ಮೈಸೂರು ದಸರಾ: ಜಂಬೂಸವಾರಿಯಲ್ಲಿ ಜನಮನ ಗೆದ್ದ ಕಲಾತಂಡಗಳು

Update: 2017-09-30 15:09 GMT

ಮೈಸೂರು,ಸೆ.30: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಐಸಿರಿಯ ಸೊಬಗು ಅಪಾರ ಜನಸ್ತೋಮದಲ್ಲಿ ಹರ್ಷೋಲ್ಲಾಸ ಮೂಡಿಸಿತು. 

ನಂದೀಧ್ವಜ ಕಂಬದೊಂದಿಗೆ ಚಾಲನೆ ಪಡೆದ ಜಾನಪ ಕಲಾವಿದರು ವಿವಿಧ ತಂಡಗಳಲ್ಲಿ ತಮಟೆ, ನಗಾರಿ, ಡೊಳ್ಳು, ಜಗ್ಗಲಗೆ, ಕಂಸಾಳೆ, ಬುಡಬುಡಿಕೆ... ಹೀಗೆ ವೈವಿಧ್ಯಮಯ ನೃತ್ಯಗಳಿಂದ ಜನಮನಸೂರೆಗೊಂಡರು. 

ಶನಿವಾರ ಅರಮನೆ ಆವರಣದಲ್ಲಿ ಆರಂಭಗೊಂಡ ಜಾನಪದ ಕುಣಿತಗಳು ಗ್ರಾಮೀಣ ಸೊಗಡು, ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದವು. ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳ ನಡುವೆ ಈ ಕಲಾತಂಡಗಳು ಸಿಕ್ಕ ಅವಕಾಶದಲ್ಲೇ ನೋಡುಗರಿಗೆ ಸಂತೋಷ ಉಂಟುಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದವು.

ನಂದೀಧ್ವಜ ಹೊತ್ತು ಹೊರಟ ಕಲಾತಂಡದ ಹಿಂದೆ ನಡೆದ ವೀರಭದ್ರ ಕುಣಿತ ತಂಡಗಳ ಕಲಾವಿದರ ಅಬ್ಬರ, ಆರ್ಭಟ, ಕೆಂಗಣ್ಣಗಳೊಂದಿಗೆ ಖಡ್ಗ ಝಳಪಿಸುತ್ತಾ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತಿದ್ದಂತೆ ಜನರಲ್ಲಿ ಮಡುಗಟ್ಟುತ್ತಿದ್ದ ಆಲಸ್ಯ ಮಾಯವಾಯಿತು. ಕಿರಾಳು ಮಹೇಶ್ ಸೇರಿದಂತೆ ಮೈಸೂರು ಜಿಲ್ಲೆಯ ಕೆಲ ತಂಡಗಳು ಕಲಾವಿದರು ಇದರಲ್ಲಿದ್ದರು.

ಆಕಾಶದತ್ತ ನೋಡಿ ತಮ್ಮದೇ ರೀತಿಯ ಶಬ್ದ ಹೊರಡಿಸುತ್ತಾ ಸಾಗಿ ಕೊಂಬು ಕಹಳೆ ಕೂಡ ಗಮನ ಸೆಳೆಯಿತು. ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ, ತಲೆಗೆ ಪೇಟ ಸುತ್ತಿ ಉಸಿರುಗಟ್ಟಿ ಕೊಂಬು ಕಹಳೆ ಊದುತ್ತಿದ್ದ ಪರಿ ಚೇತೋಹಾರಿಯಾಗಿತ್ತು. ಇದರಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಛಾಪು ಮೂಡಿಸಿದ ಜಗ್ಗಲಿಗೆ ಮೇಳ: ಎತ್ತಿನ ಗಾಡಿಯ ಚಕ್ರದ ಆಕಾರದಲ್ಲಿ ವರ್ಣರಂಜಿತವಾಗಿರುವ ಎಮ್ಮೆ ಚರ್ಮದಿಂದ ಸಿದ್ಧಪಡಿಸಿದ ಜಗ್ಗಲಿಗೆ ಪ್ರದರ್ಶನ ಮನಮೋಹಕವಾಗಿತ್ತು. ಬಂಡಿಯನ್ನು ಹೆಗಲ ಮೇಲೆ ಹೊತ್ತು ನುಡಿಸುವುದು, ಒಂದು ಕೈಯಲ್ಲಿ ಅದನ್ನು ಉರುಳಿಸುತ್ತಾ ಇನ್ನೊಂದ ಕೈಯಲ್ಲಿದ್ದ ಕೋಲಿನಿಂದ ಬಾರಿಸುತ್ತಾ ಕಲಾತಂಡ ಕೇಸರಿ ಮತ್ತು ಬಿಳಿ ವಸ್ತ್ರಗಳನ್ನು ಧರಿಸಿ ಶಿಸ್ತಿನಿಂದ ಸಾಗಿದರು.

