ನಾವು ಮಾಡುವ ಈ ತಪ್ಪುಗಳು ಹಲ್ಲುಗಳಿಗೆ ಗಂಭೀರ ಹಾನಿಯನ್ನುಂಟು ಮಾಡಬಹುದು..

Update: 2017-11-08 10:21 GMT

ಹಲ್ಲುಗಳು ನಮ್ಮ ಶರೀರದಲ್ಲಿ ಪ್ರಮುಖ ಅಂಗಗಳಾಗಿವೆ. ಆಹಾರವನ್ನು ಜಗಿಯಲು ಸದೃಢವಾದ ಹಲ್ಲುಗಳು ಅಗತ್ಯ. ಹಲ್ಲುಗಳ ಆರೋಗ್ಯ ಕೆಟ್ಟರೆ ಇಡೀ ಶರೀರದ ಆರೋಗ್ಯವೇ ಕೆಟ್ಟಂತೆ. ಚಾಕಲೇಟ್ ಸೇರಿದಂತೆ ಹೆಚ್ಚು ಸಿಹಿತಿಂಡಿಗಳ ಸೇವನೆ, ಹಲ್ಲನ್ನು ಸರಿಯಾಗಿ ಉಜ್ಜದಿರುವುದು ಇವೆಲ್ಲ ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಹಲ್ಲುಗಳು ಹುಳುಕಾಗದಂತೆ ಕಾಳಜಿ ಮುಖ್ಯವಾಗಿದೆ. ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ನಾವು ನಮಗೆ ಗೊತ್ತಿಲ್ಲದೇ ಹಲ್ಲುಗಳಿಗೆ ಹಾನಿಯನ್ನುಂಟು ಮಾಡುವ ತಪ್ಪುಗಳನ್ನು ಮಾಡುತ್ತಿರುತ್ತೇವೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.....

ಬ್ರಷ್ ಮಾಡಿದ ನಂತರ ಬಾಯಿ ಮುಕ್ಕಳಿಸುವುದು

ಹಲ್ಲುಗಳನ್ನು ಬ್ರಷ್ ಮಾಡಿದ ನಂತರ ಬಾಯಿಯನ್ನು ಮುಕ್ಕಳಿಸುವುದರಿಂದ ದಂತಕ್ಷಯವನ್ನು ತಡೆಯಲು ನೆರವಾಗುವ ಟೂಥ್‌ಪೇಸ್ಟ್‌ನಲ್ಲಿಯ ಫೋರೈಡ್ ತೊಳೆದು ಹೋಗುತ್ತದೆ. ಆದ್ದರಿಂದ ಹಲ್ಲುಜ್ಜಿದ ಬಳಿಕ ಬಾಯಿಯನ್ನು ಮುಕ್ಕಳಿಸದೆ ಉಳಿದುಕೊಂಡಿ ರುವ ಹೆಚ್ಚುವರಿ ಪೇಸ್ಟ್‌ನ್ನು ಉಗಿದರೆ ಸಾಕು ಎನ್ನುತ್ತಾರೆ ತಜ್ಞರು.

ತಿಂಡಿ ತಿಂದ ನಂತರ ಹಲ್ಲುಜ್ಜುವುದು

ರಾತ್ರಿಯಿಡೀ ನಮ್ಮ ಬಾಯಿಯಲ್ಲಿ ವೃದ್ಧಿಯಾಗಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಗಳನ್ನು ಉಜ್ಜಬೇಕು. ಕೆಲವರು ಬೆಳಗಿನ ಉಪಹಾರ ಸೇವನೆಯ ಬಳಿಕ ಹಲ್ಲುಜ್ಜುತ್ತಾರೆ. ಇದು ತಪ್ಪು. ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಗಳನ್ನುಜ್ಜಿ, ಉಪಹಾರ ಸೇವನೆಯ ಬಳಿಕ ಫ್ಲೋರೈಡ್ ವೌತ್‌ವಾಷ್‌ನಿಂದ ಬಾಯಿ ಮುಕ್ಕಳಿಸಬೇಕು.

