ವಿಶ್ವವಿದ್ಯಾನಿಲಯದಲ್ಲಿ ಬೀಸಿದ ಹೊಸಗಾಳಿ...

Update: 2017-10-29 19:01 GMT

ನವಯುವಕರೇ ಆಧುನಿಕ ಭಾರತದ ನಿರ್ಮಾಪಕರು ಎಂದು ಸ್ವಾಮಿ ವಿವೇಕಾನಂದರು ಯಾವಾಗಲೂ ಹೇಳುತ್ತಿದ್ದರು. ಯಾವುದೇ ದೇಶದಲ್ಲಿ ಬದಲಾವಣೆಗಾಗಿ ಕ್ರಾಂತಿಯೊಂದು ನಡೆದರೆ ಅದರಲ್ಲಿ ತರುಣರ ಪಾತ್ರವೇ ಮುಖ್ಯವಾಗಿರುತ್ತದೆ. ಅಮೆರಿಕದ ಪಕ್ಕದಲ್ಲಿರುವ ಕ್ಯೂಬಾ ದೇಶದಲ್ಲಿ ಚೆಗವೇರಾ ಮತ್ತು ಫಿಡೆಲ್ ಕ್ಯಾಸ್ಟ್ರೊ ಸಮಾಜವಾದಿ ಕ್ರಾಂತಿ ಯಶಸ್ವಿಗೊಳಿಸಿದರು. ನಮ್ಮ ದೇಶದ ಸ್ವಾತಂತ್ರ್ಯ ಚಳವಳಿಯಲ್ಲೂ ವಿದ್ಯಾರ್ಥಿಗಳು ಮತ್ತು ಯುವಕರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ನಮ್ಮ ಇಂದಿನ ಯುವಕರನ್ನು ನೋಡಿದಾಗ, ಒಮ್ಮಾಮ್ಮೆ ನಿರಾಸೆ ಆಗುತ್ತದೆ. ಇಂದಿನ ಬಹುತೇಕ ಯುವಕರಿಗೆ ಸಾಮಾಜಿಕ ಕಾಳಜಿಗಿಂತ ಸ್ವಂತದ ಕರಿಯರ್ ಮುಖ್ಯವಾಗಿದೆ. ಅವರನ್ನು ಬಂಡವಾಳಶಾಹಿ ವ್ಯವಸ್ಥೆ ಆ ರೀತಿ ತಯಾರುಗೊಳಿಸಿದೆ.

ಹಣ ಮಾಡುವುದೇ ಜೀವನದ ಸರ್ವಸ್ವ ಎಂಬ ಭಾವನೆ ಅನೇಕ ತರುಣರಲ್ಲಿದೆ. ಇನ್ನು ಕೆಲ ಯುವಕರಿದ್ದಾರೆ. ಕೋಮುವಾದಿ ಶಕ್ತಿಗಳು ಅವರ ಮೆದುಳಿಗೆ ವಿಷಪ್ರಾಶನ ಮಾಡಿವೆ. ಅವರಿಗೆ ನರೇಂದ್ರ ಮೋದಿಯೇ ಆದರ್ಶ. ದೇಶಕ್ಕಾಗಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ, ಸ್ವಾತಂತ್ರಾ ನಂತರ ರಚನೆಗೊಂಡ ಸಂವಿಧಾನದ ಬಗ್ಗೆ, ಏಳು ದಶಕಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅವರಿಗೆ ಹೆಮ್ಮೆಯಿಲ್ಲ. ಗಾಂಧಿ, ನೆಹರೂ, ಸುಭಾಷ್, ಭಗತ್‌ಸಿಂಗ್ ಬಗ್ಗೆ ಅವರಿಗೆ ಗೊತ್ತಿಲ್ಲ. ಈಗ ಅವರ ಕಣ್ಣಿನ ಮುಂದಿರುವ ಏಕಮಾತ್ರ ಆದರ್ಶ ನರೇಂದ್ರ ಮೋದಿ. ಈ ರೀತಿ ಕೆಲ ಯುವಕರನ್ನು ಕೋಮುವಾದಿ ಶಕ್ತಿಗಳು ದಾರಿ ತಪ್ಪಿಸಿವೆ. ಸ್ವಾತಂತ್ರ್ಯ ನಂತರ ಗಾಂಧಿವಾದಿಗಳು, ಸಮಾಜವಾದಿಗಳು, ಸಮತಾವಾದಿಗಳು ಯುವಕರ ಕಡೆ ಕೊಂಚ ಗಮನ ಹರಿಸಿದ್ದರೆ, ಇಂಥ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ.

