ಪ್ರಥಮ ಚಿಕಿತ್ಸೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

Update: 2017-09-06 09:01 GMT

ಅಪಘಾತ ಅಥವಾ ಇತರ ಸಂದರ್ಭಗಳಲ್ಲಿ ಗಾಯಾಳುಗಳ ಜೀವ ಉಳಿಸುವುಲ್ಲಿ ಪ್ರಥಮ ಚಿಕಿತ್ಸೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮನೆಯಲ್ಲಿ ಜಾರಿ ಬಿದ್ದು ಪೆಟ್ಟಾದರೆ, ಸುಟ್ಟಗಾಯಗಳಾದರೆ ವೈದ್ಯರ ಬಳಿಗೆ ಹೋಗುವ ಮುನ್ನ ಪ್ರಥಮ ಚಿಕಿತ್ಸೆ ಅಗತ್ಯ. ಆದರೆ ಪ್ರಥಮ ಚಿಕಿತ್ಸೆ ನೀಡುವಾಗ ಕೆಲವು ಸಾಮಾನ್ಯ ತಪ್ಪುಗಳಾಗುತ್ತವೆ. ಏಕೆಂದರೆ ಪ್ರಥಮ ಚಿಕಿತ್ಸೆ ನೀಡುವವರೆಲ್ಲ ವೈದ್ಯಕೀಯ ಜ್ಞಾನವನ್ನು ಹೊಂದಿರುವುದಿಲ್ಲ, ಇತರರು ಮಾಡಿದ್ದನ್ನು ಅನುಸರಿಸುವುದೇ ಹೆಚ್ಚು.

ಪ್ರಥಮ ಚಿಕಿತ್ಸೆಯಲ್ಲಿ ತಪ್ಪುಗಳನ್ನು ಮಾಡುವುದರಿಂದ ವ್ಯಕ್ತಿಗೆ ಉಪಶಮನ ದೊರೆಯು ವುದಕ್ಕಿಂತ ಆತನ ಸ್ಥಿತಿ ಇನ್ನಷ್ಟು ಹದಗೆಡುವ ಅಪಾಯವಿದೆ. ಇಂತಹ ಕೆಲವು ಸಾಮಾನ್ಯ ತಪ್ಪುಗಳ ಬಗ್ಗೆ ತಿಳಿದುಕೊಂಡಿರುವುದು ಒಳ್ಳೆಯದು.

ಮಂಜುಗಡ್ಡೆ ಚಿಕಿತ್ಸೆ

ಕೆಲವರು ಪ್ರಥಮ ಚಿಕಿತ್ಸೆ ವೇಳೆ ನೋವಾದ ಭಾಗದಲ್ಲಿ ನೇರವಾಗಿ ಚರ್ಮದ ಮೇಲೆಯೇ ಮಂಜುಗಡ್ಡೆಯನ್ನಿಡುತ್ತಾರೆ. ಇದನ್ನು ಸರ್ವಥಾ ಮಾಡಕೂಡದು. ಹಾಗೆ ಮಾಡಿದರೆ ಅದು ಕೋಲ್ಡ್ ಬರ್ನ್ ಅಥವಾ ಚರ್ಮಕ್ಕೆ ಹಾನಿಯನ್ನುಂಟು ಮಾಡುತ್ತದೆ. ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ನೋವಾದ ಭಾಗದ ಮೇಲೆ ಇಡುವುದು ಸರಿಯಾದ ಕ್ರಮವಾಗಿದೆ.

ಕಣ್ಣಿನಿಂದ ಕಸ ತೆಗೆಯುವಿಕೆ

ಕಸವೋ ಧೂಳಿನ ಕಣವೋ ಕಣ್ಣಿನಲ್ಲಿ ಬಿದ್ದರೆ ಅದನ್ನು ಕೈ ಬೆರಳುಗಳಿಂದ ತೆಗೆಯಲು ಪ್ರಯತ್ನಿಸಬೇಡಿ. ಹಾಗೆ ಮಾಡಿದರೆ ಯಾವುದೇ ಸಣ್ಣ ತಪ್ಪಿನಿಂದ ಅಥವಾ ಬೆರಳು ಒಮ್ಮಲೇ ನೂಕಿದಂತಾಗಿ ಕಣ್ಣಿಗೆ ಹಾನಿಯಾಗಬಹುದು. ಹೀಗಾಗಿ ಕಣ್ಣಿನಲ್ಲಿಯ ಕಸ ತೆಗೆಯಲು ವೈದ್ಯರ ಬಳಿ ತೆರಳುವುದು ಒಳ್ಳೆಯದು.

