ನೀವು ಮಧುಮೇಹಿಗಳೇ? ಈ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಲು ಮರೆಯಬೇಡಿ
ನಮ್ಮ ಶರೀರದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪತ್ತಿಯಾಗದಿದ್ದಾಗ ಅಥವಾ ಇನ್ಸುಲಿನ್ ಅನ್ನು ಬಳಸಿಕೊಳ್ಳಲು ಶರೀರಕ್ಕೆ ಸಾಧ್ಯವಾಗದಿದ್ದಾಗ ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚುತ್ತದೆ. ಈ ಸ್ಥಿತಿಯನ್ನು ಮಧುಮೇಹ ಎಂದು ಕರೆಯುತ್ತೇವೆ. ಮೇದೋಜೀರಕ ಗ್ರಂಥಿಯು ಉತ್ಪಾದಿಸುವ ಇನ್ಸುಲಿನ್‌ನ್ನು ನಾವು ಸೇವಿಸಿದ ಆಹಾರದಲ್ಲಿಯ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಶರೀರವು ಬಳಸಿಕೊಳ್ಳುತ್ತದೆ. ಇನ್ಸುಲಿನ್ ನಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.
ಮಧುಮೇಹಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದರೆ ಅದು ಕಾಲಕ್ರಮೇಣ ರಕ್ತನಾಳಗಳು, ನರಗಳು, ಮೂತ್ರಪಿಂಡ ಮತ್ತು ಶರೀರದ ಇತರ ಹಲವಾರು ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಅಂಧತ್ವ, ಕೈಕಾಲುಗಳಲ್ಲಿ ಜುಮುಗುಟ್ಟುವಿಕೆ ಮತ್ತು ಮರಗಟ್ಟುವಿಕೆಗೆ ಕಾರಣವಾಗುವ ಜೊತೆಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಮಧುಮೇಹ ನಾವು ಸಾಯುವವವರೆಗೂ ನಮ್ಮ ಜೊತೆಯಲ್ಲಿಯೇ ಇರುತ್ತದೆ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಇತರರಂತೆ ಸಹಜ ಜೀವನವನ್ನು ನಡೆಸಬಹುದು. ಮಧುಮೇಹಿಗಳು ಈ ಕೆಳಗಿನ 10 ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
*ರಕ್ತದಲ್ಲಿಯ ಸಕ್ಕರೆಯ ಮಟ್ಟ
ಮಧುಮೇಹಿಗಳು ವೈದ್ಯರು ಸೂಚಿಸಿರುವಂತೆ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ಆಗಾಗ್ಗೆ ಪರೀಕ್ಷೆ ಮಾಡಿಸುತ್ತಿರಬೇಕು. ಈ ಪರೀಕ್ಷೆಯನ್ನು ಎರಡು ವಿಧಗಳಲ್ಲಿ ಅಂದರೆ ಹೊಟ್ಟೆ ಖಾಲಿಯಿದ್ದಾಗ ಮತ್ತು ಆಹಾರ ಸೇವನೆಯ ಎರಡು ಗಂಟೆಗಳ ಬಳಿಕ ನಡೆಸಲಾ ಗುತ್ತದೆ.
*ಎಚ್‌ಬಿಎ1ಸಿ ಪರೀಕ್ಷೆ
ಇದು ಕಳೆದ ಮೂರು ತಿಂಗಳಲ್ಲಿ ಶರೀರದಲ್ಲಿಯ ಕೆಂಪು ರಕ್ತಕೋಶಗಳಿಗೆ ಅಂಟಿಕೊಂಡಿ ರುವ ಫ್ರೀ ಗ್ಲುಕೋಸ್‌ನ ಪ್ರಮಾಣವನ್ನು ಅಳೆಯಲು ನಡೆಸುವ ಅತ್ಯಂತ ಸಾಮಾನ್ಯ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮಾಡಿಸಬೇಕು.
