ಹಲ್ಲಿನ ಕುರಿತು ನಿಮಗೆ ಗೊತ್ತಿರುವ ಈ ವಿಚಾರಗಳು 100 ಶೇ. ಸುಳ್ಳು!

Update: 2017-11-27 13:00 GMT

ಹಲ್ಲುಗಳ ತಪಾಸಣೆಗೆ ವೈದ್ಯರಲ್ಲಿ ತೆರಳುವುದು ಕೆಲವೊಮ್ಮೆ ಅಳುಕು ಮೂಡಿಸುತ್ತದೆ. ಹಲ್ಲುಗಳಲ್ಲಿ ಏನು ದೋಷವಿದೆಯೋ, ವೈದ್ಯರು ಹಲ್ಲನ್ನು ಡ್ರಿಲ್ ಮಾಡುತ್ತಾರೋ ಅಥವಾ ಕೀಳುತ್ತಾರೋ, ತುಂಬ ನೋವಾಗುತ್ತದೆಯೋ ಏನೋ, ವೈದ್ಯರ ಬಿಲ್ ಎಷ್ಟಾಗುತ್ತದೆಯೋ ಎನೋ ಎಂಬೆಲ್ಲ ಕಳವಳ ಕೆಲವರನ್ನು ಕಾಡಬಹುದು. ಇದರೊಂದಿಗೆ ಹಲ್ಲುಗಳ ಸುತ್ತ ಹುಟ್ಟಿಕೊಂಡಿರುವ ಕೆಲವು ಮಿಥ್ಯೆಗಳೂ ವಿನಾಕಾರಣ ಗೊಂದಲವನ್ನು ಸೃಷ್ಟಿಸುತ್ತವೆ. ಈ ಮಿಥ್ಯೆಗಳ ಕಡೆಗೊಮ್ಮೆ ಕಣ್ಣು ಹಾಯಿಸೋಣ....

►ದಂತವೈದ್ಯರ ಭೇಟಿ ತುಂಬ ದುಬಾರಿ

ನೀವು ನಿಯಮಿತವಾಗಿ ದಂತವೈದ್ಯರನ್ನು ಭೇಟಿಯಾಗದಿದ್ದರೆ ಮತ್ತು ದಂತ ಸಮಸ್ಯೆ ತೀರ ಬಿಗಡಾಯಿಸುವವರೆಗೆ ಕಾಯುತ್ತಿದ್ದರೆ ಮಾತ್ರ ದಂತವೈದ್ಯರ ಭೇಟಿ ನಿಮ್ಮ ಜೇಬಿಗೆ ದುಬಾರಿಯಾಗಬಹುದು. ದಂತವೈದ್ಯರ ಬಳಿ ಹಲ್ಲುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಿಸುತ್ತಿದ್ದರೆ ನಿಮ್ಮ ವಸಡುಗಳನ್ನು ಭವಿಷ್ಯದ ತೊಂದರೆಗಳಿಂದ ತಪ್ಪಿಸಬಹುದು. ಅಲ್ಲದೆ ಹಲ್ಲುಗಳ ನಿಯಮಿತ ತಪಾಸಣೆಯಿಂದ ಕುಳಿಗಳನ್ನು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದರಿಂದ ಭವಿಷ್ಯದ ದುಬಾರಿ ಬಿಲ್‌ಗಳಿಂದ ಪಾರಾಗಬಹುದು.

