ನಿಮ್ಮ ಟಾಯ್ಲೆಟ್‌ನಲ್ಲಿಯ ಕಮೋಡ್ ಮುಚ್ಚಳವನ್ನು ತೆರೆದಿಟ್ಟೇ ಫ್ಲಷ್ ಮಾಡುತ್ತೀರಾ?... ಹಾಗಾದರೆ ಅಪಾಯ ಕಟ್ಟಿಟ್ಟ ಬುತ್ತಿ

Update: 2017-10-18 07:13 GMT

ಹೆಚ್ಚಿನವರು ಟಾಯ್ಲೆಟ್‌ನಲ್ಲಿ ತಮ್ಮ ಕೆಲಸ ಮುಗಿದ ಬಳಿಕ ಕಮೋಡ್‌ನ ಮುಚ್ಚಳವನ್ನು ತೆರೆದಿಟ್ಟೇ ಫ್ಲಷ್ ಮಾಡುತ್ತಾರೆ. ಇದು ಸಂಪೂರ್ಣ ತಪ್ಪು. ಏನಿದ್ದರೂ ಕಮೋಡ್‌ನ್ನು ಮುಚ್ಚಿಯೇ ಫ್ಲಷ್ ಮಾಡಬೇಕು. ನೀವು ಫ್ಲಷ್ ಮಾಡಿದಾಗ ನೀರು ರಭಸದಿಂದ ಕಮೋಡ್‌ನೊಳಗೆ ನುಗ್ಗುತ್ತದೆ. ಪರಿಣಾಮವಾಗಿ ಅದರಲ್ಲಿಯ ವಿಸರ್ಜನೆಯು ನೀರಿನೊಂದಿಗೆ ಹೊರಗೆ ಹೋಗುತ್ತದೆ ಮತ್ತು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಇದೇ ಸಂದರ್ಭ ಕಮೋಡ್‌ನಲ್ಲಿಯ ನೀರಿನ ಕಣಗಳು ಗಾಳಿಯಲ್ಲಿ ಹಾರಾಡುತ್ತವೆ. ಈ ನೀರಿನ ಕಣಗಳು 15 ಅಡಿ ಎತ್ತರಕ್ಕೂ ಚಿಮ್ಮಲ್ಪಡುತ್ತವೆ. ಹೀಗಾಗಿ ನೀವು ಬಾತ್‌ರೂಮ್‌ನ್ನು ಆಗಾಗ್ಗೆ ಬಳಸುತ್ತೀರಾದರೆ ಕಮೋಡ್‌ನ ಮುಚ್ಚಳವನ್ನು ಹಾಕಿಯೇ ನೀರನ್ನು ಫ್ಲಷ್ ಮಾಡಬೇಕು.

ಕಮೋಡ್‌ನಲ್ಲಿಯ ವಿರ್ಜನೆಯು ಫ್ಲಷ್ ಮಾಡಿದ ಬಹುಹೊತ್ತಿನ ಬಳಿಕವೂ ಅದರಲ್ಲಿಯೇ ಉಳಿದುಕೊಂಡಿರುತ್ತದೆ ಎಂದು ಅಪ್ಲೈಡ್ ಮೈಕ್ರೋಬಯಾಲಜಿ ಜರ್ನಲ್‌ನಲ್ಲಿ ಇತ್ತೀಚಿಗೆ ಪ್ರಕಟಗೊಂಡಿರುವ ಅಧ್ಯಯನ ವರದಿಯು ಬಹಿರಂಗ ಗೊಳಿಸಿದೆ. ಅಪಾಯಕಾರಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂಕಿಗೊಳಗಾಗುವ ಟಾಯ್ಲೆಟ್‌ನಿಂದ ಹರಡುವ ಸೂಕ್ಷ್ಮಜೀವಿಗಳು ನೆಲ,ಸಿಂಕ್‌ನಂತಹ ಇತರ ಸ್ಥಳಗಳಿಗೆ ಹರಡುತ್ತವೆ. ಅಷ್ಟೇ ಏಕೆ, ನೀವು ಬಾತ್‌ರೂಮ್‌ನಲ್ಲಿಟ್ಟಿರುವ  ಟೂಥಬ್ರಷ್‌ನ್ನೂ ಆಕ್ರಮಿಸಿ ಕೊಳ್ಳುತ್ತವೆ. ಹಲವಾರು ಬಾರಿ ನೀರನ್ನು ಫ್ಲಷ್ ಮಾಡಿದರೂ ಕಮೋಡ್‌ನ ಪೋರ್ಸ್‌ಲಿನ್‌ನ ಒಳ ಮೇಲ್ಮೈಯಲ್ಲಿ ಸೂಕ್ಷ್ಮಜೀವಿಗಳು ಅಂಟಿಕೊಂಡಿರುತ್ತವೆ. ಮೊದಲ ಕೆಲವು ಫ್ಲಷ್‌ಗಳ ಬಳಿಕ ಈ ಸೂಕ್ಷ್ಮಜೀವಿಗಳ ಸಂಖ್ಯೆ ಕಡಿಮೆಯಾಗುತ್ತದಾದರೂ ನಂತರ ಮತ್ತೆ ಇವುಗಳ ಸಂಖ್ಯೆ ವೃದ್ಧಿಸುತ್ತದೆ ಹಾಗೂ ಒಳಮೈಯನ್ನು ಬ್ರಷ್‌ನಿಂದ ಉಜ್ಜುವ ತನಕವೂ ಅಲ್ಲಿಯೇ ವಾಸವಾಗಿರುತ್ತವೆ. ಸಲ್ಮೊನೆಲ್ಲಾ ಮತ್ತು ಷಿಗೆಲ್ಲಾಗಳಂತಹ ಬ್ಯಾಕ್ಟೀರಿಯಾಗಳು ಹಾಗೂ ನೋರೊವೈರಸ್ ಮತ್ತು ಹೆಪಟೈಟಿಸ್‌‘ಎ’ನಂತಹ ವೈರಸ್‌ಗಳು ಬಾಯಿಯ ಮೂಲಕ ನಮ್ಮ ಶರೀರವನ್ನು ಸೇರುತ್ತವೆ. ಹೀಗಾಗಿ ಟೂಥಬ್ರಷ್‌ನಂತಹ ಬಾಯಿಯ ಸ್ವಚ್ಛತೆಗೆ ಸಂಬಂಧಿಸಿದ ವಸ್ತುಗಳನ್ನು ಬಾತ್‌ರೂಮಿನ ಹೊರಗೆ ಇಡುವುದು ಒಳ್ಳೆಯದು.

