌ಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಾಲುಗಳ ಊತವನ್ನು ಗುಣಪಡಿಸುತ್ತದೆ:
ಒಂದು ಟೀ ಚಮಚದಷ್ಟು ಒಣ ಮತ್ತು ಹುಡಿ ಮಾಡಿದ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ, ಅದನ್ನು ಮುಕ್ಕಾಲು ಕಪ್ ನೀರಿನಲ್ಲಿ ಹಾಕಿಕೊಂಡು ದಿನಕ್ಕೆರಡು ಬಾರಿ ಸೇವಿಸಿದರೆ ಕಾಲುಗಳು ಮತ್ತು ಇತರ ಭಾಗಗಳಲ್ಲಿನ ಊತ ನಿವಾರಣೆಯಾಗುತ್ತದೆ.
ಪುರುಷರಲ್ಲಿ ಫಲವತ್ತತೆ ಹೆಚ್ಚಿಸುತ್ತದೆ:
ಕಲ್ಲಂಗಡಿ ಹಣ್ಣಿನ ಬೀಜಗಳು ಲೀಕೊಪಿನ್ ಎನ್ನುವ ಉತ್ಕರ್ಷಣ ನಿರೋಧಕವನ್ನು ಒಳಗೊಂಡಿದ್ದು, ಇದು ಪುರುಷರಲ್ಲಿ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.