►ವೈದ್ಯರ ಭೇಟಿಗೆ ಮುನ್ನ ಹಲ್ಲುಜ್ಜಿದರೆ ನಮ್ಮ ದೋಷ ಗೊತ್ತಾಗುವುದಿಲ್ಲ

ನೀವು ಮನಸ್ಸು ಬಂದಾಗ ಹಲ್ಲುಗಳನ್ನುಜ್ಜುವ ಜಾಯಮಾನ ಹೊಂದಿದ್ದರೆ ಮತ್ತು ದಂತವೈದ್ಯರ ಭೇಟಿಗೆ ಮುನ್ನ ಹಲ್ಲುಜ್ಜಿಕೊಂಡರೆ ನಿಮ್ಮ ಹುಳುಕು ಅವರಿಗೆ ಗೊತ್ತಾಗುವುದಿಲ್ಲ ಎಂದು ಭಾವಿಸಿದ್ದರೆ ಅದು ತಪ್ಪು. ನಿಮ್ಮ ಹಲ್ಲುಗಳತ್ತ ಒಮ್ಮೆ ದೃಷ್ಟಿ ಬೀರಿದರೆ ಸಾಕು, ನೀವು ನಿಯಮಿತವಾಗಿ ಹಲ್ಲುಗಳನ್ನು ಬ್ರಷ್ ಮಾಡುತ್ತೀರೋ ಇಲ್ಲವೋ ಎನ್ನುವುದು ಅವರಿಗೆ ಗೊತ್ತಾಗುತ್ತದೆ. ನಿಮ್ಮ ಹಲ್ಲುಗಳು ಆರೋಗ್ಯಯುತ ಮತ್ತು ಸ್ವಚ್ಛವಾಗಿರಬೇಕೆಂದರೆ ನೀವು ದಿನಕ್ಕೆರಡು ಬಾರಿ ಹಲ್ಲುಗಳನ್ನು ಉಜ್ಜಲೇಬೇಕು.

►ಮೇಲಿನ ದವಡೆಯ ಹಲ್ಲನ್ನು ಕಿತ್ತರೆ ಕಣ್ಣಿನ ದೃಷ್ಟಿಗೆ ಹಾನಿಯಾಗುತ್ತದೆ

ಮೇಲಿನ ದವಡೆಯ ಹಲ್ಲುಗಳು ಕಣ್ಣುಗಳಿಗೆ ಹತ್ತಿರವಿರುವುದು ಈ ಸಾಮಾನ್ಯ ತಪ್ಪುಕಲ್ಪನೆಗೆ ಕಾರಣವಾಗಿದೆ. ಆದರೆ ಇದು ನಿಜವಲ್ಲ. ಕಣ್ಣುಗಳ ಮತ್ತು ಹಲ್ಲುಗಳ ನರಗಳು ಸಂಪೂರ್ಣವಾಗಿ ಭಿನ್ನವಾಗಿವೆ ಮತ್ತು ಯಾವುದೇ ಹಲ್ಲನ್ನು ಕಿತ್ತರೂ ಕಣ್ಣುಗಳ ದೃಷ್ಟಿಗೆ ಯಾವುದೇ ತೊಂದರೆಯಾಗುವುದಿಲ್ಲ.

►ಹಲ್ಲುಗಳನ್ನು ಕ್ಲೀನ್ ಮಾಡಿಸಿದರೆ ದುರ್ಬಲಗೊಳ್ಳುತ್ತವೆ

ಹಲ್ಲುಗಳನ್ನು ಕ್ಲೀನ್ ಮಾಡಿಸುವುದರಿಂದ ಅವುಗಳ ಮೇಲಿನ ಪಾಚಿಯನ್ನು ನಿವಾರಿಸಬಹುದಾಗಿದೆ. ಇದರಿಂದ ಹಲ್ಲುಗಳ ನಡುವಿನ ಸಂದುಗಳು ಶುಚಿಗೊಂಡು ಸ್ಪಷ್ಟವಾಗಿ ತೋರುತ್ತವೆ ಮತ್ತು ಇದು ಕ್ಲೀನಿಂಗ್ ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ ಎಂಬ ತಪ್ಪು ಗ್ರಹಿಕೆಗೆ ಕಾರಣವಾಗಿದೆ. ಸುದೀರ್ಘ ಕಾಲದವರೆಗೆ ಹಲ್ಲುಗಳನ್ನು ಸ್ವಚ್ಛ ಮಾಡಿಸದಿದ್ದರೆ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ವಸಡುಗಳು ಸೋಂಕಿಗೊಳಗಾಗುತ್ತವೆ ಮತ್ತು ಕ್ಷಯಿಸತೊಡಗುತ್ತವೆ. ಇಂತಹ ಪ್ರಕರಣಗಳಲ್ಲಿ ಹಲ್ಲುಗಳ ಬೇರುಗಳು ಸಡಿಲಗೊಂಡು, ಪಾಚಿಯ ದಪ್ಪ ಪದರವು ಮಾತ್ರ ನಿಮ್ಮ ಹಲ್ಲುಗಳನ್ನು ಅವುಗಳ ಕುಳಿಗಳಲ್ಲಿ ಹಿಡಿದಿಟ್ಟಿರುತ್ತದೆ ಮತ್ತು ಅದನ್ನು ತೆಗೆದ ಬಳಿಕ ಹಲ್ಲುಗಳು ಅಲುಗಾಡತೊಡಗುತ್ತವೆ ಮತ್ತು ಉದುರಲಾರಂಭಿಸುತ್ತವೆ.