ಆಹಾರ ಸೇವನೆಯ ಬೆನ್ನಲ್ಲೇ ಹಲ್ಲುಜ್ಜುವುದು

ಆಹಾರ ಮತ್ತು ಪಾನೀಯ ಸೇವನೆಯ ನಂತರ ಬಾಯಿಯಲ್ಲಿ ರೂಪುಗೊಳ್ಳುವ ಕಡಿಮೆ ಪಿಎಚ್‌ನ್ನು ನೈಸರ್ಗಿಕವಾಗಿ ತಟಸ್ಥಗೊಳಿಸಲು ಲಾಲಾರಸಕ್ಕೆ 30 ರಿಂದ 40 ನಿಮಿಷಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಹಲ್ಲುಜ್ಜಲು ಕನಿಷ್ಠ ಅಷ್ಟು ಸಮಯವಾದರೂ ಕಾಯಬೇಕು. ಆಹಾರ ಸೇವನೆಯ ಬೆನ್ನಲ್ಲೇ ಬ್ರಷ್ ಮಾಡಿದರೆ ಬಾಯಿಯಲ್ಲಿರುವ ಆಮ್ಲವು ಹಲ್ಲಿನೊಳಗೆ ಸೇರಿಕೊಳ್ಳುತ್ತದೆ ಮತ್ತು ಹಲ್ಲುಗಳ ಸವೆತ ಮತ್ತು ಎನಾಮಲ್‌ಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದಾಗಿ ಕಾಲಕ್ರಮೇಣ ಹಲ್ಲುಗಳು ಸಂವೇದನಾ ಶೀಲತೆಯನ್ನು ಕಳೆದುಕೊಳ್ಳುತ್ತವೆ ಮತ್ತು ದುರ್ಬಲಗೊಳ್ಳುತ್ತವೆ. ಒರಟಾದ ಟೂಥ್‌ಬ್ರಷ್ ಬಳಕೆ
ಒರಟಾದ ಟೂಥ್‌ಬ್ರಷ್‌ನ್ನೆಂದೂ ಬಳಸಬಾರದು. ಮಧ್ಯಮ ಮೃದುವಾದ ಬ್ರಷ್ ಹಲ್ಲುಗಳಿಗೆ ಸೂಕ್ತವಾಗಿದೆ. ಒರಟಾದ ಟೂಥ್‌ಬ್ರಷ್ ವಸಡುಗಳು, ಹಲ್ಲುಗಳ ಬೇರಿನ ಮೇಲ್ಮೈ ಮತ್ತು ಎನಾಮಲ್‌ಗೆ ಹಾನಿಯನ್ನುಂಟು ಮಾಡುತ್ತದೆ.

ಕುರುಕುಲು ತಿಂಡಿ

ಊಟಗಳ ನಡುವೆ ಆಗಾಗ್ಗೆ ಕುರುಕುಲು ತಿಂಡಿಗಳನ್ನು ತಿನ್ನುವುದರಿಂದ ಆಹಾರಕ್ಕೂ ಹಲ್ಲುಗಳಿಗೂ ಹೆಚ್ಚಿನ ಸಂಪರ್ಕವಾಗುತ್ತಿರುತ್ತದೆ ಮತ್ತು ಇದು ದಂತಕುಳಿಗಳಿಗೆ ಕಾರಣವಾಗಬಹುದು.

ಬಾಟಲ್ ಓಪನರ್ ಆಗಿ ಹಲ್ಲಿನ ಬಳಕೆ

ಕೆಲವರು ಪಾರ್ಟಿಗಳಲ್ಲಿರುವಾಗ ಬಾಟಲಿಗಳ ಮುಚ್ಚಳ ತೆಗೆಯಲು ತಮ್ಮ ಹಲ್ಲುಗಳನ್ನೇ ಬಾಟಲ್ ಓಪನರ್ ಆಗಿ ಬಳಸುತ್ತಾರೆ. ಇದು ಖಂಡಿತವಾಗಿಯೂ ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ಹಲ್ಲು ಮುರಿಯುವ ಸಾಧ್ಯತೆಯೂ ಇದೆ.

