ಫ್ಯಾಟಿ ಲಿವರ್ ರೋಗದ ಲಕ್ಷಣಗಳೇನು ಗೊತ್ತೇ?

Update: 2017-09-25 09:23 GMT

ಲಿವರ್ ಅಥವಾ ಯಕೃತ್ತು ನಮ್ಮ ಶರೀರದಲ್ಲಿನ ಅತ್ಯಂತ ದೊಡ್ಡ ಗ್ರಂಥಿ ಮತ್ತು ಎರಡನೇ ಅತ್ಯಂತ ದೊಡ್ಡ ಅಂಗವಾಗಿದೆ. ಅದು ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿನ ಕೊಬ್ಬನ್ನು ವಿಭಜಿಸಿ ಅದನ್ನು ಅಡಿಪೋಸ್ ಟಿಶ್ಯೂ ಅಥವಾ ಕೊಬ್ಬು ಅಂಗಾಂಶಗಳಲ್ಲಿ ಶೇಖರಿಸುವುದು ಯಕೃತ್ತಿನ ಪ್ರಮುಖ ಕೆಲಸಗಳಲ್ಲೊಂದಾಗಿದೆ. ಅದು ನಮ್ಮ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನೂ ನಿಯಂತ್ರಿಸುತ್ತದೆ. ಹೀಗಾಗಿ ಯಕೃತ್ತು ಆರೋಗ್ಯಯುತವಾಗಿರುವುದು ಮುಖ್ಯವಾಗಿದೆ. ನಮ್ಮ ಯಕೃತ್ತಿನಲ್ಲಿ ನೈಸರ್ಗಿಕವಾಗಿ ಸ್ವಲ್ಪ ಪ್ರಮಾಣದಲ್ಲಿ ಕೊಬ್ಬು ಶೇಖರಗೊಂಡಿರುತ್ತದೆ. ಆದರೆ ಕೊಬ್ಬಿನ ಪ್ರಮಾಣ ಹೆಚ್ಚಾದರೆ ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇನ್ಸುಲಿನ್ ನಾವು ಸೇವಿಸಿದ ಆಹಾರದಲ್ಲಿನ ಸಕ್ಕರೆಯನ್ನು ಗ್ಲುಕೋಸ್‌ನ್ನಾಗಿ ಪರಿವರ್ತಿ ಸುತ್ತದೆ. ಯಕೃತ್ತು ಈ ಗ್ಲುಕೋಸ್‌ನ್ನು ಹೀರಿಕೊಂಡು ಗ್ಲೈಕೋಜೆನ್ ರೂಪದಲ್ಲಿ ಶೇಖರಿ ಸುತ್ತದೆ. ಯಕೃತ್ತು ಗ್ಲೈಕೋಜೆನ್‌ನಿಂದ ತುಂಬಿದಾಗ ಅದು ಈ ಗ್ಲೈಕೋಜೆನ್‌ನ್ನು ಫ್ಯಾಟಿ ಆ್ಯಸಿಡ್ ಅಥವಾ ಮೇದಾಮ್ಲವನ್ನಾಗಿ ಪರಿವರ್ತಿಸಿ ಬಾಡಿ ಫ್ಯಾಟ್ ರೂಪದಲ್ಲಿ ಕೊಬ್ಬು ಅಂಗಾಂಶಗಳಲ್ಲಿ ಶೇಖರಿಸುತ್ತದೆ. ಹೆಚ್ಚಿನ ಕೊಬ್ಬು ಅಂತಿಮವಾಗಿ ಈ ಅಂಗಾಂಶಗಳನ್ನು ಸೇರಿಕೊಳ್ಳುತ್ತವೆಯಾದರೂ ಕೆಲವು ಪ್ರಮಾಣದ ಕೊಬ್ಬು ಯಕೃತ್ತಿನಲ್ಲಿಯೇ ಉಳಿದುಕೊ ಳ್ಳುತ್ತದೆ. ಇದು ಫ್ಯಾಟಿ ಲಿವರ್ ರೋಗಕ್ಕೆ ಕಾರಣವಾಗಿದೆ. ಜೊತೆಗೆ ಟೈಪ್ 2 ಮಧುಮೇಹವನ್ನುಂಟು ಮಾಡುತ್ತದೆ.