ತಮಟೆ, ದೊಡ್ಡ ಡ್ರಂಗಳು, ಕೈಯಲ್ಲಿ ಅಲಂಕಾರಿಕವಾಗಿ ಇಳಿಬಿಟ್ಟ ಉದ್ದನೆಯ ಕುಚ್ಚಿನ ಜಾಲರಿಗಳನ್ನು ಹಿಡಿದುಕೊಂಡು ಸಮವಸ್ತ್ರ ತೊಟ್ಟ ಸುಮಾರು 20ರಿಂದ 30 ಮಂದಿ ಝಾಂಜ್ ಪಥಕ್ ಕಲಾವಿದರು ಲಯಕ್ಕೆ ತಕ್ಕಂತೆ ಹಜ್ಜೆ ಹಾಕುತ್ತಾ ಜನರ ಮುಂದೆ ಸಾಗಿದರು. ಅವರು ಪಿರಮಿಡ್ ರಚಿಸಿ ದೊಡ್ಡದಾದ ಕನ್ನಡಧ್ವಜವನ್ನು ಬೀಸಿ ತಮ್ಮ ಛಾಪು ಮೂಡಿಸಿದರು. 

ಕರಾಟೆ ಪಟುಗಳು: ಹತ್ತು ವರ್ಷಗಳ ನಂತರ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಕರಾಟುಪಟುಗಳ ತಂಡ ತಮ್ಮ ಕಸರತ್ತುಗಳನ್ನು ಪ್ರದರ್ಶಿಸಿದರು. ಆತ್ಮರಕ್ಷಣೆ, ಆರೋಗ್ಯ ವೃದ್ಧಿಗೆ ಈ ಸಮರಕಲೆ ಪೂರಕವಾಗಿದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಿದರು.

ಕಂಸಾಳೆ ಜಾನಪದ ನೃತ್ಯ ಪ್ರತಿವರ್ಷ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಅದರ ಸೆಳೆತ ಕಡಿಮೆಯಾಗಿಲ್ಲ. ಬೀಸು ಕಂಸಾಳೆ ಜನರು ತಾಳಗಳನ್ನು ಬೀಸುತ್ತಾ ಪಿರಮಿಡ್ಡು ರಚಿಸಿ ವಿವಿಧ ಭಂಗಿಗಳನ್ನು ಪ್ರದರ್ಶಿಸುತ್ತಿದ್ದಂತೆ ಜನಸ್ತೋಮದಿಂದ ಕರತಾಡನದ ಪ್ರತಿಸ್ಪಂದನೆ ದೊರೆಯಿತು. ಸೋಮನ ಕುಣಿತದಲ್ಲಿ ಬೃಹತ್ ಮುಖವಾಡ ಧರಿಸಿ, ಹಿಂದೆ ವರ್ಣಮಯ ವಸ್ತ್ರಗಳನ್ನು ಇಳಿಬಿಟ್ಟು ಕುಣಿದ ಕಲಾವಿದರೂ ಜನರ ಮನ ಗೆದ್ದರು.

ಇವಲ್ಲದೆ, ಬುಡಬುಡಕೆ, ಕಂಗಿಲು ನೃತ್ಯ, ಕೋಲಾಟ, ಚಂಡೆಮೇಳ, ಪೂಜಾ ಕುಣಿತ, ಪಟ ಕುಣಿತ, ಲಂಬಾಣಿ ನೃತ್ಯ, ಸಿದ್ದಿ ಡಮಾಯಿ ನೃತ್ಯ, ಗಾರುಡಿ ಗೊಂಬೆ, ಮರಗಾಲು ಕುಣಿತ, ಕೀಲುಕುದುರೆ ಇತ್ಯಾದಿ ತಂಡಗಳು ನೋಡುಗರ ಮನದಾಳದಲ್ಲಿ ಅಚ್ಚೊತ್ತಿದವು.

ಕೆಲ ತಂಡಗಳ ಗೈರು: ಎಡೆಯೂರು ಸಿದ್ದಲಿಂಗೇಶ್ವರ ಸ್ತಬ್ಧಚಿತ್ರದ ಹಿಂದೆ ಬರಬೇಕಿದ್ದ ಶಿಸ್ತಿನ ಪಡೆ ಸೇವಾದಳದ ತಂಡ, ಧಾರವಾಡ ಜಿಲ್ಲೆ ಸಂತರು ನಂತರ ಕಂಗಿಲು ನೃತ್ಯದ ಜೊತೆ ಆಗಮಿಸಬೇಕಿದ್ದ ಹುಲಿವೇಷ ತಂಡ, ಮಡಿವಾಳ ಮಾಚಿದೇವರ ಹಿಂದಿರಬೇಕಿದ್ದ ಎನ್‍ಸಿಸಿ ತಂಡ ಸೇರಿದಂತೆ ಕೆಲ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News