ಮಂಡಿನೋವು ನಿವಾರಣೆಗೆ ಲಿಂಬೆಹಣ್ಣು
ನಮ್ಮ ಮಂಡಿಗಳು ಶರೀರದ ಮುಖ್ಯ ಕೀಲುಗಳಾಗಿವೆ. ಅವು ನಮ್ಮ ಶರೀರವು ಸೂಕ್ತ ಭಂಗಿಯಲ್ಲಿರಲು ಹಾಗೂ ನಾವು ನಡೆಯುವಾಗ, ಓಡುವಾಗ, ಹಾರುವಾಗ ಮತ್ತು ನಿಲ್ಲುವಾಗ ಕಾಲುಗಳ ಸರಿಯಾದ ಚಲನವಲನಗಳಿಗೆ ನೆರವಾಗುತ್ತವೆ.
ಇಂದು ಮಂಡಿನೋವು ಸಾಮಾನ್ಯವಾಗುತ್ತಿದೆ. ಹಿಂದೆಲ್ಲ ಇದು ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಸಣ್ಣವಯಸ್ಸಿನವರನ್ನೂ ಕಾಡುತ್ತಿದೆ. ಏಟು, ಗಾಯ, ವಾತ ಇತ್ಯಾದಿಗಳು ಮಂಡಿನೋವಿಗೆ ಕಾರಣವಾಗಿವೆ.
ಮಂಡಿನೋವನ್ನು ಗುಣಪಡಿಸಿಕೊಳ್ಳಲು ಇಲ್ಲೊಂದು ಸುಲಭದ ವಿಧಾನವಿದೆ. ಇದಕ್ಕೆ ಬೇಕಾಗಿರುವುದು ಒಂದೆರಡು ಲಿಂಬೆಹಣ್ಣು ಮತ್ತು ಎಳ್ಳೆಣ್ಣೆ ಮಾತ್ರ.
ವಿಧಾನ: ಲಿಂಬೆಹಣ್ಣುಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಅವುಗಳನ್ನು ಸಣ್ಣ ಬಟ್ಟೆಯ ತುಂಡಿನಲ್ಲಿ ಕಟ್ಟಿ ಬೆಚ್ಚಗಿನ ಎಳ್ಳೆಣ್ಣೆಯಲ್ಲಿ ಮುಳುಗಿಸಿ ಬಳಿಕ ನೋವಿರುವ ಜಾಗದಲ್ಲಿ 5ರಿಂದ 10 ನಿಮಿಷಗಳ ಕಾಲ ಇರಿಸಿ. ನೋವು ಸಂಪೂರ್ಣವಾಗಿ ಮಾಯವಾಗುವವರೆಗೆ ದಿನಕ್ಕೆರಡು ಬಾರಿ ಈ ಚಿಕಿತ್ಸೆಯನ್ನು ಮುಂದುವರಿಸಿ.
ಬೆಳಿಗ್ಗೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಒಂದು ಲಿಂಬೆಹಣ್ಣಿನ ರಸವನ್ನು ಒಂದು ಗ್ಲಾಸ್ ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದೂ ಉತ್ತಮ ಪರಿಣಾಮವನ್ನು ನೀಡುತ್ತದೆ ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಲಿಂಬೆಹಣ್ಣು ಎ,ಸಿ,ಬಿ1 ಮತ್ತು ಬಿ6, ಮ್ಯಾಗ್ನೇಷಿಯಂ, ಬಯೊಫ್ಲಾವಿನಾಯ್ಡಾಗಳು, ಪೆಕ್ಟಿನ್, ಫಾಲಿಕ ಆ್ಯಸಿಡ್, ರಂಜಕ, ಕ್ಯಾಲ್ಶಿಯಂ ಮತ್ತು ಪೊಟ್ಯಾಷಿಯಮ್‌ನಂತಹ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಹೇರಳವಾಗಿ ಹೊಂದಿದೆ. ಕ್ಯಾಲ್ಶಿಯಂ ಮತ್ತು ವಿಟಾಮಿನ್ ಸಿ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತವೆ ಮತ್ತು ಆಸ್ಟಿಯೊಪೊರೊಸಿಸ್, ರುಮಟಾಯ್ಡಿ ಆರ್ಥ್ರಿಟಿಸ್‌ನಂತಹ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುತ್ತವೆ.
ಎಳ್ಳೆಣ್ಣೆಯು ನೈಸರ್ಗಿಕ ಉರಿಯೂತ ನಿವಾರಕವಾಗಿದೆ. ಚರ್ಮದಿಂದ ತ್ವರಿತವಾಗಿ ಹೀರಿಕೊಳ್ಳಲ್ಪಡುವ ಅದು ಅಂಗಾಂಶಗಳ ಮೂಲಕ ಅಸ್ಥಿಮಜ್ಜೆಯೊಳಗೆ ಪ್ರವೇಶಿಸುತ್ತದೆ.ಲೋಮನಾಳಗಳ ಮೂಲಕ ರಕ್ತವನ್ನು ತಲುಪುವ ಅದು ಕೀಲುಗಳ ಸುಗಮ ಚಲನವಲನಗಳನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.