*ರಕ್ತದೊತ್ತಡ
ರಕ್ತದೊತ್ತಡ ಯಾವಾಗಲೂ 130/80 ಎಂಎಂಎಚ್‌ಜಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮಧುಮೇಹಿಗಳು ಈ ರೋಗದೊಂದಿಗೆ ಗುರುತಿಸಿಕೊಂಡಿರುವ ಹೃದಯಾಘಾತ, ಅಂಧತ್ವ, ಮೂತ್ರಪಿಂಡ ಗಳಿಗೆ ಹಾನಿ ಇತ್ಯಾದಿಗಳಿಗೆ ಗುರಿಯಾಗುವ ಸಾಧ್ಯತೆ ಕಡಿಮೆಯಾಗಿರುತ್ತದೆ. ಪ್ರತಿ ಬಾರಿ ವೈದ್ಯರನ್ನು ಭೇಟಿಯಾದಾಗ ಅಥವಾ ತಿಂಗಳಿಗೆ ಎರಡು ಬಾರಿ ರಕ್ತದೊತ್ತಡ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
*ಕಣ್ಣಿನ ತಪಾಸಣೆ
ಮಧುಮೇಹಿಗಳು ವರ್ಷಕ್ಕೊಮ್ಮೆಯಾದರೂ ನೇತ್ರತಜ್ಞರ ಬಳಿ ಕಣ್ಣುಗಳ ಸಮಗ್ರ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಅಕ್ಷಿಪಟಲದ ಹಿಂಭಾಗದ ನರಕೋಶಗಳಿಗೆ ಹಾನಿಯೇನಾದರೂ ಆಗಿದೆಯೇ ಎನ್ನುವುದನ್ನು ವೈದ್ಯರು ಪರೀಕ್ಷಿಸುತ್ತಾರೆ. ಮಧುಮೇಹ ದಿಂದ ದೃಷ್ಟಿಯು ಮಸುಕಾಗಬಹುದು ಅಥವಾ ಕೆಲವು ಪ್ರಕರಣಗಳಲ್ಲಿ ಅಂಧತ್ವವುಂಟಾ ಗಬಹುದು. ಹೀಗಾಗಿ ಕಣ್ಣಿಗೆ ಹಾನಿಯನ್ನು ತಪ್ಪಿಸಲು ವಾರ್ಷಿಕ ತಪಾಸಣೆ ಅತ್ಯಗತ್ಯ ವಾಗಿದೆ.
*ಪಾದದ ತಪಾಸಣೆ
ಮಧುಮೇಹಿಗಳು ತಮ್ಮ ಪಾದಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಪಾದಗಳಲ್ಲಿಯ ನಾಡಿ ಮಿಡಿತ ಮತ್ತು ಪ್ರತಿವರ್ತನಗಳ ತಪಾಸಣೆಗಾಗಿ ಕನಿಷ್ಠ ವರ್ಷಕ್ಕೆ ಒಂದು ಬಾರಿಯಾದರೂ ಪಾದಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಾಯವಾಗದ ಗಾಯ, ಸೋಂಕು, ಹುಣ್ಣುಗಳಿದ್ದರೆ ಅಥವಾ ಪಾದದ ಯಾವುದೇ ಭಾಗದಲ್ಲಿ ಸ್ಪರ್ಶಜ್ಞಾನ ಕಡಿಮೆಯಾಗಿರುವಂತೆ ಭಾಸವಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
*ಕೊಲೆಸ್ಟ್ರಾಲ್ ಪ್ರೊಫೈಲ್ ಟೆಸ್ಟ್
ಕೊಲೆಸ್ಟ್ರಾಲ್ ನಮ್ಮ ಶರೀರದಲ್ಲಿ ಎಚ್‌ಡಿಎಲ್(ಒಳ್ಳೆಯ ಕೊಲೆಸ್ಟ್ರಾಲ್) ಮತ್ತು ಎಲ್‌ಡಿಎಲ್(ಕೆಟ್ಟ ಕೊಲೆಸ್ಟ್ರಾಲ್) ರೂಪದಲ್ಲಿರುವ ಮೇಣದಂತಹ ವಸ್ತುವಾಗಿದೆ. ಮಧುಮೇಹಿಗಳಲ್ಲಿ ಎಲ್‌ಡಿಎಲ್ ಮಟ್ಟ ಮತ್ತು ಟ್ರೈಗ್ಲಿಸರೈಡ್‌ಗಳು ಹೆಚ್ಚುತ್ತವೆ ಮತ್ತು ಎಚ್‌ಡಿಎಲ್ ಪ್ರಮಾಣ ಕಡಿಮೆಯಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಕೊಲೆಸ್ಟ್ರಾಲ್ ಪ್ರೊಫೈಲ್ ಟೆಸ್ಟ್ ಅನ್ನು ಪ್ರತಿವರ್ಷ ನಿಯಮಿತವಾಗಿ ಮಾಡಿಸಿಕೊಳ್ಳಬೇಕು.