ಕಡುವರ್ಣದ ಪಾನೀಯ ಸೇವನೆ

ಕೋಕ್ ಅಥವಾ ರಮ್‌ನಂತಹ ಪಾನೀಯಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪಿಎಚ್ ಮತ್ತು ಹೆಚ್ಚು ಆಮ್ಲವನ್ನು ಹೊಂದಿರುತ್ತವೆ. ಇವು ದಂತಕ್ಷಯಕ್ಕೆ ಕಾರಣವಾಗುತ್ತವೆ. ಲಘುವರ್ಣದ ಪಾನೀಯಗಳು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಪಿಎಚ್ ಹೊಂದಿರುತ್ತವೆ ಮತ್ತು ಅವುಗಳಿಂದ ಹಲ್ಲುಗಳಿಗೆ ಆಗುವ ಹಾನಿಯೂ ಕಡಿಮೆ.

ಮೃದು ಪಾನೀಯಗಳು

ಮದ್ಯ ಮಾತ್ರವಲ್ಲ,ಮೃದು ಪಾನೀಯ ಕೂಡ ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಮೃದು ಪಾನೀಯದ ಬದಲು ತಾಜಾ ಹಣ್ಣಿನ ರಸವನ್ನು ಸೇವಿಸುವುದು ಹಲ್ಲುಗಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ತಂಪು ಪಾನೀಯ ಕುಡಿಯುವ ಸಂದರ್ಭ ಬಂದರೆ ಸ್ಟ್ರಾ ಅಥವಾ ಹೀರುಗೊಳವೆ ಬಳಸಿ. ಇದರಿಂದ ಹಲ್ಲುಗಳಿಗೆ ಪಾನೀಯದಲ್ಲಿನ ಸಕ್ಕರೆಯ ಸಂಪರ್ಕವನ್ನು ಕನಿಷ್ಠಗೊಳಿಸಬಹುದು. ಅಲ್ಲದೆ ಇಂತಹ ಪಾನೀಯಗಳ ಸೇವನೆಯ ಬಳಿಕ ಬಾಯಿಯಲ್ಲಿಯ ಆಮ್ಲವನ್ನು ತಟಸ್ಥಗೊಳಿಸಲು ಸಕ್ಕರೆ ಮುಕ್ತ ಚ್ಯೂಯಿಂಗ್ ಗಮ್‌ನ್ನು ಅಗಿಯುವುದು ಒಳ್ಳೆಯದು.

ಬ್ರಷ್ ಮಾಡಿದ ಬಳಿಕ ಫ್ಲಾಸಿಂಗ್

ಹಲ್ಲುಗಳಲ್ಲಿ ಉಳಿದಿರುವ ಆಹಾರದ ಅವಶೇಷಗಳನ್ನು ತೆಗೆಯಲು ಹಲ್ಲುಜ್ಜುವ ಮೊದಲೇ ಫ್ಲಾಸಿಂಗ್ ಮಾಡಿ. ಬ್ರಷ್ ಮಾಡಿದ ನಂತರ ಫ್ಲಾಸಿಂಗ್ ಮಾಡುವುದು ತಪ್ಪು ಎನ್ನುವುದು ನೆನಪಿರಲಿ. ಅಲ್ಲದೆ ಫ್ಲಾಸಿಂಗ್‌ಗೂ ನಿರ್ದಿಷ್ಟ ವಿಧಾನವಿದೆ. ಹಲ್ಲುಗಳ ನಡುವೆ ಹಿಂದಕ್ಕೆ ಮುಂದಕ್ಕೆ ಫ್ಲಾಸ್ ಮಾಡಬೇಡಿ. ಫ್ಲಾಸಿಂಗ್‌ನ್ನು ಯಾವಾಗಲೂ ಹಲ್ಲುಗಳ ಸಂದಿಯಲ್ಲಿ ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಮಾಡುವುದು ಸರಿಯಾದ ಕ್ರಮವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News