ಒಡೆದ ಹಿಮ್ಮಡಿಗೂ ನಿಮ್ಮ ಆರೋಗ್ಯಕ್ಕೂ ಸಂಬಂಧವಿದೆ,ಗೊತ್ತಾ?
ಒಣ ಚರ್ಮ ಮತ್ತು ಸುದೀರ್ಘ ಸಮಯ ನಿಂತುಕೊಂಡಿರುವುದರಿಂದ ಕಾಲುಗಳ ಮೇಲೆ ಬೀಳುವ ಒತ್ತಡ ಹಿಮ್ಮಡಿಗಳು ಒಡೆಯಲು ಮುಖ್ಯ ಕಾರಣಗಳಲ್ಲಿ ಸೇರಿವೆ. ಹೆಚ್ಚಿನ ತೂಕ ಅಥವಾ ಹಿಂಬದಿಯಲ್ಲಿ ತೆರೆದಿರುವ ಶೂಗಳ ಬಳಕೆಯೂ ಕಾಲುಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ.
ಹಿಮ್ಮಡಿಯಲ್ಲಿ ಉಂಟಾಗುವ ಬಿರುಕುಗಳು ಆಳವಾದರೆ ಮತ್ತು ಹೆಚ್ಚುತ್ತಲೇ ಇದ್ದರೆ ನಡೆಯುವುದು ಮತ್ತು ನಿಲ್ಲುವುದೂ ಕೂಡ ನೋವನ್ನುಂಟು ಮಾಡುತ್ತದೆ, ಕೆಲವೊಮ್ಮೆ ಈ ನೋವು ಸಹಿಸಲಸಾಧ್ಯವಾಗುತ್ತದೆ. ಹಿಮ್ಮಡಿಯಲ್ಲಿನ ಬಿರುಕುಗಳ ಮೂಲಕ ಸೂಕ್ಷ್ಮ ಕ್ರಿಮಿಗಳು ಪ್ರವೇಶಿಸಿದರೆ ಅವು ಸೋಂಕಿಗೆ ಕಾರಣವಾಗುತ್ತವೆ. ಹೀಗಾಗಿ ಹಿಮ್ಮಡಿಗಳಲ್ಲಿನ ಬಿರುಕುಗಳು ಗಂಭೀರ ಸಮಸ್ಯೆಗಳನ್ನುಂಟು ಮಾಡುವ ಮೊದಲೇ ಅವುಗಳಿಗೆ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಅಂದ ಹಾಗೆ ಹಿಮ್ಮಡಿಗಳು ಒಡೆಯುವುದಕ್ಕೂ ನಮ್ಮ ಆರೋಗ್ಯಕ್ಕೂ ಸಂಬಂಧವಿದೆ. ಹಿಮ್ಮಡಿಗಳು ಒಡೆಯುವುದಕ್ಕೆ ಕೆಲವು ಮುಖ್ಯ ಕಾರಣಗಳಿಲ್ಲಿವೆ........
ಒಣಚರ್ಮ
ಒಣಚರ್ಮವು ಕಾಲಿನ ಹಿಮ್ಮಡಿಗಳು ಒಡೆಯಲು ಸಾಮಾನ್ಯ ಕಾರಣವಾಗಿದೆ. ನಮ್ಮ ಚರ್ಮವು ಅತಿಯಾದ ಪ್ರಮಾಣದಲ್ಲಿ ತೈಲ ಮತ್ತು ನೀರಿನ ಅಂಶವನ್ನು ಕಳೆದುಕೊಂಡರೆ ಅದು ಒಣಗುತ್ತದೆ.
ಕಾಲಿನ ಮೇಲೆ ಅತಿಯಾದ ಒತ್ತಡ
ತುಂಬ ಹೆಚ್ಚು ಸಮಯ ನಿಲ್ಲುವುದರಿಂದ ಕಾಲಿನ ಮೇಲೆ ಒತ್ತಡ ಹೆಚ್ಚುತ್ತದೆ ಮತ್ತು ಇದು ಹಿಮ್ಮಡಿಗಳಲ್ಲಿ ಬಿರುಕುಗಳು ಮೂಡಲು ಕಾರಣವಾಗುತ್ತದೆ.