 ಟಾಯ್ಲೆಟ್‌ನ್ನು ಸ್ವಚ್ಛವಾಗಿರಿಸುವುದು ಅತ್ಯಂತ ಮುಖ್ಯವಾಗಿದೆ. ಟಾಯ್ಲೆಟ್‌ನ ಕೆಲಸ ಮುಗಿಸಿಕೊಂಡು ಹೊರಗೆ ಬರುವಾಗ ಕಡ್ಡಾಯವಾಗಿ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಗ್ಯಾಸ್ಟ್ರೋಇಂಟೆಸ್ಟೈನಲ್ ವೈರಸ್, ಎಂಟರಿಕ್ ಪೆಥೋಜೆನ್, ಉಸಿರಾಟದ ಸಮಸ್ಯೆಯನ್ನುಂಟು ಮಾಡುವ ವೈರಸ್ ಇತ್ಯಾದಿಗಳು ಬಾತ್‌ರೂಮಿನಲ್ಲಿ ವೃದ್ಧಿಯಾಗುವ ಅಪಾಯಕಾರಿ ವೈರಸ್‌ಗಳಾಗಿವೆ. ಫಿನೈಲ್‌ನಂತಹ ರಾಸಾಯನಿಕಗಳನ್ನು ಬಳಸಿ ಬಾತರೂಮ್‌ನ್ನು ದಿನವೂ ಸ್ವಚ್ಛಗೊಳಿಸುವುದರಿಂದ ಈ ಪೆಥೊಜೆನ್‌ಗಳ ಹರಡುವಿಕೆ ಯನ್ನು ತಡೆಗಟ್ಟಬಹುದು.

ಸಾರ್ವಜನಿಕ ಟಾಯ್ಲೆಟ್‌ಗಳನ್ನು ಬಳಸುವ ಸಂದರ್ಭ ಬಂದಾಗ ಬರಿಗೈಯಿಂದ ಅದರ ಬಾಗಿಲಿನ ಹಿಡಿಕೆಯನ್ನು ಮುಟ್ಟಲೇಬೇಡಿ. ವಿವಿಧ ಮೂಲಗಳ ಸೂಕ್ಷ್ಮಜೀವಿಗಳು ಅವುಗಳ ಮೇಲೆ ಅಂಂಟಿಕೊಂಡಿರುತ್ತವೆ ಮತ್ತು ಸೋಂಕು ಹರಡಲು ಕಾರಣವಾಗುತ್ತವೆ. ಹೊರಗಿನಿಂದ ಮತ್ತು ಒಳಗಡೆಯಿಂದ ಬಾಗಿಲಿನ ಚಿಲಕವನ್ನು ಮುಟ್ಟುವಾಗ ಟಿಷ್ಯೂ ಕಾಗದವನ್ನು ಬಳಸುವುದು ಒಳ್ಳೆಯದು.

ಟಾಯ್ಲೆಟ್‌ನ್ನು ಫ್ಲಷ್ ಮಾಡಿದಾಗ ತಕ್ಷಣ ಹೊರಬರುವುದನ್ನು ಮರೆಯಬೇಡಿ. ಇಲ್ಲದಿದ್ದರೆ ಗಾಳಿಯಲ್ಲಿ ಹಾರಾಡುವ ಸೂಕ್ಷ್ಮಜೀವಿಗಳಿಂದ ಸೋಂಕು ತಗಲುವ ಅಪಾಯವಿದೆ. ಬಾತ್‌ರೂಮಿನೊಳಗೆ ಬ್ಲೋ ಡ್ರೈಯರ್‌ನ್ನು ಬಳಸಲೇಬೇಡಿ. ಅದರಿಂದ ಹೊರಬರುವ ಬಿಸಿಗಾಳಿಯು ಸುತ್ತಲಿನ ಗಾಳಿಯಲ್ಲಿರುವ ಸೂಕ್ಷ್ಮಜೀವಿಗಳನ್ನು ಇನ್ನಷ್ಟು ದೂರ ಹರಡುತ್ತದೆ.

ಟಾಯ್ಲೆಟ್‌ನ ಮೇಲ್ಭಾಗದ ನೇರ ಸಂಪರ್ಕದಿಂದ ತಪ್ಪಿಸಿಕೊಳ್ಳಲು ಸದಾ ಭಾರತೀಯ ಮಾದರಿಯ ಟಾಯ್ಲೆಟ್‌ನ್ನು ಬಳಸುವುದು ಒಳ್ಳೆಯದು. ಕಮೋಡ್ ಬಳಕೆ ಅನಿವಾರ್ಯ ವಾದರೆ ಅದರ ಮೇಲ್ಮೈ ನಮ್ಮ ಶರೀರವನ್ನು ಸಂಪರ್ಕಿಸದಂತೆ ಪ್ರಯತ್ನಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News