ಮದ್ಯವನ್ನು ಸವರುವುದು

ವ್ಯಕ್ತಿ ಜ್ವರಪೀಡಿತನಾಗಿದ್ದರೆ ಶರೀರದ ಉಷ್ಣತೆಯನ್ನು ಕಡಿಮೆ ಮಾಡಲು ಕೆಲವರು ಮದ್ಯ ಅಥವಾ ವಿನೆಗರ್ ಅನ್ನು ಚರ್ಮಕ್ಕೆ ಸವರುತ್ತಾರೆ. ಹಾಗೆ ಮಾಡುವುದರಿಂದ ಅದು ಚರ್ಮದ ಸೂಕ್ಷ್ಮ ರಂಧ್ರಗಳ ಮೂಲಕ ರಕ್ತವನ್ನು ಸೇರುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಮದ್ಯವು ನಶೆಯನ್ನುಂಟು ಮಾಡಿದರೆ ವಿನೆಗರ್ ಆಮ್ಲೀಯತೆಗೆ ಕಾರಣವಾಗುತ್ತದೆ. ಹೀಗಾಗಿ ವ್ಯಕ್ತಿಯು ಜ್ವರದಿಂದ ಪೀಡಿತನಾಗಿದ್ದರೆ ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಬೇಕು.

ಸುಟ್ಟಗಾಯಗಳಿಗೆ ಬೆಣ್ಣೆಯ ಲೇಪನ

ಸುಟ್ಟಗಾಯಗಳಾದಾಗ ಬೆಣ್ಣೆಯನ್ನು ಲೇಪಿಸಿದರೆ ಅದು ಉರಿಯುತ್ತಿರುವ ಚರ್ಮಕ್ಕೆ ತಣ್ಣನೆಯ ಅನುಭವವನ್ನು ನೀಡುತ್ತದೆಯಾದರೂ ಇದು ಒಳ್ಳೆಯದಲ್ಲ. ಈ ಬೆಣ್ಣೆಯು ಒಣಗಿದಾಗ ಚರ್ಮದ ಮೇಲೆ ಪದರವೊಂದನ್ನು ನಿರ್ಮಿಸಬಹುದು ಮತ್ತು ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿ ಉರಿ ಇನ್ನಷ್ಟು ಹೆಚ್ಚಬಹುದು. ಇದರ ಬದಲು ಸುಟ್ಟ ಭಾಗವನ್ನು ನೀರಿನ ನಲ್ಲಿಗೊಡ್ಡಿದರೆ ತಾತ್ಕಾಲಿಕ ಶಮನವುಂಟಾಗುತ್ತದೆ ಮತ್ತು ಬಳಿಕ ವೈದ್ಯರಿಗೆ ತೋರಿಸಬಹುದಾಗಿದೆ.

ಪ್ರಜ್ಞಾಹೀನ ಸ್ಥಿತಿ

ವ್ಯಕ್ತಿಯೋರ್ವ ಪ್ರಜ್ಞಾಶೂನ್ಯನಾಗಿದ್ದರೆ ಹೆಚ್ಚಿನವರು ಆತನ ಮುಖದ ಮೇಲೆ ನೀರು ಸುರಿಯುತ್ತಾರೆ. ಆದರೆ ಇದು ಸರಿಯಲ್ಲ. ಬವಳಿ ಬಂದ ವ್ಯಕ್ತಿಗೆ ಕಾಫಿ ಅಥವಾ ಕೆಫೀನ್ ಒಳಗೊಂಡಿರುವ ಯಾವುದೇ ಪಾನೀಯವನ್ನು ನೀಡುವುದೂ ಒಳ್ಳೆಯದಲ್ಲ. ವ್ಯಕ್ತಿ ಪ್ರಜ್ಞಾಶೂನ್ಯನಾಗಿದ್ದರೆ ಅಥವಾ ಬವಳಿ ಬಂದಿದ್ದರೆ ಆತನನ್ನು ಎಂದೂ ಎತ್ತುವ ಗೋಜಿಗೆ ಹೋಗಬೇಡಿ. ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News