ಶುಗರ್ ಅಲರ್ಜಿ ಗೊತ್ತಾ.....? ಇಲ್ಲಿದೆ ಮಾಹಿತಿ

Update: 2017-09-27 11:35 GMT

ಕೆಲವರಿಗೆ ಕೆಲವು ಆಹಾರಗಳ ಸೇವನೆ ಅಲರ್ಜಿಗಳನ್ನುಂಟು ಮಾಡುತ್ತದೆ. ಸಕ್ಕರೆ ಅಲರ್ಜಿ ಇವುಗಳಿಗಿಂತ ಭಿನ್ನವಾಗಿದೆ. ಕೆಲವು ವ್ಯಕ್ತಿಗಳು ಸಕ್ಕರೆಯನ್ನು ಒಳಗೊಂಡ ಆಹಾರ ಸೇವಿಸಿದಾಗ ಅದು ಶರೀರದಲ್ಲಿ ಕೆಲವು ಅಲರ್ಜಿ ಪ್ರತಿಕ್ರಿಯೆಗಳಿಗೆ ಕಾರಣವಾಗ ಬಹುದು. ನಾವು ಸೇವಿಸುವ ಹೆಚ್ಚಿನ ಆಹಾರಗಳಲ್ಲಿ ಸಕ್ಕರೆಯ ಅಂಶವಿರುವುದರಿಂದ ಸಕ್ಕರೆ ಅಲರ್ಜಿಯನ್ನು ಗುರುತಿಸುವುದೇ ದೊಡ್ಡ ಸಮಸ್ಯೆ. ಒಂದು ಆಹಾರ ಸೇವನೆಯನ್ನು ತಪ್ಪಿಸುವುದು ಈ ಅಲರ್ಜಿಯಿಂದ ಪಾರಾಗಲು ನೆರವಾಗದಿರಬಹುದು, ಏಕೆಂದರೆ ವ್ಯಕ್ತಿ ಸೇವಿಸುವ ಇನ್ನೊಂದು ಆಹಾರದಲ್ಲಿ ಈಗಲೂ ಸಕ್ಕರೆ ಅಂಶ ಇರಬಹುದು.

ಸಕ್ಕರೆ ವಿವಿಧ ಆಹಾರಗಳಲ್ಲಿಯ ಘಟಕವಾಗಿರುವುದರಿಂದ ಸಕ್ಕರೆ ಅಲರ್ಜಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಸಕ್ಕರೆಯನ್ನು ಒಳಗೊಂಡ ಆಹಾರವನ್ನು ಸೇವಿಸಿದಾಗ ನಮ್ಮ ಶರೀರವು ತೋರಿಸುವ ಪ್ರತಿಕ್ರಿಯೆಯೇ ಸಕ್ಕರೆ ಅಲರ್ಜಿ. ನಮ್ಮ ಶರೀರದಲ್ಲಿಯ ಪ್ರತಿರೋಧಕ ವ್ಯವಸ್ಥೆಯು ಸಕ್ಕರೆಯನ್ನು ತಪ್ಪಾಗಿ ಗ್ರಹಿಸಬಹುದು ಮತ್ತು ಅದು ವಿಷವಸ್ತು ಎಂದು ಭಾವಿಸಬಹುದು. ಇದು ಅಲರ್ಜಿಯನ್ನು ಉಂಟು ಮಾಡುತ್ತದೆ. ಏಕೆಂದರೆ ಸಕ್ಕರೆಯನ್ನು ಶರೀರಕ್ಕೆ ಅಪಾಯಕಾರಿ ಎಂದು ಗ್ರಹಿಸಿದ ಬಳಿಕ ಪ್ರತಿರೋಧಕ ವ್ಯವಸ್ಥೆಯು ರೋಗ ಪ್ರತಿರೋಧಕಗಳನ್ನು ಬಿಡುಗಡೆಗೊಳಿಸುವ ಮೂಲಕ ಅದರ ವಿರುದ್ಧ ಹೋರಾಡಲು ಪ್ರಯತ್ನಿಸುತ್ತದೆ.

ರೋಗ ಪ್ರತಿರೋಧಕಗಳು ಬಿಡುಗಡೆಗೊಂಡ ಬಳಿಕ ಶರೀರದಲ್ಲಿ ರಾಸಾಯನಿಕ ಪ್ರಕ್ರಿಯೆಯೊಂದು ನಡೆಯುತ್ತದೆ. ಇದು ಹಿಸ್ಟಮಿನ್ ಮಟ್ಟಗಳನ್ನು ಹೆಚ್ಚಿಸುತ್ತದೆ ಮತ್ತು ಇದು ಉರಿಯೂತಕ್ಕೆ ಕಾರಣವಾಗುತ್ತದೆ.

ಉರಿಯೂತ, ಬಾತುಕೊಂಡ ಮೂಗಿನ ಹೊಳ್ಳೆಗಳು, ತಲೆನೋವು, ಸೀನು, ಮೂಗಿನಲ್ಲಿ ಸೋರಿಕೆ ಮತ್ತು ಮೂಗು ಕಟ್ಟುವಿಕೆ ಇವು ಸಕ್ಕರೆ ಅಲರ್ಜಿಯ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ಸೆಳೆತ, ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆನೋವು ಇವೂ ಸಕ್ಕರೆ ಅಲರ್ಜಿಯಿಂದ ಹುಟ್ಟಿಕೊಳ್ಳುತ್ತವೆ. ವ್ಯವಸ್ಥೆಯಲ್ಲಿನ ಸಕ್ಕರೆಯನ್ನು ನಮ್ಮ ಶರೀರವು ಯಶಸ್ವಿಯಾಗಿ ನಿವಾರಿಸುವವರೆಗೆ ಈ ಅಡ್ಡ ಪರಿಣಾಮಗಳು ಉಳಿದುಕೊಳ್ಳುತ್ತವೆ.

ಕೆಲವು ಪ್ರಕರಣಗಳಲ್ಲಿ ಸಕ್ಕರೆ ಅಲರ್ಜಿಯಾದಾಗ ಅಸ್ತಮಾದ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಹೊಳ್ಳೆಗಳು ಬಾತುಕೊಳ್ಳುವುದರಿಂದ ಉಸಿರಾಟದ ಸಮಸ್ಯೆಯೂ ಉಂಟಾಗುತ್ತದೆ. ಇದರ ಬೆನ್ನ ಹಿಂದೆಯೇ ಕೆಮ್ಮು, ಏದುಸಿರು ಮತ್ತು ಗಂಟಲು ನೋವು ತಮ್ಮ ಅಸ್ತಿತ್ವವನ್ನು ಸಾರಬಹುದು. ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಕೆಲವು ಪ್ರಕರಣಗಳಲ್ಲಿ ಸಕ್ಕರೆ ಅಲರ್ಜಿಯು ಜೀವಕ್ಕೇ ಬೆದರಿಕೆಯನ್ನೊಡ್ಡುವ ಅತಿ ಸಂವೇದನಶೀಲತೆಗೂ ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News