ಆರೋಗ್ಯಕ್ಕೆ ಕಹಿಯಾಗದಿರಲಿ 'ಸಿಹಿ'

Update: 2017-11-01 11:51 GMT

ಜೀವನಶೈಲಿಗೆ ಸಂಬಂಧಿಸಿದ ರೋಗಗಳು ಜನರಲ್ಲಿ ಹೆಚ್ಚುತ್ತಿವೆ. ಒತ್ತಡಗಳಿಂದ ಕೂಡಿದ ಈ ಯಾಂತ್ರಿಕ ಯುಗದಲ್ಲಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸು ವಷ್ಟೂ ಸಮಯವಿಲ್ಲ. ಒತ್ತಡಗಳಿಂದ ಕೂಡಿದ ಜೀವನಶೈಲಿ ಮತ್ತು ಆರೋಗ್ಯಕರವಲ್ಲದ ಆಹಾರ ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇಂತಹ ರೋಗಗಳಲ್ಲಿ ಮಧುಮೇಹವು ಅತ್ಯಂತ ಸಾಮಾನ್ಯವಾಗಿದೆ.

ಇಂದು ವಿಶ್ವಾದ್ಯಂತ ಮಧುಮೇಹ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಮಧುಮೇಹ ಒಮ್ಮೆ ದಾಳಿಯಿಟ್ಟಿತೆಂದರೆ ಅದು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದ, ಜೀವಮಾನವಿಡೀ ನಮ್ಮಿಂದಿಗೇ ಇರುವ ರೋಗವಾಗಿದೆ. ಅದನ್ನು ನಿಯಂತ್ರಿಸಬೇಕು ಅಷ್ಟೇ. ಇಲ್ಲದಿದ್ದರೆ ಅಧಿಕ ಸಕ್ಕರೆ ಮಟ್ಟವು ಮೂತ್ರಪಿಂಡ ಅಥವಾ ಹೃದಯ ವೈಫಲ್ಯಗಳಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನಾವು ಸೇವಿಸುವ ಆಹಾರದಲ್ಲಿಯ ಸಕ್ಕರೆಯನ್ನು ಶಕ್ತಿಗಾಗಿ ಗ್ಲುಕೋಸ್‌ನ್ನಾಗಿ ಪರಿವರ್ತಿಸಲು ನಮ್ಮ ಶರೀರಕ್ಕೆ ಸಾಧ್ಯವಾಗದಿದ್ದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ ಮತ್ತು ಇದು ಇತರ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ನಮ್ಮ ಶರೀರದಲ್ಲಿಯ ಮೇದೋಜೀರಕ ಗ್ರಂಥಿಯು ಉತ್ಪಾದಿಸುವ ಇನ್ಸುಲಿನ್ ಎಂಬ ಹಾರ್ಮೋನ್ ರಕ್ತದಲ್ಲಿಯ ಸಕ್ಕರೆಯನ್ನು ಗ್ಲುಕೋಸ್‌ನ್ನಾಗಿ ಪರಿವರ್ತಿಸುತ್ತದೆ. ನಮ್ಮ ಶರೀರದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್‌ಗೆ ಶರೀರವು ಸ್ಪಂದಿಸದ ಸ್ಥಿತಿಯನ್ನು ಮಧುಮೇಹವೆಂದು ಕರೆಯುತ್ತಾರೆ. ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾಗುವುದು ಹೃದ್ರೋಗಗಳು, ಮೂತ್ರಪಿಂಡ ವೈಫಲ್ಯ, ಅಂಧತ್ವ ಮತ್ತು ಇತರ ಅಂಗಾಂಗಳಿಗೆ ಹಾನಿಯುಂಟಾಗುವ ಅಪಾಯವನ್ನು ಅಧಿಕಗೊಳಿಸುತ್ತದೆ.

ಮಧುಮೇಹವನ್ನು ಪ್ರಮುಖವಾಗಿ ಟೈಪ್ 1 ಮತ್ತು ಟೈಪ್ 2 ಎಂದು ವರ್ಗೀಕರಿಸಲಾಗಿದೆ. ಟೈಪ್ 1 ಮಧುಮೇಹ ಜೀವನದ ಆರಂಭಿಕ ಹಂತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಅದು ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಅದು ಮೂಲತಃ ಆಟೋ ಇಮ್ಯೂನ್ ಕಾಯಿಲೆಯಾಗಿದೆ, ಅಂದರೆ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯು ಇನ್ಸುಲಿನ್ ಅನ್ನು ಉತ್ಪಾದಿಸುವ ಬಿಟಾ ಕೋಶಗಳ ಮೇಲೆ ದಾಳಿ ನಡೆಸುತ್ತದೆೆ. ಇನ್ಸುಲಿನ್ ಅನ್ನು ಉತ್ಪಾದಿಸಲು ಮೇದೋಜೀರಕ ಗ್ರಂಥಿಗೆ ಸಾಧ್ಯವಾಗ ದವರೆಗೂ ಈ ದಾಳಿಯು ನಿರಂತರವಾಗಿರುತ್ತದೆ.

