ಡೆಂಗ್ ಕಾಯಿಲೆಗೆ ಪಪ್ಪಾಯ ಎಲೆಗಳನ್ನು ಬಳಸಿ ನೋಡಿ....

Update: 2017-08-30 11:51 GMT

ಅತ್ಯಂತ ಆರೋಗ್ಯಕರ ಹಣ್ಣುಗಳಲ್ಲೊಂದಾಗಿರುವ ಪಪ್ಪಾಯ ಹಲವಾರು ಕಾಯಿಲೆ ಗಳನ್ನು ಗುಣಪಡಿಸುವಲ್ಲಿ ನೆರವಾಗುತ್ತದೆ. ಹಣ್ಣು ಮಾತ್ರವಲ್ಲ, ಪಪ್ಪಾಯ ಗಿಡದ ಎಲೆಗಳೂ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ. ಇವು ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಜೊತೆಗೆ ಅತ್ಯುತ್ತಮ ಮಲೇರಿಯಾ ನಿರೋಧಕ ಗುಣವನ್ನೂ ಹೊಂದಿವೆ. ಹೀಗಾಗಿ ಪಪ್ಪಾಯ ಎಲೆ ಡೆಂಗ್ ಜ್ವರ ಮತ್ತು ಇತರ ಕಾಯಿಲೆಗಳ ವಿರುದ್ಧ ಅತ್ಯುತ್ತಮ ಮನೆಮದ್ದು ಆಗಿದೆ.

ಪಪ್ಪಾಯ ಎಲೆಗಳು ಫಿನೊಲಿಕ್ ಸಂಯುಕ್ತಗಳು, ಪಪಾಯಿನ್ ಮತ್ತು ಅಲ್ಕಲಾಯ್ಡಾ ಗಳನ್ನು ಒಳಗೊಂಡಿದ್ದು, ಪ್ರಬಲ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುವ ಇವು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಲ್ಲದೆ ಪಪಾಯಿನ್ ಇತರ ಸಂಯುಕ್ತಗಳೊಂದಿಗೆ ಸೇರಿಕೊಂಡು ಪಚನ ಸಮಸ್ಯೆಗಳನ್ನು ನಿವಾರಿಸಬಲ್ಲ ಅಗತ್ಯ ಪ್ರೋಟಿನ್‌ನ್ನು ನಮ್ಮ ಶರೀರವು ಪರಿಣಾಮಕಾರಿಯಾಗಿ ಜೀರ್ಣಿಸಿಕೊಳ್ಳುವಂತೆ ಮಾಡುತ್ತದೆ.

ಪಪ್ಪಾಯ ಎಲೆಗಳಿಂದ ತೆಗೆಯಲಾಗುವ ಸಾರವು ಡೆಂಗ್ ರೋಗಿಗಳಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಡೆಂಗ್ ಕಾಯಿಲೆಗೆ ನಿಯಮಿತ ಚಿಕಿತ್ಸೆ ಯನ್ನು ಪಡೆಯುತ್ತಿದ್ದ 400 ರೋಗಿಗಳನ್ನು ಅಧ್ಯಯನಕ್ಕೊಳಪಡಿಸಿದ ಸಂಶೋಧಕರು ಅವರಲ್ಲಿ ಅರ್ಧದಷ್ಟು ಜನರಿಗೆ ಮಾತ್ರೆಗಳ ರೂಪದಲ್ಲಿ ಪಪ್ಪಾಯ ಎಲೆಗಳ ಸಾರದ ವಿಶೇಷ ಡೋಸ್ ನೀಡಿದ್ದರು. ಇದನ್ನು ಸೇವಿಸಿದ್ದ ರೋಗಿಗಳಲ್ಲಿ ಇತರ ರೋಗಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಪ್ಲೇಟ್‌ಲೆಟ್‌ಗಳು ವೃದ್ಧಿಯಾಗಿದ್ದವು ಮತ್ತು ಅಡ್ಡ ಪರಿಣಾಮಗಳು ತುಂಬ ಕಡಿಮೆಯಾಗಿದ್ದವು. ಅವರಿಗೆ ರಕ್ತ ಪೂರಣದ ಅಗತ್ಯವೂ ಬಿದ್ದಿರಲಿಲ್ಲ.