►ಹೆಚ್ಚು ಸಮಯ ಬ್ರಷ್ ಮಾಡುವುದು ಒಳ್ಳೆಯದು

ಇದು ಹೆಚ್ಚಿನವರಲ್ಲಿ ಮನೆ ಮಾಡಿರುವ ಇನ್ನೊಂದು ತಪ್ಪು ಕಲ್ಪನೆ. ಪ್ರತಿ ಬಾರಿ ಎರಡು ನಿಮಿಷಗಳಿಂತೆ ದಿನಕ್ಕೆರಡು ಸಲ ಹಲ್ಲುಜ್ಜಿದರೆ ಸಾಕು ಎಂದು ದಂತವೈದ್ಯರು ಶಿಫಾರಸು ಮಾಡುತ್ತಾರೆ. ಎರಡು ನಿಮಿಷಗಳಿಗಿಂತ ಹೆಚ್ಚು ಬ್ರಷ್ ಮಾಡಿದರೆ ಅದು ಹಲ್ಲುಗಳಿಗೆ ಹಾನಿಯನ್ನುಂಟು ಮಾಡುತ್ತದೆ.

►ಒರಟಾದ ಬ್ರಷ್ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ

ಗಡುಸಾದ ಎಳೆಗಳುಳ್ಳ ಅಥವಾ ಹಾರ್ಡ್ ಬ್ರಷ್ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ ಎಂದೇನಿಲ್ಲ. ಸಾಫ್ಟ್ ಬ್ರಷ್‌ನ ಮೃದುವಾದ ಎಳೆಗಳು ಪರಿಣಾಮಕಾರಿಯಾಗಿ ಬಗ್ಗಿ ಕೆಲಸ ಮಾಡುತ್ತವೆ ಮತ್ತು ವಸಡುಗಳ ಕೆಳಗೆ ತಲುಪಿ ಪಾಚಿ ಮತ್ತು ಕೊಳೆಯನ್ನು ತೆಗೆಯುತ್ತವೆ. ಅಲ್ಲದೆ ಹಾರ್ಡ್ ಬ್ರಷ್ ವಸಡುಗಳಿಗೆ ಹಾನಿಯನ್ನೂ ಮಾಡಬಹುದು.

►ಹಲ್ಲುನೋವಿನಿಂದ ಪಾರಾಗಲು ಪೇನ್ ಬಾಮ್ ಒಳ್ಳೆಯದು

ಈ ಮಿಥ್ಯೆ ನಿಮ್ಮ ತಲೆಯಲ್ಲಿದ್ದರೆ ಅದನ್ನು ಮೊದಲು ತೆಗೆದುಹಾಕಿ. ಪೇನ್ ಬಾಮ್‌ಗಳು ನೋವಿರುವ ಜಾಗಕ್ಕೆ ಸೀಮಿತವಾಗಿ ಉಷ್ಣತೆಯನ್ನು ಹುಟ್ಟಿಸುವುದರಿಂದ ಅವು ಮಾಂಸಖಂಡಗಳ ನೋವಿನಿಂದ ಶಮನ ಪಡೆಯಲು ಮಾತ್ರ ಉತ್ತಮವಾಗಿವೆ. ನಮ್ಮ ಹಲ್ಲು ಮುಚ್ಚಿದ ಕೋಣೆಯಿದ್ದಂತೆ ಮತ್ತು ಬಾಮ್ ಹಚ್ಚುವುದರಿಂದ ಅದು ಈ ಕೋಣೆಯಲ್ಲಿ ಬಿಸಿಯನ್ನು ಹೆಚ್ಚಿಸುವ ಮೂಲಕ ಒತ್ತಡವು ತೀವ್ರಗೊಂಡು ನೋವು ಇನ್ನಷ್ಟು ಹೆಚ್ಚಲು ಕಾರಣವಾಗುತ್ತದೆ. ಇದರಿಂದ ವಸಡುಗಳು ಸೋಂಕಿಗೊಳಗಾಗುತ್ತವೆ ಮತ್ತು ಬಾತುಕೊಳ್ಳುತ್ತವೆ.