ಟೈಪ್ 2 ಮಧುಮೇಹಿಗಳು ಜೀವಮಾನ ಪರ್ಯಂತ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕಾಗುತ್ತದೆ. ಟೈಪ್ 2 ಮಧುಮೇಹವು ಸಾಮಾನ್ಯವಾಗಿ ಅನಾರೋಗ್ಯಕರ ಜೀವನಶೈಲಿ ಮತ್ತು ಬೊಜ್ಜಿನಿಂದ ಬರುತ್ತದೆ. ರಕ್ತದಲ್ಲಿಯ ಎಲ್ಲ ಸಕ್ಕರೆಯನ್ನು ಗ್ಲುಕೋಸ್‌ನ್ನಾಗಿ ಪರಿವರ್ತಿಸಲು ಶರೀರಕ್ಕೆ ಸಾಧ್ಯವಾಗದಿದ್ದಾಗ ಟೈಪ್ 2 ಮಧುಮೇಹ ಕಾಣಿಸಿಕೊಳ್ಳುತ್ತದೆ. ಇದು ಮಧುಮೇಹದ ಅತ್ಯಂತ ಸಾಮಾನ್ಯ ರೂಪವಾಗಿದೆ.

ಗ್ಲುಕೋಸ್ ಉತ್ಪಾದನೆಯನ್ನು ಹೆಚ್ಚಿಸುವ ಕೆಲವು ನಿರ್ದಿಷ್ಟ ಔಷಧಿಗಳ ಸೇವನೆಯಿಂದ ಟೈಪ್ 1ರಲ್ಲಿ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ಜೊತೆಗೆ ಜೀವನಶೈಲಿಯಲ್ಲಿ ಆರೋಗ್ಯಕರ ಬದಲಾವಣೆಗಳ ಮೂಲಕ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಇದು ಆರಂಭಿಕ ಹಂತದಲ್ಲಿ ರೋಗ ಪತ್ತೆಯಾದರೆ ಮಾತ್ರ ಸಾಧ್ಯ.

ಟೈಪ್ 2 ಮಧುಮೇಹವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ನೆರವಾಗಬಹುದಾದ ಕೆಲವು ಲಕ್ಷಣಗಳಿಲ್ಲಿವೆ.

 ಪದೇಪದೇ ಮೂತ್ರ ವಿಸರ್ಜನೆ

ಮಧುಮೇಹಿಗಳ ರಕ್ತದಲ್ಲಿ ಯಾವಾಗಲೂ ಸಕ್ಕರೆಯ ಮಟ್ಟ ಅಧಿಕವಾಗಿಯೇ ಇರುತ್ತದೆ. ಶರೀರವು ಈ ಹೆಚ್ಚುವರಿ ಸಕ್ಕರೆಯನ್ನು ಮೂತ್ರದ ಮೂಲಕ ಹೊರಗೆ ಹಾಕಲು ಪ್ರಯತ್ನಿಸುತ್ತಿರುತ್ತದೆ ಮತ್ತು ಇದೇ ಕಾರಣದಿಂದ ಮಧುಮೇಹಿಗಳು ಆಗಾಗ್ಗೆ ಮೂತ್ರ ವಿಸರ್ಜನೆಗೆ ಹೋಗುವಂತಾಗುತ್ತದೆ.

ಆಗಾಗ್ಗೆ ಬಾಯಾರಿಕೆ

ಆಗಾಗ್ಗೆ ಬಾಯಾರಿಕೆಯಾಗುವುದು ಪದೇಪದೇ ಮೂತ್ರ ವಿಸರ್ಜನೆಯ ಅಡ್ಡ ಪರಿಣಾಮವಾಗಿರಬಹುದು. ನಿಮ್ಮ ಶರೀರದಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳುವಂತೆ ಮಿದುಳು ಸಂಕೇತಗಳನ್ನು ರವಾನಿಸುತ್ತಿರುತ್ತದೆ. ಅಲ್ಲದೆ ರಕ್ತದಲ್ಲಿ ಸಕ್ಕರೆಯ ಹೆಚ್ಚಳವೂ ಬಾಯಾರಿಕೆಯಾಗುವಂತೆ ಮಾಡುತ್ತದೆ.

