ಪುಟ್ಟಮಕ್ಕಳ ಹಲ್ಲುಗಳ ಆರೋಗ್ಯ ರಕ್ಷಣೆ ಹೇಗೆ?

Update: 2017-11-18 08:48 GMT

ಆರೋಗ್ಯಯುತ ಬದುಕಿಗೆ ಆರೋಗ್ಯಯುತ ಹಲ್ಲುಗಳು ಮುಖ್ಯವಾಗಿವೆ ಮತ್ತು ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಆರಂಭಿಸಲು ಬಾಲ್ಯಾವಸ್ಥೆಗಿಂತ ಉತ್ತಮ ಸಂದರ್ಭ ಬೇರೊಂದಿಲ್ಲ. ಹಲ್ಲುಗಳ ಬಗ್ಗೆ ಆರಂಭದಲ್ಲಿಯೇ ಕಾಳಜಿ ವಹಿಸುವದರಿಂದ ಮಕ್ಕಳು ಮುಂದೆ ತಮ್ಮ ಹಲ್ಲುಗಳನ್ನು ಆರೋಗ್ಯಯುತವನ್ನಾಗಿ ಇರಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಎಳವೆಯಲ್ಲಿಯೇ ಹಲ್ಲುಗಳ ಬಗ್ಗೆ ಕಾಳಜಿಯನ್ನು ರೂಢಿಸಿಕೊಳ್ಳದಿದ್ದರೆ ಬದುಕಿಡೀ ಹಲ್ಲುನೋವು ಮತ್ತು ಇತರ ಸಮಸ್ಯೆಗಳಿಂದ ಒದ್ದಾಡಬೇಕಾಗುತ್ತದೆ. ತಮ್ಮ ಮಕ್ಕಳ ಹಲ್ಲುಗಳ ಆರೋಗ್ಯರಕ್ಷಣೆಯ ಕುರಿತು ಹೆಚ್ಚಿನ ಪೋಷಕರು ಸಂದಿಗ್ಧತೆಯಲ್ಲಿರುತ್ತಾರೆ. ತಮ್ಮ ಮಕ್ಕಳು ದಂತಕುಳಿಗಳಿಂದ ಬಾಧೆ ಪಡುವುದು ಬೇಡ ಎಂದು ಅವರು ಬಯಸಿರುತ್ತಾರಾದರೂ ಅವುಗಳನ್ನು ಹೇಗೆ ತಡೆಯಬೇಕು ಎನ್ನುವುದು ಗೊತ್ತಿರುವುದಿಲ್ಲ. ಹೆತ್ತವರು ತಮ್ಮ ಮಕ್ಕಳನ್ನು ಪ್ರತಿ ಆರು ತಿಂಗಳಿಗೊಮ್ಮೆ ದಂತವೈದ್ಯರ ಬಳಿಗೆ ಕರೆದೊಯ್ಯುವುದು ಮುಖ್ಯವಾಗಿದೆ.

ನಿಮ್ಮ ಮಕ್ಕಳ ಹಲ್ಲುಗಳು ಆರೋಗ್ಯಯುತವಾಗಿರಲು ನೆರವಾಗುವ ಕೆಲವು ಮಾಹಿತಿಗಳು ಇಲ್ಲಿವೆ......

*ತನ್ನ ಟೂಥ್‌ಬ್ರಷ್‌ನ್ನು ಮಗುವೇ ಆಯ್ಕೆ ಮಾಡಿಕೊಳ್ಳಲಿ

  ತಮ್ಮ ಇಷ್ಟದ ವಿನ್ಯಾಸದ ಮತ್ತು ಬಣ್ಣದ ಟೂಥ್‌ಬ್ರಷ್‌ಗಳನ್ನು ಮಕ್ಕಳೇ ಸ್ವತಃ ಆಯ್ಕೆ ಮಾಡಿಕೊಳ್ಳಲು ಬಿಡಿ. ಇದು ಅವರು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತೇಜಿಸುತ್ತದೆ ಮತ್ತು ಹಲ್ಲುಜ್ಜುವ ಅಭ್ಯಾಸವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದು, ಯಾರೊಬ್ಬರೂ ತನ್ನನ್ನು ಬಲವಂತಗೊಳಿಸಿದ್ದಲ್ಲ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸುತ್ತದೆ.

