ಹೃದಯಾಘಾತವನ್ನು ತಡೆಯಬಲ್ಲ ಈ ಹಣ್ಣು ಯಾವುದೆಂದು ಗೊತ್ತೇ?

Update: 2017-10-11 08:34 GMT

ಈ ಹಣ್ಣು ಹೃದಯಾಘಾತವನ್ನು ತಡೆಯಲು ನೆರವಾಗುತ್ತದೆ ಎನ್ನುವುದನ್ನು ನೂತನ ಅಧ್ಯಯನವೊಂದು ತೋರಿಸಿದೆ. ಇದು ನಮಗೆಲ್ಲರಿಗೂ ಚಿರಪರಿಚಿತವಾಗಿರುವ ಹಣ್ಣು. ಹೌದು, ಇದು ಬಾಳೇಹಣ್ಣು. ಇದು ಪಾರ್ಶ್ವವಾಯುವನ್ನೂ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ ಎನ್ನುವುದನ್ನೂ ಅಧ್ಯಯನ ವರದಿಯು ತಿಳಿಸಿದೆ.

ಬಾಳೇಹಣ್ಣಿನಲ್ಲಿರುವ ಪೊಟ್ಯಾಷಿಯಂ ಅಪಧಮನಿಗಳು ಬಿರುಸಾಗುವುದರ ಮತ್ತು ಸಂಕುಚಿತಗೊಳ್ಳುವುದರ ವಿರುದ್ಧ ಹೋರಾಡುತ್ತದೆ ಎನ್ನುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಹೃದ್ರೋಗದ ಅಪಾಯದಲ್ಲಿದ್ದ ಇಲಿಗಳನ್ನು ಪ್ರಯೋಗಕ್ಕೆ ಒಳಪಡಿಸಿ ಫಲಿತಾಂಶಗಳನ್ನು ವಿಶ್ಲೇಷಿಸಿದ ಬಳಿಕ ಅವರು ಈ ನಿರ್ಣಯಕ್ಕೆ ಬಂದಿದ್ದಾರೆ. ಈ ಇಲಿಗಳಿಗೆ ಕಡಿಮೆ, ಸಹಜ ಅಥವಾ ಅಧಿಕ ಪ್ರಮಾಣದಲ್ಲಿ ಪೊಟ್ಯಾಷಿಯಂ ಅನ್ನು ತಿನ್ನಿಸಲಾಗಿತ್ತು. ಪರಿಣಾಮವಾಗಿ ಕಡಿಮೆ ಪೊಟ್ಯಾಷಿಯಂ ಸೇವಿಸಿದ್ದ ಇಲಿಗಳಲ್ಲಿ ಅಪಧಮನಿಗಳು ಬಿರುಸಾಗಿದ್ದು ಕಂಡುಬಂದರೆ, ಅಧಿಕ ಪೊಟ್ಯಾಷಿಯಂ ಸೇವಿಸಿದ್ದ ಇಲಿಗಳಲ್ಲಿ ಅಪಧಮನಿಗಳ ಬಿರುಸುತನ ಕಡಿಮೆಯಾಗಿತ್ತು.

 ಈ ಪ್ರಮುಖ ಖನಿಜವು ಮಾನವರಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯಗಳನ್ನು ತಗ್ಗಿಸುತ್ತದೆ ಎನ್ನುವುದು ಸಿದ್ಧವಾಗಿದೆ. ಬಾಳೇಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿದ್ದು, ಇದನ್ನು ನಿಯಮಿತವಾಗಿ ತಿನ್ನುವ ಮೂಲಕ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೃದಯದ ಆರೋಗ್ಯಕ್ಕೆ ಉಪಯುಕ್ತವಾದ ಇತರ ಹಣ್ಣುಗಳ ಬಗ್ಗೆಯೂ ಮಾಹಿತಿ ಇಲ್ಲಿದೆ.

► ಬೆರ್ರಿ

 ಬೆರ್ರಿಗಳಲ್ಲಿ ಹೃದಯಕ್ಕೆ ಅಗತ್ಯವಾಗಿರುವ ಫೈಟೊನ್ಯೂಟ್ರಿಯಂಟ್‌ಗಳು ಮತ್ತು ಕರಗಬಲ್ಲ ನಾರು ಹೇರಳ ಪ್ರಮಾಣದಲ್ಲಿವೆ. ನಿಮ್ಮ ದಿನನಿತ್ಯದ ಆಹಾರದಲ್ಲಿ ಬ್ಲೂಬೆರ್ರಿ, ಸ್ಟ್ರಾಬೆರ್ರಿ ಇತ್ಯಾದಿ ಹಣ್ಣುಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಇವು ಹೃದಯಾಘಾತವನ್ನು ತಡೆಯಬಲ್ಲ ಅತ್ಯುತ್ತಮ ಆಹಾರಗಳಲ್ಲಿ ಸೇರಿವೆ.

► ಅಗಸೆ ಬೀಜ

ಅಗಸೆ ಬೀಜಗಳು ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು, ನಾರು ಮತ್ತು ಫೈಟೊ ಈಸ್ಟ್ರೋಜನ್‌ಗಳನ್ನು ಒಳಗೊಂಡಿದ್ದು, ಇವು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತವೆ. ಅಗಸೆ ಬೀಜಗಳನ್ನು ಅರೆದು ಅಥವಾ ಪುಡಿಯ ರೂಪದಲ್ಲಿ ಸೇವಿಸಬಹುದಾಗಿದೆ.

► ಗಾಢಬಣ್ಣದ ಅವರೆ ಬೀಜಗಳು

ಮೂತ್ರಪಿಂಡದ ಆಕಾರದಲ್ಲಿರುವ ರಾಜ್ಮಾದಂತಹ ಗಾಢಬಣ್ಣದ ಅಥವಾ ಕಪ್ಪು ಅವರೆ ಬೀಜಗಳಲ್ಲಿ ನಾರು, ಬಿ-ವಿಟಾಮಿನ್‌ಗಳು, ಖನಿಜ ಇತ್ಯಾದಿಗಳು ಸಮೃದ್ಧವಾಗಿದ್ದು, ಇವು ಹೃದಯಾಘಾತದ ವಿರುದ್ಧ ರಕ್ಷಣೆಯನ್ನು ನೀಡಬಲ್ಲವು.

► ಟೊಮೆಟೊ

ಟೊಮೆಟೊಗಳು ಲೈಕೋಪೀನ್, ವಿಟಾಮಿನ್ ಸಿ, ಆಲ್ಫಾ ಮತ್ತು ಬಿಟಾ ಕ್ಯಾರಟಿನ್ ಗಳನ್ನು ಹೊಂದಿದ್ದು, ಇವು ಹೃದಯ ರೋಗಗಳಿಂದ ಕಾಪಾಡುತ್ತವೆ.

► ಡಾರ್ಕ್ ಚಾಕೊಲೇಟ್

ಗಾಢಬಣ್ಣದ ಚಾಕೋಲೇಟ್‌ಗಳು ಶೇ.70ರಷ್ಟು ಕೋಕೊವನ್ನು ಒಳಗೊಂಡಿದ್ದು, ಇದು ಹೃದ್ರೋಗಗಳು ಮತ್ತು ಹೃದಯಾಘಾತದ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News