ದಣಿವು

ಇದು ಮಧುಮೇಹದ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ರಕ್ತದಲ್ಲಿಯ ಅಧಿಕ ಸಕ್ಕರೆ ಮಟ್ಟದಿಂದಾಗಿ ಶರೀರದಲ್ಲಿನ ಜೀವಕೋಶಗಳಿಗೆ ಅಗತ್ಯ ಆಮ್ಲಜನಕ ಲಭಿಸದಿರುವುದ ರಿಂದ ಶರೀರದ ಶಕ್ತಿಯು ಕುಂದುತ್ತದೆ ಮತ್ತು ಇದು ದಣಿವಿಗೆ ಕಾರಣವಾಗುತ್ತದೆ.

ಮಸುಕು ದೃಷ್ಟಿ

ದೃಷ್ಟಿ ಮಸುಕಾಗುವುದು ತಾತ್ಕಾಲಿಕ ಪರಿಣಾಮವಾಗಿರಬಹುದು. ರಕ್ತದಲ್ಲಿಯ ಅಧಿಕ ಸಕ್ಕರೆ ಮಟ್ಟವು ಕಣ್ಣಿನಲ್ಲಿಯ ಮಸೂರವು ಬಾತುಕೊಳ್ಳುವಂತೆ ಮಾಡುತ್ತದೆ ಮತ್ತು ದೃಷ್ಟಿ ವ್ಯತ್ಯಯಕ್ಕೆ ಕಾರಣವಾಗುತ್ತದೆ.

ಪದೇಪದೇ ಹಸಿವು

ರಕ್ತದಲ್ಲಿ ಸಕ್ಕರೆಯ ಮಟ್ಟವು ಅಧಿಕವಾಗಿದ್ದಾಗ ಜೀವಕೋಶಗಳಿಗೆ ಸಾಕಷ್ಟು ಆಮ್ಲಜನಕ ದೊರೆಯುವುದಿಲ್ಲ ಮತ್ತು ಆಹಾರದಿಂದ ಶಕ್ತಿ ದೊರೆಯುವುದಿಲ್ಲ. ಹೀಗಾಗಿ ಸ್ನಾಯುಗಳಿಗೆ ಇಂಧನ ಪೂರೈಸುವಂತೆ ಮಿದುಳು ಸಂಕೇತಗಳನ್ನು ರವಾನಿಸುತ್ತಿರುತ್ತದೆ ಮತ್ತು ಇದು ಪದೇಪದೇ ಹಸಿವಿಗೆ ಕಾರಣವಾಗುತ್ತದೆ.

ಗಾಯಗಳು ಬೇಗನೆ ಮಾಯುವುದಿಲ್ಲ

ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾಗಿದ್ದರೆ ಅದು ಬಿಳಿಯ ರಕ್ತಕಣಗಳ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಗಾಯಗಳನ್ನು ಗುಣಪಡಿಸುವ ಅವುಗಳ ಕ್ಷಮತೆಯನ್ನು ತಗ್ಗಿಸುತ್ತದೆ. ಇದೇ ಕಾರಣದಿಂದ ಮಧುಮೇಹಿಗಳಲ್ಲಿ ಗಾಯಗಳು ಬೇಗನೆ ಮಾಯುವುದಿಲ್ಲ.

ಕೈಕಾಲುಗಳಲ್ಲಿ ಜುಮುಗುಟ್ಟುವಿಕೆ

ಟೈಪ್ 2 ಮಧುಮೇಹಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ನರಕ್ಕೆ ಹಾನಿಯಾಗಬಹುದು ಮತ್ತು ಇದರಿಂದಾಗಿ ಕೈಕಾಲುಗಳು ಮತ್ತು ಶರೀರದಲ್ಲಿ ಒಂದು ಬಗೆಯ ಜುಮುಗುಟ್ಟುವಿಕೆಯ 1 ಅನುಭವವಾಗಬಹುದು.

ಪದೇಪದೇ ಸೋಂಕುಗಳು

ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿದ್ದರೆ ಶರೀರಕ್ಕೆ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಈ ಹೆಚ್ಚುವರಿ ಸಕ್ಕರೆಯ ಮೇಲೆ ಬ್ಯಾಕ್ಟೀರಿಯಾಗಳೂ ಹುಲುಸಾಗಿ ಅಭಿವೃದ್ಧಿಗೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News