*ಮೊದಲ ಹಲ್ಲು ಹುಟ್ಟುವ ಮೊದಲೇ ಕಾಳಜಿ ವಹಿಸಿ

ಮಕ್ಕಳ ಬಾಯಿಯ ಬಗ್ಗೆ ಕಾಳಜಿ ವಹಿಸಲು ಮೊದಲ ಹಲ್ಲು ಹುಟ್ಟುವವರೆಗೆ ಕಾಯಬೇಕಿಲ್ಲ. ಪ್ರತಿ ಬಾರಿ ಹಾಲೂಡಿಸಿದಾಗಲೂ ಸ್ವಚ್ಛವಾದ ಒದ್ದೆಬಟ್ಟೆಯಿಂದ ಮಗುವಿನ ಬಾಯಿಯನ್ನು ಸ್ವಚ್ಛಗೊಳಿಸಿ. ಮಕ್ಕಳಿಗೆ ಹಾಲು ಕುಡಿಸಲು ಬಳಸುವ ಬಾಟ್ಲಿಗಳೂ ಬಾಯಿಯ ಆರೋಗ್ಯ ಕೆಡಲು ಕಾರಣವಾಗುತ್ತವೆ, ಹೀಗಾಗಿ ಮಕ್ಕಳ ಬಾಯಿಯ ಆರೋಗ್ಯದ ಬಗ್ಗೆ ಮೊದಲೇ ಕಾಳಜಿ ವಹಿಸುವುದು ಅಗತ್ಯವಾಗಿದೆ. ದಂತವೈದ್ಯರಿಂದ ನಿಯಮಿತವಾಗಿ ಸಲಹೆಗಳನ್ನು ಪಡೆಯುವುದರಿಂದ ನಿಪ್ಪಲ್‌ಗಳ ಬಳಕೆ, ಹೆಬ್ಬೆಟ್ಟು ಚೀಪುವಿಕೆ ಇತ್ಯಾದಿಗಳನ್ನು ಸೂಕ್ತವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.

*ಫ್ಲೋರೈಡ್‌ಯುಕ್ತ ಟೂಥ್‌ಪೇಸ್ಟ್ ಬಳಕೆ

 ಫ್ಲೋರೈಡ್ ಮಕ್ಕಳಲ್ಲಿ ದಂತಕುಳಿಗಳಾಗುವುದನ್ನು ತಡೆಯುತ್ತದೆ. ಹಲ್ಲುಗಳು ಕಾಣಿಸಿಕೊಳ್ಳಲು ಅರಂಭಿಸಿದ ತಕ್ಷಣ ಬ್ರಷ್‌ಗೆ ಫ್ಲೋರೈಡ್‌ಯುಕ್ತ ಟೂಥ್‌ಪೇಸ್ಟ್‌ನ್ನು ತೆಳುವಾಗಿ ಸವರಿ ಮೃದುವಾಗಿ ಉಜ್ಜಬೇಕು. ಇದರಿಂದ ಹಲ್ಲುಗಳ ಮೇಲ್ಭಾಗದಲ್ಲಿರುವ ಎನಾಮಲ್ ಗಟ್ಟಿಯಾಗುತ್ತದೆ. ಆದರೆ ಅತಿಯಾದ ಫೋರೈಡ್ ಬಳಕೆಯು ಕಲೆಗಳು ಮತ್ತು ಹಲ್ಲುಗಳು ಬಣ್ಣ ಕಳೆದುಕೊಳ್ಳಲು ಕಾರಣವಾಗುತ್ತದೆ ಎನ್ನುವುದು ನೆನಪಿರಲಿ.

*ಸಕ್ಕರೆ ಸೇವನೆಯ ಮೇಲೆ ನಿಯಂತ್ರಣವಿರಲಿ

ಅತಿಯಾದ ಸಿಹಿ ಸೇವನೆ ದಂತಕುಳಿಗಳಿಗಳಾಗಲು ಅತ್ಯಂತ ಸಾಮಾನ್ಯ ಕಾರಣ ವಾಗಿದೆ. ಹಣ್ಣಿನ ರಸಗಳು ಮತ್ತು ಹಾಲಿನಲ್ಲಿರುವ ಸಕ್ಕರೆಯು ಹಲ್ಲಿನ ಮೇಲ್ಮೈಗೆ ಅಂಟಿಕೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾಗಳಿಗೆ ಆಶ್ರಯ ನೀಡುತ್ತದೆ. ಸಕ್ಕರೆಯೊಂದಿಗೆ ಬ್ಯಾಕ್ಟೀರಿಯಾಗಳು ಪ್ರತಿವರ್ತಿಸಿದಾಗ ಅದು ಆಮ್ಲವಾಗಿ ರೂಪಾಂತರಗೊಳ್ಳುತ್ತದೆ ಮತ್ತು ಹಲ್ಲಿನ ಮೇಲ್ಪದರಕ್ಕೆ ಹಾನಿಯುಂಟು ಮಾಡಿ ದಂತಕುಳಿಗಳಾಗಲು ಕಾರಣವಾಗುತ್ತದೆ. ನಿಮ್ಮ ಮಕ್ಕಳ ಆಹಾರದಿಂದ ಸಕ್ಕರೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ ದಿದ್ದರೂ ಅದರ ಸೇವನೆಯ ಮೇಲೆ ನಿಯಂತ್ರಣವಿರುವಂತೆ ನೋಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News