 ಫ್ಯಾಟಿ ಲಿವರ್ ಕಾಯಿಲೆಯಲ್ಲಿ ಎರಡು ವಿಧಗಳಿವೆ. ಇದನ್ನು ನಾನ್ ಅಲ್ಕೋಹಾಲಿಕ್ ಮತ್ತು ಅಲ್ಕೋಹಾಲಿಕ್ ಎಂದು ವರ್ಗೀಕರಿಸಲಾಗಿದೆ.

ನಾನ್ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಯು ಅಷ್ಟಾಗಿ ಮದ್ಯ ಸೇವಿಸದ ಜನರನ್ನು ಬಾಧಿಸುತ್ತದೆ. ಇದು ಸಾಮಾನ್ಯವಾಗಿ ವಂಶ ಪಾರಂಪರ್ಯದಿಂದ ಬರುವ ಕಾಯಿಲೆಯಾಗಿದ್ದು, ಮಧ್ಯವಯಸ್ಕರು ಮತ್ತು ಬೊಜ್ಜುದೇಹಿಗಳನ್ನು ಕಾಡುತ್ತದೆ. ಕೊಬ್ಬನ್ನು ಪರಿಣಾಮಕಾರಿಯಾಗಿ ವಿಭಜಿಸಲು ಯಕೃತ್ತಿಗೆ ಸಾಧ್ಯವಾಗದಿದ್ದಾಗ ಮತ್ತು ಈ ಕೊಬ್ಬು ಅಂತಿಮವಾಗಿ ಯಕೃತ್ತಿನಲ್ಲಿಯೇ ಸಂಗ್ರಹಗೊಂಡಾಗ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

 ಅತಿಯಾಗಿ ಮದ್ಯಪಾನ ಮಾಡುವವರು ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಗೆ ಗುರಿಯಾಗುತ್ತಾರೆ. ಇದು ಒಂದು ವಿಧದಲ್ಲಿ ವಂಶ ಪಾರಂಪರ್ಯವಾಗಿದೆ ಎಂದು ಅಧಯಯವೊಂದು ಬೆಟ್ಟು ಮಾಡಿದೆ. ಮದ್ಯಪಾನದ ತುಡಿತವನ್ನುಂಟು ಮಾಡುವ ನಿರ್ದಿಷ್ಟ ವಂಶವಾಹಿಯೊಂದು ಅತಿಯಾಗಿ ಮದ್ಯಸೇವನೆಯನ್ನು ಪ್ರೇರೇಪಿಸುತ್ತದೆ ಮತ್ತು ಅಂತಿಮವಾಗಿ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆಗೆ ಕಾರಣವಾಗುತ್ತದೆ.

ಫ್ಯಾಟಿ ಲಿವರ್ ಕಾಯಿಲೆಯ ವಾಸ್ತವ ಕಾರಣಗಳನ್ನು ಪತ್ತೆ ಹಚ್ಚಿ ಅದನ್ನು ವಾಸಿ ಮಾಡಲು ಸೂಕ್ತ ಚಿಕಿತ್ಸೆಯನ್ನು ಅನುಸರಿಸುವುದು ಮುಖ್ಯವಾಗಿದೆ. ನೀವು ಫ್ಯಾಟಿ ಲಿವರ್‌ನಿಂದ ಬಳಲುತ್ತಿದ್ದರೆ ಸಾಮಾನ್ಯವಾಗಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ದಣಿವು:

ನಮ್ಮ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಅದನ್ನು ಸರಿಯಾಗಿಸಲು ಅವುಗಳಿಗೆ ಹೆಚ್ಚಿನ ರಕ್ತವನ್ನು ಪೂರೈಸಲು ಶರೀರವು ಪ್ರಯತ್ನಿಸುತ್ತದೆ. ಇದು ದಣಿವು ಮತ್ತು ಶಕ್ತಿ ನಷ್ಟಕ್ಕೆ ಕಾರಣವಾಗುತ್ತದೆ.