ಇಂಥ ಯುವಕರಿಂದಲೇ ತುಂಬಿದ ನಮ್ಮ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳಲ್ಲಿ ಮುಕ್ತ ಆಲೋಚನೆ, ಸಂವಾದಗಳ ವಾತಾವರಣ ಮಾಯವಾಗುತ್ತಿದೆ. ಸಿದ್ಧಾಂತಕ್ಕೆ ವಿರೋಧವಾದ ಭಿನ್ನ ವಿಚಾರಧಾರೆ ಒಳ ಬರದಂತೆ ಕಿಟಕಿ, ಬಾಗಿಲುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳು ನಾಳಿನ ಭಾರತದ ನಿರ್ಮಾಪಕರು ಎಂಬುದು ಕೋಮುವಾದಿ ಶಕ್ತಿಗಳಿಗೆ ಚೆನ್ನಾಗಿ ಗೊತ್ತಿದೆ. ಅಂತಲೇ ಆರೆಸ್ಸೆಸ್ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತದೆ. ಅದು ದೇಶದಲ್ಲಿ ತನ್ನದೇ ಆದ ಸಾವಿರಾರು ಸಂಖ್ಯೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ, ಆರೆಸ್ಸೆಸ್ ಪಟ್ಟು ಹಿಡಿದು ಆ ಶಿಕ್ಷಣ ಸಚಿವ ಖಾತೆಗೆ ತನ್ನವರನ್ನೇ ಕೂರಿಸಿತು. ಬಿಳಿ ಹಾಳೆಯಂತಿರುವ ಮಕ್ಕಳ ಮನಸ್ಸಿನ ಮೇಲೆ ಕೋಮುವಾದದ ಕಪ್ಪು ಬಣ್ಣ ಎರಚಲು ಅದು ಯತ್ನಿಸುತ್ತಲೇ ಬಂದಿದೆ. ಅದು ಅಧಿಕಾರಕ್ಕೆ ಬಂದಾಗಲೆಲ್ಲ, ಪಠ್ಯಪುಸ್ತಕಗಳನ್ನು ಕೋಮುವಾದೀಕರಣಗೊಳಿಸುತ್ತಲೇ ಬಂದಿದೆ. ತಮ್ಮ ಗುರು ಗೋಳ್ವಾಲ್ಕರ್ ಆದೇಶದಂತೆ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರನ್ನು ದೇಶದ ಶತ್ರುಗಳೆಂದು ಬಿಂಬಿಸುತ್ತ ಬಂದಿದೆ.

ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಅದರಲ್ಲೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಎಲ್ಲರಿಗೂ ಗೊತ್ತಿದೆ. ಮುಕ್ತ ಚರ್ಚೆ ಮತ್ತು ಸಂವಾದಕ್ಕೆ ಹೆಸರಾದ ದಿಲ್ಲಿಯ ಪ್ರತಿಷ್ಠಿತ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಆರೋಗ್ಯಕರ ವಾತಾವರಣ ಹಾಳು ಮಾಡಲು ನಿರಂತರ ಹುನ್ನಾರ ನಡೆದಿದೆ. 5 ರಿಂದ 6 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳಲ್ಲಿ ನಡೆದ ಸಭೆಯೊಂದರಲ್ಲಿ ದೇಶ ವಿರೋಧಿ ಘೋಷಣೆ ಕೂಗಲಾಯಿತು ಎಂದು ಸುಳ್ಳನ್ನು ಸೃಷ್ಟಿಸಿ ಆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಯಿತು. ಅದಕ್ಕಾಗಿ ನಕಲಿ ವೀಡಿಯೋ ಸೃಷ್ಟಿಸಲಾಯಿತು. ಕನ್ಹಯ್ಯಿಕುಮಾರ್ ಅವರನ್ನು ತಿಹಾರ್ ಜೈಲಿಗೆ ತಳ್ಳಲಾಯಿತು. ನ್ಯಾಯಾಲಯದಲ್ಲಿ ಅವರು ವಿಚಾರಣೆಗೆ ಬಂದಾಗ, ಅವರ ಮೇಲೆ ಹಲ್ಲೆ ನಡೆಯಿತು. ಇಷ್ಟೆಲ್ಲ ನಡೆದು, ಕೊನೆಗೆ ತನಿಖೆಯಲ್ಲಿ ಕನ್ಹಯ್ಯೆಕುಮಾರ್ ಮತ್ತು ಅವರ ಮಿತ್ರರು ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂಬುದು ಸಾಬೀತಾಗಿ ಅವರು ಆರೋಪಮುಕ್ತರಾಗಿ ಹೊರಗೆ ಬಂದರು.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಎಬಿವಿಪಿ ಕಿರುಕುಳಕ್ಕೆ ಒಳಗಾಗಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಪಕ್ಷಪಾತ ನೀತಿಗೆ ಬೇಸತ್ತು ರೋಹಿತ್ ವೇಮುಲಾ ಎಂಬ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡರು. ರೋಹಿತ್ ಸಾವಿನ ನಂತರ ಆತ ದಲಿತ ಸಮುದಾಯಕ್ಕೆ ಸೇರಿಲ್ಲ ಎಂಬುದನ್ನು ಸಾಬೀತುಪಡಿಸಲು ಕೇಂದ್ರದ ಬಿಜೆಪಿ ಸರಕಾರ ಹರಸಾಹಸಪಟ್ಟಿತು. ದಿಲ್ಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಜೀಬ್ ಎಂಬ ವಿದ್ಯಾರ್ಥಿ ಕಣ್ಮರೆಯಾಗಿ ಒಂದು ವರ್ಷ ಗತ್ತಿಸುತ್ತ ಬಂದರೂ ಆತ ಎಲ್ಲಿದ್ದಾನೆ ಎಂಬುದು ಪತ್ತೆಯಾಗಿಲ್ಲ. ಆತ ಕಣ್ಮರೆಯಾಗುವ ಮುನ್ನ ಎಬಿವಿಪಿ ಕಾರ್ಯಕರ್ತರು ಅವನ ಮೇಲೆ ಹಲ್ಲೆ ಮಾಡಿದ್ದರು.

ಹೀಗೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗಳನ್ನು ವಶಪಡಿಸಿಕೊಳ್ಳುವ ಸಂಘ ಪರಿವಾರದ ಯತ್ನ ಈಗ ತಿರುಗುಬಾಣವಾಗಿ ಪರಿಣಮಿಸಿದೆ. ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯಶಾಲಿ ಆಗಿದ್ದರೂ ಕೂಡ ಕೆಲ ವಿಶ್ವವಿದ್ಯಾನಿಲಯಗಳಲ್ಲಿ ಎಬಿವಿಪಿ ಎಂಬ ಗಲಭೆಕೋರ ಸಂಘಟನೆ ಮಣ್ಣು ಮುಕ್ಕಿದೆ. ರಾಜಸ್ಥಾನ, ಓಡಿಶಾ, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳ ಅನೇಕ ಕಾಲೇಜುಗಳ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎಬಿವಿಪಿ ಪರಾಭವಗೊಂಡಿದೆ.