ಪಪ್ಪಾಯ ಎಲೆಗಳ ರಸವು ಡೆಂಗ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಮದ್ದು ಆಗಿದೆ ಎನ್ನುವುದು ಹೆಚ್ಚಿನ ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ಈಡೀಸ್ ಸೊಳ್ಳೆಗಳು ಈ ಮಾರಣಾಂತಿಕ ಕಾಯಿಲೆಗೆ ಕಾರಣವಾಗಿದ್ದು, ಅವು ನಮ್ಮ ರಕ್ತದೊಳಗೆ ರೋಗಾಣುಗಳನ್ನು ಸೇರಿಸುತ್ತವೆ. ಇದು ತೀವ್ರ ಜ್ವರ, ಚರ್ಮದ ಮೇಲೆ ದದ್ದುಗಳು ಮತ್ತು ಪ್ಲೇಟ್‌ಲೆಟ್‌ಗಳ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ಪಪ್ಪಾಯ ಎಲೆಗಳ ಸಾರವು ಡೆಂಗ್ ಲಕ್ಷಣಗಳನ್ನು ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ.

ಪಪ್ಪಾಯ ಎಲೆಗಳು ಮಲೇರಿಯಾ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಡೆಂಗ್ಯು ಜ್ವರಕ್ಕೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತವೆ. ಪಪ್ಪಾಯ ಎಲೆಗಳಲ್ಲಿರುವ ಎಸಿಟೋಜೆನಿನ್ ಎಂಬ ಸಂಯುಕ್ತವು ಮಲೇರಿಯಾ ಮತ್ತು ಡೆಂಗ್ಯುದಂತಹ ಕಾಯಿಲೆಗಳನ್ನು ತಡೆಯುವಲ್ಲಿ ನೆರವಾಗುತ್ತದೆ.

ಡೆಂಗ್ ಚಿಕಿತ್ಸೆಯಲ್ಲಿ ಪಪ್ಪಾಯ ಎಲೆಗಳನ್ನು ಬೇರೆ ಬೇರೆ ವಿಧಾನಗಳಲ್ಲಿ ಬಳಸಬಹುದಾಗಿದೆ.

 ಮಧ್ಯಮ ಗಾತ್ರದ ಕೆಲವು ಪಪ್ಪಾಯ ಎಲೆಗಳನ್ನು ಕಿತ್ತು ಅವುಗಳನ್ನು ಚೆನ್ನಾಗಿ ತೊಳೆದ ಬಳಿಕ ಭಾಗಶಃ ಒಣಗಿಸಿ ಸಣ್ಣ ಚೂರುಗಳನ್ನಾಗಿ ಕತ್ತರಿಸಬೇಕು. ಸಾಸ್‌ಪ್ಯಾನ್‌ನಲ್ಲಿ ಎರಡು ಲೀಟರ್ ನೀರಿನಲ್ಲಿ ಕುದಿಸಿ ಬಳಿ ಸಣ್ಣ ಬೆಂಕಿಯಲ್ಲಿ ಬೇಯಲು ಬಿಡಬೇಕು. ನೀರಿನ ಪ್ರಮಾಣ ಅರ್ಧಕ್ಕೆ ಇಳಿಯುವವರೆಗೂ ಪ್ಯಾನ್‌ನ್ನು ಮುಚ್ಚಬಾರದು. ಅದು ದಪ್ಪವಾಗುವರೆಗೂ ಸಣ್ಣ ಉರಿಯಲ್ಲೇ ಇರಲಿ. ಬಳಿಕ ಅದನ್ನು ಸೋಸಿ ಸಾರವನ್ನು ಗಾಜಿನ ಬಾಟ್ಲಿಯಲ್ಲಿ ಹಾಕಿಟ್ಟು, ರೋಗಿಗೆ ಕುಡಿಸಬಹುದು.

ಕೆಲವು ಪಪ್ಪಾಯ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಗದು,ಪ್ರತಿದಿನ ಎರಡು ಬಾರಿ ಎರಡು ಚಮಚಗಳಷ್ಟು ಈ ಕಹಿರಸವನ್ನು ರೋಗಿಗೆ ನೀಡಬಹುದಾಗಿದೆ.

ಪಪ್ಪಾಯ ಹಣ್ಣನ್ನು ಪ್ರತಿದಿನ ತಿನ್ನುವದರಿಂದಲೂ ಡೆಂಗ್ಯು ಜ್ವರಕ್ಕೆ ಕಡಿವಾಣ ಹಾಕಬಹುದು. ಅಲ್ಲದೆ ಸ್ವಲ್ಪ ಲಿಂಬೆರಸವನ್ನು ಒಂದು ಗ್ಲಾಸ್ ಪಪ್ಪಾಯ ರಸಕ್ಕೆ ಬೆರೆಸಿ ಸೇವಿಸಬಹುದಾಗಿದೆ. ದಿನಕ್ಕೆ ಕನಿಷ್ಠ 2-3 ಬಾರಿ ಈ ರಸವನ್ನು ಸೇವಿಸುವದರಿಂದ ಡೆಂಗ್ಯು ಜ್ವರವನ್ನು ಶೀಘ್ರವಾಗಿ ಗುಣಪಡಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News