ದಸರಾ ಮಹೋತ್ಸವ: ಸೇನಾ ಪಡೆಗಳ ಪೂರ್ವಭಾವಿ ಪ್ರದರ್ಶನ
ಮೈಸೂರು,ಸೆ.28: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಾರಿ ಭಾರತೀಯ ವಾಯುಸೇನೆಯ “ಏರ್ ಶೋ” ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಪೂರ್ವಭಾವಿ ಪ್ರದರ್ಶನ ಗುರುವಾರ ಬನ್ನಿಮಂಟಪದ ಪಂಜಿನಕವಾಯತು ಮೈದಾನದಲ್ಲಿ ನಡೆಯಿತು.
ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್‍ಗಳು ಆಗಸದಲ್ಲಿ ತಮ್ಮ ಕಸರತ್ತುಗಳನ್ನು ಪ್ರದರ್ಶಿಸಿದವು. ವಾಯುಸೇನೆಯ ಎಚ್ ಎಎಲ್ ನಿರ್ಮಿತ ಎಎಲ್ ಎಚ್ ಹೆಲಿಕಾಫ್ಟರ್, ಎಂ.ಐ.17 ಹಾಗೂ ಎಂ.ಐ.17 ವಿ.5 ಹೆಲಿಕಾಫ್ಟರ್‍ಗಳು ಬಾನಂಗಳದಲ್ಲಿ ಬಿರುಸಿನಿಂದ ಹಾರಾಡಿದವು.
ವಾಯುಸೇನೆಯ 9 ಯೋಧರು ಸ್ಲಿತರಿಂಗ್ ಎಂಬ ಕಾರ್ಯಾಚರಣೆ ಪ್ರದರ್ಶಿಸಿದರು, ಎತ್ತರದಲ್ಲಿ ಹಾರುತಿದ್ದ ಹೆಲಿಕಾಫ್ಟರ್‍ನಿಂದ ನುಣುಪಾದ ಹಗ್ಗವನ್ನು ಕೆಳಗೆ ಬಿಟ್ಟು ಯೋಧರು ಜಾರಿಕೊಂಡು ತಮ್ಮ ಸನ್ನದ್ಧ ಸ್ಥಿತಿಯನ್ನು ಪ್ರದರ್ಶಿಸಿದರು. ವಾಯುಪಡೆಯ ಯೋಧರು ಪೆಲಟ್ ಡ್ರಾಪಿಂಗ್ ಮತ್ತು ಸ್ಕೈ ಡೈವಿಂಗ್ ಎಂಬ ಪ್ರದರ್ಶನಗಳನ್ನು ಮುಖ್ಯ ಕಾರ್ಯಕ್ರಮದಲ್ಲಿ ನೀಡಲಿದ್ದಾರೆ.
ಭೂದಳಕ್ಕೆ ಸೇರಿದ ಬೆಂಗಳೂರಿನ 30 ಜನರ ಟರ್ನಾಡೊ ತಂಡ ಬೈಕ್ ಗಳಲ್ಲಿ ಗಡಚಿಕ್ಕುವ ಶಬ್ದದೊಂದಿಗೆ 36 ಬಗೆಯ ಕಸರತ್ತುಗಳನ್ನು ಪ್ರದರ್ಶಿಸಿದರು. ಮೈದಾನದಲ್ಲಿ ನೃತ್ಯಾಭ್ಯಾಸಕ್ಕೆಂದು ಬಂದಿದ್ದ ಸಾವಿರಾರು ಸಂಖ್ಯೆಯ ಮಕ್ಕಳು ಸಾರ್ವಜನಿಕರು ವೀಕ್ಷಿಸಿ ಸಂಭ್ರಮಿಸಿದರು.
ವಾಯುಪಡೆಯ ಪ್ರಮುಖ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 11.30 ಕ್ಕೆ ಪ್ರಾರಂಭವಾಗಲಿದ್ದು, ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದೆ ಎಂದು ಪ್ರಕಟನೆ ತಿಳಿಸಿದೆ.