ದಸರಾ ಜಂಬೂಸವಾರಿ ನೋಡಲು 2 ದಿನಗಳಿಗೆ ಬಾಡಿಗೆ ಮನೆ ಪಡೆದ ಕುಟುಂಬ !
ಮೈಸೂರು,ಸೆ.30: ಜಂಬೂಸವಾರಿ ನೋಡಲೇಬೇಕೆಂದು ಎರಡು ದಿನಗಳ ಹಿಂದೆಯೇ ಬೆಂಗಳೂರಿನಿಂದ ಬಂದಿದ್ದೇವೆ. 12 ಜನರಿದ್ದೇವೆ... ಹೀಗೆ ಉತ್ಸಾಹದಿಂದ ಹೇಳಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೇ ಸಯ್ಯಾಜಿರಾವ್ ರಸ್ತೆಬದಿಯಲ್ಲಿ ಚಾಪೆ ಹಾಸಿಕೊಂಡು ಕುಳಿತಿದ್ದ ಕುಟುಂಬ.
ರಾಜಧಾನಿಯ ಶ್ರೀನಗರ ಬಡಾವಣೆಯ ಪಿ.ಎಂ.ಪ್ರಕಾಶ ಅವರು, ಗುರುವಾರವೇ ಮೈಸೂರಿಗೆ ಬಂದಿದ್ದೇವೆ. ಒಟ್ಟು 12 ಜನರಿದ್ದೇವೆ. ಹೆಬ್ಬಾಳುವಿನಲ್ಲಿ ಮನೆಯೊಂದರಲ್ಲಿ ಎರಡು ದಿನಗಳ ಮಟ್ಟಿಗೆ ಬಾಡಿಗೆ ಲೆಕ್ಕಾಚಾರದಲ್ಲಿ ತಂಗಿದ್ದೇವೆ. ದಸರಾ ನೋಡಬೇಕೆಂಬ ಅತ್ಯುತ್ಸಾಹದಿಂದ ಬಂದಿದ್ದೇವೆ ಎಂದು ಪತ್ರಿಕೆಗೆ ತಿಳಿಸಿದರು.
ಜಂಬೂಸವಾರಿ ಮೆರವಣಿಗೆ ಇಲ್ಲಿಗೆ ಬರುವವರೆಗೆ ಸಂಜೆಯಾಗುತ್ತದೆ. ಮಧ್ಯಾಹ್ನ ಊಟಕ್ಕೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ಕುಟುಂಬದ ಸದಸ್ಯೆ ಶೃತಿ ಅವರು, ಏನಾದರೂ ಜಂಬೂಸವಾರಿ ವೀಕ್ಷಿಸಲೇಬೇಕೆಂದು ಪಣತೊಟ್ಟು ಬಂದಿದ್ದೇವೆ. ಒಬ್ಬೊಬ್ಬರಾಗಿ ಊಟಕ್ಕೆ ಹೋಗಿಬರುತ್ತೇವೆ. ಏನೇ ಆದರೂ ಜಂಬೂಸವಾರಿಯನ್ನಂತೂ ನೋಡಲೇಬೇಕು ಎಂದರು. ಕುಟುಂಬದ ಮತ್ತೊಬ್ಬ ಸದಸ್ಯೆ ಗೌತಮಿ ಕೂಡ ಇದ್ದರು.
ಆಗಿದ್ದ ಆಕರ್ಷಣೆ ಈಗಿಲ್ಲ...!
ನಾನು ಸುಮಾರು 20 ವರ್ಷ ಆಗಿದ್ದಾಗಿನಿಂದಲೂ ಜಂಬೂಸವಾರಿ ನೋಡುತ್ತಿದ್ದೇನೆ. ಈ ಸಯ್ಯಾಜಿರಾವ್ ರಸ್ತೆಗೇ ಬರುತ್ತೇನೆ. ಆದರೂ ಮಹಾರಾಜರು ಅಂಬಾರಿ ಒಳಗೆ ಕುಳಿತು ನಡೆಸುತ್ತಿದ್ದ ಮೆರವಣಿಗೆಯ ಆಕರ್ಷಣೆ ಈಗ ಇರುವುದಿಲ್ಲ.
-ಶಾರದಾ(75 ವರ್ಷ)
ವಿದ್ಯಾರಣ್ಯಪುರಂ, ಮೈಸೂರು