ಹಸಿವು ನಷ್ಟ:

ಯಕೃತ್ತಿನಲ್ಲಿಯ ಹೆಚ್ಚುವರಿ ಕೊಬ್ಬು ನಮ್ಮ ಮಿದುಳು ಹಸಿವಿನ ಸೂಚನೆಯನ್ನು ಜಾಗ್ರತಗೊಳಿಸುವುದನ್ನು ತಡೆಯುತ್ತದೆ. ಇದು ನಮ್ಮ ಹಸಿವೆಯನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆ:

ಇದಕ್ಕೆ ಹಸಿವು ಕಡಿಮೆಯಾಗುವುದು ಕಾರಣವಾಗಿರಬಹುದು. ಅಲ್ಲದೆ ಆಹಾರದಲ್ಲಿನ ಕಾರ್ಬೊಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಜೀರ್ಣಿಸಿಕೊಳ್ಳಲು ನಮ್ಮ ಶರೀರಕ್ಕೆ ಸಾಧ್ಯವಾಗದಿದ್ದಾಗಲೂ ತೂಕ ಕಡಿಮೆಯಾಗುತ್ತದೆ.

ಏಕಾಗ್ರತೆಯ ಕೊರತೆ:

ಫ್ಯಾಟಿ ಲಿವರ್ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಆಗಾಗ್ಗೆ ಚಿಂತನೆಗಳು ಮಬ್ಬಾಗುತ್ತವೆ. ಶರೀರದಲ್ಲಿ ಎಲ್ಲ ನಂಜಿನ ಅಂಶಗಳನ್ನು ನಿವಾರಿಸಲು ಯಕೃತ್ತಿಗೆ ಸಾಧ್ಯವಾಗದಿದ್ದಾಗ ಈ ಸ್ಥಿತಿಯುಂಟಾಗುತ್ತದೆ.

ಚರ್ಮದ ಮೇಲೆ ಕಲೆಗಳು:

ನಮ್ಮ ಶರೀರದಲ್ಲಿನ ಕೊಬ್ಬು ಮತ್ತು ಇತರ ವಸ್ತುಗಳನ್ನು ಸೂಕ್ತವಾಗಿ ಸೋಸುವಲ್ಲಿ ಯಕೃತ್ತು ವಿಫಲಗೊಳ್ಳುವುದರಿಂದ ಇವು ಚರ್ಮದ ಮೇಲೆ ಕಲೆಗಳನ್ನುಂಟು ಮಾಡುತ್ತವೆ.

ಹೊಟ್ಟೆನೋವು:

ನಮ್ಮ ಯಕೃತ್ತು ಕೆಳಹೊಟ್ಟೆಯಲ್ಲಿರುತ್ತದೆ. ಅದರಲ್ಲಿ ಅತಿಯಾಗಿ ಕೊಬ್ಬು ಶೇಖರಗೊಳ್ಳುವುದರಿಂದ ಅದು ಊದಿಕೊಳ್ಳುತ್ತದೆ ಮತ್ತು ಹೊಟ್ಟೆಯಲ್ಲಿ ನೋವನ್ನುಂಟು ಮಾಡುತ್ತದೆ.

ಇವು ಫ್ಯಾಟಿ ಲಿವರ್ ಕಾಯಿಲೆಯ ಕೆಲವು ಸಾಮಾನ್ಯ ಲಕ್ಷಣಗಳು. ಜೀವನ ಶೈಲಿಯಲ್ಲಿ ಸರಿಯಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಈ ಕಾಯಿಲೆಯನ್ನು ಸುಲಭ ವಾಗಿ ನಿವಾರಿಸಿಕೊಳ್ಳಬಹುದು. ಮದ್ಯಪಾನವನ್ನು ವರ್ಜಿಸುವುದು ತುಂಬ ಒಳ್ಳೆಯದು ಮತ್ತು ಹಾಗೆ ಮಾಡಿದರೆ ನಿಮ್ಮ ಯಕೃತ್ತು ನಿಮಗೆ ಎಂದೆಂದೂ ಋಣಿಯಾಗಿರುತ್ತದೆ. ಹಾಗೆಯೇ ಬೊಜ್ಜು ಹೊಂದಿರುವವರು ಅದನ್ನು ಕರಗಿಸುವ ಪ್ರಯತ್ನದೊಂದಿಗೆ ಅರೋಗ್ಯಯುತ ಆಹಾರ ಸೇವಿಸುತ್ತಿದ್ದರೆ ಯಕೃತ್ತೂ ಆರೋಗ್ಯವಾಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News