►ವಸಡುಗಳಲ್ಲಿ ರಕ್ತಸ್ರಾವವಿದ್ದರೆ ಹಲ್ಲುಜ್ಜಬಾರದು

 ಸೋಂಕಿನಿಂದಾಗಿ ವಸಡುಗಳಿಂದ ರಕ್ತಸ್ರಾವವಾಗುತ್ತದೆ ಮತ್ತು ಇದರಿಂದಾಗಿ ಹಲ್ಲುಜ್ಜುವುದನ್ನು ನಿಲ್ಲಿಸಿದರೆ ಬಾಯಿಯಲ್ಲಿ ಉಳಿದುಕೊಂಡಿರುವ ಆಹಾರದ ಕಣಗಳು ಸೋಂಕನ್ನು ಇನ್ನಷ್ಟು ಹೆಚ್ಚಿಸುತ್ತವೆ. ನೋವು ಮತ್ತು ರಕ್ತಸ್ರಾವವನ್ನು ಕನಿಷ್ಠಗೊಳಿಸಲು ಮೃದುವಾಗಿ ಬ್ರಷ್ ಮಾಡಬಹುದಾಗಿದೆ. ಸೂಕ್ತ ಚಿಕಿತ್ಸೆಗಾಗಿ ದಂತವೈದ್ಯರನ್ನು ಸಂಪರ್ಕಿಸಿ. ಯಾವುದೇ ಸಂದರ್ಭದಲ್ಲಿಯೂ ಹಲ್ಲುಜ್ಜುವುದನ್ನು ನಿಲ್ಲಿಸಬೇಡಿ.

►ಬ್ರಷ್ ಮಾಡಿದರೆ ದಂತಕುಳಿಗಳು ಸರಿಯಾಗುತ್ತವೆ

ಹಲ್ಲಿನಲ್ಲಿ ಕುಳಿ ಒಮ್ಮೆ ಉಂಟಾಯಿತೆಂದರೆ ಅದನ್ನು ಮೊದಲಿನಂತೆ ಮಾಡಲು ಸಾಧ್ಯವಿಲ್ಲ. ವೈದ್ಯರು ಕುಳಿ ಇನ್ನಷ್ಟು ಹೆಚ್ಚದಂತೆ ಹುಳುಕನ್ನು ತೆಗೆದು ಆ ಜಾಗದಲ್ಲಿ ಸಿಮೆಂಟ್ ತುಂಬಬಹುದು. ಹೀಗಾಗಿ ಕುಳಿಗಳು ಕಾಣಿಸಿಕೊಂಡ ತಕ್ಷಣ ದಂತವೈದ್ಯರನ್ನು ಭೇಟಿಯಾಗಬೇಕು.

►ಮೊದಲ ಬಾರಿ ನೋವು ಕಾಣಿಸಿಕೊಂಡಾಗಲೇ ಹುಳುಕು ಹಲ್ಲನ್ನು ಕೀಳಿಸಬೇಕು

ಹಲ್ಲಿನಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಕೀಳಲೇಬೇಕು ಎನ್ನುವ ಕಾಲ ಎಂದೋ ಕಳೆದುಹೋಗಿದೆ. ಈಗ ರೂಟ್ ಕೆನಾಲ್ ಟ್ರೀಟ್‌ಮೆಂಟ್‌ನಂತಹ ಆಧುನಿಕ ವಿಧಾನಗಳಿಂದ ಹಲ್ಲನ್ನು ಉಳಿಸಿಕೊಳ್ಳಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News