*ಮೂತ್ರಪಿಂಡ ತಪಾಸಣೆ
ಮೂತ್ರಪಿಂಡಗಳು ರಕ್ತವನ್ನು ಸೋಸಿ ತ್ಯಾಜ್ಯಗಳನ್ನು ಶರೀರದಿಂದ ಹೊರಹಾಕುವ ಪ್ರಮುಖ ಅಂಗಗಳಾಗಿವೆ. ಮಧುಮೇಹಿಗಳಲ್ಲಿ ಮೂತ್ರಪಿಂಡಗಳಲ್ಲಿಯ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ ಮತ್ತು ಶರೀರವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಲು ಮೂತ್ರಪಿಂಡಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಶರೀರದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಮತ್ತು ಉಪ್ಪು ಉಳಿದುಕೊಳ್ಳುತ್ತದೆ. ಮೂತ್ರದಲ್ಲಿ ಪ್ರೋಟಿನ್ ಹೋಗಬಹುದು. ಈ ಸಮಸ್ಯೆಯು ಯಾವುದೇ ಮುನ್ಸೂಚನೆಗಳನ್ನು ನೀಡದೆ ಹಲವು ವರ್ಷಗಳ ಬಳಿಕ ದಿಢೀರ್ ಆಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ವರ್ಷಕ್ಕೊಮ್ಮೆಯಾದರೂ ಮೂತ್ರಪಿಂಡಗಳ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
*ಹಲ್ಲುಗಳ ತಪಾಸಣೆ
ಮಧುಮೇಹಿಗಳು ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ವಸಡುಗಳು, ಹಲ್ಲುಗಳ ಪರೀಕ್ಷೆಯ ಜೊತೆಗೆ ನಿಯಮಿತವಾಗಿ ಕ್ಲೀನಿಂಗ್ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
*ಯಕೃತ್ತು ಮತ್ತು ಥೈರಾಯ್ಡ ಪರೀಕ್ಷೆ
ಯಕೃತ್ತಿನ ಪರೀಕ್ಷೆ(ಲಿವರ್ ಫಂಕ್ಷನ್ ಟೆಸ್ಟ್)ಯನ್ನು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳು ವುದರಿಂದ ಯಕೃತ್ತಿನ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಪ್ರೋಟಿನ್‌ಗಳು, ಯಕೃತ್ ಕಿಣ್ವಗಳು ಮತ್ತು ರಕ್ತದಲ್ಲಿಯ ಬಿಲಿರುಬಿನ್ ಪ್ರಮಾಣವನ್ನು ಈ ಪರೀಕ್ಷೆಯಲ್ಲಿ ಅಳೆಯಲಾಗುತ್ತದೆ. ಟೈಪ್-1 ಮಧುಮೇಹಿಗಳು ಪ್ರತಿ ವರ್ಷ ಥೈರಾಯ್ಡೆ ಸ್ಟಿಮ್ಯುಲೇಟಿಂಗ್ ಹಾರ್ಮೋನ್‌ನ ಪರೀಕ್ಷೆಯನ್ನು ಅಗತ್ಯವಾಗಿ ಮಾಡಿಸಿಕೊ ಳ್ಳಬೇಕು.
*ವಿಟಾಮಿನ್ ಬಿ12 ಪರೀಕ್ಷೆ
ಮಧುಮೇಹ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೆಟ್‌ಫಾರ್ಮಿನ್ ಔಷಧಿಯು ವಿಟಾಮಿನ್ ಬಿ12 ಕೊರತೆಗೆ ಕಾರಣವಾಗಬಹುದು. ಹೀಗಾಗಿ ಮಧುಮೇಹಿಗಳು ಸುದೀರ್ಘ ಸಮಯದಿಂದ ಮೆಟ್‌ಫಾರ್ಮಿನ್ ಸೇವಿಸುತ್ತಿದ್ದರೆ ತಮ್ಮ ವಿಟಾಮಿನ್ ಬಿ12 ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳಬೇಕು. ಅನಿಮಿಯಾ ಅಥವಾ ಪೆರಿಫೆರಲ್ ನ್ಯೂರೋಪತಿಯ ಸಮಸ್ಯೆ ಕಾಡುತ್ತಿದ್ದರೆ ಈ ಪರೀಕ್ಷೆಯನ್ನು ಆಗಾಗ್ಗೆ ನಿಯಮಿತವಾಗಿ ಮಾಡಿಸಿಕೊಳ್ಳಬೇಕಾಗುತ್ತದೆ.