ಜೆಎನ್‌ಯು ಸೇರಿದಂತೆ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಎಬಿವಿಪಿ ಸೃಷ್ಟಿಸಿದ ಭಯಾನಕ ವಾತಾವರಣದಿಂದ ವಿದ್ಯಾರ್ಥಿಗಳು ರೋಸಿ ಹೋಗಿದ್ದರು. ತನ್ನ ವಿಚಾರಧಾರೆಗೆ ಭಿನ್ನವಾದ ವಿಚಾರಗಳನ್ನು ಹೊಂದಿದ್ದ ಸಂಘಟನೆಗೆ ವಿದ್ಯಾರ್ಥಿಗಳು ಸೇರುವುದು ಅವರು ಸಹಿಸುತ್ತಿರಲಿಲ್ಲ. ಪ್ರಗತಿಪರ ವಿಚಾರಧಾರೆಯ ಸಂಘಟನೆಗಳು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಸುತ್ತಿದ್ದ ವಿಚಾರಗೋಷ್ಠಿಗಳನ್ನು ಅದು ಬಹಿಷ್ಕರಿಸುತಿತ್ತು. ಅಷ್ಟೇ ಅಲ್ಲದೆ, ವಿಚಾರಗೋಷ್ಠಿ ನಡೆಸುತ್ತಿದ್ದ ಸಭಾಂಗಣಗಳಿಗೆ ಹೋಗಿ ಗೂಂಡಾಗಿರಿ ಮಾಡುತ್ತಿತ್ತು. ಒಂದೆಡೆ ಗುರುದೇವೋಭವ ಎಂದು ಹೇಳುತ್ತಲೇ, ಇನ್ನೊಂದೆಡೆ ಅಕ್ಷರ ಕಲಿಸಿದ ಗುರುಗಳ ಮೇಲೆ ಹಲ್ಲೆ ಮಾಡಲಾಗುತಿತ್ತು. ಉತ್ತರ ಭಾರತದ ಕಾಲೇಜೊಂದರಲ್ಲಿ ನಾಲ್ಕು ವರ್ಷಗಳ ಹಿಂದೆ ಇವರ ಗೂಂಡಾಗಿರಿಗೆ ಬಲಿಯಾಗಿ ಅಧ್ಯಾಪಕರೊಬ್ಬರು ಪ್ರಾಣ ಕಳೆದುಕೊಂಡಿದ್ದರು.

ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘದ ಆಹ್ವಾನದ ಮೇರೆಗೆ ಉಪನ್ಯಾಸ ನೀಡಲು ಬಂದಿದ್ದ ಹಿರಿಯ ಪತ್ರಕರ್ತ ಸಿದ್ಧಾರ್ಥ ವರದರಾಜನ್ ಅವರಿಗೆ ಘೇರಾವ್ ಹಾಕಿ, ಉಪನ್ಯಾಸ ನೀಡದಂತೆ ತಡೆಯಲಾಯಿತು. ಮುಂಬೈಯ ಕಾಲೇಜೊಂದರಲ್ಲಿ ಆನಂದ ಪಟವರ್ಧನ್‌ರಂತಹ ಚಲನಚಿತ್ರ ನಿರ್ದೇಶಕರಿಗೆ, ಶೀತಲ್ ಸಾಠೆಯಂತಹ ದಲಿತ ಕ್ರಾಂತಿಕಾರಿ ಹಾಡುಗಾರ್ತಿಗೆ ಉಪನ್ಯಾಸ ನೀಡಲು ಅವಕಾಶ ಕೊಡಲಿಲ್ಲ. ಇದರಿಂದಾಗಿ ದಲಿತ, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ವಿಶ್ವವಿದ್ಯಾನಿಲಯದಲ್ಲಿ ಚಟುವಟಿಕೆ ನಡೆಸುವುದೇ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಚೆನ್ನೈನ ಕೇಂದ್ರೀಯ ವಿದ್ಯಾಲಯದಲ್ಲಿ ಪೆರಿಯಾರ್ ಅಂಬೇಡ್ಕರ್ ವಿಚಾರ ವೇದಿಕೆ ರದ್ದುಗೊಳಿಸಲಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದ ವಿವಿಧ ಶಿಷ್ಯ ವೇತನಗಳನ್ನು ರದ್ದುಗೊಳಿಸಲಾಗಿದೆ.

ಇಂಥ ಭೀತಿಯ ವಾತಾವರಣದಲ್ಲೂ ಉತ್ತರ ಭಾರತದ ಕೆಲ ವಿಶ್ವವಿದ್ಯಾನಿಲಯಗಳಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಎಬಿವಿಪಿ ಪರಾಭವಗೊಂಡಿರುವುದು ಉತ್ತಮ ಬೆಳವಣಿಗೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಡ ಮತ್ತು ಪ್ರಗತಿಪರ ಸಂಘಟನೆಗಳು ಮೈತ್ರಿಯನ್ನು ಮಾಡಿಕೊಂಡು ಎಬಿವಿಪಿಯನ್ನು ಸೋಲಿಸಿವೆ. ಈವರೆಗೆ ಎಬಿವಿಪಿಯ ಭದ್ರಕೋಟೆಯಾಗಿದ್ದ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಎನ್‌ಎಸ್‌ಯುಐ ಆರಿಸಿ ಬಂದಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಬಿವಿಪಿ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಅಲ್ಲಿ ಬಿರ್ಸಾ ಅಂಬೇಡ್ಕರ್ ಫುಲೆ ವಿದ್ಯಾರ್ಥಿ ಸಂಘಟನೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ನಂತರ ಎರಡನೆ ಸ್ಥಾನದಲ್ಲಿದೆ.