ಅಥ್ಲೆಟ್ಸ್ ಫೂಟ್
ಇದು ಬೂಸ್ಟಿನಿಂದ ಉಂಟಾಗುವ ಸೋಂಕು ಆಗಿದ್ದು, ಕಾಲಿನ ಮೇಲೆ ಪರಿಣಾಮ ವನ್ನುಂಟು ಮಾಡುತ್ತದೆ. ಈ ಬೂಸ್ಟು ತೇವವಿದ್ದೆಡೆ, ಬೆಚ್ಚಗಿನ ಪ್ರದೇಶದಲ್ಲಿ ಹುಲುಸಾಗಿ ಬೆಳವಣಿಗೆಯಾಗುತ್ತದೆ. ನಮ್ಮ ಕಾಲು ಈ ಬೂಸ್ಟು ಬೆಳವಣಿಗೆಯಾಗಲು ಹೇಳಿ ಮಾಡಿಸಿದ ಜಾಗವಾಗಿದೆ. ಇದು ಅತ್ಯಂತ ಸಾಂಕ್ರಾಮಿಕವಾಗಿದ್ದು, ಸೋಂಕುಪೀಡಿತ ಚರ್ಮ ದೊಂದಿಗೆ ನೇರ ಸಂಪರ್ಕದಿಂದ ಅಥವಾ ಕಾಲುಚೀಲಗಳು ಮತ್ತು ಶೂ ಇತ್ಯಾದಿಗಳ ಪರೋಕ್ಷ ಸಂಪರ್ಕದಿಂದ ಹರಡುತ್ತದೆ.
ಸೋರಿಯಾಸಿಸ್
ಚರ್ಮವು ಒರಟಾಗುವುದು, ಅದರ ಮೇಲೆ ಪದರುಗುಂಟಾಗುವುದು ಮತ್ತು ಕೆಂಪುಬಣ್ಣದ ದದ್ದುಗಳು ಕಾಣಿಸಿಕೊಳ್ಳುವ ಸ್ಥಿತಿಗೆ ಸೋರಿಯಾಸಿಸ್ ಎನ್ನಲಾಗುತ್ತದೆ. ಹಿಮ್ಮಡಿಗಳಲ್ಲಿ ಬಿರುಕುಗಳು ಮೂಡಲು ಇದೂ ಪ್ರಮುಖ ಕಾರಣವಾಗಿದೆ.
ಎಕ್ಜಿಮಾ
ಚರ್ಮವು ಊದಿಕೊಳ್ಳುವ ಸ್ಥಿತಿಗೆ ಎಕ್ಜಿಮಾ ಎನ್ನುತ್ತಾರೆ. ಇದರಿಂದ ಚರ್ಮವು ಒಣಗಿ ಕೆಂಪಗಾಗಿ ತುರಿಸುತ್ತಿರುತ್ತದೆ ಹಾಗೂ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಒತ್ತಡ, ನಾವು ಬಳಸುವ ಸಾಬೂನುಗಳು, ಆಹಾರದಿಂದ ಉಂಟಾಗುವ ಅಲರ್ಜಿ ಇವುಗಳ ಜೊತೆಗೆ ಹವಾಮಾನ ಕೂಡ ಎಕ್ಜಿಮಾಗೆ ಕಾರಣವಾಗುತ್ತದೆ. ಹಿಮ್ಮಡಿಗಳು ಒಡೆಯಲು ಪ್ರಮುಖ ಕಾರಣಗಳಲ್ಲಿ ಇದೂ ಒಂದಾಗಿದೆ.
ಬಿಸಿಲು
ಸೂರ್ಯನ ಬಿಸಿಲಿನಲ್ಲಿರುವ ಅಲ್ಟ್ರಾವಯಲೆಟ್ ಕಿರಣಗಳು ನಮ್ಮ ಚರ್ಮಕ್ಕೆ ಹಾನಿ ಯನ್ನುಂಟು ಮಾಡುತ್ತವೆ ಎನ್ನುವುದು ಸಾಮಾನ್ಯಜ್ಞಾನವಾಗಿದೆ. ತುಂಬ ಹೊತ್ತು ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಚರ್ಮವು ಕೆಂಪಗಾಗುತ್ತದೆ ಮತ್ತು ಕೆಲವು ದಿನಗಳ ಬಳಿಕ ಅದರ ಪದರಗಳು ಏಳತೊಡಗುತ್ತವೆ ಮತ್ತು ಹಿಮ್ಮಡಿ ಒಡೆಯಲು ಕಾರಣವಾಗುತ್ತದೆ.