ಇಷ್ಟೆಲ್ಲ ಬದಲಾವಣೆಗಳಾದ ನಂತರವೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮುಕ್ತ ವಾತಾವರಣ ನಾಶ ಪಡಿಸಲು ಕೇಂದ್ರ ಸರಕಾರ ಹುನ್ನಾರ ನಡೆಸುತ್ತಲೇ ಇದೆ. ಮೋದಿ ಸರಕಾರದಿಂದ ಅಲ್ಲಿ ನೇಮಕಗೊಂಡ ಉಪಕುಲಪತಿಯವರು ಕ್ಯಾಂಪಸ್‌ನಲ್ಲಿ ಶಾಂತಿಯನ್ನು ಕಾಪಾಡಲು ಸೇನಾ ಪಡೆಯ ಟ್ಯಾಂಕರ್ ತಂದು ನಿಲ್ಲಿಸಬೇಕು ಎಂಬ ಹೇಳಿಕೆ ನೀಡಿ, ಅಪಹಾಸ್ಯಕ್ಕೆ ಒಳಗಾಗಿದ್ದರು. ಇನ್ನೊಂದೆಡೆ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲೂ ಕೂಡ ಎಬಿವಿಪಿ ಪರಾಭವಗೊಂಡಿದೆ. ಅಲ್ಲಿ ಎಸ್‌ಎಫ್‌ಐ ಮತ್ತು ಅಂಬೇಡ್ಕರ್ ಸ್ಟೂಡೆಂಟ್ ಫೆಡರೇಷನ್ ಹಾಗೂ ಆದಿವಾಸಿ ವಿದ್ಯಾರ್ಥಿ ಸಂಘಟನೆಗಳು ಜೊತೆಗೂಡಿ ಜಯಶಾಲಿಯಾಗಿವೆ. ಎಬಿವಿಪಿ ಅಲ್ಲಿಯೂ ಕೂಡ ಒಂದು ಸ್ಥಾನವನ್ನೂ ಗೆಲ್ಲಲು ಆಗಲಿಲ್ಲ. ಯೋಗಿ ಆದಿತ್ಯಾನಾಥ್ ಮುಖ್ಯಮಂತ್ರಿ ಆಗಿರುವ ಉತ್ತರ ಪ್ರದೇಶದ ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲೂ ಕೂಡ ಎಬಿವಿಪಿ ಪರಾಭವಗೊಂಡಿದೆ.

ಸರ್ವಜನಾಂಗದ ಶಾಂತಿಯ ತೋಟವಾದ ಭಾರತವನ್ನು ಕೋಮುವಾದಿ-ಫ್ಯಾಶಿಸ್ಟ್ ಶಕ್ತಿಗಳಿಂದ ಕಾಪಾಡುವ ಶಕ್ತಿ ಯುವಜನರಿಗೆ ಮಾತ್ರ ಇದೆಯೆಂದು ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಸಾಬೀತಾಗಿದೆ.

ಆದರೆ ನಮ್ಮ ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳು ಶೈಕ್ಷಣಿಕ ಕ್ಷೇತ್ರದ ಬಗ್ಗೆ ಈವರೆಗೆ ತಾಳಿದ ಉದಾಸೀನ ಧೋರಣೆಯನ್ನು ಕೈ ಬಿಟ್ಟು ವಿದ್ಯಾರ್ಥಿಗಳನ್ನು ಹೋರಾಟದ ಮುಂಚೂಣಿಗೆ ತರಲು ಸೆಣಸಬೇಕಿದೆ. ಭಾರತದ ಜನತಂತ್ರವನ್ನು ರಕ್ಷಿಸುವ ಶಕ್ತಿ ಯುವಜನರಲ್ಲಿ ಮಾತ್ರ ಇದೆ ಎಂಬುದು ವಾಸ್ತವ ಸತ್ಯ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News